ನಂದಿನಿ ಹಾಲು ಈಗ ದೆಹಲಿಯಲ್ಲೂ ಲಭ್ಯ; ಮದರ್ ಡೈರಿ-ಅಮೂಲ್ ಜತೆ ಸ್ಪರ್ಧೆಗಿಳಿದ ಕರ್ನಾಟಕದ ಬ್ರಾಂಡ್, ಸರಬರಾಜು ಹೇಗೆ?
ಕರ್ನಾಟಕದ ಹೆಮ್ಮೆಯ ಬ್ರಾಂಡ್ ನಂದಿನಿ ಹಾಲು ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಲಭ್ಯವಾಗುತ್ತಿದೆ. ದೇಶದ ಪ್ರಮುಖ ಬ್ರಾಂಡ್‌ಗಳಾದ ಮದರ್ ಡೈರಿ, ಅಮೂಲ್ ಜತೆ ರಾಜ್ಯದ ನಂದಿನಿ ಸ್ಪರ್ಧೆಗಿಳಿದಿದೆ. ಹಾಗಿದ್ದರೆ ಮಂಡ್ಯದಿಂದ ದೆಹಲಿಗೆ ಹಾಲು ಹೇಗೆ ಸರಬರಾಜು ಹೇಗಾಗುತ್ತದೆ? ಅಲ್ಲಿ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಇಲ್ಲಿದೆ. (ವರದಿ: ಎಚ್.ಮಾರುತಿ)
ಬೆಂಗಳೂರು: ನಂದಿನಿ ಉತ್ಪನ್ನಗಳು ಇನ್ನು ಮುಂದೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಲಭ್ಯವಾಗಲಿವೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಮೊದಲ ಬಾರಿಗೆ ದೆಹಲಿಯಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಜ್ಜಾಗಿದೆ. ನವೆಂಬರ್ 21ರ ಗುರುವಾರದಿಂದ ದೆಹಲಿಯಲ್ಲಿ ನಂದಿನಿ ಹಾಲು ಮೊಸರು ಸೇರಿದಂತೆ ಎಲ್ಲ ಉತ್ಪನ್ನಗಳು ಲಭ್ಯವಾಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದರು. ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳು ಈಗಾಗಲೇ ಮಹಾರಾಷ್ಟ್ರ, ಅಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಮಾರಾಟವಾಗುತ್ತಿವೆ. ದೆಹಲಿಯಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಕೆಎಂಎಫ್ ಉತ್ತರ ಭಾರತದ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.
ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಈಗಾಗಲೇ ಗುಜರಾತ್‌ನ ಅಮುಲ್, ಮದರ್ ಡೈರಿ, ಮಧುಸೂದನ್ ಮತ್ತು ನಮಸ್ತೆ ಇಂಡಿಯಾ ಮತ್ತಿತರ ಖಾಸಗಿ ಕಂಪನಿಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಈ ಕಂಪನಿಗಳ ಜತೆ ಪೈಪೋಟಿ ನಡೆಸಲು ನಂದಿನಿ ಸಜ್ಜಾಗಿದೆ. ಕೆಲವು ತಿಂಗಳ ಹಿಂದೆ ದೆಹಲಿಗೆ ಹಸುವಿನ ಹಾಲು ಪೂರೈಕೆ ಮಾಡಲು ಕೆಎಂಎಫ್‌ಗೆ ದೆಹಲಿ ಸರ್ಕಾರ ಬೇಡಿಕೆ ಸಲ್ಲಿಸಿತ್ತು. ಕಳೆದ ನಾಲ್ಕೈದು ತಿಂಗಳಿನಿಂದ ದೆಹಲಿ ಸರ್ಕಾರ ಕೆಎಂಎಫ್ ಜೊತೆ ಮಾತುಕತೆ ನಡೆಸುತ್ತಿದ್ದು, ಈಗ ನಂದಿನಿ ಔಟ್ಲೆಟ್ ಆರಂಭಿಸಲಾಗುತ್ತಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರಕ್ಕೆ ನಿತ್ಯ ತಲಾ 2.5 ಲಕ್ಷ ಲೀ.ಟರ್ ಹಾಲು ಪೂರೈಕೆಯಾಗುತ್ತಿದೆ. ಇದೀಗ ಆರಂಭಿಕ ಹಂತದಲ್ಲಿ 2.5 ಲಕ್ಷ ಲೀಟರ್ ಹಾಲು ನವದೆಹಲಿಗೆ ಪೂರೈಸುವ ಯೋಜನೆ ರೂಪಿಸಲಾಗಿದೆ. ಇನ್ನು ಆರು ತಿಂಗಳೊಳಗೆ 5 ಲಕ್ಷ ಲೀಟರ್ ಗೆ ಏರಿಸುವ ಗುರಿ ಹೊಂದಲಾಗಿದೆ.
ನವದೆಹಲಿಗೆ 29 ವರ್ಷಗಳ ಹಿಂದೆಯೇ ನಂದಿನಿ ಹಾಲು ಪೂರೈಕೆಯಾಗುತ್ತಿತ್ತು.ವಿವಿಧ ಕಾರಣಗಳಿಗಾಗಿ ಹಾಲು ಪೂರೈಕೆ ಸ್ಥಗಿತಗೊಂಡಿತ್ತು.
ಪೂರೈಕೆ ಹೇಗೆ?
ದೆಹಲಿಗೆ ರಸ್ತೆ ಮೂಲಕ ಹಾಲು ಪೂರೈಕೆ ಮಾಡಲು ಕೆಎಂಎಫ್ ವ್ಯವಸ್ಥೆ ಮಾಡಿಕೊಂಡಿದೆ. ಮಂಡ್ಯದಿಂದ 54 ಗಂಟೆಗಳಲ್ಲಿ ರಸ್ತೆಯ ಮೂಲಕ ದೆಹಲಿಗೆ ಹಾಲನ್ನು ಸಾಗಿಸುವಲ್ಲಿ ಯಶಸ್ವಿಯಾಗಿದೆ. ಈ ಅವಧಿಯಲ್ಲಿ ಹಾಲಿನ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಮಂಡ್ಯದಿಂದ ದೆಹಲಿಗೆ ಹಾಲನ್ನು ಸಾಗಿಸಲು 2,190 ಟ್ಯಾಂಕರುಗಳನ್ನು ಬಳಸಲು ಕೆಎಂಎಫ್ ನಿರ್ಧರಿಸಿದೆ. ಈ ಟ್ಯಾಂಕರ್‌ಗಳು 2400ರಿಂದ 2500 ಕಿಮೀ ಸಂಚಾರ ನಡೆಸಬೇಕಿದೆ. ಕೆಎಂಎಫ್ ಸಂಸ್ಥೆಯ ಮಂಡ್ಯ ಹಾಲು ಒಕ್ಕೂಟವು ದೆಹಲಿಗೆ ಹಾಲನ್ನು ಸರಬರಾಜು ಮಾಡುವ ಟೆಂಡರ್ ಅನ್ನು ಪಡೆದುಕೊಂಡಿದೆ ಎಂದು ಕೆಂಎಂಎಫ್ ತಿಳಿಸಿದೆ.
ದೆಹಲಿಯಲ್ಲಿ ನಂದಿನಿ ಹಾಲಿನ ಬೆಲೆ ಎಷ್ಟು?
ದೆಹಲಿಯಲ್ಲಿ ಪ್ರತಿ ಲೀಟರ್ ಹಾಲಿಗೆ 67 ಮತ್ತು ಅರ್ಧ ಲೀಟರ್ ಹಾಲಿಗೆ 35ರೂಗಳಂತೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ವಿವಿಧ ಶ್ರೇಣಿಯ ಹಾಲಿಗೆ ವಿವಿಧ ದರ ನಿಗದಿಯಾಗಿರುತ್ತದೆ. ಸಾಗಾಣೆ ಮತ್ತು ಬೆಲೆ ಗಮನಿಸಿದರೆ ಲಾಭದಾಯಕ ಎಂದು ಕೆಎಂಎಫ್ ತಿಳಿಸಿದೆ.
ರಾಜ್ಯದಲ್ಲಿ ಪ್ರತಿದಿನ 92ರಿಂದ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಲೀಟರ್‌ಗೆ 32 ರೂ.ಗಳಂತೆ ಹಾಲು ಖರೀದಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಪ್ರೋತ್ಸಾಹ ಧನಕ್ಕಾಗಿ ಪ್ರತಿ ದಿನ 5 ಕೋಟಿ ರೂಪಾಯಿಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ.
ಕೆಎಂಎಫ್ ದೇಶದ ಪ್ರಮುಖ ಸಹಕಾರಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಒಟ್ಟು 16 ಮಿಲ್ಕ್ ಯೂನಿಯನ್‌ಗಳಿವೆ. ರಾಜ್ಯದಲ್ಲಿ ಅಂದಾಜು 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. 2.4 ಮಿಲಿಯನ್ ಹಾಲು ಉತ್ಪಾದಕರು, 22 ಸಾವಿರ ಹಳ್ಳಿಗಳಲ್ಲಿ 14 ಸಾವಿರ ಸಹಕಾರಿ ಸೊಸೈಟಿಗಳು ಕಾರ್ಯ ನಿರ್ವಹಿಸುತ್ತಿವೆ. ಕೆಎಂಎಫ್ 65ಕ್ಕೂ ಹೆಚ್ಚು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ರೈತರಿಗೆ ಪ್ರತಿದಿನ 17 ಕೋಟಿ ರೂ.ಗಳನ್ನು ವಿತರಣೆ ಮಾಡುತ್ತಿದೆ. ಅಂದಾಜು 22 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ನಂದಿನಿ ಹಾಲಿಗೆ ಬೇಡಿಕೆ ವಿದೇಶಗಳಿಗೂ ಹಬ್ಬಿದೆ. ಮಲೇಶಿಯಾ ಸಿಂಗಾಪುರ, ವಿಯೆಟ್ನಾಂ ಅರಬ್ ರಾಷ್ಟ್ರಗಳು ಮತ್ತು ಅಮೆರಿಕ ದೇಶಕ್ಕೂ ತಲುಪುತ್ತಿದೆ.