Naxal Free Karnataka: ನಕ್ಸಲ್‌ ಕೋಟೆಹೊಂಡ ರವಿ ಶೃಂಗೇರಿಯಲ್ಲಿ ಶರಣು, ಕರ್ನಾಟಕವೀಗ ನಕ್ಸಲ್‌ ಮುಕ್ತ ರಾಜ್ಯ ಎಂದು ಘೋಷಿಸಿದ ಸರ್ಕಾರ
ಕನ್ನಡ ಸುದ್ದಿ  /  ಕರ್ನಾಟಕ  /  Naxal Free Karnataka: ನಕ್ಸಲ್‌ ಕೋಟೆಹೊಂಡ ರವಿ ಶೃಂಗೇರಿಯಲ್ಲಿ ಶರಣು, ಕರ್ನಾಟಕವೀಗ ನಕ್ಸಲ್‌ ಮುಕ್ತ ರಾಜ್ಯ ಎಂದು ಘೋಷಿಸಿದ ಸರ್ಕಾರ

Naxal Free Karnataka: ನಕ್ಸಲ್‌ ಕೋಟೆಹೊಂಡ ರವಿ ಶೃಂಗೇರಿಯಲ್ಲಿ ಶರಣು, ಕರ್ನಾಟಕವೀಗ ನಕ್ಸಲ್‌ ಮುಕ್ತ ರಾಜ್ಯ ಎಂದು ಘೋಷಿಸಿದ ಸರ್ಕಾರ

Naxal Free Karnataka:ಕರ್ನಾಟಕದಲ್ಲಿ ಮೂರು ದಶಕಗಳಿಂದಲೂ ಸಕ್ರಿಯರಾಗಿದ್ದ ನಕ್ಸಲರ ಯುಗ ಮುಗಿದಿದೆ. ಏಕೆಂದರೆ ಅರಣ್ಯದಲ್ಲಿದ್ದ ರವಿ ಎಂಬ ನಕ್ಸಲ್‌ ಪೊಲೀಸರ ಎದುರು ಶರಣಾಗಿದ್ದು, ಇನ್ನೊಬ್ಬರು ನಾಳೆ ಶರಣಾಗುವರು. ಈ ಮೂಲಕ ಕರ್ನಾಟಕದಲ್ಲಿದ್ದ ಎಲ್ಲಾ ನಕ್ಸಲರು ಶರಣಾದಂತಾಗಿದೆ. ಕರ್ನಾಟಕ ನಕ್ಸಲ್‌ ಮುಕ್ತ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಕಚೇರಿ ಪ್ರಕಟಿಸಿದೆ.

ಚಿಕ್ಕಮಗಳೂರಿನ ಶೃಂಗೇರಿ ಬಳಿ ಪೊಲೀಸರಿಗೆ ಶರಣಾದ ನಕ್ಸಲ್‌ ರವೀಂದ್ರ
ಚಿಕ್ಕಮಗಳೂರಿನ ಶೃಂಗೇರಿ ಬಳಿ ಪೊಲೀಸರಿಗೆ ಶರಣಾದ ನಕ್ಸಲ್‌ ರವೀಂದ್ರ

Naxal Free Karnataka: ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗದ ಅರಣ್ಯದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಕ್ರಿಯರಾಗಿದ್ದ ನಕ್ಸಲರನ್ನು ನಿಯಂತ್ರಿಸುವಲ್ಲಿ ಕರ್ನಾಟಕ ಸರ್ಕಾರ ಯಶಸ್ವಿಯಾಗಿದೆ. ಮೂರು ತಿಂಗಳ ಹಿಂದೆ ನಕ್ಸಲ್‌ ವಿಕ್ರಂಗೌಡ ಹತ್ಯೆ ನಂತರ ಆರು ಮಂದಿ ಶರಣರಾಗಿದ್ದಾರೆ. ಇನ್ನೊಬ್ಬ ಭೂಗತ ನಕ್ಸಲ್ ಕೋಟೆಹೊಂಡ ರವಿ ಶುಕ್ರವಾರ ಪೊಲೀಸರ ಎದುರು ಶರಣಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ನಾಲ್ಕು ಕಿ.ಮಿ ದೂರದಲ್ಲಿರುವ ನೆಮ್ಮಾರು ಗ್ರಾಮದ ಅರಣ್ಯ ಇಲಾಖೆ ಅತಿಥಿಗೃಹದಲ್ಲಿ ಶರಣಾಗಿದ್ದಾನೆ. ಈ ಮೂಲಕ ಕರ್ನಾಟಕ ನಕ್ಸಲ್‌ ಮುಕ್ತ ರಾಜ್ಯವಾಗಿದೆ ಎಂದು ಅಧಿಕೃತವಾಗಿ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಶನಿವಾರ ಬೆಳಿಗ್ಗೆ ಬಿಡುಗಡೆಯಾದ ಹೇಳಿಕೆಯಲ್ಲಿ ಖಚಿತಪಡಿಸಲಾಗಿದೆ.

ನಾಳೆ ಲಕ್ಷ್ಮಿ ಶರಣಾಗತಿ

ಕೊನೆಯ ಭೂಗತ ನಕ್ಸಲ್ ಕೋಟೆಹೊಂಡ ರವಿ ನೆಮ್ಮಾರ್ ಫಾರೆಸ್ಟ್ ಐಬಿಯಲ್ಲಿ (ಶೃಂಗೇರಿಯಿಂದ 4 ಕಿಮೀ) ಶರಣಾಗಿದ್ದಾನೆ ಎಂದು ಘೋಷಿಸಲು ನಮಗೆ ಅತ್ಯಂತ ಸಂತೋಷವಾಗಿದೆ. ಅಲ್ಲಿಂದ ಅವರನ್ನು ಶರಣಾಗತಿ ಪ್ರಕ್ರಿಯೆಗಾಗಿ ಚಿಕ್ಕಮಗಳೂರಿಗೆ ಕರೆದೊಯ್ಯುತ್ತಿದ್ದೇವೆ. ಇದಲ್ಲದೇ ದೀರ್ಘಕಾಲ ತಲೆಮರೆಸಿಕೊಂಡಿರುವ ನಕ್ಸಲ್ ತೊಂಬಟ್ಟು ಲಕ್ಷ್ಮಿ ನಾಳೆ ಚಿಕ್ಕಮಗಳೂರು/ಉಡುಪಿಯಲ್ಲಿ ಶರಣಾಗಲಿದ್ದಾರೆ. ಇದರೊಂದಿಗೆ ಕರ್ನಾಟಕ ನಕ್ಸಲ್‌ ಮುಕ್ತ ಆಗಲಿದೆ ಎಂದು ತಿಳಿಸಲಾಗಿದೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ ಮತ್ತು ಗೃಹ ಸಚಿವರಾದ ಡಾ. ಜಿ ಪರಮೇಶ್ವರ ಮತ್ತು ಕರ್ನಾಟಕ ಡಿಜಿಪಿ ಅಲೋಕ್ ಮೋಹನ್ ಅವರ ನೇತೃತ್ವದಲ್ಲಿ ರಾಜ್ಯ ಗುಪ್ತಚರ ಇಲಾಖೆ, ಕರ್ನಾಟಕ ರಾಜ್ಯವು ಸಂಪೂರ್ಣವಾಗಿ ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂದು ಖಚಿತಪಡಿಸಿದೆ. ಇದರೊಂದಿಗೆ ಆಪರೇಷನ್ ನಕ್ಸಲ್ ಶರಣಾಗತಿ ಪೂರ್ಣಗೊಂಡಿದೆ ಎಂದು ಸಿಎಂ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿಎಂ ಪದಕ ಘೋಷಣೆ

ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ಅವಿರತ ಶ್ರಮಿಸಿದ 22 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದಕವನ್ನು ಘೋಷಿಸಿದ್ದಾರೆ.

ಕರ್ನಾಟಕದಲ್ಲಿ ಮೂರು ದಶಕದ ಹಿಂದೆಯೇ ಆರಂಭಗೊಂಡಿದ್ದ ನಕ್ಸಲ್‌ ಹೋರಾಟ ಈಗ ಮತ್ತೆ ತೀವ್ರಗೊಂಡಿತ್ತು. ಕೇರಳ ಭಾಗದವರೂ ಸೇರಿಕೊಂಡಿದ್ದರು. ಕೆಲವರು ಕೇರಳದಲ್ಲಿ ಸಕ್ರಿಯರಾಗಿದ್ದು ಕರ್ನಾಟಕದಲ್ಲಿ ಮರಳಿದ್ದರು. ಒಂದು ವರ್ಷದಿಂದ ನಕ್ಸಲರನ್ನು ಸೆರೆ ಹಿಡಿಯಲು ಕರ್ನಾಟಕ ಪೊಲೀಸರು ಪ್ರಯತ್ನಿಸುತ್ತಲೇ ಇದ್ದರು. ಈ ನಡುವೆ ಮೂರು ತಿಂಗಳ ಹಿಂದೆ ನಕ್ಸಲ್‌ ವಿಕ್ರಂಗೌಡ ಎಂಬಾತನನ್ನು ಹಿಡಿಯಲು ಪ್ರಯತ್ನಿಸಿದಾಗ ಹತ್ಯೆ ಮಾಡಲಾಗಿತ್ತು. ಈ ಘಟನೆ ಬಳಿಕ ಕಾಡಿನಲ್ಲಿಯೇ ಉಳಿದಿದ್ದ ಎಂಟು ನಕ್ಸಲರ ಶರಣಾಗತಿಗೆ ಪ್ರಯತ್ನಗಳು ನಡೆದಿದ್ದವು. ಆರು ಮಂದಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿಯೇ ಶರಣಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರಿಗೆ ಪ್ಯಾಕೇಜ್‌ ಅನ್ನು ಕೂಡ ಘೋಷಿಸಲಾಗಿದೆ. ಇನ್ನಿಬ್ಬರಲ್ಲಿ ರವಿ ಶರಣಾಗಲು ವಿಳಂಬವಾಗಿತ್ತು. ಆತನೊಂದಿಗೆ ಮಾತುಕತೆ ನಡೆಸಿದ್ದರಿಂದ ಈಗ ಆತನೂ ಶರಣಾಗಿದ್ದಾನೆ. ಲಕ್ಷ್ಮಿ ಎಂಬಾಕೆಯು ಶರಣಾಗತಿಗೆ ಅಣಿಯಾಗಿದ್ದು ಭಾನುವಾರದ ಒಳಗೆ ಶರಣಾಗುವ ನಿರೀಕ್ಷೆ ಹೊಂದಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ನಕ್ಸಲ್‌ ಚಟುವಟಿಕೆಯನ್ನು ನಿಗ್ರಹಿಸಲಾಗಿದೆ.

ನಕ್ಸಲ್‌ ಪೀಡಿತ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಯ ಭಾಗದ ಅರಣ್ಯ ನಿವಾಸಿಗಳಿಗೆ ಮೂಲ ಸೌಕರ್ಯವನ್ನು ಒದಗಿಸುವ ಬೇಡಿಕೆಯೊಂದಿಗೆ ಶುರುವಾದ ಹೋರಾಟ ಈವರೆಗೂ ಹಲವರನ್ನು ಬಲಿ ತೆಗೆದುಕೊಂಡಿದೆ. ಪೊಲೀಸರು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡ ಕಾರ್ಯಾಚರಣೆ ವೇಳೆ ಜೀವ ಕಳೆದುಕೊಂಡಿದ್ದಾರೆ. ಕರ್ನಾಟಕ ಸರ್ಕಾರವೂ ಇವರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಹೇಳಿದೆ. ಈ ಬಜೆಟ್‌ ನಲ್ಲಿ ಸಿದ್ದರಾಮಯ್ಯ ಅವರು ನಕ್ಸಲ್‌ಪೀಡಿತ ಪ್ರದೇಶಗಳ ಪ್ರಗತಿಗೆ ವಿಶೇಷ ಪ್ಯಾಕೇಜ್‌ ಘೋಷಿಸುವ ನಿರೀಕ್ಷೆಯನ್ನೂ ಇಟ್ಟುಕೊಳ್ಳಲಾಗಿದೆ.

Whats_app_banner