ST Somashekhar on Nandini Amul: ಕೆಎಂಎಫ್-ಅಮೂಲ್ ವಿಲೀನ ಇಲ್ಲ: ಸಿಎಂ ಬಳಿಕ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟನೆ
ಎರಡು ದಿನ ಅಮಿತ್ ಶಾ ಅವರ ಜೊತೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಕೆಎಂಎಫ್ - ಅಮೂಲ್ ವಿಲೀನದ ಪ್ರಸ್ತಾಪವೇ ಇಲ್ಲ. ಕಾಂಗ್ರೆಸ್-ಜೆಡಿಎಸ್‍ನವರು ಚುನಾವಣೆ ಹತ್ತಿರ ಬರುವ ಕಾರಣ ಗಿಮಿಕ್ ಮಾಡಿ ಆರೋಪ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಬೆಂಗಳೂರು: ರಾಜ್ಯದ ಕೆಎಂಎಫ್ ಮತ್ತು ಗುಜರಾತ್‍ನ ಅಮೂಲ್ ವಿಲೀನದ ಪ್ರಶ್ನೆಯೇ ಇಲ್ಲ. ಕೆಎಂಎಫ್ ವಿಲೀನದ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾತನಾಡಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಬಲಿಷ್ಠ ಸಂಸ್ಥೆ. 15 ಮಿಲ್ಕ್ ಯೂನಿಯನ್, 9 ಲಕ್ಷ ಮಹಿಳೆಯರು ಸೇರಿ 26 ಲಕ್ಷ ಇದರಡಿ ಬರುತ್ತಾರೆ. ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ವಿವರಿಸಿದರು.
ಇಲ್ಲಿನ ಮಿಲ್ಕ್ ಯೂನಿಯನ್ ಮತ್ತು ಫೆಡರೇಶನ್ ಗುಜರಾತ್‍ನಷ್ಟೇ ಪ್ರಬಲವಾಗಿ ಬೆಳೆದಿದೆ. ವಿಲೀನ ಪ್ರಸ್ತಾಪ ಇಲ್ಲವೆಂದು ಮುಖ್ಯಮಂತ್ರಿಗಳೂ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಇದರ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಕರ್ನಾಟಕದ ಪ್ರತಿ ಗ್ರಾಮಗಳಲ್ಲೂ ಮಿಲ್ಕ್ ಡೈರಿ ಮಾಡಬೇಕು, ಪತ್ತಿನ ಸಹಕಾರ ಸಂಘಕ್ಕೆ ಹೊಸ ನಿಯಮಾವಳಿ ಮಾಡಬೇಕು. 3 ವರ್ಷಗಳೊಳಗೆ ಒಂದೇ ಸಾಫ್ಟ್ ವೇರ್ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಹೇಳಿದರು.
ಹೊಸ ಸಾಫ್ಟ್ ವೇರ್ ಅಳವಡಿಸಲು ಶೇ.60ರಷ್ಟು ಹಣವನ್ನು ಕೇಂದ್ರ ಸರ್ಕಾರ ಕೊಡಲಿದೆ. ಒಂದೇ ನಿಯಮಾವಳಿ, ಒಂದೇ ಸಾಫ್ಟ್ ವೇರ್ ಅಳವಡಿಕೆ ಆಗಲಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೇಷನ್ ಡಿಪೊ, ಪೆಟ್ರೋಲ್ ಬಂಕ್ ನಿರ್ವಹಣೆ ಇನ್ನಿತರ ಅವಕಾಶಗಳಿದ್ದರೆ ಅನುಮತಿ ಕೊಡಲು ಯೋಜಿಸಲಾಗಿದೆ. ಇಂಥ ಸಹಕಾರ ಸಂಘಗಳು ಮತ್ತು ಹಾಲಿನ ಸೊಸೈಟಿಗಳು ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಚಿಂತನೆ ಮಾಡಿ ಅದರ ಅನುಷ್ಠಾನ ಆಗುತ್ತಿದೆ ಎಂದು ತಿಳಿಸಿದರು.
ಈ ಕುರಿತಂತೆ ಸಚಿವಸಂಪುಟದಲ್ಲಿ ಚರ್ಚಿಸಿ ಮಾದರಿ ನಿಯಮಾವಳಿ ಜಾರಿಗೊಳಿಸುವ ಉದ್ದೇಶವಿದೆ ಎಂದು ವಿವರ ನೀಡಿದರು. ಗೆಜ್ಜಲಗೆರೆಯಲ್ಲಿ ಮಾತನಾಡುವಾಗ ಗುಜರಾತ್‍ನಷ್ಟೇ ಪ್ರಬಲವಾಗಿ ಕೆಎಂಎಫ್ ಬೆಳೆಯುತ್ತಿದೆ. ಎರಡೂ ಒಟ್ಟಾಗಿ ಹೋದರೆ ಅಭಿವೃದ್ಧಿ ಸಾಧ್ಯ ಎಂದು ಅಮಿತ್ ಶಾ ಅವರು ಹೇಳಿದ್ದರು. ವಿಲೀನದ ಚರ್ಚೆಯೂ ಆಗಿಲ್ಲ. ಅಂಥ ಮಾತನ್ನೂ ಅವರು ಆಡಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಸಚಿವ ಸೋಮಶೇಖರ್ ಉತ್ತರಿಸಿದ್ದಾರೆ.
ಎರಡು ದಿನವೂ ಅವರ ಜೊತೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅಂಥ ಪ್ರಸ್ತಾಪವೇ ಇಲ್ಲ. ಕಾಂಗ್ರೆಸ್-ಜೆಡಿಎಸ್‍ನವರು ಚುನಾವಣೆ ಹತ್ತಿರ ಬರುವ ಕಾರಣ ಗಿಮಿಕ್ ಮಾಡಿ ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿಎಂ ಬೊಮ್ಮಾಯಿ ಹೇಳಿದಿಷ್ಟು
ನಂದಿನಿಯನ್ನು ಅಮೂಲ್ ನೊಂದಿಗೆ ವಿಲೀನ ಮಾಡುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಯಾರೂ ಊಹೆ ಮಾಡಿ ಟೀಕೆ ಮಾಡಬಾರದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಮಾತನಾಡಿರುವುದು ಸ್ಪಷ್ಟವಾಗಿದೆ. ಒಬ್ಬರಿಗೊಬ್ಬರು ಸಹಕಾರದಿಂದ ನಂದಿನಿ ಮತ್ತು ಅಮೂಲ್ ತಾಂತ್ರಿಕ ವಾಗಿ, ಮಾರುಕಟ್ಟೆಯಲ್ಲಿ ಸಹಕಾರ ಮಾಡಬೇಕು. ಇವೆರಡೂ ದೊಡ್ಡ ಸಂಸ್ಥೆಗಳು. ಪೂರಕವಾಗಿ ಕೆಲಸ ಮಾಡಬೇಕು. ಅದರರ್ಥ ವಿಲೀನಗೊಳಿಸುವುದು ಎಂದಲ್ಲ. ನಂದಿನಿ ಅಸ್ತಿತ್ವ ನೂರಾರು ವರ್ಷ ಶಾಶ್ವತವಾಗಿ ಇರಲಿದೆ ಎಂದಿದ್ದಾರೆ.
ಕೆಲವು ವಲಯಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರೆ ಲಾಭವಿದೆ. ನಂದಿನಿ ಅಥವಾ ಅಮೂಲ್ ತಾಂತ್ರಿಕವಾಗಿ ಮುಂದಿದ್ದರೆ ವಿನಿಯಮ ಮಾಡಿಕೊಳ್ಳಬಹುದು. ಆಡಳಿತಾತ್ಮಕ ಕ್ರಮಗಳನ್ನು ವಿನಿಮಯ ಮಾಡಿಕೊಳ್ಳಿ ಎಂದು ಅವರು ಹೇಳಿರುವುದು. ಅದರ ತಪ್ಪು ಅರ್ಥ ಕಲ್ಪಿಸುವ ಅಥವಾ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ನಾನು ಮುಖ್ಯಮಂತ್ರಿಯಾಗಿ ಹೇಳುವುದು, ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದರು.