ಕನ್ನಡ ಸುದ್ದಿ  /  Karnataka  /  Nelamangala Jds Leaders Join Congress

JDS leaders join Congress: ಕಾಂಗ್ರೆಸ್​ ಸೇರಿದ ಜೆಡಿಎಸ್ ಮುಖಂಡರು.. ಮುಂದಿನ ಲಿಸ್ಟ್​​ನಲ್ಲಿ ಬಿಜೆಪಿ ಶಾಸಕರು?

ನೆಲಮಂಗಲ ನಗರಸಭೆಯ ಅಧ್ಯಕ್ಷರು, ಇತರ ಸದಸ್ಯರು ಸೇರಿದಂತೆ ಜೆಡಿಎಸ್ ಮುಖಂಡರು ಇಂದು ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

ಕಾಂಗ್ರೆಸ್​ ಸೇರಿದ ಜೆಡಿಎಸ್ ಮುಖಂಡರು
ಕಾಂಗ್ರೆಸ್​ ಸೇರಿದ ಜೆಡಿಎಸ್ ಮುಖಂಡರು

ಬೆಂಗಳೂರು: ನೆಲಮಂಗಲ ನಗರಸಭೆಯ ಅಧ್ಯಕ್ಷರು, ಇತರ ಸದಸ್ಯರು ಸೇರಿದಂತೆ ಜೆಡಿಎಸ್ ಮುಖಂಡರು ಇಂದು ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ನೆಲಮಂಗಲದಲ್ಲಿ ದೊಡ್ಡ ಸಭೆ ಇದ್ದು, ಅಲ್ಲಿ ಮತ್ತಷ್ಟು ಜನ ಸೇರ್ಪಡೆ ಆಗಲಿದ್ದಾರೆ. ನನಗೆ ಬೇರೆ ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ ಪ್ರಮುಖರನ್ನು ಇಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದರು.

ಜೆಡಿಎಸ್​​ನ ಈ ನಾಯಕರು ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದಾರೆ. ಅಲ್ಲಿನ ಶಾಸಕರು ಸರ್ಕಾರದ ಜತೆ ಸೇರಿಕೊಂಡು ಇವರ ಮುನ್ಸಿಪಲ್ ಸದಸ್ಯತ್ವದ ಅಸ್ತಿತ್ವವನ್ನು ತೆಗೆದುಹಾಕಲು ದೊಡ್ಡ ಪ್ರಯತ್ನವನ್ನು ಮಾಡಿದ್ದರು. ಕಾನೂನು ಪ್ರಕಾರ ಇವರ ಅವಧಿ ಮುಕ್ತಾಯವಾಗುವವರೆಗೂ ಇವರು ಸೇವೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು ಎಂದು ತಿಳಿಸಿದರು.

ರಾಜ್ಯದಲ್ಲಿ ಬದಲಾವಣೆ ಪರ್ವ ಆರಂಭವಾಗಿದ್ದು, ಅನೇಕರು ಬಿಜೆಪಿ ಹಾಗೂ ಜೆಡಿಎಸ್​​ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ನಾವು ಅವರಿಗೆ ಶಕ್ತಿ ನೀಡಿ, ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇನೆ. ನಮ್ಮಲ್ಲಿ ಹೊಸಬರು, ಹಳಬರು ಎಂಬ ಬೇಧವಿಲ್ಲ. ಇವರಲ್ಲಿ ಬಹುತೇಕರು ನನ್ನ ಜತೆ ಕೆಲಸ ಮಾಡಿದ್ದರು. ಈ ಬಾರಿ ನಾವು ಯಾರಿಗೆ ಟಿಕೆಟ್ ಕೊಟ್ಟರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಇವರು ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷದಿಂದ ಹೆಚ್ಚಾಗಿ ಆಗಮಿಸುತ್ತಿದ್ದಾರೆ ಎಂಬ ಪ್ರಶ್ನೆಗೆ, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷದಿಂದ ನಾಯಕರು ಆಗಮಿಸುತ್ತಿದ್ದಾರೆ. ಹೆಚ್ ವಿಶ್ವನಾಥ್ ಅವರು ಪಕ್ಷ ಸೇರ್ಪಡೆಯಾಗಲು ದಿನಾಂಕ ನಿಗದಿ ಆಗಿದೆ. ಅದನ್ನು ಶೀಘ್ರ ಘೋಷಣೆ ಮಾಡುತ್ತೇವೆ. ಉಳಿದಂತೆ ಯಾರೆಲ್ಲಾ ಬರುತ್ತಾರೆ ಎಂದು ನಾನು ಈಗ ಹೇಳುವುದಿಲ್ಲ ಎಂದು ತಿಳಿಸಿದರು.

ಮುಂದಿನ ಲಿಸ್ಟ್​​ನಲ್ಲಿ ಬಿಜೆಪಿ ಶಾಸಕರು?

ಬಿಜೆಪಿ ಹಾಲಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ, ಹೌದು ಬಹಳ ಜನ ನಮ್ಮನ್ನು ಸಂಪರ್ಕಿಸಿದ್ದಾರೆ. ಆದರೆ ಪಕ್ಷದಲ್ಲಿ ಅವರಿಗೆ ಸ್ಥಾನ ನೀಡಬೇಕಾಗುತ್ತದೆ. ಕೆಲವು ಕಡೆ ಅದು ಸಾಧ್ಯ ಆಗುವುದಿಲ್ಲ. ಯಾರೆಲ್ಲಾ ಬರಲಿದ್ದಾರೆ ಎಂದು ನಾನು ಇಂದು ಬಹಿರಂಗ ಪಡಿಸುವುದಿಲ್ಲ ಎಂದು ತಿಳಿಸಿದರು.

ಇನ್ನು ಹಾವೇರಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅರ್ಜಿ ನೀಡುವ ಹೇಳಿಕೆ ಬಗ್ಗೆ ಕೇಳಿದಾಗ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡಲಿದೆ ಎಂದು ಜನರಿಗೆ ತಲುಪಬೇಕು. ಹೀಗಾಗಿ ಕಾರ್ಯಕರ್ತರು ಪ್ರತಿ ಮನೆಗೆ ಹೋಗಿ ಈ ವಿಚಾರ ಮುಟ್ಟಿಸಬೇಕು. ಅಲ್ಲದೆ ಈ ಯೋಜನೆ ಬಗ್ಗೆ ಯಾರಿಗೆಲ್ಲ ಆಸಕ್ತಿ ಇದೆ ಎಂದು ತಿಳಿಯಬೇಕು. ಬಿಜೆಪಿ ನಾಯಕರು ಈ ಯೋಜನೆ ಜಾರಿಗೆ ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅದನ್ನು ಹೇಗೆ ತರಬೇಕು ಎಂದು ನಮಗೆ ಗೊತ್ತಿದೆ. ಸಿದ್ದರಾಮಯ್ಯ ಅವರು 13 ಬಜೆಟ್ ಮಂಡನೆ ಮಾಡಿದ್ದಾರೆ. ನಾನು ಕೂಡ 35-40 ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಯೋಜನೆಗಳಿಗೆ ಹೇಗೆ ಸಂಪನ್ಮೂಲ ಕ್ರೋಢೀಕರಣ ಮಾಡಬೇಕು ಎಂದು ತಿಳಿದಿದೆ ಎಂದರು.

ನಾವು ಘೋಷಣೆ ಪ್ರಕಟಿಸಿದ ಮೇಲೆ ಈಗ ಮುಖ್ಯಮಂತ್ರಿಗಳು ಹಾಗೂ ಸಚಿವ ಅಶೋಕ್ ಅವರು ಬಜೆಟ್ ನಲ್ಲಿ ಈ ಯೋಜನೆ ತರುತ್ತೇವೆ ಎಂದು ಹೇಳಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಸರ್ಕಾರ ಯಾಕೆ ಈ ಕಾರ್ಯಕ್ರಮ ನೀಡಲಿಲ್ಲ. ಕೋವಿಡ್ ಸಮಯದಲ್ಲಿ ಸಾಂಪ್ರದಾಯಿಕ ವೃತ್ತಿ ಮಾಡಿಕೊಂಡು ಬಂದವರಿಗೆ 10 ಸಾವಿರ ಪ್ರೋತ್ಸಾಹ ಧನ ನೀಡುವಂತೆ ನಾವು ಆಗ್ರಹಿಸಿದೆವು. ಅದನ್ನು ಅವರಿಂದ ನೀಡಲು ಆಗಲಿಲ್ಲ. 5 ಸಾವಿರ ನೀಡುವುದಾಗಿ ಘೋಷಣೆ ಮಾಡಿ ಅದನ್ನು ಸರಿಯಾಗಿ ನೀಡಲಿಲ್ಲ. 1800 ಕೋಟಿ ಪ್ಯಾಕೆಜ್ ಘೋಷಣೆ ಮಾಡಿದರು. ಆದರೆ ಅದು ಜನರಿಗೆ ತಲುಪಲಿಲ್ಲ. 25 ಲಕ್ಷ ಚಾಲಕರ ಪೈಕಿ ಕೇವಲ 6 ಲಕ್ಷ ಮಂದಿಗೆ ಮಾತ್ರ 5 ಸಾವಿರ ನೀಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡಿ 410 ರೂ.ಗೆ ಸಿಲಿಂಡರ್ ನೀಡುತ್ತಿದ್ದೆವು. ಈಗ ಅದು 1100 ರೂಪಾಯಿ ಆಗಿದೆ. ಹೀಗಾಗಿ ಬೆಲೆ ಏರಿಕೆ ಹೊರೆ ತಗ್ಗಿಸಲು ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲು ಘೋಷಣೆ ಮಾಡಿದ್ದೇವೆ. ಇದರಿಂದ ಪ್ರತಿ ಮನೆಗೆ 1500ರಂತೆ ವರ್ಷಕ್ಕೆ 18,000 ಉಳಿತಾಯವಾಗುತ್ತದೆ ಎಂದು ತಿಳಿಸಿದರು.

ಇನ್ನು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರದಂತೆ ವರ್ಷಕ್ಕೆ 24 ಸಾವಿರ ನೀಡುವ ಘೋಷಣೆ ಮಾಡಲಾಗಿದೆ. ಇವೆರದರಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 42 ಸಾವಿರ ಉಳಿತಾಯ ಆಗುತ್ತದೆ. ಈಗ ಮುಖ್ಯಮಂತ್ರಿಗಳು ನಾವು ಈ ಯೋಜನೆ ಬಗ್ಗೆ ಯೋಚನೆ ಮಾಡಿದ್ದೆವು ಎಂದು ಹೇಳುತ್ತಿದ್ದಾರೆ. ಅವರು ಎಲ್ಲರ ಖಾತೆಗೆ 15 ಲಕ್ಷ ಹಾಕುವುದಾಗಿ ಜನಧನ್ ಖಾತೆ ತೆರೆಸಿದರು. ಆದರೆ ಯಾವ ಖಾತೆಗೂ ಬರಲಿಲ್ಲ. ಆದರೆ ನಾವು ಘೋಷಣೆ ಮಾಡಿರುವ ಯೋಜನೆಗಳು ಗ್ಯಾರೆಂಟಿ ಯೋಜನೆ. ಸಿದ್ದರಾಮಯ್ಯ ಅವರು ಈಗ ನೀಡಲಾಗುತ್ತಿರುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇನ್ನು ಕೆಲವು ಯೋಜನೆಗಳ ಘೋಷಣೆ ಬಾಕಿ ಇವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಟಾರ್ಗೆಟ್ ಆಗುತ್ತಿದೆಯೇ ಎಂದು ಕೇಳಿದಾಗ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೆ ಬರುತ್ತದೆ ಎಂದು ಗೊತ್ತಾಗಿದೆ. ಅಮಿತ್ ಶಾ ಅವರು ಕೆಲ ತಿಂಗಳ ಹಿಂದೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು. ಈಗ ಪ್ರಧಾನಮಂತ್ರಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ. ಅಂದರೆ ರಾಜ್ಯದ ನಾಯಕತ್ವ ವಿಫಲವಾಗಿದ್ದು, ಜನರ ಬದುಕಿನಲ್ಲಿ ಸುಧಾರಣೆ ತರಲು ಸಾಧ್ಯವಾಗಿಲ್ಲ. ಮುಂದಿನ ಬಜೆಟ್ ನಲ್ಲಿ ಕಾರ್ಯಕ್ರಮ ನೀಡುತ್ತೇವೆ ಎನ್ನುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಡಬಹುದಾಗಿತ್ತು. ಸಬ್ಸಿಡಿ ಮೂಲಕ ಪೆಟ್ರೋಲ್, ಅಡುಗೆ ಅನಿಲ ಬೆಲೆ ಕಡಿಮೆ ಮಾಡಬಹುದಾಗಿತ್ತು. ಅಚ್ಚೆ ದಿನ ಬರುತ್ತದೆ ಎಂದಿದ್ದರು. ಯಾರಿಗೆ ಬಂತು ಅಚ್ಚೆ ದಿನ? ಮಂತ್ರಿಗಳು ಬಹಳಷ್ಟು ಮಾತನಾಡುತ್ತಾರೆ. ಕೋವಿಡ್ ಬೆಡ್ ಹಗರಣ, ಹೆಣದ ಮೇಲೆ ಹಣ ಮಾಡಿದ್ದು ಯಾರು? ಕೆಂಪಣ್ಣ ಅವರ ದೂರು, ತಿಪ್ಪಾರೆಡ್ಡಿ ಅವರ ಮೇಲೆ ಆರೋಪ, ಯತ್ನಾಳ್, ವಿಶ್ವನಾಥ್ ಅವರ ಆರೋಪ ನಾವು ಮಾಡಿದ್ದೇವಾ? ಆತ್ಮಹತ್ಯೆ, ದಯಾಮರಣಕ್ಕೆ ಅರ್ಜಿ ನಾವು ಹಾಕಿದ್ದೇವಾ? ಪೊಲೀಸ್ ನೇಮಕಾತಿ ಹಗರಣ, ಕೆಪಿಎಸ್ ಸಿ ಹಗರಣದ ಬಗ್ಗೆ ಮಾಧ್ಯಮ ವರದಿ ನಾವು ಮಾಡಿದ್ದೇವಾ? ರಾಜ್ಯಪಾಲರು ನೇಮಕ ಮಾಡುವ ಉಪಕುಲಪತಿ ಹುದ್ದೆಗೂ 4-5 ಕೋಟಿ ನೀಡಬೇಕು ಎಂದು ಬಿಜೆಪಿ ಸಂಸದ ಹೇಳಿದ್ದಾರೆ ಹೊರತು ನಾವು ಹೇಳಿಲ್ಲ. ಇದೆಲ್ಲವೂ ಬಿಜೆಪಿ ಸಾಧನೆ. ಮಾಧ್ಯಮಗಳು ಈ ವಿಚಾರದಲ್ಲಿ ಬಹಳ ಉತ್ತಮ ಕೆಲಸ ಮಾಡಿದೆ. ಮುಂದೆ ರಾಜ್ಯದ ಭವಿಷ್ಯ ಕಾಂಗ್ರೆಸ್ ಜತೆ ಉತ್ತಮವಾಗಿದೆ ಎಂದು ಅರಿತು ಬೇರೆ ಪಕ್ಷದ ನಾಯಕರು ಯಾವುದೇ ಷರತ್ತು ಇಲ್ಲದೆ ನಮ್ಮ ಪಕ್ಷ ಸೇರುತ್ತಿದ್ದಾರೆ ಎಂದರು.

ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಗೊಂದಲ ವಿಚಾರವಾಗಿ ಕೇಳಿದಾಗ, ಯಾವುದೇ ಗೊಂದಲ ಇಲ್ಲ. ಪಕ್ಷ ಈಗಾಗಲೇ ತೀರ್ಮಾನ ಮಾಡಿದೆ. ಫೆ.2ರಂದು ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ನಂತರ ಸ್ಕ್ರೀನಿಂಗ್ ಕಮಿಟಿ ಸಭೆ ಮಾಡಿ ಆದಷ್ಟು ಬೇಗ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಯಾರು ಅರ್ಜಿ ಹಾಕಿಲ್ಲ. ಕೆಲವರು ಮಾತ್ರ ಎಲ್ಲಿ ಬೇಕಾದರೂ ಟಿಕೆಟ್ ನೀಡಿ ಎಂದು ಅರ್ಜಿ ಹಾಕಿದ್ದಾರೆ ಎಂದು ತಿಳಿಸಿದರು.

ಪಂಚಮಸಾಲಿ ಹಾಗೂ ಒಕ್ಕಲಿಗರ ಮೀಸಲಾತಿ ಹೋರಾಟ ಕಾಂಗ್ರೆಸ್ ಗೆ ವರದಾನವೇ ಎಂದು ಕೇಳಿದ ಪ್ರಶ್ನೆಗೆ, ಪಂಚಮಸಾಲಿ, ಒಕ್ಕಲಿಗರು, ಪರಿಶಿಷ್ಟರ ಮೀಸಲಾತಿ ವಿಚಾರದಲ್ಲಿ ಸರ್ಕಾರ ಎಲ್ಲರಿಗೂ ಮೋಸ ಮಾಡುತ್ತಿದೆ. ಬಿಜೆಪಿ ಯಾವ ನಿರ್ಧಾರವನ್ನು ಕಾನೂನು ಪ್ರಕಾರ ಮಾಡಿಲ್ಲ. ಅವರು ಮೀಸಲಾತಿ ನೀಡಬೇಕಾದರೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕು. ದೆಹಲಿಯಲ್ಲಿ ತಿದ್ದುಪಡಿ ಮಾಡಿ ಕಳುಹಿಸಬೇಕಿತ್ತು. ಕೇಂದ್ರ ಸಚಿವರು ನಮ್ಮ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದಾರೆ. ಇವರು ಕೇವಲ ಘೋಷಣೆ ಮಾಡಿ ನಾವು ಗೆದ್ದಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅವರಿಗೆ ಕಾನೂನು ಗೊತ್ತಿಲ್ಲವೆ? ಈ ವಿಚಾರದಲ್ಲಿ ಮುಖ್ಯಮಂತ್ರಿ ಯಾಕೆ ಘೋಷಣೆ ಮಾಡಲಿಲ್ಲ? ಘೋಷಣೆ ಮಾಡಿದ ನಂತರ 3 ತಿಂಗಳು ಕಳೆದ ಬಳಿಕ ವರದಿ ತರಿಸಿಕೊಂಡು ತೀರ್ಮಾನ ಮಾಡುತ್ತಾರಂತೆ. ಫೆಬ್ರವರಿ ಅಂತ್ಯಕ್ಕೆ ಇವರ ಅಧಿಕಾರ ಬಹುತೇಕ ಅಂತ್ಯವಾಗುತ್ತದೆ. ಅಧಿಕಾರಿಗಳ ಕೈಯಲ್ಲಿ 48 ದಿನಗಳ ಕಾಲ ಅಧಿಕಾರ ಇರುತ್ತದೆ. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದರು.