ನಂಜನಗೂಡು ಶ್ರೀ ಕಂಠೇಶ್ವರ ಸನ್ನಿಧಿಯಲ್ಲಿ ಮೇ 22 ರಂದು ಉಚಿತ ಸಾಮೂಹಿಕ ವಿವಾಹ; ನೋಂದಣಿಗೆ ಇಂದೇ ಕಡೆ ದಿನ
ಕನ್ನಡ ಸುದ್ದಿ  /  ಕರ್ನಾಟಕ  /  ನಂಜನಗೂಡು ಶ್ರೀ ಕಂಠೇಶ್ವರ ಸನ್ನಿಧಿಯಲ್ಲಿ ಮೇ 22 ರಂದು ಉಚಿತ ಸಾಮೂಹಿಕ ವಿವಾಹ; ನೋಂದಣಿಗೆ ಇಂದೇ ಕಡೆ ದಿನ

ನಂಜನಗೂಡು ಶ್ರೀ ಕಂಠೇಶ್ವರ ಸನ್ನಿಧಿಯಲ್ಲಿ ಮೇ 22 ರಂದು ಉಚಿತ ಸಾಮೂಹಿಕ ವಿವಾಹ; ನೋಂದಣಿಗೆ ಇಂದೇ ಕಡೆ ದಿನ

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮೇ 22 ಉಚಿತ ಸಾಮೂಹಿಕ ವಿವಾಹ ನಡೆಯಲಿದ್ದು, ಭಾಗಿಯಾಗುವವರು ಮೇ 15ರ ಗುರುವಾರದೊಳಗೆ ಹೆಸರು ನೋಂದಣಿ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.

ನಂಜನಗೂಡು ತಾಲ್ಲೂಕಿನ ಶ್ರೀಕಂಠೇಶ್ವರ ದೇಗುಲ
ನಂಜನಗೂಡು ತಾಲ್ಲೂಕಿನ ಶ್ರೀಕಂಠೇಶ್ವರ ದೇಗುಲ

ಮೈಸೂರು: ದಕ್ಷಿಣ ಕಾಶಿ ಎಂದೇ ಹೆಸರು ಪಡೆದಿರುವ ಪ್ರಮುಖ ಶಿವನ ದೇಗುಲಗಳಲ್ಲಿ ಒಂದಾದ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಈ ವರ್ಷವೂ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಇದಕ್ಕಾಗಿ ಹಿಂದೂ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆಯು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಮೇ 22 ರಂದು ಉಚಿತ ಸಮೂಹಿಕ ವಿವಾಹವನ್ನು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದು, ಅರ್ಹ ಜೋಡಿಗಳು ಉಚಿತ ಸಾಮೂಹಿಕ ವಿವಾಹಕ್ಕೆ ಮೇ 15 ರೊಳಗೆ ನೋಂದಾಯಿಸಿಕೊಳ್ಳಬಹುದು.ವಧುವಿಗೆ ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡು(ಅoದಾಜು 8 ಗ್ರಾಂ ತೂಕ)ನೀಡಲಾಗುತ್ತದೆ. ಈ ಯೋಜನೆಯಡಿ ವಿವಾಹವಾಗಲು ಬಯಸುವವರು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ತಲಕಾಡಿನ ವೈದ್ಯನಾಥೇಶ್ವರಸ್ವಾಮಿ ಹಾಗೂ ಸಮೂಹ ದೇವಾಲಯಗಳು, ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ತಹಶೀಲ್ದಾರ್ ಕಛೇರಿ, ಅರಮನೆ ಮುಜರಾಯಿ ದೇವಾಲಯಗಳ ವ್ಯವಸ್ಥಾಪಕರ ಬಳಿ ಹಾಗೂ ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕು ತಹಶೀಲ್ದಾರ್ ರವರ ಕಚೇರಿಯಲ್ಲಿ ಅರ್ಜಿಯನ್ನು ಪಡೆದುಕೊಳ್ಳಬಹುದು ಎನ್ನುವುದು ಮೈಸೂರು ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಅವರ ಮನವಿ.

ಏನೇನು ದಾಖಲೆ ಬೇಕು

ಅರ್ಜಿ ಪಡೆದ ವಧುವರರು ಅಗತ್ಯ ದಾಖಲೆಗಳನ್ನು ನೋಂದಾಯಿಸಿಕೊಳ್ಳಬೇಕು. ವಧು-ವರರ ತಂದೆ ತಾಯಿಯವರು ವಿವಾಹಕ್ಕೆ ಒಪ್ಪಿ ವಿವಾಹ ದಿನದಂದು ಉಪಸ್ಥಿತರಿರಬೇಕು, ಜೊತೆಗೆ ವರನ ಸಾಕ್ಷಿದಾರರು ಇದ್ದಲ್ಲಿ ಮಾತ್ರ ವಿವಾಹವನ್ನು ನಡೆಸಲಾಗುವುದು. ತಂದೆ ತಾಯಿ ನಿಧನರಾಗಿದ್ದಲ್ಲಿ ಅವರ ವಾರಸುದಾರರರ ಸಂಪೂರ್ಣ ಒಪ್ಪಿಗೆ ಇದ್ದು ಅವರ ವಿವಾಹ ದಿನದಂದು ಕಡ್ಡಾಯವಾಗಿ ಹಾಜರಿರಬೇಕು ಹಾಗೂ ತಂದೆ ತಾಯಿ ನಿಧನದ ಬಗ್ಗೆ ಕಡ್ಡಾಯವಾಗಿ ಮರಣ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು.

ಸರ್ಕಾರದ ನಿಯಮದಂತೆ ವರನಿಗೆ ಕನಿಷ್ಠ 21 ವರ್ಷ ವಧುವಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಮೊದಲನೇ ಮದುವೆಗೆ ಮಾತ್ರ ಅವಕಾಶವಿದ್ದು, ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಅಂತರ್ಜಾತಿಯವರಾಗಿದ್ದರೆ ದೃಢೀಕೃತ ಜಾತಿ ಪ್ರಮಾಣವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

ಮಾಂಗಲ್ಯ ಭಾಗ್ಯ ಯೋಜನೆ

ವಧುವರರ ಕಡೆಯಿಂದ ಕಡ್ಡಾಯವಾಗಿ ಯಾವುದೇ ವರದಕ್ಷಿಣೆಯನ್ನು ಪಡೆಯುವಂತಿಲ್ಲ, ಸಾರ್ವಜನಿಕರಿಂದ ಯಾವುದೇ ದೂರು ಬಂದಲ್ಲಿ ಅಂತಹ ವಿವಾಹವಾಗುವ ವಧುವರರ ಬಗ್ಗೆ ಪುನರ್ ಪರಿಶೀಲಿಸಲಾಗುತ್ತದೆ ಹಾಗೂ ವಿವಾಹಕ್ಕೆ ಸಲ್ಲಿಸಿದ ದಾಖಲೆಗಳು ಸುಳ್ಳು ದಾಖಲೆಗಳೆಂದು ಧೃಡಪಟ್ಟಲ್ಲಿ ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ.

ಮಾಂಗಲ್ಯ ಭಾಗ್ಯ ಯೋಜನೆಯಡಿ ಸರಳ ಹಾಗೂ ಸಾಮೂಹಿಕ ವಿವಾಹದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಡಂಬರ ರಹಿತವಾಗಿ ಉಚಿತ ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹವನ್ನು ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಯೋಜನೆಯನ್ನು ಹೆಚ್ಚು ಹೆಚ್ಚು ಜನರು ಉಪಯೋಗಿಸಿಕೊಳ್ಳಬೇಕೆಂಬುದು ಅವರು ನೀಡಿದ ಮನವಿ.

ಪುರಾತನ ದೇಗುಲ

ನಂಜನಗೂಡು ನಗರ ಪ್ರಸಿದ್ಧವಾಗಿರುವುದು ಇಲ್ಲಿಯ ಶ್ರೀಕಂಠೇಶ್ವರ (ನಂಜುಂಡೇಶ್ವರ) ದೇವಾಲಯದಿಂದ. ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಇದು ಊರಿನ ಪೂರ್ವದ ಅಂಚಿನಲ್ಲಿ ಕಪಿಲಾ ಮತ್ತು ಗುಂಡ್ಲುಹೊಳೆಯ (ಕೌಂಡಿನ್ಯ ನದಿ) ಸಂಗಮದ ಬಳಿ ಪೂರ್ವಾಭಿಮುಖವಾಗಿದೆ.

ಶ್ರೀಕಂಠೇಶ್ವರ ದೇವಾಲಯವು ದ್ರಾವಿಡ ಶೈಲಿಯ ಕಟ್ಟಡ. ಇದು 117 ಮೀ. ಉದ್ದ, 48 ಮೀ. ಅಗಲ ಇದೆ. ಇದರಲ್ಲಿ 147 ಕಂಬಗಳಿವೆ. ಇದರ ಒಟ್ಟು ಆಚ್ಛಾದಿತ ಪ್ರದೇಶ 4,831 ಚ.ಮೀ. ಇದು ಕರ್ನಾಟಕದಲ್ಲೇ ಅತ್ಯಂತ ದೊಡ್ಡ ದೇವಸ್ಥಾನ. ಹೊರಗೋಡೆಗಳು ಸುಮಾರು 3.7 ಮೀ. ಎತ್ತರವಾಗಿವೆ. \

ಸುತ್ತಲೂ ದಕ್ಷಿಣ, ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಅಧಿಷ್ಠಾನ, ಹಿಂದೆ ಗೋಡೆ, ಮುಂದೆ ಕಂಬಸಾಲಿರುವ ಕೈಸಾಲೆ ಇವೆ. (ಈಗ ದಕ್ಷಿಣದ ಕೈಸಾಲೆಯನ್ನು ಪೂರ್ಣವಾಗಿಯೂ ಉತ್ತರದ್ದನ್ನು ಸ್ವಲ್ಪ ಭಾಗಗಳಲ್ಲಿಯೂ ಮುಚ್ಚಲಾಗಿದೆ). ಮೇಲೆ ಸುತ್ತಲೂ ದೇವ ಮತ್ತು ಇತರ ಶಿಲ್ಪಗಳಿರುವ ಕೂಟ ಮತ್ತು ಶಿಖರಗಳ ಗಚ್ಚಿನ ಹಾರ ಇದೆ. ಪೂರ್ವಭಾಗದಲ್ಲಿನ ಮಹಾದ್ವಾರದ ಮುಂದೆ ಇಕ್ಕೆಡೆ ಕೈಸಾಲೆಯಿರುವ ಒಂದು ಮುಖಮಂಟಪವಿದೆ. ಮಹಾದ್ವಾರ ಬೃಹತ್ ರಚನೆ.

ಒಳಚಾವಣಿಯ ಎತ್ತರ ಸುಮಾರು 5.5 ಮೀ. ವಿಶಾಲ ಮಂಟಪದಂತಿರುವ ಈ ಭಾಗದಲ್ಲಿನ ದಪ್ಪ ಎತ್ತರದ ಬಾಗಿಲ ತೋಳುಗಳ ಮೇಲೆ ಮೋಹಿನಿ, ದ್ವಾರಪಾಲಕ ಮೊದಲಾದ ಶಿಲ್ಪಾಲಂಕರಣಗಳಿವೆ. ಮಹಾದ್ವಾರದ ಮೇಲೆ ಏಳು ಅಂತಸ್ತುಗಳಲ್ಲಿ ಎದ್ದಿರುವ ಸುಮಾರು 37 ಮೀ. ಎತ್ತರದ ಬೃಹತ್ ಗೋಪುರದ ಮೇಲ್ತುದಿಯಲ್ಲಿ ಚಿನ್ನದ ಕಲಶ, 3 ಮೀಟರುಗಳಿಗೂ ಎತ್ತರವಾಗಿರುವ ಏಳು ಕಲಶಗಳನ್ನು ಅಷ್ಟೇ ಎತ್ತರದ ಎರಡು ಕೊಂಬುಗಳ ಮಧ್ಯೆ ಸಾಲಾಗಿ ಜೋಡಿಸಲಾಗಿದೆ. ಇಂತಹ ವಿಶಿಷ್ಟ ದೇಗುಲಕ್ಕೆ ದೇಶ ವಿದೇಶದಿಂದ ಭಕ್ತರು ಬರುತ್ತಾರೆ. ಕಳೆದ ತಿಂಗಳು ಇಲ್ಲಿ ಮಹಾರಥೋತ್ಸವ ನಡೆದಿತ್ತು. ಈಗ ಸಾಮೂಹಿಕ ವಿವಾಹ ನಡೆಯುತ್ತಿದೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.