ಶರಣಾಗತ 6 ನಕ್ಸಲರ ಶಸ್ತ್ರಾಸ್ತ್ರ ಮೇಗೂರು ಅರಣ್ಯದಲ್ಲಿ ಪತ್ತೆ; ಶೋಧ ನಡೆಸಿ ಪತ್ತೆ ಹಚ್ಚಿದ ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  ಶರಣಾಗತ 6 ನಕ್ಸಲರ ಶಸ್ತ್ರಾಸ್ತ್ರ ಮೇಗೂರು ಅರಣ್ಯದಲ್ಲಿ ಪತ್ತೆ; ಶೋಧ ನಡೆಸಿ ಪತ್ತೆ ಹಚ್ಚಿದ ಪೊಲೀಸರು

ಶರಣಾಗತ 6 ನಕ್ಸಲರ ಶಸ್ತ್ರಾಸ್ತ್ರ ಮೇಗೂರು ಅರಣ್ಯದಲ್ಲಿ ಪತ್ತೆ; ಶೋಧ ನಡೆಸಿ ಪತ್ತೆ ಹಚ್ಚಿದ ಪೊಲೀಸರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಇತ್ತೀಚೆಗೆ ಶರಣಾಗಿದ್ದ ನಕ್ಸಲ್‌ ತಂಡದ ಮುಂಡಗಾರು ಲತಾ ಮತ್ತು ಸಹಚರರು ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿರಲಿಲ್ಲ. ಕೊಪ್ಪ ಪೊಲೀಸರು ಅದನ್ನು ಪತ್ತೆ ಹಚ್ಚಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಮೇಗೂರು ಅರಣ್ಯ ಭಾಗದಲ್ಲಿ ನಕ್ಸಲರ ಶಸ್ತ್ರಾಸ್ತ್ರಗಳನ್ನು ಪೊಲೀಸರು ಪತ್ತೆ ಹಚ್ಚಿದರು. (ಎಡ ಚಿತ್ರ) ಮುಂಡಗಾರು ಲತಾ ಮತ್ತು ಇತರೆ 5 ನಕ್ಸಲರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಿದ್ದರು. (ಬಲಚಿತ್ರ - ಕಡತ ಚಿತ್ರ)
ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಮೇಗೂರು ಅರಣ್ಯ ಭಾಗದಲ್ಲಿ ನಕ್ಸಲರ ಶಸ್ತ್ರಾಸ್ತ್ರಗಳನ್ನು ಪೊಲೀಸರು ಪತ್ತೆ ಹಚ್ಚಿದರು. (ಎಡ ಚಿತ್ರ) ಮುಂಡಗಾರು ಲತಾ ಮತ್ತು ಇತರೆ 5 ನಕ್ಸಲರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಿದ್ದರು. (ಬಲಚಿತ್ರ - ಕಡತ ಚಿತ್ರ)

ಬೆಂಗಳೂರು: ಶರಣಾಗತರಾದ ನಕ್ಸಲರ ಶಸ್ತ್ರಾಸ್ತ್ರಗಳು ಕೊಪ್ಪ ಸಮೀಪ ಮೇಗೂರು ಅರಣ್ಯದಲ್ಲಿ ಪತ್ತೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ ಅವರ ಎದುರು ಶರಣಾಗಿದ್ದ ಮುಂಡಗಾರು ಲತಾ ನೇತೃತ್ವದ ಆರು ನಕ್ಸಲರ ತಂಡ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿರಲಿಲ್ಲ. ಹೀಗಾಗಿ ಕೊಪ್ಪ ಪೊಲೀಸ್ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆ ನಡೆಸಿ ಮೇಗೂರು ಅರಣ್ಯ ಭಾಗದಲ್ಲಿ ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶರಣಾಗತ 6 ನಕ್ಸಲರ ಶಸ್ತ್ರಾಸ್ತ್ರ ಮೇಗೂರು ಅರಣ್ಯದಲ್ಲಿ ಪತ್ತೆ

ಕೊಪ್ಪ ಸಮೀಪದ ಮೇಗೂರು ಅರಣ್ಯ ಪ್ರದೇಶದಲ್ಲಿ ಹೂತಿರಿಸಲಾಗಿದ್ದ ಎಕೆ 56 ಗನ್​​, ರಿವಾಲ್ವಾರ್, ಬಂದೂಕು​​​ ಸೇರಿ 6 ಶಸ್ತ್ರಾಸ್ತ್ರಗಳನ್ನು ಪೊಲೀಸರು​ ವಶಪಡಿಸಿಕೊಂಡಿದ್ದಾರೆ. ಶರಣಾಗತಿಗೂ ಮುನ್ನ ನಕ್ಸಲರು ಮೇಗೂರು ಅರಣ್ಯದಲ್ಲಿ ಅಡಗಿದ್ದರು. ಶರಣಾಗುವ ದಿನ ಮೇಗೂರು ಅರಣ್ಯದಲ್ಲೇ ಕೊನೆಯ ಬಾರಿಗೆ ಸಭೆ ನಡೆಸಿದ್ದರು. ಕೊಪ್ಪ ಪೊಲೀಸರ ತಂಡ ಕಳೆದ ಎರಡು ದಿನಗಳಿಂದ ನಕ್ಸಲರ ಶಸ್ತ್ರಾಸ್ತ್ರಗಳಿಗಾಗಿ ಹುಡುಕಾಟ ನಡೆಸಿತ್ತು.

ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಪೈಕಿ, ಒಂದು ಎಕೆ 56, ಮೂರು 303 ರೈಫಲ್, ಒಂದು 12 ಬೋರ್‌ ಎಸ್‌ಬಿಬಿಎಲ್‌, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಸೇರಿಂದತೆ ಒಟ್ಟು 6 ಬಂದೂಕು ಪತ್ತೆಯಾಗಿವೆ. ಜೊತೆಗೆ ಹನ್ನೊಂದು 7.62ಎಂಎಂ ಎಕೆ ಮದ್ದುಗುಂಡುಗಳು, 303 ಬಂದೂಕಿನ 133 ಗುಂಡುಗಳು ಸೇರಿದಂತೆ 176 ಜೀವಂತ ಗುಂಡುಗಳು ಪತ್ತೆಯಾಗಿವೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ 1959ರ 25(1ಬಿ), 7 ಮತ್ತು 25(1ಎ) ಪ್ರಕಾರ ಪ್ರಕರಣ ದಾಖಲಾಗಿದೆ.

ಶರಣಾಗತ ನಕ್ಸಲರಿಗೆ ಸಿಗುವ ಶಸ್ತ್ರಾಸ್ತ್ರ ಪರಿಹಾರ ಪ್ಯಾಕೇಜ್

ಕಾಂಗ್ರೆಸ್ ಸರ್ಕಾರ 2024ರಲ್ಲಿ ಹೊಸ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದರಂತೆ, ಶರಣಾಗತ ನಕ್ಸಲರು ತಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳನ್ನ ಸರ್ಕಾರಕ್ಕೆ ಒಪ್ಪಿಸಿದಾಗ ನೀಡುವ ಶಸ್ತ್ರಾಸ್ತ್ರ ಪರಿಹಾರ ಪ್ಯಾಕೇಜ್‌ ಅನ್ನೂ ಪ್ರಕಟಿಸಿತ್ತು. ಈ ವಿವರದಂತೆ, ಒಂದು ಎಕೆ 47 ಗನ್‌ಗೆ 30 ಸಾವಿರ ರೂ., ಯುಎಂಜಿ, ಜಿಪಿಎಂ, ಆರ್‌ಪಿಜೆ, ಸ್ನೈಪರ್‌ ರೈಫಲ್‌ಗೆ 50,000 ರೂಪಾಯಿ, ಎಸ್‌ಎಎಂ ಮಿಸೈಲ್‌ಗೆ 40,000 ರೂಪಾಯಿ, ಗ್ರೆನೇಡ್‌ಗೆ 2000 ರೂಪಾಯಿ, ಮದ್ದುಗುಂಡು ಒಂದೊಂದಕ್ಕೆ ತಲಾ 100 ರೂಪಾಯಿ, ಪಿಸ್ತೂಲ್, ರಿವಾಲ್ವರ್‌ಗೆ 10,000 ರೂಪಾಯಿ, ರಾಕೆಟ್‌ಗೆ 3000 ರೂಪಾಯಿ, ಸ್ಪೋಟಕ ವಸ್ತುಗಳಿಗೆ ಕಿಲೋಗೆ 4000 ರೂಪಾಯಿ, ಸ್ಯಾಟಲೈಟ್‌ ಫೋನ್‌ಗೆ 20,000 ರೂಪಾಯಿ ಪರಿಹಾರ ಸಿಗಲಿದೆ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿವೆ ಎಂದು ಗೊತ್ತಿದೆ ಎಂದಿದ್ದ ಸಿಎಂ

ಮುಖ್ಯಮಂತ್ರಿ ಗೃಹಕಚೇರಿಯಲ್ಲಿ ಜನವರಿ 8 ರಂದು ಮುಂಡಗಾರು ಲತಾ ಮತ್ತು ಸಹಚರರು ಶರಣಾಗಿದ್ದರು. ಆದರೆ ಶಸ್ತ್ರಾಸ್ತ್ರಗಳನ್ನು ಶರಣಾಗತಿ ವೇಳೆ ಒಪ್ಪಿಸಿರಲಿಲ್ಲ. ಹೀಗಾಗಿ ಪೊಲೀಸರು ಈ ಬಗ್ಗೆ ಶೋಧ ಶುರುಮಾಡಿದ್ದರು. ಈ ನಡುವೆ, ಶಸ್ತ್ರಾಸ್ತ್ರ ಒಪ್ಪಿಸಿಲ್ಲ ಎಂಬ ವಿಚಾರ ಭಾರಿ ಚರ್ಚೆಗೆ ಒಳಗಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಈ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡಿದ್ದರು.

ಶರಣಾದ ನಕ್ಸಲರ ಶಸ್ತ್ರಾಸ್ತ್ರಗಳು ಎಲ್ಲಿವೆ ಎಂಬುದು ಗೊತ್ತಿದೆ. ಅವುಗಳನ್ನು ಮಹಜರು ಮಾಡಿ ಪೊಲೀಸರು ತರುತ್ತಾರೆ. ಆ ಬಗ್ಗೆ ಆತಂಕ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ (ಜನವರಿ 10) ಹೇಳಿದ್ದರು.

ಮುಖ್ಯಮಂತ್ರಿ ಗೃಹಕಚೇರಿಯಲ್ಲಿ ನಕ್ಸಲರು ಶರಣಾದ ಬಗ್ಗೆ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಮ್ಮ ರಾಜ್ಯದಲ್ಲಿ ನಕ್ಸಲಿಸಂ ಇರಬಾರದು. ಯಾವುದೇ ಹೋರಾಟವಾದರೂ ಶಾಂತಿಯುತವಾಗಿರಬೇಕು. ಶಸ್ತ್ರಾಸ್ತ್ರ ಹೋರಾಟಕ್ಕೆ ಅವಕಾಶ ಇಲ್ಲ. ಅನ್ಯಾಯ, ಶೋಷಣೆಗಳ ವಿರುದ್ಧ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಸದ್ಯ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯ ಎಂದು ಹೇಳಿದರು. ಇನ್ನೊಬ್ಬ ನಕ್ಸಲ್ ರವೀಂದ್ರ ಇನ್ನೂ ಶರಣಾಗಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಶೃಂಗೇರಿಯಲ್ಲಿ ಇನ್ನೊಬ್ಬ ನಕ್ಸಲ್ ಇದ್ದಾನೋ ಇಲ್ಲವೋ ಎಂಬುದು ಗೊತ್ತಿಲ್ಲ. ಇದ್ದರೆ ಆತನೂ ಮುಖ್ಯವಾಹಿನಿಗೆ ಬರಲಿ. ಬರಬೇಕು ಎಂದು ಮನವಿ ಮಾಡುತ್ತೇನೆ ಎಂದರು.

Whats_app_banner