ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ರಾತ್ರಿ ವೇಳೆ ಹೊಸ ಬಸ್‌ ಸೇವೆ ಇಲ್ಲ, ಖಾಸಗಿ ವಾಹನಕ್ಕೂ ಅವಕಾಶವಿಲ್ಲ, ಈಗಿರುವ ಸೌಲಭ್ಯ ಮಾತ್ರ ಮುಂದುವರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ರಾತ್ರಿ ವೇಳೆ ಹೊಸ ಬಸ್‌ ಸೇವೆ ಇಲ್ಲ, ಖಾಸಗಿ ವಾಹನಕ್ಕೂ ಅವಕಾಶವಿಲ್ಲ, ಈಗಿರುವ ಸೌಲಭ್ಯ ಮಾತ್ರ ಮುಂದುವರಿಕೆ

ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ರಾತ್ರಿ ವೇಳೆ ಹೊಸ ಬಸ್‌ ಸೇವೆ ಇಲ್ಲ, ಖಾಸಗಿ ವಾಹನಕ್ಕೂ ಅವಕಾಶವಿಲ್ಲ, ಈಗಿರುವ ಸೌಲಭ್ಯ ಮಾತ್ರ ಮುಂದುವರಿಕೆ

ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ಸಂಚರಿಸುವ ವಾಹನ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಹೆಚ್ಚುವರಿ ಬಸ್‌ ಸೇವೆಯೂ ಇರುವುದಿಲ್ಲ ಎನ್ನುವುದು ಸಚಿವ ಈಶ್ವರ ಖಂಡ್ರೆ ನೀಡಿರುವ ವಿವರಣೆ.

ಬಂಡೀಪುರ ಅರಣ್ಯ ಮಾರ್ಗವಾಗಿ ರಾತ್ರಿ ವೇಳೆ ಕೇರಳ ಕಡೆಗೆ ಹೋಗುವ ಇಲ್ಲವೇ ಬರುವ ವಾಹನಗಳ ಸಂಚಾರದಲ್ಲಿ ಯಾವುದೇ ಬದಲಾವಣೆಯಿಲ್ಲ.
ಬಂಡೀಪುರ ಅರಣ್ಯ ಮಾರ್ಗವಾಗಿ ರಾತ್ರಿ ವೇಳೆ ಕೇರಳ ಕಡೆಗೆ ಹೋಗುವ ಇಲ್ಲವೇ ಬರುವ ವಾಹನಗಳ ಸಂಚಾರದಲ್ಲಿ ಯಾವುದೇ ಬದಲಾವಣೆಯಿಲ್ಲ.

ಬೆಂಗಳೂರು: ಬಂಡೀಪುರ ಹುಲಿ ಧಾಮದ ಮಾರ್ಗವಾಗಿ ರಾತ್ರಿ ವೇಳೆ ಕೇರಳಕ್ಕೆ ಹೋಗುವ ಬಸ್‌ ಸಂಚಾರದ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಎರಡು ತಿಂಗಳ ಹಿಂದೆ ನಡೆದ ಕೇರಳ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಪ್ರಿಯಾಂಕಗಾಂಧಿ ಅವರು ನೀಡಿದ್ದ ಭರವಸೆಯಂತೆ ಬಸ್‌ ಸಂಚಾರ ಹಾಗೂ ವಾಹನಗಳ ಸಂಚಾರದಲ್ಲಿ ಯಾವುದಾದರೂ ಬದಲಾವಣೆ ಆಗಬಹುದ ಎನ್ನುವ ಕುತೂಹಲವಿತ್ತು. ಇದಕ್ಕೆಲ್ಲಾ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ತೆರೆ ಎಳೆದಿದ್ದಾರೆ. ಬಂಡೀಪುರ ಮಾರ್ಗವಾಗಿ ತಮಿಳುನಾಡು ಹಾಗೂ ಕೇರಳಕ್ಕೆ ಸಂಚರಿಸುವ ಎಲ್ಲಾ ಮಾರ್ಗಗಳು ಹಿಂದಿನಂತೆಐೇ ರಾತ್ರಿ ವೇಳೆ ಬಂದ್‌ ಇರಲಿದ್ದು, ಮೊದಲು ಇದ್ದಂತೆಯೇ ರಾತ್ರಿ ವೇಳೆ ಸಾರಿಗೆ ಸೇವೆ ಮಿತಿಯಲ್ಲಿ ಇರಲಿದೆ. ಖಾಸಗಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ.

ಸಚಿವರು ನೀಡಿದ ಸ್ಪಷ್ಟನೆ

ಬಂಡೀಪುರ ಅರಣ್ಯ ಮಾರ್ಗವಾಗಿ ವಯನಾಡಿಗೆ ಹೋಗಲು ಹೊಸದಾಗಿ ಯಾವುದೇ ಬಸ್ ಸೌಲಭ್ಯ ಕಲ್ಪಿಸಲಾಗಿಲ್ಲ. ರಾತ್ರಿ ಸಂಚಾರ ನಿರ್ಬಂಧಿಸಿದ ತರುವಾಯ ಹಲವು ವರ್ಷಗಳಿಂದ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಜನರ ಅನುಕೂಲಕ್ಕಾಗಿ ರಾತ್ರಿ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಸಂಖ್ಯೆಯ ಬಸ್ ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದು ಹಿಂದಿನಿಂದಲೂ ಇದ್ದು. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎನ್ನುವುದು ಸಚಿವರು ನೀಡಿದ ಸ್ಪಷ್ಟನೆ.

ಕರ್ನಾಟಕ ಮತ್ತು ಕೇರಳ ನಡುವೆ ಬಂಡೀಪುರ ಮತ್ತು ವಯನಾಡು ನಡುವೆ ರಾತ್ರಿ ಸಂಚಾರದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವರು, ಪ್ರಸ್ತುತ ರಾತ್ರಿ 9ರವರೆಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರ ಹೊರತಾಗಿಯೂ ಎರಡೂ ಕಡೆಯಿಂದ 2 ಬಸ್ ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವೈದ್ಯಕೀಯ ತುರ್ತು ಸಂದರ್ಭದಲ್ಲಿ ವಾಹನಗಳನ್ನು ಪರಿಶೀಲಿಸಿ ಬಿಡಲಾಗುತ್ತಿದೆ. ಹೀಗಾಗಿ ರಾತ್ರಿ ಸಂಚಾರಕ್ಕೆ ಯಾವುದೇ ತೊಡಕಿಲ್ಲ ಎಂದು ಹೇಳಿದರು.

ಆನೆಗೆ ಅಡ್ಡಿಯಾದ ವಿದ್ಯುತ್‌ ತಂತಿಗಳು

ಅರಣ್ಯದೊಳಗೆ ಅಳವಡಿಸಲಾಗಿರುವ ವಿದ್ಯುತ್ ತಂತಿಗಳು ಕೆಲವೆಡೆ ಜೋತು ಬಿದ್ದಿದ್ದು, ಆನೆಗಳು ಸಾವಿಗೀಡಾಗುತ್ತಿವೆ. ವಿದ್ಯುತ್ ತಂತಿ ತೂಗಾಡದಂತೆ ಕ್ರಮ ವಹಿಸಲು ಮತ್ತು ಅಂತರ್ಗತ ಕೇಬಲ್ ಅಳವಡಿಸಿಲು ವಿದ್ಯುತ್ ಕಂಪನಿಗಳಿಗೆ ತಿಳಿಸಿದ್ದೇವೆ. ಆನೆಗಳಿಂದ ಬೆಳೆಹಾನಿ ಮತ್ತು ಜೀವಹಾನಿ ಆಗುತ್ತಿದ್ದು, ಇದನ್ನು ತಪ್ಪಿಸಲು ಭದ್ರಾ ಅಭಯಾರಣ್ಯದಲ್ಲಿ ಆನೆಗಳ ವಿಹಾರಧಾಮ (ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್) ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ 100 ಕೋಟಿ ರೂ. ಅಗತ್ಯವಿದ್ದು, ಬಜೆಟ್ ನಲ್ಲಿ ಅನುದಾನ ನೀಡುವಂತೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂಬುದು ಈಶ್ವರ ಖಂಡ್ರೆ ಅವರು ನೀಡಿದ ವಿವರಣೆ.

ಕಾಂಪಾ ನಿಧಿಗೆ ಬೇಡಿಕೆ

ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಕಾಂಪಾ) ರಾಜ್ಯಗಳಿಂದ ಸಂಗ್ರಹವಾದ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಕೇಂದ್ರ ಮೀನಾಮೇಷ ಎಣಿಸುತ್ತಿದ್ದು, ದಕ್ಷಿಣ ರಾಜ್ಯಗಳ ಅರಣ್ಯ ಸಚಿವರ ನಿಯೋಗವನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗುವುದಾಗಿಯೂ ಖಂಡ್ರೆ ತಿಳಿಸಿದರು.

ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿದ್ದು, ಅವು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗುತ್ತಿವೆ, ಮಾನವ -ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಸಲು, ಕಾರಿಡಾರ್ ನಿರ್ಮಿಸಲು ಕ್ಯಾಂಪಾದಲ್ಲಿರುವ ರಾಜ್ಯದ 1400 ಕೋಟಿ ರೂ. ಹಣವನ್ನೇ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್‌ ಅವರ ಬಳಿಗೆ ದಕ್ಷಿಣ ರಾಜ್ಯಗಳ ಅರಣ್ಯ ಸಚಿವರ ನಿಯೋಗ ತೆಗೆದುಕೊಂಡು ಹೋಗಲು ಇಂದಿನ ಸಭೆಯಲ್ಲಿ ಚರ್ಚಿಸಿದ್ದು, ಶೀಘ್ರವೇ ಎಲ್ಲ ಸಚಿವರಿಗೂ ಪತ್ರ ಬರೆಯಲಾಗುವುದು.ಆಗಸ್ಟ್ 12ರಂದು ಬೆಂಗಳೂರಿನಲ್ಲಿ ನಡೆದ ಮಾನವ-ಆನೆ ಸಂಘರ್ಷ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಜಾರ್ಖಂಡ್ ರಾಜ್ಯದ ಸಚಿವರು ಕೂಡ ಕೇಂದ್ರಕ್ಕೆ ನಿಯೋಗದಲ್ಲಿ ಆಗಮಿಸಲು ಸಮ್ಮಿತಿಸಿದ್ದರು ಎನ್ನುವುದು ಸಚಿವರ ಅಭಿಮತ.

Whats_app_banner