ಕನ್ನಡ ಸುದ್ದಿ  /  Karnataka  /  Newly Opened Expressway Between Bengaluru And Mysuru Floods Due To Heavy Rain

Bengaluru-Mysuru Expressway: ಎಕ್ಸ್‌ಪ್ರೆಸ್‌ವೇನಲ್ಲಿ ಸುಲಭ ಸಂಚಾರ ನೋ ವೇ..ಮಳೆಗೆ ಜಲಾವೃತಗೊಂಡ ನೂತನ ಹೆದ್ದಾರಿ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇವಲ ಆರು ದಿನಗಳ ಹಿಂದೆ ಉದ್ಘಾಟಿಸಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಹೆದ್ದಾರಿ, ಭಾರೀ ಮಳೆಗೆ ಜಲಾವೃತಗೊಂಡಿದೆ. ರಾಮನಗರದ ಬಳಿಯ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಹೆದ್ದಾರಿಯ ಕೆಳಸೇತುವೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದೆ. ಸಂಚಾರ ದಟ್ಟಣೆಯ ಪರಿಣಾಮವಾಗಿ ಸರಣಿ ಲಘು ಅಪಘಾತಗಳೂ ಸಂಭವಿಸಿವೆ ಎನ್ನಲಾಗಿದೆ.

ಹೆದ್ದಾರಿ ಜಲಾವೃತ
ಹೆದ್ದಾರಿ ಜಲಾವೃತ (HT)

ರಾಮನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇವಲ ಆರು ದಿನಗಳ ಹಿಂದೆ ಉದ್ಘಾಟಿಸಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಹೆದ್ದಾರಿ, ಭಾರೀ ಮಳೆಗೆ ಜಲಾವೃತಗೊಂಡಿದೆ. ರಾಮನಗರದ ಬಳಿಯ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಹೆದ್ದಾರಿಯ ಕೆಳಸೇತುವೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದೆ.

ರಾಮನಗರ ತಾಲೂಕಿನ ಸಂಗಬಸವನದೊಡ್ಡಿಯ ಬಳಿ ಬರುವ ಹೆದ್ದಾರಿಯ ಕೆಳಸೇತುವೆ, ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದರಿಂದಾಗಿ ವಾಹನಗಳು ಸರತಿ ಸಾಲಿನಲ್ಲಿ ಚಲಿಸುತ್ತಿದ್ದು, ಟ್ರಾಫಿಕ್‌ ಜಾಮ್‌ ಹಾಗೂ ಸರಣಿ ಅಪಘಾತಗಳು ಸಂಭವಿಸಿವೆ.

ರಸ್ತೆ ಮೇಲೆ ನೀರು ಸಂಗ್ರಹವಾಗಿರುವುದರಿಂದ ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಇದರಿಂದ ಸಂಚಾರ ದಟ್ಟಣೆಯುಂಟಾಗಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ.ರಸ್ತೆ ಮೇಲೆ ಸುಮಾರು ಒಂದರಿಂದ ಎರಡು ಅಡಿಗಳಷ್ಟು ನೀರು ನಿಂತಿದ್ದು, ವಾಹನಗಳ ಎಂಜಿನ್‌ಗೆ ನೀರು ನುಗ್ಗುತ್ತಿದೆ. ಇದರಿಂದ ಅಲ್ಲಲ್ಲಿ ವಾಹನಗಳು ಕೆಟ್ಟು ನಿಂತಿವೆ. ವಾಹನ ಸವಾರರ ಪರದಾಟ ಹೇಳತೀರದಾಗಿದೆ.

ಮಳೆ ನೀರಿಗೆ ಕೆಟ್ಟುನಿಂತ ಕಾರಿಗೆ, ಟ್ರಕ್‌ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ, ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಹೆದ್ದಾರಿ ಪ್ರಾಧಿಕಾರಕ್ಕೆ ಕರೆ ಮಾಡಿದ್ದಾರೆ. ಆದರೆ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಕರೆಗೆ ಸ್ಪಂದಿಸಿಲ್ಲ ಎಂಬ ದೂರು ಕೇಳಿಬಂದಿದೆ.

ಹೆದ್ದಾರಿ ಉದ್ಘಾಟನೆಯಾಗಿ ಒಂದು ವಾರವೂ ಕಳೆದಿಲ್ಲ. ಆಗಲೇ ಮಳೆಗೆ ರಸ್ತೆ ಜಲಾವೃತಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದುಬಾರಿ ಟೋಲ್‌ ಸಂಗ್ರಹ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ವಾಹನ ಸವಾರರ ಸಮಸ್ಯೆ ಕೇಳಲು ಸ್ಥಳಕ್ಕೆ ಬರದಿರುವುದೂ ಹಲವರನ್ನು ಆಕ್ರೋಶಗೊಳಿಸಿದೆ.

ಮಳೆಯಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿತ್ತು. ಆದರೆ ಉದ್ಘಾಟನಗೊಂಡ ಆರು ದಿನಗಳಲ್ಲೇ ವಾನ ಸವಾರರು ಹೇಳತೀರದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೆದ್ದಾರಿ ಪ್ರಾಧಿಕಾರದವರು ಯಾವ ಪುರುಷಾರ್ಥಕ್ಕೆ ಇಷ್ಟೊಂದು ದುಬಾರಿ ಟೋಲ್‌ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ವಾಹನ ಸವಾರರು ಕಿಡಿಕಾರಿದ್ದಾರೆ.

ಪ್ರಧಾನಮಂತ್ರಿಯವರು ಹೆದ್ದಾರಿ ಉದ್ಘಾಟನೆಗೂ ಮೊದಲು, ಇದರ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿದ್ದರೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಯಾವುದೇ ಮೂಲಭೂತ ವ್ಯವಸ್ಥೆ ಕಲ್ಪಿಸದೇ ಆತುರದಲ್ಲಿ ಹೆದ್ದಾರಿ ಉದ್ಘಾಟನೆ ಮಾಡಿದ್ದಾದರೂ ಏಕೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ಕೇವಲ ದುಬಾರಿ ಟೋಲ್‌ ಸಂಗ್ರಹಿಸುವುದರಲ್ಲೇ ನಿರತವಾಗಿದೆಯೇ ಹೊರತು, ಉತ್ತಮ ಕಾಮಗಾರಿ, ಸರಿಯಾದ ಸೌಕರ್ಯ ಒದಗಿಸುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೆಂಗಳೂರು-ಮೈಸೂರು ಅಭಿವೃದ್ಧಿಯ ಕೊಂಡಿ ಎಂದು ಹೇಳಲಾಗುತ್ತಿರುವ ಈ ಹೆದ್ದಾರಿಯಲ್ಲಿ, ಬೆಂಗಳೂರಿನಿಂದ ಮೈಸೂರಿಗೆ ತಲುಪುವುದೇ ಕಷ್ಟವಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಇನ್ನು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ದುಬಾರಿ ಟೋಲ್‌ ಸಂಗ್ರಹಣೆ ವಿರುದ್ಧ, ಕಳೆದೊಂದು ವಾರದಿಂದ ನಿರಂತರವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಟೋಲ್‌ ಫ್ರಿ ಸರ್ವೀಸ್‌ ರಸ್ತೆ ಸೌಲಭ್ಯ ಒದಗಿಸದೇ, ಟೋಲ್‌ ಸಂಗ್ರಹಕ್ಕೆ ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಅಷ್ಟೇ ಅಲ್ಲದೇ ಹೆದ್ದಾರಿಯಲ್ಲಿ ವಿಶ್ರಾಂತಿ ಸ್ಥಳ, ಶೌಚಾಲಯ ವ್ಯವಸ್ಥೆ ಇಲ್ಲ ಎಂಬ ಆರೋಪ ಕೂಡ ಕೇಳಿಬಂದಿದ್ದು, ಕಾಮಗಾರಿ ಪೂರ್ಣಗೊಳಿಸದೆಯೇ ಹೆದ್ದಾರಿ ಉದ್ಘಾಟನೆ ಮಾಡಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಉದ್ಘಾಟನೆಗೊಂಡ ಕೇವಲ ಆರು ದಿನಗಳಲ್ಲಿ ಮಳೆಯ ಕಾರಣಕ್ಕೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಜಲಾವೃಗೊಂಡಿದ್ದು, ಸಂಚಾರ ದಟ್ಟಣೆ ಹಾಗೂ ಸರಣಿ ಅಪಘಾತಗಳು ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ. ಈಗಲಾದರೂ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ ಸವಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ.

IPL_Entry_Point

ವಿಭಾಗ