Nandini vs Amul: ಯಾವುದೇ ಸ್ಪರ್ಧೆ ಎದುರಿಸಲು 'ನಂದಿನಿ' ಸಿದ್ಧವಿದೆ; ಕಾಂಗ್ರೆಸ್‌ನವರು ಇದನ್ನ ರಾಜಕೀಯಗೊಳಿಸಿದ್ದಾರೆ: ಸಚಿವ ಸುಧಾಕರ್
ನಂದಿನಿ ಉತ್ಪನ್ನಗಳು ಬೇರೆ ರಾಜ್ಯ ಹಾಗೂ ದೇಶಗಳಲ್ಲೂ ಮಾರಾಟವಾಗುತ್ತಿದ್ದು, ಯಾವುದೇ ಸ್ಪರ್ಧೆ ಎದುರಿಸಲು ಸಿದ್ಧವಾಗಿವೆ. ಅಮುಲ್ ಉತ್ಪನ್ನಗಳ ಮಾರಾಟದ ವಿಚಾರವನ್ನ ಕಾಂಗ್ರೆಸ್‌ನವರು ರಾಜಕೀಯಗೊಳಿಸಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಬೆಂಗಳೂರು: ರಾಜ್ಯ ರೈತರ (Farmers) ಜೀವನೋಪಾಯದ ಒಂದು ಭಾಗವಾಗಿರುವ ಕರ್ನಾಟಕ ಮಿಲ್ ಫೆಡರೇಷನ್ (KMF)ನೊಂದಿಗೆ ಗುಜರಾತ್ ನ (Gujrat) ಅಮೂಲ್ ವಿಲೀನಧ ವಿಚಾರ ಕಳೆದ ಕೆಲವು ತಿಂಗಳುಗಳಿಂದ ಚರ್ಚೆಗೆ ಗ್ರಾಸವಾಗುವುದರ ಜೊತೆಗೆ ಭಾರಿ ವಿರೋಧವೂ ವ್ಯಕ್ತವಾಗಿತ್ತು.
ಇದೀಗ ನಂದಿನಿ ಹಾಲಿನ ಉತ್ಪಾದನೆ ಕೊರತೆಯ ನೆಪದಲ್ಲಿ ಅಮುಲ್ ಹಾಲು (Amul Milk) ಕರ್ನಾಟಕದ ಮಾರುಕಟ್ಟೆಗೆ ಪ್ರವೇಶಿಸಿರುವುದು ರೈತರು, ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಕೇರಳಿಸುವಂತೆ ಮಾಡಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಇದಕ್ಕೆ ಆಡಳಿತ ಪಕ್ಷ ಬಿಜೆಪಿ ನಾಯಕರು ಹೇಳುತ್ತಿರುವುದೇ ಬೇರೆ.
ಈ ಬಗ್ಗೆ ಇವತ್ತು ಮಾಧ್ಯಮಗಳೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar), ನಂದಿನಿ ಉತ್ಪನ್ನಗಳು (Nandini Products) ಬೇರೆ ರಾಜ್ಯ ಹಾಗೂ ದೇಶಗಳಲ್ಲೂ ಮಾರಾಟವಾಗುತ್ತಿದ್ದು, ಯಾವುದೇ ಸ್ಪರ್ಧೆ ಎದುರಿಸಲು ಸಿದ್ಧವಾಗಿವೆ. ಅಮುಲ್ ಉತ್ಪನ್ನಗಳ ಮಾರಾಟದ ವಿಚಾರವನ್ನ ಕಾಂಗ್ರೆಸ್‌ನವರು ರಾಜಕೀಯಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ನಂದಿನಿಗೆ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ಬೆಂಬಲ
ನಂದಿನಿ ಉತ್ಪನ್ನಗಳು ನಮ್ಮ ರಾಜ್ಯದ ಹೆಮ್ಮೆಯಾಗಿದೆ. ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪನವರು ಮೊದಲ ಬಾರಿಗೆ ರೈತರಿಗೆ 2 ರೂ. ಪ್ರೋತ್ಸಾಹ ಧನ ನೀಡಿದ್ದರು. ಈಗ 5 ರೂ. ನೀಡಲಾಗುತ್ತಿದೆ. ಅಂದರೆ ನಂದಿನಿಗೆ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ಬೆಂಬಲ ನೀಡಿದೆ.
ಯಾವುದೇ ಉತ್ಪನ್ನ ಯಾವುದೇ ಭಾಗಗಳಲ್ಲಿ ಮಾರಾಟವಾಗಬಹುದು. ಆದರೆ ಕಾಂಗ್ರೆಸ್‌ನವರು ಇದನ್ನು ರಾಜಕೀಯವಾಗಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ 16 ರಿಂದ 18 ಕಂಪನಿಗಳು ತಮ್ಮ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಆಗ ಇವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಅಮುಲ್ ಕಂಪನಿ ತನ್ನ ಉತ್ಪನ್ನ ಮಾರಾಟ ಮಾಡಲು ಮುಂದಾದಾಗ ಮಾತ್ರ ಸಮಸ್ಯೆ ಆರಂಭವಾಗಿದೆ ಎಂದಿದ್ದಾರೆ.
ನಂದಿನಿ ಯಾವುದೇ ಸ್ಪರ್ಧೆಯನ್ನು ಎದುರಿಸಲು ಸಿದ್ಧ ಎಂಬುದು ನಮ್ಮ ವಿಶ್ವಾಸ. ವಿದೇಶಗಳಲ್ಲೂ ನಂದಿನಿ ಉತ್ಪನ್ನ ಮಾರಾಟವಾಗುತ್ತಿದೆ. ತಮಿಳುನಾಡು, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲೂ ನಂದಿನಿ ಹಾಲು ಮಾರಾಟವಾಗುತ್ತಿದೆ. ಕಾಂಗ್ರೆಸ್‌ನವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಹಾಗೆಯೇ ಮೊಸಳೆ ಕಣ್ಣೀರು ಹಾಕುತ್ತಿದ್ದರು. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಸುಧಾಕರ್ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಈಗ ಕೋವಿಡ್ ನಿಯಂತ್ರಣದಲ್ಲಿದೆ
ಕಳೆದ ವಾರವಷ್ಟೇ ಕೋವಿಡ್‌ಗೆ ಸಂಬಂಧಿಸಿದಂತೆ ಮಾರ್ಗಸೂಚಿ ನೀಡಲಾಗಿದೆ. ಪರೀಕ್ಷೆ ಹೆಚ್ಚಳ, ಜೀನೋಮಿಕ್ ಸೀಕ್ವೆನ್ಸ್, ಆಸ್ಪತ್ರೆ ದಾಖಲು ಮೊದಲಾದವುಗಳ ಬಗ್ಗೆ ಗಮನಹರಿಸಲಾಗಿದೆ. ರಾಜ್ಯದಲ್ಲಿ ಈಗ ಕೋವಿಡ್ ನಿಯಂತ್ರಣದಲ್ಲಿದೆ. ಆದರೆ ಜನರು ಮೂರನೇ ಲಸಿಕೆಯನ್ನ ಕಡ್ಡಾಯವಾಗಿ ಪಡೆಯಬೇಕು. ಜೊತೆಗೆ ಜನಸಂದಣಿಯ ಪ್ರದೇಶಗಳಿಗೆ ಹೋಗಬಾರದು, ಮಾಸ್ಕ್ ಧರಿಸಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಕಾನೂನು ಪ್ರಕಾರ ಎಲ್ಲವನ್ನೂ ಮಾಡುತ್ತದೆ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಲಾಗಿದೆ. ಕೈಗಾರಿಕಾ ಕ್ಷೇತ್ರದಲ್ಲೂ ಉತ್ತಮ ಯೋಜನೆಗಳನ್ನು ನೀಡಿದೆ. ಆದರೆ ಕಾಂಗ್ರೆಸ್ ಪಕ್ಷ ಆಧಾರರಹಿತವಾಗಿ ಎಲ್ಲದಕ್ಕೂ ಆರೋಪ ಮಾಡುತ್ತಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಅಮುಲ್ ಹಿಮ್ಮೆಟ್ಟಿಸಲು ಅಗತ್ಯ ಕ್ರಮ
ಇಂದು ಬೆಳಗ್ಗೆಯಷ್ಟೇ ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ನಂದಿನಿ ನಂಬರ್ ಒನ್ ಬ್ರ್ಯಾಂಡ್ ಆಗಲಿದ್ದು, ಅಮುಲ್ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟವನ್ನು ನಾವು ಕೂಡ ಮಾಡಿದ್ದೇವೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಮುಲ್ ಹಿಮ್ಮೆಟ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.