ಕನ್ನಡ ಸುದ್ದಿ  /  ಕರ್ನಾಟಕ  /  ನಂದಿನಿ ಹಾಲು: ನೀಲಿ, ಕೇಸರಿ, ಹಸಿರು, ಹಳದಿ ಬಣ್ಣದ ಪ್ಯಾಕೇಟ್‌ ನಲ್ಲಿ ಬಳಕೆಗೆ ಯಾವುದು ಒಳ್ಳೆಯದು

ನಂದಿನಿ ಹಾಲು: ನೀಲಿ, ಕೇಸರಿ, ಹಸಿರು, ಹಳದಿ ಬಣ್ಣದ ಪ್ಯಾಕೇಟ್‌ ನಲ್ಲಿ ಬಳಕೆಗೆ ಯಾವುದು ಒಳ್ಳೆಯದು

Nandini Milk ನಂದಿನಿ ಹಾಲು ಬಗೆ ಬಗೆಯ ಬಣ್ಣದ ಪ್ಯಾಕೇಟ್‌ಗಳಲ್ಲಿ ಸಿಗಲಿದೆ. ಆಯಾ ಬಣ್ಣದ ಪ್ಯಾಕೇಟ್‌ ಆಧರಿಸಿ ಭಿನ್ನ ಹಾಲು ಖರೀದಿಗೆ ಲಭ್ಯ. ಈ ಕುರಿತ ಮಾಹಿತಿ ಇಲ್ಲಿದೆ.

ನಂದಿನಿ ಹಾಲು ಬಣ್ಣ ಬಣ್ಣದ ಪ್ಯಾಕೇಟ್‌ ಗಳಲ್ಲಿ ಲಭ್ಯವಿದ್ದು, ಅದರದ್ದೇ ಆದ ವಿಶೇಷವಿದೆ.
ನಂದಿನಿ ಹಾಲು ಬಣ್ಣ ಬಣ್ಣದ ಪ್ಯಾಕೇಟ್‌ ಗಳಲ್ಲಿ ಲಭ್ಯವಿದ್ದು, ಅದರದ್ದೇ ಆದ ವಿಶೇಷವಿದೆ.

ಬೆಂಗಳೂರು: ನಂದಿನಿ ಕರ್ನಾಟಕದ ಹೆಮ್ಮೆಯ ಬ್ರಾಂಡ್‌. ಅದರಲ್ಲೂ ನಂದಿನಿ ಹಾಲು ಪ್ರತಿ ಮನೆಯ ಸಂಗಾತಿಯೂ ಹೌದು. ಏಕೆಂದರೆ ಇದು ನಮ್ಮ ರೈತರು ಉತ್ಪಾದಿಸುವ ಹಾಲು ನಂದಿನಿ ರೂಪ ಪಡೆದು ಲಕ್ಷಾಂತರ ಮನೆಗಳನ್ನು ತಲುಪುತ್ತದೆ. ನಂದಿನಿ ಹಾಲಿಗೂ ಜನರಿಗೂ ಬಿಡಿಸಲಾಗದ ನಂಟು. ಖಾಸಗಿ ಸಂಸ್ಥೆಗಳ ಹಲವಾರು ಹಾಲು ಉತ್ಪನ್ನಗಳಿದ್ದರೂ ನಂದಿನಿಗೆ ಕರ್ನಾಟಕದಲ್ಲಿ ಮೊದಲ ಆದ್ಯತೆ. ಸಹಕಾರ ವಲಯದ ಮೂಲಕ ದೊಡ್ಡದಾಗಿ ಬೆಳೆದಿರುವ ನಂದಿನಿ ಹಾಲು ಹಲವು ರೂಪದಲ್ಲಿ ಬರುತ್ತದೆ. ಇದಕ್ಕಾಗಿಯೇ ಕರ್ನಾಟಕ ಹಾಲು ಮಹಾಮಂಡಳ ಹಾಗೂ ಆಯಾ ಡೈರಿಗಳ ಮೂಲಕ ಉತ್ಪಾದನೆ ಮಾಡಲಾಗುತ್ತಿದೆ. ಇದರಲ್ಲಿ ಆರೇಳು ರೀತಿಯ ಹಾಲು ಪ್ಯಾಕೇಟ್‌ ರೂಪದಲ್ಲಿ ಬರಲಿದೆ. ಇದರ ವಿಶೇಷ ಏನು ಎನ್ನುವ ಮಾಹಿತಿ ಇಲ್ಲಿದೆ.

ಯಾವ ಉಪಯೋಗಕ್ಕೆಯಾವ ಬಣ್ಣದ ಪ್ಯಾಕೆಟ್ ತರ್ಬೇಕು ಅನ್ನೋ ಪ್ರಶ್ನೇನ ಎಲ್ಲರೂ ಹಾಕಿಕೊಳ್ಳೋದಿಲ್ಲ. ಎಲ್ಲರೂ ಯಾವುದು ಕೊಂಡ್ಕೋತಾರೋ ಅದನ್ನೇ ತರೋದು ವಾಡಿಕೆ. ಅದು ಸಾಮಾನ್ಯವಾಗಿ ನೀಲಿ ಬಣ್ಣದ ಪ್ಯಾಕೆಟ್ಟೇ ಆಗಿರುತ್ತೆ. ಆದರೆ ನಂದಿನಿ ಹಾಲು ಸರಿಯಾಗಿ ಬಳಸಬೇಕು, ಅದರಿಂದ ಆದಷ್ಟು ಹೆಚ್ಚು ಉಪಯೋಗ ಪಡ್ಕೋಬೇಕು ಅನ್ನೋದಾದರೆ ಕೆಳಗಿನ ಮಾಹಿತಿ ಗಮನದಲ್ಲಿಡಿ ಎನ್ನುವುದು ಪರಿಸರ ಪರಿವಾರ ಬಳಗದ ಸಲಹೆ.

ಟ್ರೆಂಡಿಂಗ್​ ಸುದ್ದಿ

1. ಹಂಗೇ (ಕಾಯಿಸದೆ) ಕುಡಿಯಕ್ಕೆ: ಬೆಳಗ್ಗೆ ಎದ್ದು ಹಾಲು ಕಾಯಿಸಿ ಕುಡಿಯಕ್ಕೆ ಟೈಮ್ ಇಲ್ವಾ? ಹಾಗಾದರೆ ನಂದಿನಿ ಗುಡ್ ಲೈಫ್ ಮಿಲ್ಕ್ ಪ್ಯಾಕೆಟ್ ತೊಗೊಂಡು ಹಾಗೆಯೇ ಕುಡಿಬೋದು. ಯಾಕೆ ಗೊತ್ತಾ? ಈ ಹಾಲನ್ನು ಪ್ಯಾಕೆಟಿಗೆ ಹಾಕೋ ಮುಂಚೆನೇ 137 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ 4 ನಿಮಿಷಗಳ ತನಕ ಕಾಯಿಸಿ ತಕ್ಷಣವೇ ತಣ್ಣಗೆ ಮಾಡಿರುತ್ತಾರೆ. ಅದ್ದರಿಂದ ಈ ಹಾಲಿನಲ್ಲಿ ಬ್ಯಾಕ್ಟೀರಿಯಾ ಬೆಳೆಯಕ್ಕೆ ಅವಕಾಶವಿಲ್ಲ. ಟೆಟ್ರಾ ಪ್ಯಾಕಿನಲ್ಲಿ ಹಾಕುವುದರಿಂದ ಹೊರಗಿನ ಯಾವ ಉಷ್ಣಾಂಶದಿಂದ ಹಾಲು ಒಡೆಯುವುದಿಲ್ಲ.

2. ಕಾಯಿಸಿ ಕುಡಿಯಲು: ಉಕ್ಕು ಬರುವ ತನಕ ಕಾಯಿಸಿಕೊಂಡು ಕುಡಿಯುವುದಕ್ಕೆ ನಂದಿನಿಯ ಯಾವ ಬಣ್ಣದ ಪ್ಯಾಕೆಟ್ ಬೇಕಾದರೂ ತರಬಹುದು.

3. ಕಾಫಿ ಅಥವಾ ಟೀ ಮಾಡಕ್ಕೆ: ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದು ಮಾಡಿದರೆ ಹಾಲು ಒದಗುತ್ತದೆ. ಹೆಚ್ಚು ಲೋಟ ಕಾಫಿ/ಟೀ ಮಾಡಬಹುದು. ರುಚಿಯೂ ಚೆನ್ನ.

4. ಗಟ್ಟಿ ಕಾಫಿ ಮಾಡಕ್ಕೆ: ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ತಂದು ಗಟ್ಟಿ ಕಾಫಿ ಮಾಡಿಕೊಳ್ಳಬಹುದು. ಪೂರ್ತಿ ಕೆನೆಯ ಅಂಶ ಈ ಹಾಲಿನಲ್ಲಿ ಇರೋ ಹಾಗೆ ಮಾಡಿರುತ್ತಾರೆ. ಆದ್ರೇನೂ ಕೆನೆ-ಕೆನೆ ಕಟ್ಟಿಕೊಳ್ಳುವುದಿಲ್ಲ. ಯಾಕಂದ್ರೆ ಹೊಮೊಜಿನೈಸ್ಡ್ ಹದಕ್ಕೆ ಮಾಡಿರುತ್ತಾರೆ.

5. ಗಟ್ಟಿ ಮೊಸರು ಮಾಡಕ್ಕೆ: ನಂದಿನಿಯ ಸ್ಪೆಶಲ್ ಹಸಿರು ಬಣ್ಣದ ಪ್ಯಾಕೆಟ್ ಅಂದರೆ ಸ್ಪೆಶಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳೋದು ಸೂಕ್ತ.

6. ಪಾಯಸ ಅಥವಾ ಹಾಲಿನಿಂದ ಮಾಡುವ ಸಿಹಿ ಪದಾರ್ಥಗಳಿಗೆ: ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ತಂದರೆ ತುಂಬಾ ಚೆನ್ನಾಗಿ ಆಗತ್ತೆ. "ಮಿಲ್ಕ್ ಮೈಡ್" ತರುವ ಬದಲು.

7. ಪುಟ್ಟ ಮಕ್ಕಳಿಗೆ: ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು. ಯಾಕಂದ್ರೆ ಬೇರೆ ಪ್ಯಾಕೆಟ್ನಲ್ಲಿ ಹಸು ಹಾಲಿನ ಜೊತೆ ಎಮ್ಮೆ ಹಾಲು ಸೇರಿಕೊಂಡಿರಲಿದೆ.

8. ಬೆಳೆಯುವ ಮಕ್ಕಳಿಗೆ: ಕಿತ್ತಳೆ ಬಣ್ಣದ ನಂದಿನಿಯ ಶುಭಂ ಪ್ಯಾಕೆಟ್. ಅಥವಾ ಸಂಪೂರ್ಣ ಸ್ಟ್ಯಾಂಡರ್ಡೈಸ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲಿ ಬೆಳೆಯುವ ಮಕ್ಕಳಿಗೆ ಬೇಕಾಗುವ ಕೊಬ್ಬಿನಂಶ ಇರತ್ತೆ. ಅವರ ದಿನ ನಿತ್ಯದ ಚಟುವಟುಕೆಗಳಿಗೆ ಸಾಕಷ್ಟು ಶಕ್ತಿ ಕೊಡುತ್ತದೆ.

9.ಹಿರಿಯರಿಗೆ: ನಂದಿನಿಯ ಗುಡ್ ಲೈಫ್ ಸ್ಲಿಮ್ಡ್ ಸ್ಕಿಮ್ ಮಿಲ್ಕ್ ಪ್ಯಾಕೆಟ್ ಕೂಡ ತೊಗೊಬಹುದು. ಇದರಲ್ಲಿ ಹೆಸರೇ ಹೇಳುವಂತೆ ಕೊಬ್ಬಿನಂಶ ಕಡಿಮೆ ಇರುವುದರಿಂದ ವಯಸ್ಸಾದವರಿಗೆ ಜೀರ್ಣಿಸಿಕೊಳ್ಳಲು ಸುಲಭ. ಇದಲ್ಲದೆ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ - ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲೂ ಕಡಿಮೆ ಕೊಬ್ಬಿನಂಶ ಇರಲಿದೆ.

10. ಕೊಬ್ಬು ಇಳಿಸಕ್ಕೆ: ಕೊಬ್ಬು ಕರಗಬೇಕು ಅಂತ ಹಾಲು ಕುಡಿಯೋದನ್ನ ನಿಲ್ಲಿಸಬಿಟ್ಟರೆ ಬೇರೆ ಪೌಷ್ಟಿಕಾಂಶಗಳ ಕೊರತೆ ಉಂಟಾಗತ್ತೆ.ಇದಕ್ಕೆ ಸುಲಭವಾಗಿ ಸಿಗುವ ನಂದಿನಿಯ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ - ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲಿ ಕಡಿಮೆ ಕೊಬ್ಬಿನಂಶ ಇರಲಿದೆ.

11.ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇರುವವರಿಗೆ: ನಂದಿನಿ ಸ್ಮಾರ್ಟ್ ಡಬಲ್ ಟೋನ್ಡ್ ಹೊಮೊಜಿನೈಸೆಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ.

12. ಬರೀ ಹಸುವಿನ ಹಾಲು ಬೇಕು ಅನ್ನುವವರಿಗೆ: ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು. ಯಾಕಂದ್ರೆ ಬೇರೆ ಪ್ಯಾಕೆಟ್ನಲ್ಲಿ ಹಸು ಹಾಲಿನ ಜೊತೆ ಎಮ್ಮೆ ಹಾಲು ಸೇರಿಕೊಂಡಿರತ್ತೆ.

13. ತುಂಬಾ ದಿನ ಇಟ್ಟುಕೊಳ್ಳಬೇಕಾದರೆ: ಪ್ರವಾಸಕ್ಕೆ ಹೋಗ್ಬೇಕು, ಮಕ್ಕಳಿಗೆ ಹಾಲು ಸಿಗಲ್ವಲ್ಲಾ ಅಂತ ಚಿಂತೆ ಬಂದರೆ ನಂದಿನಿಯ ಗುಡ್ ಲೈಫ್ ಟೆಟ್ರಾ ಪ್ಯಾಕ್ ತೊಗೊಳ್ಳಿ. 10 ದಿನದ ತನಕ ಹಾಲನ್ನು ಹಾಗೆ ಕುಡಿಯಬಹುದು. ಕಾಯಿಸುವುದೂ ಬೇಡ. ಟೆಟ್ರಾ ಪ್ಯಾಕಿನಲ್ಲಿ ಇರುವುದರಿಂದ ಹಾಲು ಒಡೆಯುವುದಿಲ್ಲ.

ವಿಭಾಗ