ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿಗೆ ಸಿದ್ದತೆ, ಸಿಎಂ ಗೃಹ ಕಚೇರಿಯಲ್ಲಿ ಇಂದು ಸಂಜೆ 6ಕ್ಕೆ ಪ್ರಕ್ರಿಯೆ, ಭಾರೀ ಭದ್ರತೆ
ಕನ್ನಡ ಸುದ್ದಿ  /  ಕರ್ನಾಟಕ  /  ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿಗೆ ಸಿದ್ದತೆ, ಸಿಎಂ ಗೃಹ ಕಚೇರಿಯಲ್ಲಿ ಇಂದು ಸಂಜೆ 6ಕ್ಕೆ ಪ್ರಕ್ರಿಯೆ, ಭಾರೀ ಭದ್ರತೆ

ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿಗೆ ಸಿದ್ದತೆ, ಸಿಎಂ ಗೃಹ ಕಚೇರಿಯಲ್ಲಿ ಇಂದು ಸಂಜೆ 6ಕ್ಕೆ ಪ್ರಕ್ರಿಯೆ, ಭಾರೀ ಭದ್ರತೆ

ಎರಡು ತಿಂಗಳ ನಿರಂತರ ಮಾತುಕತೆಯ ನಂತರ ಉಡುಪಿ- ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಕ್ರಿಯರಾಗಿದ್ದ ಆರು ಮಂದಿ ನಕ್ಸಲರು ಬುಧವಾರ ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಶರಣಾಗಲಿದ್ದಾರೆ.

ಉಡುಪಿ ಚಿಕ್ಕಮಗಳೂರು ಅರಣ್ಯದಲ್ಲಿದ್ದ ನಕ್ಸಲರೊಂದಿಗೆ ಅಧಿಕಾರಿಗಳೊಂದಿಗೆ ಶರಣಾಗತಿ ಮಾತುಕತೆ ನಡೆಸಿದರು.
ಉಡುಪಿ ಚಿಕ್ಕಮಗಳೂರು ಅರಣ್ಯದಲ್ಲಿದ್ದ ನಕ್ಸಲರೊಂದಿಗೆ ಅಧಿಕಾರಿಗಳೊಂದಿಗೆ ಶರಣಾಗತಿ ಮಾತುಕತೆ ನಡೆಸಿದರು.

ಬೆಂಗಳೂರು: ಚಿಕ್ಕಮಗಳೂರು ಡಿಸಿ ಕಚೇರಿ ಬದಲು ಗೃಹ ಸಚಿವರ ಎದುರು ಆರು ಮಂದಿ ನಕ್ಸಲರು ಶರಣಾಗಲು ಅಣಿಯಾಗಿದ್ದಾರೆ. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶರಣಾಗತಿ ಪ್ರಕ್ರಿಯೆ ಮುಗಿಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಪಶ್ಚಿಮ ವಲಯ ಐಜಿಪಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಹಿರಿಯ ಅಧಿಕಾರಿಗಳು ಇದಕ್ಕಾಗಿ ತಯಾರಿಯನ್ನೂ ಮಾಡಿಕೊಂಡಿದ್ದರು. ಗೃಹ ಸಚಿವಾಲಯದಿಂದ ಬಂದ ಸೂಚನೆ ಆಧರಿಸಿ ಎಲ್ಲರೂ ಬೆಂಗಳೂರಿನಲ್ಲಿರುವ ಸಿಎಂ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಕಚೇರಿಯಲ್ಲಿಯೇ ಜನವರಿ 8ರ ಬುಧವಾರ ಸಂಜೆ ಶರಣಾಗುವರು. ಆನಂತರ ಇತರೆ ಪ್ರಕ್ರಿಯೆಗಳೆಲ್ಲವೂ ಚಿಕ್ಕಮಗಳೂರು ಡಿಸಿ ಹಾಗು ಎಸ್ಪಿ ಕಚೇರಿಯಲ್ಲಿಯೇ ಮುಗಿಯಲಿವೆ.

ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ಬಾಳೆಹೊಳೆಯ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಕುತ್ಲೂರು, ರಾಯಚೂರಿನ ಮಾರಪ್ಪಅರೋಲಿ, ತಮಿಳುನಾಡಿನ ಕೆ.ವಸಂತ್, ಕೇರಳದ ಟಿ.ಎನ್.ಜಿಶಾ ಅವರು ಮುಖ್ಯವಾಹಿನಿಗೆ ಬರುತ್ತಿರುವವರು.

ನಿರಂತರ ಮಾತುಕತೆ

ಈ ನಡುವೆ ಎರಡು ತಿಂಗಳ ಹಿಂದೆ ಉಡುಪಿ ಜಿಲ್ಲೆ ಹೆಬ್ರಿ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ ಹತರಾಗಿದ್ದರು. ಆನಂತರ ಉಳಿದವರ ಪತ್ತೆಗೆ ಪೊಲೀಸ್‌ ಇಲಾಖೆ ಕಾರ್ಯಾಚರಣೆ ಮುಂದುವರಿಸಿತ್ತು.

ಇನ್ನೂ ಆರೇಳು ಮಂದಿ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಅರಣ್ಯದಲ್ಲಿರುವ ಇರುವ ಮಾಹಿತಿ ಇತ್ತು. ಈ ನಡುವೆ ಅವರು ಶರಣಾದರೆ ಪ್ಯಾಕೇಜ್‌ ನೀಡುವ ಘೋಷಣೆಯನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮಾಡಿದ್ದರು.

ಪ್ರಗತಿಪರರ ಮಧ್ಯಸ್ಥಿಕೆ

ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಡಾ.ಬಂಜಗೆರೆ ಜಯಪ್ರಕಾಶ್, ಕೆ.ಪಿ.ಶ್ರೀಪಾಲ್, ಸಿರಿಮನೆ ನಾಗರಾಜ್, ಪಾರ್ವತೀಶ ಬಿಳಿದಾಳೆ, ಶಾಂತಿಗಾಗಿ ನಾಗರಿಕರ ವೇದಿಕೆಯ ನಗರಗೆರೆ ರಮೇಶ, ಬಿ.ಟಿ.ಲಲಿತಾ ನಾಯಕ್, ಶ್ರೀಪಾಲ್, ನೂರ್ ಶ್ರೀಧರ್, ತಾರಾ ರಾಯ್, ಕೆ.ಎಲ್.ಅಶೋಕ್, ಪ್ರೊ.ಶ್ರೀಧರ್ ಅವರನ್ನೊಳಗೊಂಡ ತಂಡವು ಸರಕಾರ ಮತ್ತು ನಕ್ಸಲರ ಗುಂಪಿನ ನಡುವೆ ಮಧ್ಯಸ್ಥಿಕೆ ವಹಿಸಿದೆ. ಇವರ ಪ್ರಯತ್ನವೀಗ ಫಲ ನೀಡುವ ಹಂತಕ್ಕೆ ಬಂದಿದೆ.

ಇದರ ಭಾಗವಾಗಿಯೇ ಮಲೆನಾಡು ಭಾಗದ ಅಜ್ಞಾತ ಸ್ಥಳದಲ್ಲಿ ಶಾಂತಿಗಾಗಿ ನಾಗರಿಕರ ವೇದಿಕೆಯ ನೂರ್ ಶ್ರೀಧರ್, ನಗರಗೆರೆ ರಮೇಶ್ ಹಾಗೂ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಕೆ.ಪಿ.ಶ್ರೀಪಾಲ್ ಅವರು ನಕ್ಸಲರ ತಂಡವನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು.

ಅಧಿಕಾರಿಗಳ ಪ್ರಯತ್ನ

ಇದರ ನಡುವೆಯೇ ಹಿರಿಯ ಪೊಲೀಸ್‌ ಅಧಿಕಾರಿಗಳೇ ನಕ್ಸಲ್‌ ನಾಯಕರು ಹಾಗೂ ಅಲ್ಲಿನ ತಂಡದೊಂದಿಗೆ ಮಾತುಕತೆ ನಡೆಸಿದ್ದರು. ಕೊನೆಗೂ ಸರ್ಕಾರ ಘೋಷಿಸಿದ ಪ್ಯಾಕೇಜ್‌ಗೆ ಒಪ್ಪಿ ಆರು ಮಂದಿ ನಕ್ಸಲರು ಶರಣಾಗಲು ಅಣಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು(ಬುಧವಾರ) 6 ನಕ್ಸಲರು ಶರಣಾಗತಿ ಆಗುತ್ತಾರೆ ಎಂದು ಹೇಳಲಾಗಿತ್ತು. ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್, ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ, ಐಎಸ್ಡಿ ಎಸ್ಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ಅದಕ್ಕೆ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ದಿಢೀರ್ ಎಂದು ಬದಲಾವಣೆಯಾಗಿದ್ದು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಎದುರು ಶರಣಾಗತಿ ಆಗುತ್ತಿದ್ದಾರೆ. ಹೀಗಾಗಿ 6 ನಕ್ಸಲರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.ಬಾಳೆಹೊನ್ನೂರಿನಿಂದ ಈಗಾಗಲೇ ಹೊರಟಿದ್ದು ಬೆಂಗಳೂರು ತಲುಪಿದ್ದಾರೆ. ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ನೇತೃತ್ವದಲ್ಲಿ ಇವರನ್ನು ಮುಖ್ಯವಾಹಿನಿಗೆ ತರುವ ಕೆಲಸ ನಡೆಸಲಾಗಿದೆ.ಸಂಜೆ ಹೊತ್ತಿಗೆ ಪ್ರಕ್ರಿಯೆ ಮುಗಿಯಬಹುದು. ಇದಕ್ಕಾಗಿ ಭಾರೀ ಭದ್ರತೆಯನ್ನೂ ಸಿಎಂ ಗೃಹ ಕಚೇರಿಯಲ್ಲಿ ಹಾಕಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Whats_app_banner