Amul vs Nandini: ಅಮುಲ್ ವಿಚಾರದಲ್ಲಿ ರಾಜಕೀಯ ಬೇಡ ಅಮುಲ್ ಹಿಮ್ಮೆಟ್ಟಿಸಲು ಅಗತ್ಯ ಕ್ರಮ: ಸಿಎಂ ಬೊಮ್ಮಾಯಿ
ನಂದಿನಿ ನಂಬರ್ ಒನ್ ಬ್ರ್ಯಾಂಡ್ ಆಗಲಿದ್ದು, ಅಮುಲ್ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟವನ್ನು ನಾವು ಕೂಡ ಮಾಡಿದ್ದೇವೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಮುಲ್ ಹಿಮ್ಮೆಟ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಅಮೂಲ್ ಬ್ರ್ಯಾಂಡ್ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಅವರು ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ್ದು, ಅಮೂಲ್ ಮತ್ತು ನಂದಿನಿ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.
"ನಂದಿನಿ ನಂಬರ್ ಒನ್ ಬ್ರ್ಯಾಂಡ್ ಆಗಲಿದ್ದು, ಅಮುಲ್ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟವನ್ನು ನಾವು ಕೂಡ ಮಾಡಿದ್ದೇವೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಮುಲ್ ಹಿಮ್ಮೆಟ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಭ್ಯರ್ಥಿಗಳ ಬಗ್ಗೆ ಚರ್ಚೆ: ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಎಲ್ಲಾ ಅಭ್ಯರ್ಥಿಗಳ ವಿಚಾರ ಚರ್ಚೆ ಮಾಡಲಾಗುವುದು. ನಾಳೆ ಸಂಜೆ ಐದು ಗಂಟೆಗೆ ಸಂಸದಿಯ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಎಲ್ಲಾ 224 ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೆಲ ಎಂಎಲ್ ಸಿ ಮತ್ತು ಸಂಸದರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಚರ್ಚೆಯ ಬಳಿಕ ಎಷ್ಟು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ನಿರ್ಧಾರವಾಗಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಲ್ಲಿ ಟಿಕೇಟ್ ಹಂಚಿಕೆಯ ಗೊಂದಲದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಶಕ್ತಿ ಮೇಲೆ ನಮಗೆ ನಂಬಿಕೆ ಇದೆ. ಸಹಜವಾಗಿಯೇ ಅದರ ಲಾಭ ಆಗಲಿದೆ ಎಂದರು.
ನಟ ಸುದೀಪ್ ಬಿಜೆಪಿ ಬೆಂಬಲ ನೀಡುವ ಬಗ್ಗೆಯೂ ಅವರು ಮಾತನಾಡಿದ್ದಾರೆ. "ಕಾಂಗ್ರೆಸ್ ಈ ಹಿಂದೆ ನಟರನ್ನು ಕರೆ ತಂದು ಚುನಾವಣಾ ಪ್ರಚಾರ ಮಾಡಿದ್ದಾರೆ. ಅಂಬರೀಶ್ ಪ್ರಚಾರ ಮಾಡಲಿಲ್ಲವೇ,ಶಾಸಕರಾಗಿರಲಿಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿಗೆ ಬೆಂಬಲ ನೀಡುವ ಮುಂಚೆ ಅದರಿಂದಾಗೊ ಎಲ್ಲಾ ಪರಿಣಾಮದ ಬಗ್ಗೆ ಮಾಹಿತಿ ಇದೆ. ಸುದೀಪ್ ಅವರು ನಮಗೆ ಬೆಂಬಲ ನೀಡಿರುವುದರಿಂದ ಸಹಜವಾಗಿ ಕಾಂಗ್ರೆಸ್ ಗೆ ನಡುಕ ಹುಟ್ಟಿದೆ" ಎಂದು ಹೇಳಿದರು.
"ನಂದಿನಿ ಮುಗಿಸಿ ಅಮೂಲ್ ಬೆಳೆಸಲು ಬಿಜೆಪಿ ತೀರ್ಮಾನಿಸಿದೆ. ಆ ಮೂಲಕ ರಾಜ್ಯದ ಹಾಲು ಉತ್ಪಾದಕ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ' ಎಂದು ನಿನ್ನೆ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದರು.
'ರಾಜ್ಯದ ನೆಲ, ಜಲ, ಭಾಷೆ ಕಾಪಾಡಿ ಜನರ ಹಿತ ಕಾಯುವ ಪ್ರತಿಜ್ಞೆ ಮೂಲಕ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಾನ ಮರ್ಯಾದೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
'ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ. ಕನ್ನಡಿಗರೇ ಎಚ್ಚರ...!!'' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
"ಕನ್ನಡಿಗರ ಜೀವನಾಡಿ ನಂದಿನಿಯನ್ನು ಮುಗಿಸಲು ಈಗ ನಡೆದಿದೆ 3ನೇ ಸಂಚು. ಸಂಚು1: ಅಮುಲ್ ಜತೆ ನಂದಿನಿ ವಿಲೀನ; ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ. ಸಂಚು2: ಮೊಸರಿನ ಮೇಲೆ ಹಿಂದಿಯ 'ದಹಿ' ಪದ ಮುದ್ರಣ. ಕನ್ನಡಿಗರ ತೀವ್ರ ವಿರೋಧದಿಂದ ಎರಡೂ ಸಂಚು ವಿಫಲ. 3ನೇ ಸಂಚು ಸಫಲಗೊಳಿಸಲು ಅಮುಲ್ ಮೂಲಕ ಕೇಂದ್ರ ಸರಕಾರ ಹೊರಟಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.