ನಕ್ಸಲ್‌ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್‌, ಮಣಿಪಾಲದಲ್ಲಿ ಶವಪರೀಕ್ಷೆಗೆ ರವಾನೆ; 24 ಗಂಟೆ ವಿಳಂಬ ಮಾಡಿದ್ದಾದರೂ ಏಕೆ
ಕನ್ನಡ ಸುದ್ದಿ  /  ಕರ್ನಾಟಕ  /  ನಕ್ಸಲ್‌ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್‌, ಮಣಿಪಾಲದಲ್ಲಿ ಶವಪರೀಕ್ಷೆಗೆ ರವಾನೆ; 24 ಗಂಟೆ ವಿಳಂಬ ಮಾಡಿದ್ದಾದರೂ ಏಕೆ

ನಕ್ಸಲ್‌ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್‌, ಮಣಿಪಾಲದಲ್ಲಿ ಶವಪರೀಕ್ಷೆಗೆ ರವಾನೆ; 24 ಗಂಟೆ ವಿಳಂಬ ಮಾಡಿದ್ದಾದರೂ ಏಕೆ

ನಕ್ಸಲ್‌ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಸೋಮವಾರ ರಾತ್ರಿಯೇ ಮೃತಪಟ್ಟ ವಿಕ್ರಂ ಗೌಡ ಮೃತದೇಹವನ್ನು ಶವಪರೀಕ್ಷೆಗೆ ಮಣಿಪಾಲಕ್ಕೆ ತರುವಾಗಲೇ ಒಂದು ದಿನ ಆಗಿತ್ತು. ಬುಧವಾರ ಬೆಳಿಗ್ಗೆ ಶವಪರೀಕ್ಷೆ ನಡೆಸಿ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಉಡುಪಿ ನಕ್ಸಲ್‌ ನಿಗ್ರಹ ಘಟಕದ ಎನ್‌ಕೌಂಟರ್‌ಗೆ ಬಲಿಯಾದ  ನಕ್ಸಲ್‌ ನಾಯಕ ವಿಕ್ರಂಗೌಡ ಶವ ಪರೀಕ್ಷೆ ವಿಳಂಬವಾಗಿದೆ.
ಉಡುಪಿ ನಕ್ಸಲ್‌ ನಿಗ್ರಹ ಘಟಕದ ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲ್‌ ನಾಯಕ ವಿಕ್ರಂಗೌಡ ಶವ ಪರೀಕ್ಷೆ ವಿಳಂಬವಾಗಿದೆ.

ಉಡುಪಿ: ನಕ್ಸಲ್ ನಿಗ್ರಹ ಪಡೆ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್‌ ದಯಾಮಾ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ದಟ್ಟಾರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಕಾರ್ಯಾಚರಣೆ ನಕ್ಸಲ್ ಮುಖಂಡ ವಿಕ್ರಮ್ ಗೌಡ ಎನ್ ಕೌಂಟರ್ ಪ್ರಕರಣ ಮಂಗಳವಾರ ಬೆಳಗ್ಗೆ ಸುದ್ದಿಯಾಗಿತ್ತು. ಆದರೆ ಪೊಲೀಸರು ರಾತ್ರಿಯಾದರೂ ಶವವನ್ನು ಪೋಸ್ಟ್ ಮಾರ್ಟಂಗೆ ಸಾಗಿಸಿಲ್ಲ ಎಂಬ ವಿಚಾರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಬಂದ ಮಾಹಿತಿ ಪ್ರಕಾರ, ಸಂಜೆಯ ಹೊತ್ತಿಗೆ ಶವವನ್ನು ಮಣಿಪಾಲ ಕೆಎಂಸಿಗೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ವಿಕ್ರಂಗೌಡ ಶವದ ಮರಣೋತ್ತರ ಪರೀಕ್ಷೆಯು ಬುಧವಾರ ಬೆಳಿಗ್ಗೆ ನಡೆಯಲಿದ್ದು, ಆನಂತರ ಕುಟುಂಬದವರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ಅಧಿಕಾರಿಗಳ ಗಪ್‌ ಚುಪ್‌

ಸ್ಥಳಕ್ಕೆ ಭೇಟಿ ನೀಡಿದ ಆಂತರಿಕ ಭದ್ರತೆ ಐಜಿಪಿ ಡಿ. ರೂಪಾ ಮೌದ್ಗಲ್‌ ಎನ್ ಕೌಂಟರ್ ವಿವರಕ್ಕೆ ಸಂಬಂಧಿಸಿ ಯಾವುದೇ ವಿಚಾರವನ್ನೂ ಮಾಧ್ಯಮಗಳಿಗೆ ಮಾಹಿತಿ ನೀಡಿಲ್ಲ. ತನಿಖೆ ನಡೆಯುತ್ತಿದೆ ‌ ಯಾವ ವಿಚಾರವನ್ನು ಹೇಳಲ್ಲ ಎಂದಷ್ಟೇ ಹೇಳಿದ್ದಾರೆ.

ಎನ್‌ಕೌಂಟರ್‌‌ ಯಾವ ಸಮಯ್ ಬಗ್ಗೆ ಹೇಳಲ್ಲ. ಎಲ್ಲಾ ತನಿಖೆ ಪೂರ್ಣಗೊಂಡ ಬಳಿಕವೇ ಹೇಳುತ್ತೇವೆ ಎಂದಿದ್ದಾರೆ. ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತದೆ ಎಂದಷ್ಟೇ ಮಾಹಿತಿ ಪೊಲೀಸ್ ಮೂಲಗಳಿಂದ ಲಭಿಸಿದೆ. ಅದರೆ ಶವಸಾಗಾಟವೇ ಆಗಿಲ್ಲ ಎನ್ನಲಾಗುತ್ತಿದೆ.

ಒಂದು ಅಂದಾಜಿನ ಪ್ರಕಾರ ಘಟನೆ ಸೋಮವಾರ ರಾತ್ರಿ ನಡೆದಿದೆ. ಅಂದರೆ ಮಂಗಳವಾರ ಸಂಜೆವರೆಗೆ ಶವ ಅಲ್ಲಿತ್ತು. ಎನ್ ಕೌಂಟರ್ ನಡೆದ ಸಂದರ್ಭ ಶವಗಳನ್ನು ಮಾಧ್ಯಮ ಪ್ರತಿನಿಧಿಗಳು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಸುಮಾರು 200 ಮೀಟರ್ ನಷ್ಟು ದೂರದಿಂದ ಯಾರಿಗೂ ಹೋಗಲು ನಿರ್ಬಂಧ ಹೇರಲಾಗಿತ್ತು.

ಶವವನ್ನು ಮಧ್ಯಾಹ್ನದವರೆಗೂ ಹಾಗೆಯೇ ಇಟ್ಟಿದ್ದರೇ ?

ಶವ ಇಡೀ ದಿನ ಹಾಗಿದ್ದರೆ ಕೊಳೆಯುತ್ತದೆ ಎಂಬುದು ಸಾಮಾನ್ಯ ಜ್ಞಾನ. ಅದು ಸಾರ್ವಜನಿಕರಿಗೂ ಗೊತ್ತಾಗುತ್ತದೆ ಎಂಬುದು ಪೊಲೀಸರಿಗೂ ಗೊತ್ತಿಲ್ಲದ್ದೇನಲ್ಲ. ಆದರೆ ಶವಪರೀಕ್ಷೆ ವಿಳಂಬವಾಯಿತೇಕೆ? ಈ ಕುರಿತು ಯಾವುದೇ ಪೊಲೀಸ್ ಅಧಿಕಾರಿಗಳು ಸಮರ್ಪಕ ಹೇಳಿಕೆ ನೀಡಿಲ್ಲ. ಇದು ಊಹಾಪೋಹಗಳು ಹೆಚ್ಚಾಗಲೂ ಕಾರಣವಾಗುತ್ತಿದೆ.

ಈ ಕುರಿತು ಮಾತನಾಡಿದ ನಕ್ಸಲ್‌ ನಿಗ್ರಹ ದಳದ ಮುಖ್ಯಸ್ಥ ಜಿತೇಂದ್ರಕುಮಾರ್‌ ದಯಾಮಾ, ನಾವು ಕೆಲ ದಿನದಿಂದ ಕಾರ್ಯಾಚರಣೆ ನಡೆಸುತ್ತೆದ್ದೆವು. ಖಚಿತ ಮಾಹಿತಿ ಮೇಲೆಯೇ ದಾಳಿ ಮಾಡಿದ್ದೇವೆ. ಆನಂತರ ಕಾಡಿನಲ್ಲಿ ದೇಹದ ಮಹಜರು ಸೇರಿದಂತೆ ಎಲ್ಲಾ ಪ್ರಕ್ರಿಯೆಯನ್ನು ಹೆಬ್ರಿ ಪೊಲೀಸರು ಮಾಡಿದ್ದಾರೆ ಎನ್ನುತ್ತಾರೆ.

ಬುಧವಾರ ಪ್ರಕ್ರಿಯೆ

ಈ ನಡುವೆ ಸೋಮವಾರ ಸಂಜೆ ಎನ್‌ಕೌಂಟರ್‌ ನಡೆದಿದ್ದರೂ ವಿಕ್ರಂ ಗೌಡ ದೇಹವನ್ನು ಪತ್ತೆ ಮಾಡಿ ವಶಪಡಿಸಿಕೊಂಡಿರುವುದು ಮಂಗಳವಾರ ಬೆಳಿಗ್ಗೆ. ಅಲ್ಲಿಂದ ಜಾಗದ ಮಹಜರು, ಮಾಹಿತಿ ಸಂಗ್ರಹ ಸೇರಿದಂತೆ ನಾನಾ ಕಾರಣಗಳಿಂದ ಮಂಗಳವಾರ ಸಂಜೆವರೆಗೂ ಕಾಡಿನಿಂದ ದೇಹ ತಂದಿರಲಿಲ್ಲ. ಶವ ಸಾಗಣೆ ವಿಳಂಬವೇನೂ ಆಗಿಲ್ಲ. ಈ ಭಾಗದಲ್ಲಿ ಎಲ್ಲೂ ಮರಣೋತ್ತರ ಪರೀಕ್ಷೆಗೆ ಅವಕಾಶವಿಲ್ಲ. ವಿಶೇಷ ಪ್ರಕರಣವಾಗಿರುವುದರಿಂದ ಮಣಿಪಾಲಕ್ಕೆ ಕೊಂಡೊಯ್ಯಬೇಕು. ಆದನ್ನು ಮಾಡಿದ್ದಾರೆ ಆನಂತರ ಭದ್ರತೆಯಲ್ಲಿ ತಂದು ಮಣಿಪಾಲದಲ್ಲಿ ಇರಿಸಲಾಗಿದೆ. ಬುಧವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ನೀಡಲಾಗುತ್ತದೆ ಎನ್ನುವುದು ಹಿರಿಯ ಅಧಿಕಾರಿಯೊಬ್ಬರ ವಿವರಣೆ.

ಹೆಬ್ರಿ ಪೊಲೀಸರ ಮಹಜರು

ಇನ್ನು ಕಾರ್ಯಾಚರಣೆ ಹಾಗೂ ಎನ್‌ಕೌಂಟರ್‌ ಅನ್ನು ನಕ್ಸಲ್‌ ನಿಗ್ರಹ ದಳದ ಪೊಲೀಸರು ನಡೆಸಿದ್ದರೂ ಹೆಬ್ರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ಕಾರ್ಕಳ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಹೆಬ್ರಿ ಪೊಲೀಸರು ಮಹಜರು ಹಾಗೂ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಅವರೇ ಮೃತದೇಹ ಸಾಗಿಸುವ ಕೆಲಸವನ್ನೂ ಮಾಡಿದ್ದಾರೆ.

ಇಂದು ಡಿಜಿಪಿ ಭೇಟಿ

ಈ ನಡುವೆ ಹೆಬ್ರಿ ಭಾಗದಲ್ಲಿ ನಕ್ಸಲ್‌ ನಿಗ್ರಹ ಪಡೆಯ ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿತ್ತು. ಘಟನೆ ನಡೆದ ಸ್ಥಳಕ್ಕೆ ಕರ್ನಾಟಕ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಬುಧವಾರ ಆಗಮಿಸಲಿದ್ದು, ಆನಂತರ ಕಾರ್ಯಾಚರಣೆ ಮುಂದುವರೆಸುವ ತೀರ್ಮಾನವಾಗಲಿದೆ ಎನ್ನುವುದು ಎಎನ್‌ಎಫ್‌ ಎಸ್ಪಿ ಜಿತೇಂದ್ರಕುಮಾರ್‌ ದಯಾಮ ಅವರ ವಿವರಣೆ.

( ವರದಿ: ಹರೀಶ ಮಾಂಬಾಡಿ, ಮಂಗಳೂರು)

Whats_app_banner