ಮೈಸೂರು ಯೋಗಾನರಸಿಂಹ ದೇವಸ್ಥಾನದಲ್ಲಿ ಹೊಸ ವರ್ಷಕ್ಕೆ ಭಕ್ತರಿಗಾಗಿ 2 ಲಕ್ಷ ಲಾಡುಗಳ ವಿತರಣೆಗೆ ಸಿದ್ದತೆ
Mysore: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ವರ್ಷಕ್ಕೆ ಭಕ್ತರಿಗೆ ಲಾಡುಗಳನ್ನು ವಿತರಿಸಲು ಸಕಲ ಸಿದ್ದತೆ ನಡೆಯುತ್ತಿದೆ. ಈ ಬಾರಿ 2 ಲಕ್ಷ ಲಾಡುಗಳ ವಿತರಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎನ್ ಶ್ರೀನಿವಾಸನ್ ಮಾಹಿತಿ ನೀಡಿದ್ದಾರೆ.
ಮೈಸೂರು: ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲೆಡೆ ಜನರು ಸಜ್ಜಾಗಿದ್ದಾರೆ. ಭರ್ಜರಿ ಶಾಪಿಂಗ್ ಮುಗಿಸಿ 2025ನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ವಿಶ್ವವೇ ಕಾಯುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರು ಕೂಡಾ ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ಧವಾಗಿದೆ. ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೂಡಾ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ. 2024 ಮುಗಿಯಲು ಇನ್ನು 3 ದಿನಗಳಷ್ಟೇ ಬಾಕಿ ಉಳಿದಿದೆ.
ಮೈಸೂರು ವಿಜಯನಗರದಲ್ಲಿರುವ ಯೋಗಾನರಸಿಂಹಸ್ವಾಮಿ ದೇವಸ್ಥಾನ
ಸಾಂಸ್ಕೃತಿಕ ನಗರಿ ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ದಿನ ಹಂಚಲು ಎರಡು ಲಕ್ಷ ಲಾಡುಗಳ ವಿತರಣೆಗೆ ಸಿದ್ದತೆ ನಡೆಯುತ್ತಿದೆ. ಕಳೆದ ಹಲವು ವರ್ಷಗಳಿಂದಲೂ ಈ ದೇವಸ್ಥಾನದಲ್ಲಿ ಭಕ್ತರಿಗೆ ಹೊಸ ವರ್ಷದ ದಿನ ಲಾಡು ವಿತರಿಸಲಾಗುತ್ತಿದೆ. ಈ ಬಾರಿಯೂ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಕನ್ನಡದ ಮೇರುನಟ ದಿವಂಗತ ಡಾ ರಾಜಕುಮಾರ್ ಅವರ ಪ್ರೇರಣೆಯಿಂದ 1994ರಲ್ಲಿ ಒಂದು ಸಾವಿರ ಲಾಡುಗಳ ವಿತರಣೆಯೊಂದಿಗೆ ಈ ಸೇವೆ ಆರಂಭವಾಗಿತ್ತು. ಅಂದಿನಿಂದ ವರ್ಷ ವರ್ಷವೂ ಲಾಡುಗಳ ವಿತರಣೆ ಸಂಖ್ಯೆ ಹೆಚ್ಚುತ್ತಿದೆ.
ಇದನ್ನೂ ಓದಿ: ಮೈಸೂರು ಅರಮನೆ ಅಂಗಳದಲ್ಲಿ ಅರಳಿದ ಪುಷ್ಪಲೋಕ
100 ಮಂದಿ ನುರಿತ ಬಾಣಸಿಗರಿಂದ ಲಾಡು ತಯಾರಿ
ಹೊಸ ವರ್ಷದ ದಿನ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾಧಿಗಳಿಗೆ ವಿತರಿಸಲು ತಿರುಪತಿ ಮಾದರಿಯಲ್ಲಿ ಲಾಡುಗಳನ್ನು ತಯಾರಿಸಲಾಗುತ್ತಿದೆ. ಸುಮಾರು 100 ಮಂದಿ ನುರಿತ ಬಾಣಸಿಗರು ಈ ಲಾಡುಗಳನ್ನು ತಯಾರಿಸುತ್ತಿದ್ದಾರೆ. ಲಾಡುಗಳನ್ನು ತಯಾರಿಸಲು 200 ಕ್ವಿಂಟಾಲ್ ಸಕ್ಕರೆ, 100 ಕ್ವಿಂಟಾಲ್ ಕಡ್ಲೆ ಹಿಟ್ಟು, 10 ಸಾವಿರ ಲೀಟರ್ ಖಾದ್ಯ ತೈಲ, 250 ಕೆ ಜಿ ಬಾದಾಮಿ, 50 ಕೆಜಿ ಪಿಸ್ತಾ, 50 ಕೆಜಿ ಏಲಕ್ಕಿ, 500 ಕೆಜಿ ಒಣದ್ರಾಕ್ಷಿ, 500 ಕೆಜಿ ಗೋಡಂಬಿ, 50 ಕೆಜಿ ಪಚ್ಚ ಕರ್ಪೂರ, 200 ಕೆಜಿ ಲವಂಗ, 50 ಕೆಜಿ ಜಾಕಾಯಿ ಮತ್ತು ಜಾಪತ್ರೆ, 1 ಸಾವಿರ ಕೆಜಿ ಡೈಮಂಡ್ ಸಕ್ಕರೆ, 2 ಸಾವಿರ ಕೆಜಿ ಬೂರಾ ಸಕ್ಕರೆ ಸೇರಿದಂತೆ ಮೊದಲಾದ ಪದಾರ್ಥಗಳನ್ನು ಮಿಶ್ರಣ ಮಾಡಿ ತಿರುಪತಿ ಮಾದರಿಯಲ್ಲಿ ಬಾಣಸಿಗರು ಲಾಡುಗಳನ್ನು ತಯಾರಿಸುತ್ತಿದ್ದಾರೆ.
ಡಿಸೆಂಬರ್ 20ರಿಂದ ಲಾಡುಗಳ ತಯಾರಿಕೆ ಕಾರ್ಯ ಆರಂಭವಾಗಿದೆ, ಡಿಸೆಂಬರ್ 31ಕ್ಕೆ ಮುಗಿಯಲಿದೆ. ಜನವರಿ 1 ರಂದು ಬೆಳಗಿನ ಜಾವ 4 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಲಾಡುಗಳನ್ನು ವಿತರಿಸಲಾಗುವುದು ಎಂದು ದೇಗುಲದ ಆಡಳಿತಾಧಿಕಾರಿ ಎನ್ ಶ್ರೀನಿವಾಸನ್ ಮಾಹಿತಿ ನೀಡಿದ್ದಾರೆ.