ಕನ್ನಡ ಸುದ್ದಿ  /  Karnataka  /  No Date Has Been Set For Senior Bjp Leader Amit Shah Visit To Chitradurga Says Cm Bommai

CM Bommai on Amit Shah: ಚಿತ್ರದುರ್ಗಕ್ಕೆ ಅಮಿತ್ ಶಾ ಭೇಟಿಗೆ ದಿನಾಂಕ ನಿಗದಿಯಾಗಿಲ್ಲ: ಸಿಎಂ ಬೊಮ್ಮಾಯಿ

ಅಮಿತ್ ಶಾ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮ ಕ್ಕೆ ಆಗಮಿಸುವ ಬಗ್ಗೆ ಖಾತ್ರಿಪಡಿಸಿಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ

ಹೊಳಲ್ಕೆರೆ (ಚಿತ್ರದುರ್ಗ): ಚಿತ್ರದುರ್ಗದಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ಬರುತ್ತಾರೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಚಿತ್ರದುರ್ಗಕ್ಕೆ ಅಮಿತ್ ಶಾ ಭೇಟಿಗೆ ದಿನಾಂಕ ನಿಗದಿಯಾಗಿಲ್ಲ

ಹೊಳಲ್ಕೆರೆಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಅಮಿತ್ ಶಾ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಬಗ್ಗೆ ಖಾತ್ರಿಪಡಿಸಿಲ್ಲ. ಬಹಳಷ್ಟು ಪ್ರಸ್ತಾವನೆಗಳು ಹೋಗಿದ್ದು, ದಿನಾಂಕ ನೋಡಿ ನಾಳೆ ನಾಡಿದ್ದರಲ್ಲಿ ಖಾತ್ರಿ ಪಡಿಸಬಹುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಅಡಿಕೆಗೆ ಸಹಾಯ ಧನ ವಿಸ್ತರಣೆಗೆ ಕ್ರಮ

ಅಡಿಕೆ ಬೆಳೆಗೆ ಸಹಾಯ ಧನ ವಿಸ್ತರಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಹನಿ ನೀರಾವರಿ ಜೊತೆಗೆ ಸೇರಿಸಬೇಕೆಂದು ರೈತರ ಒತ್ತಾಯ ಇದೆ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಸಾಕಷ್ಟು ಯೋಜನೆ ಈಗಾಗಲೇ ಹನಿ ನೀರಾವರಿಯಡಿ ಇದೆ. ಎಸ್.ಸಿ.ಎಸ್.ಟಿ ಯವರಿಗೆ ಶೇ 90 ರಷ್ಟು ಸಹಾಯಧನ ನೀಡಲಾಗುತ್ತಿದೆ . ತೋಟಗಾರಿಕೆಯಲ್ಲಿ ಅಡಿಕೆ ಸೇರಿದೆ. ಸಾಮಾನ್ಯ ವರ್ಗದವರಿಗೆ ಶೇ 50 ರಿಂದ 75 ರಷ್ಟು ಹೆಚ್ಚಿಸಿದೆ. ವ್ಯಾಪ್ತಿ ವಿಸ್ತರಣೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ನೀರಗಂಟಿಗಳ ಸಮಸ್ಯೆ ಇತ್ಯರ್ಥಗೊಳಿಸಲಾಗುವುದು

ನಗರ ಸ್ಥಳೀಯ ಸಂಸ್ಥೆಗಳ ನೀರಗಂಟಿಗಳು ಹಾಗೂ ಸ್ವಚ್ಚತಾ ಕಾರ್ಯ ಮಾಡುವವರು ಸರ್ಕಾರ ವೇತನಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾವಣೆ ಸಂದರ್ಭದಲ್ಲಿ ಬಹಳ ಜನ ಪ್ರತಿಭಟನೆ ಮಾಡುತ್ತಾರೆ. ನೀರಗಂಟಿಗಳ ಸಮಸ್ಯೆ ತಿಳಿದಿದ್ದು, ಅವರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದಾರೆ.

ತಿಗಳ ಸಮಾಜವನ್ನು ಮೇಲೆತ್ತಬೇಕೆಂದು ನಿಗಮ ಸ್ಥಾಪನೆಯಾಗಿದೆ

ತಿಗಳ ಸಮುದಾಯ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದ ಹಿನ್ನೆಲೆಯಲ್ಲಿ ಇಂದು ತುಮಕೂರಿನ ಜ್ಞಾನಂದಾಪುರಿ ಮಹಾಸ್ವಾಮಿ ನೇತೃತ್ವದಲ್ಲಿ ತಿಗಳ ಸಮುದಾಯದವರು ಸಿಎಂ ಅವರನ್ನು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ತಿಗಳ ಸಮಾಜವನ್ನು ಮೇಲೆತ್ತಬೇಕೆಂದೇ ನಿಗಮ ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ತಿಗಳ ಸಮಾಜದ ಬಾಂಧವರು ತಮ್ಮ ವೃತ್ತಿಯನ್ನು ಸಮರ್ಥವಾಗಿ ಮಾಡಿದ್ದಾರೆ. ಯುವ ಜನಾಂಗಕ್ಕೆ ವಿದ್ಯೆ ಕೊಟ್ಟು ಮುಂದೆ ಬರಬೇಕೆಂದು ಎಂದು ಇಡೀ ಜೀವನವನ್ನೇ ಸವೆಸಿದ್ದಾರೆ.

ತಿಗಳ ಸಮಾಜ ಶ್ರಮಿಕ ಸಮಾಜವಾಗಿದ್ದು, ಮಾಡಿಯೂ ಮಾಡಿದ್ದೇವೆ ಎಂದು ಹೇಳಿಕೊಳ್ಳದ ಸಮಾಜ. ಸಂಭಾವಿತ ಸಜ್ಜನ ಸಮಾಜ ಇದು. ಈ ಸಮಾಜವನ್ನು ಗುರುತಿಸಬೇಕೆಂದು ಮನದಾಳದ ಇಚ್ಛೆ ಇತ್ತು. ಇದಕ್ಕೆ ನೆ.ಲ.ನರೇಂದ್ರ ಬಾಬು ಅವರು ಬಹಳಷ್ಟು ಪುಷ್ಟಿ, ಶಕ್ತಿಯನ್ನು ನೀಡಿದ್ದಾರೆ. ಹಾಗಾಗಿ ನಿಗಮ ಸ್ಥಾಪನೆ ಮಾಡಲಾಯಿತು. ಇದಕ್ಕಾಗಿ ಆಯವ್ಯಯದಲ್ಲಿ ವಿಶೇಷವಾದ ಅನುದಾನವನ್ನು ಮೀಸಲಿಡಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಎಂಬ ಮಂತ್ರದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸದ್ಬಳಕೆಯಾಗಬೇಕು

ಈ ಅವಕಾಶವನ್ನು ಸದುಪಯೋಗ ಮಾಡಲು ಸಮಾಜದ ಯುವಕರಿಗೆ, ಮಹಿಳೆಯರಿಗೆ ಇದನ್ನು ಉಪಯೋಗ ಮಾಡಿಕೊಳ್ಳಲು ತಿಳಿಸಬೇಕು. ಈ ಬಗ್ಗೆ ಪ್ರಚಾರವೂ ಆಗಬೇಕು. ಆಗ ಎಲ್ಲರಿಗೂ ಕಾರ್ಯಕ್ರಮ ಮುಟ್ಟುತ್ತದೆ.

ಒದಗಿಸಲಾಗಿರುವ ಅನುದಾನವನ್ನು ಸದ್ಬಳಕೆ ಮಾಡಿ, ಶ್ರಮ ವಹಿಸಿ ಮುಂದೆ ಬರಲು ಸಮಾಜದ ಯುವಕರಿಗೆ ಮಾರ್ಗದರ್ಶನ ಮಾಡಬೇಕು. ನಮ್ಮ ಕೆಲಸಗಳು ಮಾತನಾಡಬೇಕು. ಮನದಾಳದಿಂದ, ಪ್ರೀತಿಯಿಂದ, ವಿಶ್ವಾಸದಿಂದ ಈ ಕೆಲಸ ಮಾಡಿರುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಹೊಳಲ್ಕೆರೆಯ ಎಂ.ಎಂ. ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಗೆ ನೀಡಿರುವ ಉಚಿತ ಬಸ್ ಸೇವೆಗೆ ಚಾಲನೆ ನೀಡಿದರು.

IPL_Entry_Point