New Year 2025: ಹೊಸ ವರ್ಷಾಚರಣೆಗೆ ಕರ್ನಾಟಕದ ಹಲವು ಕಡೆ ಬದಲಾವಣೆ, ಚಿಕ್ಕಮಗಳೂರು ಬೆಟ್ಟಗಳಲ್ಲಿ ಸಂಚಾರ ನಿಷೇಧ, ಜೋಗ ವೀಕ್ಷಣೆಗೆ ಅವಕಾಶ
ಹೊಸ ವರ್ಷದ ಸಂಭ್ರಮಾಚರಣೆಗೆ ಚಿಕ್ಕಮಗಳೂರು ಜಿಲ್ಲೆ ಪ್ರವಾಸಿ ತಾಣಗಳಲ್ಲಿ ಬ್ರೇಕ್ ಬಿದ್ದಿದೆ. ಆದರೆ ಶಿವಮೊಗ್ಗ ಜೋಗದಲ್ಲಿ ಮೂರು ತಿಂಗಳು ಸಾರ್ವಜನಿಕ ಭೇಟಿಗೆ ನಿಷೇಧ ಹೇರಿದ್ದರೂ ಹೊಸ ವರ್ಷದ ಭೇಟಿಗೆ ಅವಕಾಶ ನೀಡಲಾಗಿದೆ.
ಬೆಂಗಳೂರು: ಹೊಸ ವರ್ಷಾಚರಣೆಗೆ ಇನ್ನೇನು ಒಂದು ದಿನ ಬಾಕಿ ಇದೆ. ಮಂಗಳವಾರ ರಾತ್ರಿ ಶುರುವಾಗುವ ಹೊಸ ವರ್ಷ ಬರ ಮಾಡಿಕೊಳ್ಳುವ ಸಂಭ್ರಮಕ್ಕೆ ಕ್ಷಣ ಗಣನೆಯೂ ಶುರುವಾಗಿದ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ನಿಧನರಾಗಿರುವುದರಿಂದ ಏಳು ದಿನದ ಶೋಕಾಚರಣೆ ಇರುವುದರಿಂದ ಸಾರ್ವಜನಿಕವಾಗಿ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಆದರೆ ಸಂಭ್ರಮಾಚರಣೆಗೂ ಅಡ್ಡಿಯೇನೂ ಇಲ್ಲ. ಹೊಸವರ್ಷವನ್ನು ಬರ ಮಾಡಿಕೊಳ್ಳಲು ಬಹುತೇಕರು ಹೊರಗಡೆ ಹೋಗಿ ಸಂಭ್ರಮಿಸಲು ಬಯಸುತ್ತಾರೆ. ಈ ಕಾರಣದಿಂದ ಹಲವು ಕಡೆಗಳಲ್ಲಿ ಸಂಭ್ರಮಾಚರಣೆ ನೆಪದಲ್ಲಿ ಅನಾಹುತ ಆಗದಿರಲಿ ಎಂದು ನಿಷೇಧಗಳನ್ನು ಹಾಕಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಿಗೆ ನಿರ್ಬಂಧವಿದ್ದರೆ, ಶಿವಮೊಗ್ಗ ಜಿಲ್ಲೆಯ ಪ್ರಖ್ಯಾತ ಜೋಗ ಜಲಪಾತವನ್ನು ಆ ದಿನ ವೀಕ್ಷಿಸಲು ಅವಕಾಶ ನೀಡಲಾಗಿದೆ.
ಚಿಕ್ಕಮಗಳೂರು ಎಸ್ಪಿ ಸೂಚನೆ ಏನು
ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಎಸ್ ಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.
ಚಿಕ್ಕಮಳೂರಿನ ಮುಳ್ಳಯ್ಯನಗಿರಿ ಸೇರಿ ಪ್ರಮುಖ ಪ್ರವಾಸಿ ತಾಣಗಳಿಗೆ 2024ರ ಡಿಸೆಂಬರ್ 31ರ ಸಂಜೆ 6 ರಿಂದ 2025 ರ ಜನವರಿ 1 ಬೆಳಿಗ್ಗೆ 6ಗಂಟೆವರೆಗೆ ನಿರ್ಬಂಧವಿಧಿಸಲಾಗಿದೆ. ರೇವ್ ಪಾರ್ಟಿ, ಡ್ರಗ್ಸ್ ಪಾರ್ಟಿ ಆಚರಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಪ್ರವಾಸಿ ತಾಣದ ಪ್ರದೇಶದಲ್ಲಿ ನಿಯೋಜಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅಂದು ರಾತ್ರಿ ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿ ಬಿದ್ದರೆ ಮೊಕದ್ದಮೆ ದಾಖಲಿಸಿ ದಂಡ ವಿಧಿಸಲಾಗುತ್ತದೆ. ಈಗಾಗಲೇ ಲಾಡ್ಜ್, ವೈನ್ ಶಾಪ್ ಹೋಮ್ ಸ್ಟೇಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದೇವೆ. ರಾತ್ರಿ ವೇಳೆ ಸೌಂಡ್ ಸಿಸ್ಟಮ್ ಕೂಡ ರಸ್ತೆ, ಬಡಾವಣೆ, ಸಂಘ ಸಂಸ್ಥೆಗಳಲ್ಲಿ ಹಾಕುವಂತಿಲ್ಲ. ಎಲ್ಲಾದರೂ ಪಾರ್ಟಿಗಳು ನಡೆಯುತ್ತಿದ್ದರೆ ಅಲ್ಲಿಗೆ ಯಾವುದೇ ಸಂಘಟನೆಗಳು ದಾಳಿ ಮಾಡಲೂ ಅವಕಾಶವಿಲ್ಲ. ಪಾರ್ಟಿ ಬಗ್ಗೆ ಅನುಮಾನ ಬಂದರೇ ಪೊಲೀಸರಿಗೆ ಮಾಹಿತಿ ನೀಡಿದರೆ ಸಾಕು. ನಾವು ಕ್ರಮ ವಹಿಸುತ್ತೇವೆ ಎಂದು ಎಸ್ಪಿ ತಿಳಿಸಿದ್ದಾರೆ.
ಜೋಗ ವೀಕ್ಷಣೆಗೆ ಬನ್ನಿ
ಹೊಸ ವರ್ಷದ ಆಚರಣೆಗೆ ಅನುಕೂಲವಾಗವಂತೆ ವಿಶ್ವ ಪ್ರಸಿದ್ದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ವಿಧಿಸಿದ್ದ ನಿರ್ಬಂಧವನ್ನು ಶಿವಮೊಗ್ಗ ಜಿಲ್ಲಾಡಳಿತ ತೆರವುಗೊಳಿಸಿ ಆದೇಶ ಹೊರಡಿಸಿದೆ
ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ 2025 ರ ಜನವರಿ1 ರಿಂದ ಮಾರ್ಚ್15 ರವರೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಇದೀಗ ಹೊಸವರ್ಷಾಚರಣೆ ಪ್ರವಾಸದಲ್ಲಿರುವ ಪ್ರವಾಸಿಗರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಕವಾಗಿ ಜೋಗಕ್ಕೆ ಬರುವ ಸಾಧ್ಯತೆಗಳಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಹೊಸ ವರ್ಷದ ದಿನದಂದು ಜೋಗ ನಿರ್ವಹಣಾ ಪ್ರಾಧಿಕಾರದ ಪ್ರವೇಶ ದ್ವಾರ ಹೊರತುಪಡಿಸಿ ಉಳಿದ ಸ್ಥಳಗಳಿಂದ ಜೋಗ ಜಲಪಾತ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಮುಖ್ಯ ರಸ್ತೆಯ ವ್ಯೂವ್ ಪಾಯಿಂಟ್, ಯಾತ್ರಿ ನಿವಾಸ, ರಾಣಿ ಫಾಲ್ಸ್, ಮುಂಬಯಿ ಬಂಗಲೆ, ಮುಂಗಾರು ಮಳೆ ಪಾಯಿಂಟ್ ಸೇರಿದಂತೆ ಇತರೆ ಸ್ಥಳಗಳಿಂದ ಪ್ರವಾಸಿಗರು ಜಲಪಾತದ ಸೊಬಗು ವೀಕ್ಷಿಸಿ ಖುಷಿ ಪಡಲು ಅವಕಾಶ ನೀಡಲಾಗಿದೆ ಎಂದು ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಮನೆ ಮುಂಭಾಗ ಹೊಸ ವರ್ಷಾಚರಣೆ ಇಲ್ಲ
ಮೈಸೂರು ಅರಮನೆ ಆವರಣದಲ್ಲಿ ಪ್ರತಿ ವರ್ಷ ಡಿ.31 ರಂದು ರಾತ್ರಿ 11 ರಿಂದ 12ರವರೆಗೆ ಪೊಲೀಸ್ ಇಲಾಖೆ ವತಿಯಿಂದ ಕರ್ನಾಟಕ ಮತ್ತು ಆಂಗ್ಲ ಬ್ಯಾಂಡ್ ಕಾರ್ಯಕ್ರಮ, ಇದಾದ ನಂತರ ರಾತ್ರಿ 12 ರಿಂದ 12.15ರ ವರೆಗೆ ಅರಮನೆ ಮಂಡಳಿ ವತಿಯಿಂದ ಶಬ್ದರಹಿತ ಹಸಿರು ಪಟಾಕಿ ಸಿಡಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. ಇದೇ ವೇಳೆ ಅರಮನೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಲು ಅರಮನೆಯ ವಿದ್ಯುತ್ ದೀಪಾಲಂಕಾರವನ್ನು ಸಂಜೆ 7ರಿಂದ 9 ರವರೆಗೆ ವಿಸ್ತರಣೆ ಮಾಡುವುದು ನಡೆದುಕೊಂಡು ಬಂದಿದೆ. ಈ ಬಾರಿ ಮನಮೋಹನ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಯಾವುದೇ ಚಟುವಟಿಕೆಗಳು ಹೊಸ ವರ್ಷದ ಹಿಂದಿನ ದಿನ ರಾತ್ರಿ ಇರುವುದಿಲ್ಲ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.