Brahmin cm issue: ಪೇಶ್ವೆಗಳ ವಂಶಾವಳಿ ವ್ಯಕ್ತಿಯನ್ನ ಬಿಜೆಪಿ ಸಿಎಂ ಮಾಡುವ ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ, ಸ್ಪಷ್ಟತೆ ಇತ್ತು: ಹೆಚ್ಡಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Brahmin Cm Issue: ಪೇಶ್ವೆಗಳ ವಂಶಾವಳಿ ವ್ಯಕ್ತಿಯನ್ನ ಬಿಜೆಪಿ ಸಿಎಂ ಮಾಡುವ ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ, ಸ್ಪಷ್ಟತೆ ಇತ್ತು: ಹೆಚ್ಡಿಕೆ

Brahmin cm issue: ಪೇಶ್ವೆಗಳ ವಂಶಾವಳಿ ವ್ಯಕ್ತಿಯನ್ನ ಬಿಜೆಪಿ ಸಿಎಂ ಮಾಡುವ ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ, ಸ್ಪಷ್ಟತೆ ಇತ್ತು: ಹೆಚ್ಡಿಕೆ

ಬಿಜೆಪಿಯಲ್ಲಿ ಬ್ರಾಹ್ಮಣ ಸಿಎಂ ಮಾಡಲು ಆರ್ ಎಸ್ ಎಸ್ ನಿರ್ಧಾರ ಮಾಡಿದೆ ಎಂಬ ತಮ್ಮ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ, ಸ್ಪಷ್ಟತೆ ಇತ್ತು ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಕಿರುವ ಬ್ರಾಹ್ಮಣ ಸಿಎಂ ಬಾಂಬ್ ನಿಂದ ಕೇಸರಿ ಪಕ್ಷ ತಬ್ಬಿಬ್ಬಾಗಿದ್ದು, ಹೆಚ್ಡಿಕೆ ಅವರ ಬಾಂಬ್ ಅನ್ನು ಹುಸಿಗೊಳಿಸುವ ಪ್ರಯತ್ನ ಮಾಡುತ್ತಿದೆ.

ಇದರ ನಡುವೆ ಹೆಚ್ಡಿಕೆ ಇವತ್ತು ತಮ್ಮ ಹೇಳಿಕೆ ಬದ್ಧ ಎಂದಿದ್ದಾರೆ. ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ, ಸ್ಪಷ್ಟತೆ ಇತ್ತು ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಸರಣಿ ಟ್ವೀಟ್ ಮಾಡಿದ್ದಾರೆ.

ಪೇಶ್ವೆಗಳ ವಂಶಾವಳಿಗೆ ಸಂಬಂಧಪಟ್ಟ ವ್ಯಕ್ತಿಯನ್ನು ಬಿಜೆಪಿ ಮುಂದಿನ ಮುಖ್ಯಮಂತ್ರಿ ಮಾಡಲು ಹುನ್ನಾರ ನಡೆಸಿದೆ ಎಂಬುದು ನನ್ನ ಹೇಳಿಕೆ ಆಗಿತ್ತು. ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ, ಸ್ಪಷ್ಟತೆ ಇತ್ತು ಎಂದು ಹೇಳಿದ್ದಾರೆ.

ನನಗೆ ಸೋಲುವ ಭಯವಂತೆ, ಹತಾಶೆಯಂತೆ ಎಂದು ಬೊಗಳೆ ಬಿಟ್ಟುಕೊಂಡು ಕೇಕೆ ಹಾಕಿದರೆ ಜನ ನಂಬುವುದಿಲ್ಲ, ಅವರಿಗೂ ಗರ್ಭಗುಡಿಯಲ್ಲಿ ಏನು ನಡೆಯುತ್ತಿದೆ ಎಂಬುದು ಚೆನ್ನಾಗಿ ಗೊತ್ತು. ಸತ್ಯ ಸಾಯುವುದೂ ಇಲ್ಲ. ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಜಗಜ್ಯೋತಿ ಬಸವೇಶ್ವರರು, ಗೌತಮ ಬುದ್ಧ, ಮಹಾತ್ಮ ಗಾಂಧೀಜಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದನ್ನೇ ನಾನು ಹೇಳಿದ್ದೇನೆ. ಇನ್ನು, ಬ್ರಾಹ್ಮಣ ಸಮೂಹವನ್ನು ನಿಂದಿಸುವ ಪ್ರಶ್ನೆ ಎಲ್ಲಿ? ನಾನು ನಿಂದಿಸಿಲ್ಲ, ನಿಂದಿಸುವುದೂ ಇಲ್ಲ. ಮತ್ತೆ ಮತ್ತೆ ಸ್ಪಷ್ಟನೆ ಅನಗತ್ಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವಿಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯಲ್ಲಿ ಬ್ರಾಹ್ಮಣ ಸಿಎಂ ಎಂಬ ಕುಮಾರಸ್ವಾಮಿ ಅವರ ಈ ಹೇಳಿಕೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ಬಿಜೆಪಿಯಲ್ಲಿ ಇಂತಹ ಹೇಳಿಕೆಗಳಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಮತದಾರರಲ್ಲಿ ಗೊಂದಲವಿಲ್ಲ, ಬಿಜೆಪಿಯಲ್ಲಿ ಗೊಂದಲ ಏಕೆ ಇರುತ್ತದೆ ಎಂದಿದ್ದಾರೆ.

ಕರ್ನಾಟಕ ರಚನೆಯಾಗಿ 75 ವರ್ಷಗಳಾಗಿವೆ. ಜನ ಜಾತಿ ಆಧಾರದ ಮೇಲೆ ಮಾಡಿದ ಹೇಳಿಕೆಗಳಿಗೆ ಕಿಮ್ಮತ್ತು ನೀಡುವುದಿಲ್ಲ. ಆದ್ದರಿಂದ ಜನರಿಗೆ ಹಿಡಿಸದೇ ಇರುವುದನ್ನು ಮಾತನಾಡಬಾರದು. ಇಂತಹ ಮಾತುಗಳಿಗೆ ಪ್ರತಿಕ್ರಿಯೆ ನೀಡಬಾರದು ಎನ್ನುವುದು ನನ್ನ ಭಾವನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Whats_app_banner