ಹೊಸ ವರ್ಷಾಚರಣೆಗೆ ರೈಲಿನಲ್ಲಿ ಬೆಂಗಳೂರಿಗೆ ಸಾಗಿಸುತ್ತಿದ್ದ 1 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ, 8 ಆರೋಪಿಗಳ ಬಂಧನ
New Year in Bangalore: ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ರೈಲಿನ ಮೂಲಕ ಬೆಂಗಳೂರಿಗೆ ಸಾಗಿಸುತ್ತಿದ್ದ 1 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ 8 ಆರೋಪಿಗಳ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ವರದಿ: ಎಚ್.ಮಾರುತಿ, ಬೆಂಗಳೂರು)
New Year in Bangalore: ಹೊಸ ವರ್ಷದ ಸಂಭ್ರಮಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಬೆಂಗಳೂರಿಗೆ ವಿವಿಧ ಭಾಗಗಳಿಂದ ನಿಷೇಧಿತ ಮಾದಕ ವಸ್ತುಗಳ ಕಳ್ಳಸಾಗಾಣೆಯಾಗುತ್ತಲೇ ಇದೆ. ಪೊಲೀಸರೂ ಸಹ ನಾಲ್ಕೂ ದಿಕ್ಕುಗಳು ಮತ್ತು ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಿದ್ದರೂ ದಂಧೆಕೋರರು ಕಳ್ಳ ಮಾರ್ಗಗಳನ್ನು ಹುಡುಕಿಕೊಳ್ಳುತ್ತಲೇ ಇರುತ್ತಾರೆ. ರಸ್ತೆ ಮಾರ್ಗದಲ್ಲಿ ವಾಹನಗಳ ಮೂಲಕ ಸಾಗಾಣೆ ಮಾಡಿದರೆ ಸಿಕ್ಕಿ ಬೀಳುವ ಭಯದಿಂದ ರೈಲಿನ ಮೂಲಕ ನಿಷೇಧಿತ ಗಾಂಜಾವನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಎಂಟು ಮಂದಿಯನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಸುಮಾರು 1 ಕೋಟಿ ರೂ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಸಾಗಾಣೆ ಕುರಿತು ರೈಲ್ವೇ ಪೊಲೀಸರೂ ಸಹ ಕಟ್ಟೆಚ್ಚರ ವಹಿಸಿದ್ದರು. ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ರೈಲಿನ ಮೂಲಕ ಬೆಂಗಳೂರಿಗೆ ಸಾಗಿಸುತ್ತಿದ್ದ 1 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ
ಪ್ರಶಾಂತಿ ಮತ್ತು ಹಟಿಯಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಗಮಿಸುತ್ತಿದ್ದ ಎಂಟು ಆರೋಪಿಗಳ ಬಳಿ ಇದ್ದ ಟ್ರ್ಯಾಲಿ ಬ್ಯಾಗ್‌ಗಳಲ್ಲಿ ಗಾಂಜಾ ಪತ್ತೆಯಾಗಿದೆ. ಪೊಲೀಸರು ಮತ್ತು ಪೊಲೀಸ್ ಶ್ವಾನ ದಳಕ್ಕೂ ವಾಸನೆ ಬಾರದ ರೀತಿಯಲ್ಲಿ ಪ್ಯಾಕಿಂಗ್ ಮಾಡಲಾಗಿತ್ತು. ಆದರೂ, ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿ ಡ್ರಗ್ ಪೆಡ್ಲರ್‌ಗಳ ಮೂಲಕ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಐಟಿಬಿಟಿ ಕಂಪನಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳು, ಪಿಜಿಗಳಲ್ಲಿ ವಾಸವಾಗಿರುವವರು ಮತ್ತು ಹೊರ ರಾಜ್ಯದವರೇ ಇವರ ಪ್ರಮುಖ ಗ್ರಾಹಕರು. ಕಡಿಮೆ ಬೆಲೆಗೆ ತಂದು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳೆಲ್ಲರೂ ಒಡಿಶಾ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ರಸ್ತೆ ಮೂಲಕ ವಾಹನಗಳಲ್ಲಿ ಸರಬರಾಜು ಮಾಡಿದರೆ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ರೈಲಿನ ಮೂಲಕ ಸಾಗಾಣೆ ಮಾಡುತ್ತಿದ್ದರು.
ಹೈಡ್ರೋಪೋನಿಕ್ ಗಾಂಜಾ ಜಪ್ತಿ
ಕೆಲವು ದಿನಗಳ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ಅವರು ಸಾಗಾಣೆ ಮಾಡುತಿದ್ದ ನಿಷೇಧಿತ ಉನ್ನತ ಗುಣಮಟ್ಟದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 80 ಲಕ್ಷ ರೂ ಎಂದು ತಿಳಿದು ಬಂದಿದೆ. ಇಬ್ಬರು ಪ್ರಯಾಣಿಕರು ಪ್ರತ್ಯೇಕ ವಿಮಾನಗಳ ಮೂಲಕ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದಿದ್ದರು. ಇವರ ಪ್ರಯಾಣದ ಇತಿಹಾಸ ನೋಡಿದಾಗ ಕೇವಲ 20 ದಿನಗಳ ಅಂತರದಲ್ಲಿ ಎರಡನೇ ಬಾರಿ ಬ್ಯಾಂಕಾಕ್‌ಗೆ ತೆರಳಿದ್ದರು. ಇದರಿಂದ ಅನುಮಾನಗೊಂಡು ತಪಾಸಣೆ ನಡೆಸಿದಾಗ ಇವರ ಬಳಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ.
ಒಬ್ಬರು ಟ್ರಾಲಿ ಬ್ಯಾಗ್ ನಲ್ಲಿ ಮತ್ತು ಮತ್ತೊಬ್ಬರು ಚಿಪ್ಸ್ ಪಾಕೆಟ್ ಗಳಲ್ಲಿ ಗಾಂಜಾವನ್ನು ಅಡಗಿಸಿಟ್ಟಿದ್ದರು. ಇಬ್ಬರೂ ಪ್ರತ್ಯೇಕ ವಿಮಾನಗಳಲ್ಲಿ ಆಗಮಿಸಿದ್ದರೂ ಇವರು ಒಂದೇ ಡ್ರಗ್ ಮಾಫಿಯಾ ತಂಡಕ್ಕೆ ಸೇರಿರಬಹುದು ಎಂದು ಕಸ್ಟಮ್ಸ್ ಅಧಿಕಾರಿಗಳು ಶಂಕಿಸಿದ್ದಾರೆ. ಹೈಡ್ರೋಪೋನಿಕ್ ಗಾಂಜಾವನ್ನು ಪ್ರಯೋಗಾಲಯಗಳಲ್ಲಿ ಬೆಳೆಸಲಾಗುತ್ತದೆ. ಇದಕ್ಕೆ ಬೇಕಾದ ಪೌಷ್ಠಿಕಾಂಶಗಳನ್ನು ಸೇರ್ಪಡೆಮಾಡಿ ಅಭಿವೃದ್ಧಿ ಪಡಿಸಲಾಗುತ್ತದೆ. ಹೊಸ ವರ್ಷಾಚರಣೆ ಹಿನ್ನೆಯಲ್ಲಿ ಗಾಂಜಾವನ್ನು ಬೆಂಗಳೂರಿಗೆ ಕಳ್ಳಸಾಗಾಣೆ ಮಾಡುತ್ತಿದ್ದರು ಎನ್ನಲಾಗಿದೆ.
ರೌಡಿಶೀಟರ್‌ಗಳ ಮನೆಗಳ ಮೇಲೆ ಸಿಸಿಬಿ ದಾಳಿ
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಿಸಿಬಿ ಅಧಿಕಾರಿಗಳು ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಯಲಹಂಕ ಠಾಣಾ ವ್ಯಾಪ್ತಿಯ ವಿಲ್ಸನ್‌ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್, ರೌಡಿಶೀಟರ್ ಪುನೀತ್ ಸೇರಿದಂತೆ 20ಕ್ಕೂ ಹೆಚ್ಚು ರೌಡಿಗಳ ನಿವಾಸಗಳ ಮೇಲೆ ದಾಳಿ ಮಾಡಿದ್ದಾರೆ. ದಾಳಿ ಸಂದರ್ಭದಲ್ಲಿ ರೌಡಿಶೀಟರ್ ಪುನೀತ್ ಮನೆಯಲ್ಲಿ ಲಾಂಗ್ ಮತ್ತಿತರ ಮಾರಕಾಸ್ತ್ರಗಳು ಪತ್ತೆಯಾಗಿದೆ. ಈತನ ಮನೆಯಿಂದ ಹತ್ತಕ್ಕೂ ಅಧಿಕ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, ಸಿಸಿಬಿ ಪೊಲೀಸರು ರೌಡಿಶೀಟರ್ ಪುನೀತ್‌ನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.
(ವರದಿ: ಎಚ್.ಮಾರುತಿ, ಬೆಂಗಳೂರು)