Nanjangud Doddajatre: ನಂಜನಗೂಡು ದೊಡ್ಡ ಜಾತ್ರೆಗೆ ಇಂದಿನಿಂದ ಏಪ್ರಿಲ್ 12 ರ ತನಕ ವಿಶೇಷ ರೈಲು ಸಂಚಾರ
Special train for Nanjangud Doddajatre: ನಂಜನಗೂಡು ದೊಡ್ಡ ಜಾತ್ರೆಗೆ ವಿಶೇಷ ರೈಲು ಸಂಚಾರ ಶುರುಮಾಡಿರುವುದಾಗಿ ನೈಋತ್ಯ ರೈಲ್ವೆ ತಿಳಿಸಿದೆ. ಇಂದು ಈ ವಿಶೇಷ ರೈಲು ಸಂಚಾರ ಶುರುವಾಗಿದ್ದು, ಏಪ್ರಿಲ್ 12 ರ ತನಕ ಇರಲಿದೆ.

Special train for Nanjangud Doddajatre: ನಂಜನಗೂಡಿನ ಪಂಚ ಮಹಾ ರಥೋತ್ಸವಕ್ಕೆ (ದೊಡ್ಡ ಜಾತ್ರೆ) ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂರು ಮತ್ತು ನಂಜನಗೂಡು ಟೌನ್ ನಡುವೆ ವಿಶೇಷ ಕಾಯ್ದಿರಿಸದ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಈ ವಿಶೇಷ ರೈಲುಗಳು ಏಪ್ರಿಲ್ 9 ರಿಂದ ಏಪ್ರಿಲ್ 12, 2025 ರವರೆಗೆ ಚಲಿಸಲಿವೆ.
ಮೈಸೂರು ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಡುವ ರೈಲು ಸಂಖ್ಯೆ 16225, ಮಧ್ಯಾಹ್ನ 01:50ಕ್ಕೆ ನಂಜನಗೂಡು ಟೌನ್ ತಲುಪಲಿದೆ. ಅಂದೇ, ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 16226 ನಂಜನಗೂಡು ಟೌನ್ ನಿಲ್ದಾಣದಿಂದ ಸಂಜೆ 7 ಗಂಟೆಗೆ ಹೊರಟು ರಾತ್ರಿ 8 ಗಂಟೆಗೆ ಮೈಸೂರು ತಲುಪಲಿದೆ. 23 ಬೋಗಿಗಳ ಈ ವಿಶೇಷ ರೈಲು ಚಾಮರಾಜಪುರಂ, ಅಶೋಕಪುರಂ, ಕಡಕೊಳ, ತಾಂಡವಪುರ ಹಾಗೂ ಸುಜಾತ ಪುರಂ ಹಾಲ್ಟ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.
ರೈಲುಗಳ ನಿಖರವಾದ ಆಗಮನ, ನಿರ್ಗಮನ ಸಮಯ ಹಾಗೂ ಇನ್ನಿತರ ಮಾಹಿತಿಗಾಗಿ ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್‌ಗಳನ್ನು ಸಂಪರ್ಕಿಸಬಹುದು ಎಂದು ಭಾರತೀಯ ರೈಲ್ವೆ ತಿಳಿಸಿದೆ.
ನಂಜನಗೂಡು ಪಂಚ ಮಹಾರಥೋತ್ಸವಕ್ಕೆ ಚಾಲನೆ
ಮೈಸೂರು ಜಿಲ್ಲೆಯಲ್ಲಿರುವ ದಕ್ಷಿಣಕಾಶಿ ಎಂಬ ಖ್ಯಾತಿಯ ನಂಜನಗೂಡಿನಲ್ಲಿ ಶ್ರೀ ಗೌತಮ ಪಂಚ ಮಹಾರಥೋತ್ಸವಕ್ಕೆ ಇಂದು ಬೆಳಿಗ್ಗೆ 5.15 ರಿಂದ 5.40ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಚಾಲನೆ ನೀಡಿದರು. ಆರಂಭದಲ್ಲಿ ಗಣಪತಿ ರಥಕ್ಕೆ ಮಹಾಮಂಗಳಾರತಿ ಮಾಡಿ ಬಳಿಕ ಶ್ರೀ ನಂಜುಂಡೇಶ್ವರ ಸ್ವಾಮಿ ರಥ, ಪಾರ್ವತಿ ಅಮ್ಮನವರ ರಥ, ಸುಬ್ರಹ್ಮಣ್ಯ ರಥ, ಕೊನೆಯದಾಗಿ ಚಂಡಿಕೇಶ್ವರ ರಥ. ಹೀಗೆ ಏಕಕಾಲದಲ್ಲಿ ಪಂಚ ರಥೋತ್ಸವ ನಡೆಯಿತು.


