ಸರ್ಕಾರಿ ಸೌಲಭ್ಯ ನಿರಾಕರಿಸಿದ್ದಕ್ಕೆ ವೃದ್ಧ ಆತ್ಮಹತ್ಯೆ; ಕೇಂದ್ರ ಹಾಗೂ ಕರ್ನಾಟಕ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಹಾಗೂ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿದೆ.
ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್‌ಸಿ) ನೋಟಿಸ್ ಜಾರಿಗೊಳಿಸಿದೆ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯೊಂದು ಸರ್ಕಾರದ ಯೋಜನೆಯ ಪ್ರಯೋಜನವನ್ನು ನಿರಾಕರಿಸಿದ್ದಕ್ಕೆ, 72 ವರ್ಷದ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ವರದಿಯ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಮಾಧ್ಯಮ ವರದಿ ನಿಜವಾಗಿದ್ದರೆ, ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಮಾನವ ಹಕ್ಕುಗಳ ಆಯೋಗ ಹೇಳಿದೆ.
ಪ್ರಕರಣ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಹಾಗೂ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿದೆ. ನಾಲ್ಕು ವಾರಗಳೊಳಗೆ ಈ ಸಂಬಂಧ ವಿವರವಾದ ವರದಿಯನ್ನು ನೀಡುವಂತೆ ಹೇಳಿದೆ.
ಭಾರತದಲ್ಲಿ ಕರ್ನಾಟಕ ಮತ್ತು ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB PM-JAY) ಪ್ರಸ್ತುತ ಸ್ಥಿತಿಗತಿಯನ್ನು ಕೂಡಾ ವರದಿಯಲ್ಲಿ ಸೇರಿಸುವ ನಿರೀಕ್ಷೆಯಿದೆ. ಹಿರಿಯ ನಾಗರಿಕರಿಗಾಗಿ ಜಾರಿಯಲ್ಲಿರುವ ಯೋಜನೆಯು ಎಷ್ಟು ಪರಿಣಾಮಕಾರಿಯಾಗಿ ಚಾಲ್ತಿಯಲ್ಲಿವೆ ಎಂಬುದನ್ನು ವರದಿ ಕಂಡುಕೊಳ್ಳುವ ಸಾಧ್ಯತೆ ಇದೆ.
ಏನಿದು ಪ್ರಕರಣ
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ 5 ಲಕ್ಷ ರೂ.ಗಳ ವಿಮೆಯನ್ನು ನೀಡಲು ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ನಿರಾಕರಿಸಿದೆ ಎಂಬ ಆರೋಪವಿದೆ. ಪರಿಣಾಮ 72 ವರ್ಷದ ವ್ಯಕ್ತಿಯೊಬ್ಬರು 2024ರ ಡಿಸೆಂಬರ್ 25ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಎನ್ಎಚ್ಆರ್‌ಸಿ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ.
ಆದರೆ, ಈ ಆರೋಪವನ್ನು ಆಸ್ಪತ್ರೆ ತಳ್ಳಿ ಹಾಕಿದೆ. ರಾಜ್ಯ ಸರ್ಕಾರದಿಂದ ನಮಗೆ ಆದೇಶಗಳು ಇನ್ನೂ ಬಂದಿಲ್ಲ ಎಂದು ಹೇಳಿದೆ.
ಏನಿದು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ?
ಎಬಿ ಪಿಎಂ-ಜೆಎವೈ ಯೋಜನೆಯನ್ನು ಹಿರಿಯ ನಾಗರಿಕರಿಗಾಗಿ ಜಾರಿಗೆ ತರಲಾಗಿದೆ. ಆಸ್ಪತ್ರೆಯ ಬಿಲ್‌ಗಳನ್ನು ಪಾವತಿಸಲು ಸಾಧ್ಯವಾಗದ ಮತ್ತು ವಿಶೇಷ ಚಿಕಿತ್ಸೆ ಮತ್ತು ಔಷಧಿಗಳ ವೆಚ್ಚವನ್ನು ಭರಿಸಲು ಸಾಧ್ಯವಾಗದವರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ.
“ಹಿರಿಯ ನಾಗರಿಕರು ತಮ್ಮ ಕಲ್ಯಾಣಕ್ಕಾಗಿ ಉದ್ದೇಶಿಸಲಾದ ಯೋಜನೆಯ ಪ್ರಯೋಜನವನ್ನು ಪಡೆಯದಿದ್ದರೆ, ಅದು ಅವರ ಆರೋಗ್ಯದ ಹಕ್ಕಿನ ಉಲ್ಲಂಘನೆಯಾಗಬಹುದು,” ಎಂದು ಮಾನವ ಹಕ್ಕುಗಳ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.