Kannada News  /  Karnataka  /  Nandini Will Maintain Its Separate Identity Say Basavaraj Bommai
ಸಿಎಂ ಬೊಮ್ಮಾಯಿ, ನಂದಿನಿ ಹಾಲು ಮತ್ತು ಅಮಿತ್ ಶಾ
ಸಿಎಂ ಬೊಮ್ಮಾಯಿ, ನಂದಿನಿ ಹಾಲು ಮತ್ತು ಅಮಿತ್ ಶಾ

CM Bommai on Nandini: ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನ ಸದಾ ಕಾಯ್ದುಕೊಳ್ಳಲಿದೆ; 'ಶಾ' ಪ್ರಸ್ತಾಪ ಬೆನ್ನಲ್ಲೇ ಸಿಎಂ ಸ್ಪಷ್ಟನೆ

01 January 2023, 15:54 ISTHT Kannada Desk
01 January 2023, 15:54 IST

ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತಮ್ಮ ಆರ್ ಟಿ ನಗರದ ನಿವಾಸದಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕೆಎಂಎಫ್ ನ ನಂದಿನಿ ಮತ್ತು ಗುಜರಾತ್ ನ ಅಮೂಲ್ ಹಾಲಿನ ಸಂಸ್ಥೆಯನ್ನು ವಿಲೀನಗೊಳಿಸುವ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರ ಪ್ರಸ್ತಾಪಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತಮ್ಮ ಆರ್ ಟಿ ನಗರದ ನಿವಾಸದಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂದಿನಿಯನ್ನು ಅಮುಲ್ ನೊಂದಿಗೆ ವಿಲೀನ ಮಾಡುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಯಾರೂ ಊಹೆ ಮಾಡಿ ಟೀಕೆ ಮಾಡಬಾರದು. ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಮಾತನಾಡಿರುವುದು ಸ್ಪಷ್ಟವಾಗಿದೆ. ಒಬ್ಬರಿಗೊಬ್ಬರು ಸಹಕಾರದಿಂದ ನಂದಿನಿ ಮತ್ತು ಅಮೂಲ್ ತಾಂತ್ರಿಕ ವಾಗಿ, ಮಾರುಕಟ್ಟೆಯಲ್ಲಿ ಸಹಕಾರ ಮಾಡಬೇಕು. ಇವೆರಡೂ ದೊಡ್ಡ ಸಂಸ್ಥೆಗಳು. ಪೂರಕವಾಗಿ ಕೆಲಸ ಮಾಡಬೇಕು. ಅದರರ್ಥ ವಿಲೀನಗೊಳಿಸುವುದು ಎಂದಲ್ಲ. ನಂದಿನಿ ಅಸ್ತಿತ್ವ ನೂರಾರು ವರ್ಷ ಶಾಶ್ವತವಾಗಿ ಇರಲಿದೆ ಎಂದು ಹೇಳಿದರು.

ಒಟ್ಟಾಗಿ ಕೆಲಸ ಮಾಡಿದರೆ ಲಾಭ

ಯಾವುದೂ ಸಮಸ್ಯೆಯಿಲ್ಲ. ಕೆಲವು ವಲಯಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರೆ ಲಾಭವಿದೆ. ನಂದಿನಿ ಅಥವಾ ಅಮೂಲ್ ತಾಂತ್ರಿಕವಾಗಿ ಮುಂದಿದ್ದರೆ ವಿನಿಯಮ ಮಾಡಿಕೊಳ್ಳಬಹುದು. ಆಡಳಿತಾತ್ಮಕ ಕ್ರಮಗಳನ್ನು ವಿನಿಮಯ ಮಾಡಿಕೊಳ್ಳಿ ಎಂದು ಅವರು ಹೇಳಿರುವುದು. ಅದರ ತಪ್ಪು ಅರ್ಥ ಕಲ್ಪಿಸುವ ಅಥವಾ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ನಾನು ಮುಖ್ಯಮಂತ್ರಿಯಾಗಿ ಹೇಳುವುದು, ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದರು.

ಮೀಸಲಾತಿ ಸಂವಿಧಾನದ ಚೌಕಟ್ಟಿನಲ್ಲಿ ಇದೆ

ಮೀಸಲಾತಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರಿಗೆ ಕಷ್ಟವಾಗುತ್ತಿದೆ. ಅದಕ್ಕೆ ವ್ಯಾಖ್ಯಾನ ಮಾಡಲು ಬರುವುದಿಲ್ಲ. ಅಂತಿಮ ವರದಿ ಬಂದಾಗ ಅದಕ್ಕೆ ಸ್ಪಷ್ಟ ರೂಪ ದೊರಕಲಿದೆ. ಸಂವಿಧಾನದ ಚೌಕಟ್ಟಿನಲ್ಲಿ ಸರಿಯಾಗಿರಲಿದೆ ಎಂದರು.

ಕೆಎಂಎಫ್ ನ ನಂದಿನಿ ಮತ್ತು ಗುಜರಾತ್ ನ ಅಮೂಲ್ ಹಾಲಿನ ಸಂಸ್ಥೆಯನ್ನು ವಿಲೀನಗೊಳಿಸುವ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರ ಪ್ರಸ್ತಾಪಕ್ಕೆ ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ, ನಮ್ಮ ಬ್ಯಾಂಕುಗಳನ್ನು ಕಿತ್ತುಕೊಂಡು ನಮ್ಮ ಆರ್ಥಿಕತೆಯನ್ನು ನಾಶಮಾಡಲೆತ್ನಿಸಿದ ಬಿಜೆಪಿಯವರು ಈಗ ನಮ್ಮ ಹಾಲಿನ ಮೂಲಕ್ಕೆ ಕೈ ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಈ ದುಷ್ಟ ಭಸ್ಮಾಸುರನ ಕೈಗೆ ಈಗಲೆ ಬರೆ ಹಾಕದಿದ್ದರೆ ನಮ್ಮ 25 ಲಕ್ಷ ರೈತ ಕುಟುಂಬಗಳನ್ನು ಬೀದಿಪಾಲು ಬಿಜೆಪಿಯವರು ಮಾಡಿಬಿಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದು, "ಕನ್ನಡಿಗರ ತಂಟೆಗೆ ಬಂದರೆ ಎಚ್ಚರಿಕೆʼʼ ಎಂದು ಗುಡುಗಿದ್ದಾರೆ. "ನೆಲ, ಜಲ, ನುಡಿಯ ಬಗ್ಗೆ ಕನ್ನಡ ಮತ್ತು ಕರ್ನಾಟಕದ ಮೇಲೆ ಸದಾ ಪ್ರಹಾರ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರವು ಕನ್ನಡಿಗರ ವಿರುದ್ಧ ತನ್ನ ರಕ್ಕಸ ನೀತಿಗಳನ್ನು ಮುಂದುವರಿಸಿದೆ. ಈಗ ಕರ್ನಾಟಕದ ಹಾಲಿನಲ್ಲೂ ಗುಜರಾತಿನ ಹುಳಿ ಹಿಂಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರಟಿದ್ದಾರೆ" ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.