ಕನ್ನಡ ಸುದ್ದಿ  /  Karnataka  /  Neet Exam May 7 Sunday, Pm Narendra Modi Roadshow, Bengaluru Students Worried Education News In Kannada Pcp

NEET Exam Modi Roadshow: ನೀಟ್‌ ಪರೀಕ್ಷೆಯಂದೇ ಮೋದಿ ರೋಡ್‌ಶೋ, ವಿದ್ಯಾರ್ಥಿಗಳ ಗೋಳು ಕೇಳುವವರಾರು?

Neet Exam: ಮೇ 7 ರಂದು ನೀಟ್‌ ಪರೀಕ್ಷೆ ನಡೆಯಲಿದೆ. ಅದೇ ದಿನ ಪ್ರಧಾನಿ ನರೇಂದ್ರ ಮೋದಿ (Narendra Modi) ರೋಡ್‌ಶೋ ನಡೆಯಲಿದೆ. ಪ್ರಿಯಾಂಕ ಗಾಂಧಿ, ರಾಹುಲ್‌ ಗಾಂಧಿ ರೋಡ್‌ಶೋ ಕೂಡ ಅಂದೇ ನಡೆಯುವ ಸಾಧ್ಯತೆಯಿದೆ. ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯಕ್ಕೆ ತಲುಪುವ ಕುರಿತು ವಿದ್ಯಾರ್ಥಿಗಳು ಆತಂಕಕ್ಕೆ ಈಡಾಗಿದ್ದಾರೆ.

NEET Exam Modi Roadshow: ನೀಟ್‌ ಪರೀಕ್ಷೆಯಂದೇ ಪ್ರಧಾನಿ ಮೋದಿ ರೋಡ್‌ಶೋ, ವಿದ್ಯಾರ್ಥಿಗಳ ಗೋಳು ಕೇಳುವವರಾರು?
NEET Exam Modi Roadshow: ನೀಟ್‌ ಪರೀಕ್ಷೆಯಂದೇ ಪ್ರಧಾನಿ ಮೋದಿ ರೋಡ್‌ಶೋ, ವಿದ್ಯಾರ್ಥಿಗಳ ಗೋಳು ಕೇಳುವವರಾರು?

ಬೆಂಗಳೂರು: ಇದೇ ಭಾನುವಾರ (ಮೇ 7) ನ್ಯಾಷನಲ್‌ ಎಲಿಜಿಬಿಲಿಟಿ ಕಂ ಎಂಟ್ರೆನ್ಸ್‌ ಟೆಸ್ಟ್‌ (NEET Exam) ನಡೆಯಲಿದೆ. ಅದೇ ದಿನ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋ ನಡೆಸಲಿದ್ದು, ನಿಗದಿತ ಅವಧಿಯೊಳಗೆ ಪರೀಕ್ಷಾ ಕೇಂದ್ರಕ್ಕೆ ತಲುಪುವುದೇ ವಿದ್ಯಾರ್ಥಿಗಳಿಗೆ ಸವಾಲಾಗಲಿದೆ. ಕರ್ನಾಟಕದಲ್ಲಿ ಸುಮಾರು 1.9 ಲಕ್ಷ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಬರೆಯಲಿದ್ದಾರೆ. ಬೆಂಗಳೂರಿನಲ್ಲೂ ಸಾಕಷ್ಟು ವಿದ್ಯಾರ್ಥಿಗಳು ನೀಟ್‌ ಪರೀಕ್ಷೆ ಬರೆಯಲಿದ್ದಾರೆ.

ನೀಟ್‌ ಪರೀಕ್ಷೆಯು ಅಪರಾಹ್ನ 2 ಗಂಟೆಯಿಂದ ಸಂಜೆ 5.20 ಗಂಟೆ ನಡುವೆ ನಡೆಯಲಿದೆ. ಪರೀಕ್ಷೆ ಬರೆಯುವ ಕನಿಷ್ಠ ಎರಡು ಗಂಟೆ ಮೊದಲು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಿರುತ್ತದೆ. ಬೆಂಗಳೂರು ಮಾತ್ರವಲ್ಲದೆ ವಿವಿಧ ನಗರಗಳಲ್ಲಿ ನೀಟ್‌ ಪರೀಕ್ಷೆ ನಡೆಯಲಿದ್ದು, ರಾಜಕೀಯ ಪಕ್ಷಗಳು ನಡೆಸುವ ಪ್ರಚಾರ ಕಾರ್ಯಕ್ರಮಗಳಿಂದ ರೋಡ್‌ ಬ್ಲಾಕ್‌, ಟ್ರಾಫಿಕ್‌ ಉಂಟಾಗಿ ತೊಂದರೆ ಅನುಭವಿಸುವ ಆತಂಕದಲ್ಲಿ ವಿದ್ಯಾರ್ಥಿಗಳಿದ್ದಾರೆ.

ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು, ಈ ಕುರಿತು ಪೊಲೀಸ್‌ ಮತ್ತು ಇತರೆ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿರುವುದಾಗಿ ಬಿಜೆಪಿ ಪಕ್ಷದ ಕರ್ನಾಟಕ ಚುನಾವಣಾ ಪ್ರಚಾರ ಉಸ್ತುವಾರಿ ಅಣ್ಣಾಮಲೈ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. "ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ತಲುಪಲು ತಮ್ಮ ಮನೆಗಳಿಂದ ಬಹಳ ದೂರ ಪ್ರಯಾಣಿಸಬೇಕಾಗುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಂಡು ನೀಟ್‌ ವಿದ್ಯಾರ್ಥಿಗಳಿಗೆ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಲು ಇರುವ ದಾರಿಗಳನ್ನು ರೂಪಿಸುತ್ತಿದ್ದೇವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ಈ ಪ್ರಯತ್ನಗಳನ್ನು ಸಂಯೋಜಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಮೇ 7ರಂದು ಬೆಳಗ್ಗೆ 10 ಗಂಟೆಗೆ ರೋಡ್‌ಶೋ ನಡೆಸಲಿದ್ದಾರೆ. ಬ್ರಿಗೇಡ್‌ ರಸ್ತೆಯ ಒಪೆರಾ ಹೌಸ್‌ ಸರ್ಕಲ್‌ನಿಂದ ಅವರ ರೋಡ್‌ಶೋ ಆರಂಭವಾಗಲಿದೆ. ಮಲ್ಲೇಶ್ವರದ ಮಾರಮ್ಮ ಸರ್ಕಲ್‌ನಲ್ಲಿ ರೋಡ್‌ಶೋ ಅಂತ್ಯವಾಗಲಿದೆ. ರೋಡ್‌ಶೋಗೆ ಕನಿಷ್ಠ ಎರಡು ಗಂಟೆ ಮೊದಲು ಎಸ್‌ಪಿಜಿ ಪಡೆ ಭದ್ರತೆ ಕೈಗೊಳ್ಳಲಿದೆ. ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿ ನಿರ್ಬಂಧ ವಿಧಿಸಲಾಗಿರುತ್ತದೆ. ಇದರಿಂದ ಆ ದಾರಿಯಲ್ಲಿ ಸಾಗಬೇಕಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಪರ್ಯಾಯ ರಸ್ತೆಗಳನ್ನು ರೂಪಿಸಿದ್ದರೂ ಆ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಸಾಧ್ಯತೆಯಿದೆ. ಇದರಿಂದ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದೊಳಗೆ ತಲುಪುವುದೇ ವಿದ್ಯಾರ್ಥಿಗಳ ಮುಂದಿರುವ ಸವಾಲಾಗಿದೆ.

ಮೋದಿ ಕಾರ್ಯಕ್ರಮ ಮಾತ್ರವಲ್ಲದೆ ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಕೂಡ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿನಲ್ಲಿ ಪ್ರಿಯಾಂಕ ಗಾಂಧಿ, ರಾಹುಲ್‌ ಗಾಂಧಿ ರೋಡ್‌ಶೋ ನಡೆಸಲಿದ್ದಾರೆ ಎಂದು ಪ್ರಜಾವಾಣಿ ವರದಿ ತಿಳಿಸಿದೆ.

"ನೀಟ್‌ ಪರೀಕ್ಷೆ ಅಪರಾಹ್ನ ನಡೆದರೂ ಕೆಲವು ಗಂಟೆ ಮುಂಚಿತವಾಗಿ ನಾವು ಅಲ್ಲಿರಬೇಕಿರುತ್ತದೆ. ಮೆಟ್ರೊ ಇತ್ಯಾದಿ ಇರುವುದು ಅನುಕೂಲವಾಗಿದೆ. ಆದರೆ, ಮೆಟ್ರೊ ಹೊರತುಪಡಿಸಿ ಬಸ್‌ನಲ್ಲಿ ಬರಬೇಕಿರುವ ಸ್ನೇಹಿತರಿಗೆ ರಾಜಕಾರಣಿಗಳ ರೋಡ್‌ಶೋದಿಂದ ತೊಂದರೆಯಾಗಲಿದೆ. ನೀಟ್‌ನಂತಹ ಪ್ರಮುಖ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ತಪ್ಪು" ಎಂದು ಪೋಷಕರೊಬ್ಬರು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ತಿಳಿಸಿದ್ದಾರೆ.

"ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಚುನಾವಣಾ ಅಬ್ಬರ ಹೆಚ್ಚಾಗಿದೆ. ಈ ಸಮಯದಲ್ಲಿ ಏಕಾಗ್ರತೆಯಿಂದ ಓದುವುದೇ ಕಷ್ಟವಾಗಿತ್ತು. ಪರೀಕ್ಷೆ ದಿನದಂದು ರಾಜಕೀಯ ನಾಯಕರ ಪ್ರಚಾರ ಕಾರ್ಯಕ್ರಮಗಳಿಂದ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗುವ ಕುರಿತು ಭಯ ಶುರುವಾಗಿದೆ. ಮೊದಲ ದಿನ ಪರೀಕ್ಷಾ ಕೇಂದ್ರಕ್ಕೆ ಹತ್ತಿರದಲ್ಲಿರುವ ಪರಿಚಿತರ ಮನೆಗೆ ಹೋಗುವ ಕುರಿತು ಆಲೋಚಿಸುತ್ತಿದ್ದೇನೆ. ಆದರೆ, ಪರಿಚಿತರ ಮನೆಯಲ್ಲಿ ಓದುವುದಕ್ಕೂ ನನ್ನ ಮನೆಯಲ್ಲಿ ಓದುವುದಕ್ಕೂ ವ್ಯತ್ಯಾಸವಿದೆ. ಭಾನುವಾರ ಕೆಲವು ಗಂಟೆ ಮೊದಲೇ ಪ್ರಯಾಣ ಆರಂಭಿಸುವುದು ಒಳ್ಳೆಯದೆಂದು ಅನಿಸುತ್ತದೆ" ಎಂದು ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಮನೆ ಹೊಂದಿರುವ ವಿದ್ಯಾರ್ಥಿ ಆಲಾಪ್‌ ಕುಮಾರ್‌ ಹೇಳಿದ್ದಾರೆ.

ಯೋಗಿ ಆದಿತ್ಯನಾಥ್‌ ರೋಡ್‌ಶೋನಿಂದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಆತಂಕ

ನಾಳೆ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಅಧೀನದ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೆಮಿಸ್ಟಾರ್‌ ಪರೀಕ್ಷೆ ನಡೆಯಲಿದೆ. ರಾಜಕೀಯ ರ್ಯಾಲಿಗಳಿಂದ ಈ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೂ ಆತಂಕವಾಗಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ರಾಜಕೀಯ ಪ್ರಚಾರ ಜೋರಾಗಿದ್ದು, ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ನಾಳೆ ದಕ್ಷಿಣ ಕನ್ನಡ ಜಿಲ್ಲೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಗಮಿಸಲಿದ್ದಾರೆ. ಪುತ್ತೂರು, ಬಿಸಿರೋಡ್‌ನಲ್ಲಿ ರೋಡ್‌ಶೋ ನಡೆಸಲಿದ್ದಾರೆ. ಇದರಿಂದ ಎಂಜಿನಿಯರಿಂಗ್‌ ಪ್ರಥಮ ಸೆಮಿಸ್ಟಾರ್‌ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆತಂಕಕ್ಕೆ ಈಡಾಗಿದ್ದಾರೆ.

"ಇತ್ತೀಚಿನ ಮಹಾಚುನಾವಣೆಗಳಲ್ಲಿ ರೋಡ್ ಶೋ ಗಳ ಹಾವಳಿ ಜಾಸ್ತಿಯಾಗುತ್ತಿದೆ. ರಾಜಕೀಯ ನಾಯಕರು ರಾಜಮಾರ್ಗದಲ್ಲಿ ಟಾಟಾ ಮಾಡುತ್ತಾ ಮಹಾರಾಜರಂತೆ ತೆರಳುವ ಸಂದರ್ಭ ರಸ್ತೆ ಸಂಪೂರ್ಣ ಬಂದ್ ಆಗುತ್ತದೆ. ಝಡ್ ಪ್ಲಸ್ ನಂಥ ಬಿಗು ಭದ್ರತೆಯವರು ಬಂದರಂತೂ ರಸ್ತೆಯೇ ನಮಗೆ ಅಪರಿಚಿತ ಎನ್ನುವ ಸ್ಥಿತಿ. ಈಗ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಎಂಜಿನಿಯರಿಂಗ್ ಮೊದಲ ಸೆಮಿಸ್ಟರ್ ಪರೀಕ್ಷೆ ರಾಜ್ಯದಾದ್ಯಂತ ಇದೆ. ಇದಕ್ಕೆಂದು ತೆರಳುವವರು ಹಾಗೂ ಸಂಜೆ ಪರೀಕ್ಷೆ ಮುಗಿಸಿ ಮನೆಗೆ ಮರಳುವವರು ಪರದಾಡುವ ಸ್ಥಿತಿ. ಹೆಣ್ಣುಮಕ್ಕಳ ಹೆತ್ತವರಿಗಂತೂ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಾಜಕಾರಣಿಗಳು ಮತಯಾಚನೆಗೆ ಬೇಕಾದರೆ ಬೃಹತ್ ಮೈದಾನದಲ್ಲಿ ದೊಡ್ಡ ಸಭೆ ಮಾಡಿ, ಬೇಕಾದಷ್ಟು ಭಾಷಣ ಮಾಡಲಿ, ಅದರೆ ರಾಜಪ್ರಭುತ್ವ ನೆನಪಿಸುವ ರೋಡ್ ಶೊಗಳು ಯಾಕೆ?" ಎಂದು ಮಂಗಳೂರಿನ ಹೆಸರು ಹೇಳಲಿಚ್ಚಿಸದ ಹೆತ್ತವರು ಪ್ರಶ್ನಿಸಿದ್ದಾರೆ.