ಕರ್ನಾಟಕ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಶರಣಾಯಿತು ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ; 10 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಶರಣಾಯಿತು ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ; 10 ಮುಖ್ಯ ಅಂಶಗಳು

ಕರ್ನಾಟಕ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಶರಣಾಯಿತು ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ; 10 ಮುಖ್ಯ ಅಂಶಗಳು

Karnataka Naxal Surrender: ಕರ್ನಾಟಕ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾ ಎದುರು ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ ಇಂದು (ಜನವರಿ 8) ಶರಣಾಯಿತು. ಬಳಿಕ ಅವರನ್ನು ಆಡುಗೋಡಿಯ ಪೊಲೀಸ್ ಗ್ರೌಂಡ್‌ಗೆ ಕರೆದೊಯ್ದು, ಅಧಿಕೃತ ಬಂಧನ ದಾಖಲಿಸಲಿದ್ದಾರೆ ಪೊಲೀಸರು ಎಂದು ಮೂಲಗಳು ತಿಳಿಸಿವೆ. ಈ ವಿದ್ಯಮಾನದ ವಿವರ ಇಲ್ಲಿದೆ.

ಕರ್ನಾಟಕ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಶರಣಾಯಿತು ಮುಂಡಗಾರು ಲತಾ (ಬಲ ಬದಿಗೆ ಕತ್ತಿಗೆ ಕೆಂಪು ಶಾಲು ಸುತ್ತಿಕೊಂಡ ಮಹಿಳೆ) ನೇತೃತ್ವದ 6 ನಕ್ಸಲರ ತಂಡ.
ಕರ್ನಾಟಕ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಶರಣಾಯಿತು ಮುಂಡಗಾರು ಲತಾ (ಬಲ ಬದಿಗೆ ಕತ್ತಿಗೆ ಕೆಂಪು ಶಾಲು ಸುತ್ತಿಕೊಂಡ ಮಹಿಳೆ) ನೇತೃತ್ವದ 6 ನಕ್ಸಲರ ತಂಡ. (SM)

Karnataka Naxal Surrender: ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಇಂದು (ಜನವರಿ 8) ಸಂಜೆ 6 ಗಂಟೆಗೆ ನಾಲ್ವರು ಮಹಿಳೆಯರು ಸೇರಿ 6 ನಕ್ಸಲರು ಶರಣಾಗಿದ್ದು, ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ ಅವರ ಸಮ್ಮುಖದಲ್ಲಿ ನಕ್ಸಲ್‌ ನಾಯಕಿ ಮುಂಡಗಾರು ಲತಾ ನೇತೃತ್ವದ ತಂಡದ ಸದಸ್ಯರಾದ ಸುಂದರಿ, ವಸಂತ್‌, ಜಯಣ್ಣ, ಜಿಶಾ, ವನಜಾಕ್ಷಿ ಅವರು ಶರಣಾದರು. ಈ ಸಂದರ್ಭದಲ್ಲಿ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಅಧ್ಯಕ್ಷ ಡಾ ಬಂಜಗೆರೆ ಜಯಪ್ರಕಾಶ್‌, ಸದಸ್ಯರಾದ ನೂರ್‌ ಶ್ರೀಧರ್, ಪಾರ್ವತೀಶ ಬಿಳಿದಾಳೆ, ಕೆ.ಪಿ.ಶ್ರೀಪಾಲ್‌ ಮತ್ತು ಇತರರು ಜತೆಗಿದ್ದರು. ನಕ್ಸಲರ ಕುಟುಂಬ ಸದಸ್ಯರು ಕೂಡ ಬೆಂಗಳೂರಿಗೆ ಆಗಮಿಸಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಕರ್ನಾಟಕದಲ್ಲಿ 6 ನಕ್ಸಲರ ಶರಣಾಗತಿ; ಡಾ ಬಂಜಗೆರೆ ಸಮಿತಿ ಪ್ರಯತ್ನ

ಕರ್ನಾಟಕದಲ್ಲಿ ವಿಕ್ರಂ ಗೌಡ ಎನ್‌ಕೌಂಟರ್ ನವೆಂಬರ್ 18ರಂದು ನಡೆದಿದ್ದು, ಅದಾಗಿ ನಕ್ಸಲರ ಶರಣಾಗತಿ ಪ್ರಕ್ರಿಯೆಗೆ ವೇಗ ಸಿಕ್ಕಿತ್ತು. ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಈ ನಿಟ್ಟಿನಲ್ಲಿ ಕ್ಷಿಪ್ರವಾಗಿ ಕೆಲಸ ಮಾಡಿದ್ದು, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಕ್ರಿಯರಾಗಿದ್ದ ನಿಷೇಧಿತ ಸಿಪಿಐಎಂಎಲ್-ಮಾವೋವಾದಿ ಪಕ್ಷದ ಕಾರ್ಯಕರ್ತರ ಮನವೊಲಿಸಿ ಮುಖ್ಯವಾಹಿನಿಗೆ ಕರೆತರುವ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ನಕ್ಸಲ್‌ ಶರಣಾಗತಿ ಸಮಿತಿಗೆ ವಹಿಸಿತ್ತು. ಸಮಿತಿ ಅಧ್ಯಕ್ಷ ಡಾ ಬಂಜಗೆರೆ ಜಯಪ್ರಕಾಶ್‌, ಸದಸ್ಯರಾದ ಪಾರ್ವತೀಶ ಬಿಳಿದಾಳೆ, ಕೆ ಪಿ ಶ್ರೀಪಾಲ್ ಮತ್ತು ಇತರರು ಈ ಮಾವೋವಾದಿಗಳ ಶರಣಾಗತಿಗೆ ಪ್ರಯತ್ನಿಸುವುದಾಗಿ ಘೋಷಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದ ಎದುರು ನಕ್ಸಲ್ ಶರಣಾಗತಿ; ಗಮನಸೆಳದ 10 ಅಂಶ

1) ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶರಣಾದ ನಕ್ಸಲರು: ಶಿಷ್ಟಾಚಾರ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಕ್ಸಲ್ ಶರಣಾಗತಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಕ್ಸಲರಿಂದ ಅಂತರ ಕಾಯ್ದುಕೊಂಡಿದ್ದರು. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಕ್ಸಲ್ ಶರಣಾಗತಿ ನಡೆಯುತ್ತದೆ ಎಂದು ಘೋಷಿಸಲಾಗಿತ್ತು. ಕೃಷ್ಣಾದ ಒಳಗೆ ನಕ್ಸಲರನ್ನು ನೇರವಾಗಿ ಬಿಟ್ಟಿಲ್ಲ. ಹೊರಗೆಯೇ ಶರಣಾಗತಿ ಪ್ರಕ್ರಿಯೆಯನ್ನು ಪೊಲೀಸರು ನೆರವೇರಿಸಿದರು. ಅದಾದ ಬಳಿಕ ಕಚೇರಿ ಒಳಗೆ ಶರಣಾದ ನಕ್ಸಲರನ್ನು ಕರೆಯಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ಅವರಿಗೆ ಸಂವಿಧಾನದ ಪ್ರತಿಯನ್ನು ಮತ್ತು ಹೂವು ನೀಡಿ ಮುಖ್ಯವಾಹಿನಿಗೆ ಸೇರ್ಪಡೆಮಾಡಿಕೊಂಡರು.

2) ಶರಣಾದ ನಕ್ಸಲರಿವರು: ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ, ಜಯಣ್ಣ, ಜೀಶಾ, ಟಿ.ಎನ್‌. ವಸಂತ್‌ ಅವರಿದ್ದ ನಕ್ಸಲರ ತಂಡ ಇಂದು (ಜನವರಿ 8) ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಶರಣಾಗಿದೆ.

3) ಮುಂಡಗಾರು ಲತಾ: ಮೂಲತಃ ಕೊಪ್ಪ ತಾಲೂಕು ಬುಕಡಿಬೈಲು ಮುಂಡಗಾರು ಗ್ರಾಮದ ಮಹಿಳೆ. ಲೋಕಮ್ಮ, ಶ್ಯಾಮಲಾ ಎಂದೂ ಗುರುತಿಸಿಕೊಂಡಿದ್ದ ಈಕೆ ಮಲೆನಾಡು ಭಾಗಗಳಲ್ಲಿ ಲತಾ ಎಂದು ಗುರುತಿಸಿಕೊಂಡಿದ್ದಾರೆ. ಮೋಸ್ಟ್‌ ವಾಂಟೆಡ್ ಲಿಸ್ಟ್‌ನಲ್ಲಿದ್ದ ನಕ್ಸಲರ ಪೈಕಿ ಮುಂಡಗಾರು ಲತಾ ಕೂಡ ಒಬ್ಬಾಕೆ. ಆರನೇ ತರಗತಿಗೆ ಓದು ನಿಲ್ಲಿಸಿದ್ದ ನಕ್ಸಲ್ ನಾಯಕಿ. ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಪ್ರಕಾರ ಮನೆ ಕಳೆದುಕೊಳ್ಳುವ ಸ್ಥಿತಿ ಬಂದಾಗ, 2000ನೇ ಇಸವಿಯಲ್ಲಿ ಮಾವೋವಾದಿ ಚಳವಳಿಗೆ ಧುಮುಕಿದ್ದು, 18ನೇ ವಯಸ್ಸಿಗೆ ಬಂದೂಕು ಹಿಡಿದಾಕೆ. ಕರ್ನಾಟಕ, ಕೇರಳದಲ್ಲಿ ಮಾವೋವಾದಿ ದಳದಲ್ಲಿದ್ದು, ಇತ್ತೀಚೆಗೆ ನಕ್ಸಲ್ ತಂಡದ ನಾಯಕಿಯಾಗಿ ಗುರುತಿಸಿಕೊಂಡಿದ್ದಾಕೆ. ಪೊಲೀಸ್ ದಾಳಿ ಸಂದರ್ಭದಲ್ಲಿ ಹಲವು ಬಾರಿ ತಪ್ಪಿಸಿಕೊಂಡಿದ್ದ ಲತಾ ಈಗ ಶರಣಾಗಿದ್ದಾರೆ

4) ಸುಂದರಿ ಕುತ್ಲೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಮಹಿಳೆ. ಮೂರನೇ ತರಗತಿ ಓದಿದ್ದ ಸುಂದರಿ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಸಂತ್ರಸ್ತರ ಕುಟುಂಬದವರು. 2004ರಲ್ಲಿ 19ನೇ ವಯಸ್ಸಿನಲ್ಲಿ ಮಾವೋವಾದಿ ಸಂಘಟನೆ ಸೇರಿದ್ದಾಕೆ ಎಂದು ಫೆಡರಲ್‌ ಕನ್ನಡ ವಿವರಿಸಿದೆ. ಕೇರಳ, ಕರ್ನಾಟಕದ ನಕ್ಸಲ್ ದಳದಲ್ಲಿ ಸಕ್ರಿಯವಾಗಿದ್ದಾಕೆ ಈಗ ಶರಣಾದ ತಂಡದಲ್ಲಿದ್ದಾರೆ.

5) ವನಜಾಕ್ಷಿ ಬಾಳೆಹೊಳೆ: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು ಬಾಳೆಹೊಳೆ ಗ್ರಾಮದ ಮಹಿಳೆ. ಆದಿವಾಸಿ ಕುಟುಂಬದ ವನಜಾಕ್ಷಿ ಎಸ್‌ಎಸ್‌ಎಲ್‌ಸಿ ಓದಿದವರು. 1992 ಮತ್ತು 97ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಅವಿರೋಧ ಆಯ್ಕೆಯಾಗಿದ್ದರು. 8 ಮಕ್ಕಳ ಕೂಡು ಕುಟುಂಬದಲ್ಲಿ ಹಿರಿಯಾಕೆ. ಬೆರಳಚ್ಚು, ಹೊಲಿಗೆ ಕಲಿತುಕೊಂಡಿದ್ದರು. ಹೊಲಿಗೆಯನ್ನು ವೃತ್ತಿಯಾಗಿ ಸ್ವೀಕರಿಸಿದ್ದರು. ರಾಜಕೀಯವಾಗಿ ಸಕ್ರಿಯವಾಗಿದ್ದರೂ, ತಮ್ಮ ಕುಟುಂಬಕ್ಕೆ ಸೇರಿದ ತುಂಡುಭೂಮಿ ಉಳಿಸಲಾಗದೇ 2000ನೇ ಇಸವಿಯಲ್ಲಿ ಮಾವೋವಾದಿ ಬಳಗ ಸೇರಿದಾಕೆ. ಈಗ ಈಕೆಯೂ ಶರಣಾದ ನಕ್ಸಲ್ ತಂಡದಲ್ಲಿದ್ದಾರೆ.

6) ಜಯಣ್ಣ ಅರೋಲಿ: ರಾಯಚೂರು ಜಿಲ್ಲೆ ಮಾನ್ವಿ ತಾಲೂಕು ಅರೋಳಿ ಗ್ರಾಮದವರು. ಬಡವರ ಮೇಲೆ ಶ್ರೀಮಂತರ ದಬ್ಬಾಳಿಕೆಗೆ ರೋಸಿದ್ದ ದಲಿತ ಯುವಕ. ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದಾಗ ಮಾವೋವಾದಿ ಚಳವಳಿ ಕಡೆಗೆ ಆಕರ್ಷಿತನಾಗಿದ್ದ. ಬಾಸ್ಕರ್ ಎನ್‌ಕೌಂಟರ್ ಆದ ಬಳಿಕ 2000ನೇ ಇಸವಿಯಲ್ಲಿ ಎಡಪಂಥೀಯ ಚಳವಳಿಗಿಳಿದ. 2018ರಲ್ಲಿ ಬಂದೂಕು ಹಿಡಿದು ನಕ್ಸಲ್ ತಂಡದ ಭಾಗವಾದ. ಈತ ಕೂಡ ಈಗ ಶರಣಾದ ನಕ್ಸಲ್ ತಂಡದಲ್ಲಿದ್ದಾರೆ.

7) ವಸಂತ್ ಅರ್ಕಾಟ್‌: ತಮಿಳುನಾಡು ವೆಲ್ಲೂರು ಸಮೀಪದ ಅರ್ಕಾಟ್‌ನವರು. ಬಿಟೆಕ್ ಪದವೀಧರ. ಸಮಾಜಮುಖಿ ಚಿಂತನೆಗಳೊಂದಿಗೆ ಹೋರಾಟಕ್ಕೆ ಇಳಿದಾತ. 2010ರಲ್ಲಿ ಪದವಿ ಮುಗಿಸಿ ನಕ್ಸಲ್‌ ಹೋರಾಟದ ಬಂದೂಕು ಹಿಡಿದಾತ, ಅಂದಿನಿಂದಲೂ ಕೇರಳ- ಕರ್ನಾಟಕ ಗಡಿಯಲ್ಲಿ ಸಕ್ರಿಯನಾಗಿದ್ದ. ಈತ ಕೂಡ ಈಗ ಶರಣಾದವರ ಪೈಕಿ ಒಬ್ಬ.

8) ಟಿ ಎನ್ ಜಿಶಾ: ಕೇರಳದ ವಯನಾಡು ಜಿಲ್ಲೆಯ ಮಕ್ಕಿಮಲ ಭಾಗದ ಆದಿವಾಸಿ ಮಹಿಳೆ. ಎಂಟನೇ ತರಗತಿ ಓದಿರುವ ಜಿಶಾ 2018ರಲ್ಲಿ ನಕ್ಸಲ್ ತಂಡ ಸೇರಿದಾಕೆ. 2023ರಲ್ಲಿ ಮುಂಡಗಾರು ಲತಾ ತಂಡದೊಂದಿಗೆ ಕರ್ನಾಟಕಕ್ಕೆ ಬಂದಿದ್ದು, ಸಕ್ರಿಯವಾಗಿದ್ದು ಈಗ ಶರಣಾಗಿದ್ದಾರೆ.

9) ಶರಣಾದ ನಕ್ಸಲರು ಚಿಕ್ಕಮಗಳೂರಿಗೆ: ಶರಣಾದ ಮುಂಡಗಾರು ಲತಾ ನೇತೃತ್ವದ ನಕ್ಸಲ್ ತಂಡದ ಸದಸ್ಯರ ವಿರುದ್ಧ ಬೆಂಗಳೂರಿನಲ್ಲಿ ಯಾವುದೇ ಪ್ರಕರಣ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ, ಅವರನ್ನು ಚಿಕ್ಕಮಗಳೂರು ಕಾರಾಗೃಹಕ್ಕೆ ಕರೆದೊಯ್ಯಲು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

10) ಮುಖ್ಯಮಂತ್ರಿ ಕರೆಗೆ ಸ್ಪಂದಿಸಿದ ತಂಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮಾವೋವಾದಿಗಳಿಗೆ ಶರಣಾಗುವಂತೆ ಕರೆಕೊಟ್ಟಿದ್ದರು. ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯು ಈ ನಕ್ಸಲರನ್ನು ಯಾವುದೇ ಜೀವಹಾನಿ ಇಲ್ಲದಂತೆ ಮುಖ್ಯವಾಹಿನಿಗೆ ಸೇರಿಸುವುದಾಗಿ ಹೇಳಿತ್ತು. ಅವರ ವಿರುದ್ಧದ ಕೇಸ್‌ಗಳನ್ನು ಬೇಗ ವಿಲೇವಾರಿಗೊಳಿಸುವುದಕ್ಕೆ ಸರ್ಕಾರವನ್ನು ಒತ್ತಾಯಿಸಿತ್ತು.

ಕೇರಳ, ತಮಿಳುನಾಡು ಭಾಗವೂ ಸೇರಿ ಕರ್ನಾಟಕದ ಗಡಿ ಭಾಗದಲ್ಲಿ ನಕ್ಸಲ್‌ ಚಟುವಟಿಕೆ ಅಲ್ಲಲ್ಲಿ ಕಾಣಿಸಿಕೊಂಡಿತ್ತು. ಆದರೆ, ಹಿಂಸಾ ಚಳವಳಿಯ ತೀವ್ರತೆ ಇರಲಿಲ್ಲ. ಹೊಸಬರ ಸೇರ್ಪಡೆ ಆಗದ ಕಾರಣ ಸದಸ್ಯ ಬಲವೂ ಕುಸಿದಿತ್ತು. ಹೀಗಾಗಿ ಅನೇಕ ನಕ್ಸಲರು ಮುಖ್ಯವಾಹಿನಿಗೆ ಬರುವ ದಾರಿಗಳನ್ನು ಹುಡುಕುತ್ತಿದ್ದರು. ಇದರಂತೆ, ಈಗ ಮುಂಡಗಾರು ಲತಾ ನೇತೃತ್ವದ ತಂಡ ಮುಖ್ಯಮಂತ್ರಿ ಎದುರು ಶರಣಾಗಿದೆ.

Whats_app_banner