Kannada News  /  Karnataka  /  No Percentage For Politicians And Officials In Implementation Of Pancharatna Yojana Say Ex Cm Hd Kumaraswamy
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ರೈತರೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ರೈತರೊಂದಿಗೆ ವಿಡಿಯೋ ಸಂವಾದ ನಡೆಸಿದರು.

HDK on Commission: ಪಂಚರತ್ನ ಯೋಜನೆ ಜಾರಿಯಲ್ಲಿ ರಾಜಕಾರಣಿ, ಅಧಿಕಾರಿಗಳಿಗೆ ಪರ್ಸೆಂಟೇಜ್ ಇರಲ್ಲ; ಬಿಜೆಪಿ ಸರ್ಕಾರಕ್ಕೆ ಮಾಜಿ ಸಿಎಂ ಟಾಂಗ್

17 January 2023, 18:58 ISTHT Kannada Desk
17 January 2023, 18:58 IST

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಜಾರಿಯಲ್ಲಿ ರಾಜಕಾರಣಿ, ಅಧಿಕಾರಿಗಳಿಗೆ ಪರ್ಸೆಂಟೇಜ್ ಇರುವುದಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ. 

ಬಿಡದಿ/ರಾಮನಗರ: ಕಮಿಷನ್ ಹಾಗೂ ಪರ್ಸೆಂಟೇಜ್ ರಾಜ್ಯದಲ್ಲಿ ಸದ್ಯ ಈ ಎರಡು ವಿಷಯಗಳು ಭಾರಿ ಸುದ್ದಿಯಲ್ಲಿವೆ. ಇದಕ್ಕೆ ಕಾರಣ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಕೆಲ ಸಚಿವರು ಹಾಗೂ ಶಾಸಕರ ವಿರುದ್ಧ ಕೇಳಿ ಬರುತ್ತಿರುವ ಕಮಿಷನ್ ಹಾಗೂ ಪರ್ಸೆಂಟೇಜ್ ಆರೋಪಗಳು.

ಟ್ರೆಂಡಿಂಗ್​ ಸುದ್ದಿ

ಇದೇ ವಿಚಾರವಾಗಿ ಬಿಡದಿ ತಮ್ಮ ನಿವಾಸದಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಈ ಯೋಜನೆಗಳಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಪರ್ಸಂಟೇಜ್ ಇರುವುದಿಲ್ಲ ಎಂದು ಹೇಳಿದ್ದಾರೆ.

ಬಿಡದಿಯ ತಮ್ಮ ತೋಟದಲ್ಲಿ ರೈತ ಸಂಕ್ರಾಂತಿ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪಂಚರತ್ನ ಯೋಜನೆಗಳನ್ನು ಅತ್ಯಂತ ಬದ್ಧತೆ ಹಾಗೂ ಜನರ ತೆರಿಗೆ ಹಣದಿಂದ ಕಾರ್ಯಗತ ಮಾಡಲಾಗುತ್ತದೆ. ಒಂದು ನಯಾಪೈಸೆ ಪೋಲಾಗಲು ಬಿಡುವುದಿಲ್ಲ. ಜನರ ಕಷ್ಟದ ಹಣಕ್ಕೆ ನಾನೇ ಕಾವಲುಗಾರನಾಗಿ ಇರುತ್ತೇನೆ ಎಂದಿದ್ದಾರೆ.

ಪಂಚರತ್ನ ಕಾರ್ಯಕ್ರಮಗಳನ್ನು ಎಷ್ಟು ವೈಜ್ಞಾನಿಕವಾಗಿ ರೂಪಿಸಲಾಗಿದೆಯೋ ಅಷ್ಟೇ ವೈಜ್ಞಾನಿಕವಾಗಿ, ಬದ್ಧತೆಯಿಂದ ಜಾರಿ ಮಾಡಲಾಗುವುದು. ಪಂಚಾಯಿತಿಯಲ್ಲಿ ಇರಲೇಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಪ್ರತಿಯೊಬ್ಬರ ಶಾಶ್ವತ ಉತ್ತಮ ಬದುಕಿಗೆ ಈ ಕಾರ್ಯಕ್ರಮ ಅನುಕೂಲಕರ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ಜಾರೆ.

ಜನತೆಯ ದುಡ್ಡು ಜನತೆಗೆ ಹೋಗಬೇಕು

ಜನತೆಯ ದುಡ್ಡು ಜನತೆಗೆ ಹೋಗಬೇಕು. ಯಾವ ಕಾರಣಕ್ಕೂ ರಾಜಕಾರಣಿಗಳು, ಅಧಿಕಾರಿಗಳಿಗೆ ಈ ಐದು ಕಾರ್ಯಕ್ರಮದಲ್ಲಿ ಪರ್ಸೆಂಟೇಜ್ ಇರೋದಿಲ್ಲ ಎಂದು ಹೆಚ್ಡಿಕೆ ಒತ್ತಿ ಹೇಳಿದರು.

ಪಂಚರತ್ನ ಯೋಜನೆಗಳ ಜಾರಿಗಾಗಿ ಪಂಚಾಯ್ತಿಯಲ್ಲೇ ಮೇಲ್ವಿಚಾರಣೆ ಸಮಿತಿ ರಚನೆ ಮಾಡಲಾಗುವುದು. ಹಣದ ದುರ್ಬಳಕೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ರಾಜ್ಯದ ಜನತೆಯ ತೆರಿಗೆ ಹಣ ಪೋಲಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರಗೆ ಹೆಚ್ಡಿಕೆ ತಿರುಗೇಟು

ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಮ್ಮ ಇಲಾಖೆಯಲ್ಲಿ ಏನೆಲ್ಲಾ ನಡೆಯುತ್ತಿತ್ತು ಎನ್ನುವುದು ಗೊತ್ತಿರಲಿಲ್ಲವೇ? ತಮ್ಮ ಇಲಾಖೆಯಲ್ಲಿ ದಂಧೆ ನಡೆಯುತ್ತಿದ್ದರೆ ಸಚಿವರು ಏನು ಮಾಡುತ್ತಿದ್ದರು. ಅದನ್ನು ಅವರು ಜನರಿಗೆ ತಿಳಿಸಬೇಕು ಎಂದಿದ್ದಾರೆ.

ಸ್ಯಾಂಟ್ರೋ ರವಿ ಬಳಿ ಹಣ ಪಡೆದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ ಎನ್ನುವ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಆತ್ಮಹತ್ಯೆ ಮಾಡಿಕೊಳ್ಳಲಿ ಅಂತ ನಾನ್ಯಾಕೆ ಹೇಳಲಿ. ಈ ಸರ್ಕಾರದಲ್ಲಿ ನಡೆಯುತ್ತಿರುವ ಕಾಸಿಗಾಗಿ ಪೋಸ್ಟಿಂಗ್ ವಿಚಾರ ಬೀದಿ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ದಂಧೆಗಳ ಬಗ್ಗೆ ಜನರು ಕೂತಲ್ಲಿ, ನಿಂತಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಈಗ ಬಂಧನಕ್ಕೆ ಒಳಗಾಗಿರುವ ವ್ಯಕ್ತಿ ಎಲ್ಲಿ, ಯಾರಿಂದ ಏನೆಲ್ಲಾ ಕೆಲಸ ಮಾಡಿಕೊಂಡಿದ್ದಾನೆ ಎಲ್ಲ ಕಡೆ ಹೇಳಿಕೊಂಡು ತಿರುಗಿದ್ದಾನೆ. ಆತನ ಫೋಟೋಗಳು, ಆಡಿಯೋಗಳು ರಾಜ್ಯದ ತುಂಬಾ ಹಬ್ಬಿವೆ. ಇದೆಲ್ಲಾ ಗೃಹ ಸಚಿವರ ಗಮನಕ್ಕೆ ಬಂದಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬಿಡದಿಯ ತಮ್ಮ ತೋಟದಲ್ಲಿ ಹಮ್ಮಿಕೊಂಡಿದ್ದ 'ರೈತ ಸಂಕ್ರಾಂತಿ' ಕಾರ್ಯಕ್ರಮದಲ್ಲಿ ರೈತರ ಜತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆನ್ ಲೈನ್ ಸಂವಾದ ನಡೆಸಿದರು. ಈ ವೇಳೆ ರೈತರು ತಮ್ಮ ಸಮಸ್ಯೆಗಳನ್ನು ಹೆಚ್ಡಿಕೆ ಅವರೊಂದಿಗೆ ಹಂಚಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರಿಗಾಗಿ ವಿಶೇಷ ಯೋಜನೆ ಜಾರಿಗೆ ತರುವುದಾಗಿ ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು.