ಪ್ಯಾನ್ ಇದ್ದರಷ್ಟೇ ಆಸ್ತಿ ಖರೀದಿ, ಮಾರಾಟ ನೋಂದಣಿ, ಇಲ್ಲಾಂದ್ರೆ ಯಾವುದೂ ಇಲ್ಲ, ಹೊಸ ಸುತ್ತೋಲೆ ಪ್ರಕಟಿಸಿದ ಕರ್ನಾಟಕ ಸರ್ಕಾರ
ಆಸ್ತಿ ಖರೀದಿ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವುದು ಬಹಳ ಹಿಂದಿನಿಂದಲೇ ಜಾರಿಯಲ್ಲಿದೆ. ಆದಾಗ್ಯೂ,ಪ್ಯಾನ್ ಇದ್ದರಷ್ಟೇ ಆಸ್ತಿ ಖರೀದಿ, ಮಾರಾಟ ನೋಂದಣಿ, ಇಲ್ಲಾಂದ್ರೆ ಯಾವುದೂ ಇಲ್ಲ ಎಂದು ಹೊಸ ಸುತ್ತೋಲೆ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಬೆಂಗಳೂರು: ಆಸ್ತಿ ಖರೀದಿ ಮತ್ತು ಮಾರಾಟದ ನೋಂದಣಿಗೆ ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದ್ದು, ಅದಿಲ್ಲದೇ ನೋಂದಣಿ ನಡೆಯದು. ಹೌದು, ಈಗಾಗಲೇ ಇದು ಚಾಲ್ತಿಯಲ್ಲಿದ್ದರೂ, ಇದನ್ನು ಸರ್ಕಾರ ಮತ್ತೊಮ್ಮೆ ದೃಢೀಕರಿಸಿದ್ದು ಹೊಸ ಸುತ್ತೂಲೆ ಮೂಲಕ ನೆನಪಿಸಿದೆ. ಈ ಸಂಬಂಧ ನೋಂದಣಿ ಪರಿವೀಕ್ಷಕ ಮತ್ತು ಮುದ್ರಾಂಕ ಆಯುಕ್ತರು ಮೇ 16ರಂದು ಎಲ್ಲ ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಈ ಸಂಬಂಧ ಸುತ್ತೋಲೆ ಕಳುಹಿಸಿದ್ದಾರೆ.
ಪ್ಯಾನ್ ಇದ್ದರಷ್ಟೇ ಆಸ್ತಿ ನೋಂದಣಿ; ಗಮನಿಸಬೇಕಾದ 5 ಅಂಶ
ಸುತ್ತೋಲೆ ಪ್ರಕಾರ, 30 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ ನೋಂದಣಿಯ ವೇಳೆ ಮಾರಾಟಗಾರರು ಮತ್ತು ಖರೀದಿದಾರರು ಪ್ಯಾನ್ ವಿವರ ಸಲ್ಲಿಸುವುದು ಕಡ್ಡಾಯ. ಪ್ಯಾನ್ ಸಲ್ಲಿಸದೇ ಇದ್ದರೆ ಆಸ್ತಿ ನೋಂದಣಿ ಆಗುವುದಿಲ್ಲ ಎಂದು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
1) ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿ: 30 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ನೋಂದಣಿಗೆ ಸಂಬಂಧಿಸಿ ಮಾರಾಟಗಾರರು ಮತ್ತು ಖರೀದಿದಾರರ ವಿವರಗಳನ್ನು ಆರ್ಥಿಕ ವರ್ಷಾಂತ್ಯಕ್ಕೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು.
2) ದಾಖಲೆ, ಮಾಹಿತಿ ಸರಿ ಇದ್ದರಷ್ಟೆ ನೋಂದಣಿ: ಎಲ್ಲ ವಿವರ ಮತ್ತು ಮಾಹಿತಿಗಳನ್ನು ಸಲ್ಲಿಸಿದರಷ್ಟೇ ನೋಂದಣಿ ಪೂರ್ಣಗೊಂಡು, ದಸ್ತಾವೇಜವನ್ನು ಹಸ್ತಾಂತರಿಸಬೇಕು. ಇಲ್ಲದೇ ಇದ್ದರೆ ದಸ್ತಾವೇಜನ್ನು ನೀಡಬಾರದು
3) ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ: ಮಾರಾಟಗಾರರು ಮತ್ತು ಖರೀದಿದಾರರು ಈ ಮಾಹಿತಿಗಳನ್ನು ಸಲ್ಲಿಸಲು ಪ್ರತ್ಯೇಕ ನಮೂನೆಯನ್ನು ರೂಪಿಸಿದ್ದು, ಅದರಲ್ಲಿ ಎಲ್ಲ ವಿವರಗಳನ್ನು ತುಂಬಬೇಕು
4) ಕಾವೇರಿ 2 ತಂತ್ರಾಂಶಕ್ಕೆ ಅಪ್ಲೋಡ್ ಮಾಡಿ: ನಮೂನೆಗೆ ಸಹಿ ಮಾಡಿ, ಸ್ಕ್ಯಾನ್ ಮಾಡಬೇಕು. ಸ್ಕ್ಯಾನ್ ಮಾಡಲಾದ ಕಡತವನ್ನು ಕಾವೇರಿ–2 ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಬೇಕು
5) ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಕಡ್ಡಾಯ: ಇಡೀ ಆರ್ಥಿಕ ವರ್ಷದಲ್ಲಿ ನೋಂದಣಿಯಾದ ಆಸ್ತಿ, ವಹಿವಾಟು, ಮಾರಾಟ ಮತ್ತು ಖರೀದಿದಾರರ ವಿವರವನ್ನು 61–ಎ ನಮೂನೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಬೇಕು
ಆಸ್ತಿ ನೋಂದಣಿ ಬೇಕಾದ ದಾಖಲೆಗಳಿವು
ಆಸ್ತಿ ನೋಂದಣಿ ವೇಳೆ ಸಲ್ಲಿಸ ಬೇಕಿರುವ ದಾಖಲೆಗಳು ಮತ್ತು ಸ್ವಯಂಘೋಷಣಾ ಪತ್ರದ ವಿವರಗಳನ್ನೂ ಸುತ್ತೋಲೆ ಒಳಗೊಂಡಿದೆ. ಇದರಲ್ಲಿ, ಆಸ್ತಿ ಮಾರಾಟಗಾರರು ಮತ್ತು ಖರೀದಿದಾರರ ಹೆಸರು, ತಂದೆ, ತಾಯಿಯ ಹೆಸರು, ಹಣ ವರ್ಗಾವಣೆಯ ವಿವರ, ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ, ಪೂರ್ಣ ವಿಳಾಸ, ಸಂಪರ್ಕ ಸಂಖ್ಯೆ, ಪರ್ಯಾಯ ಸಂಪರ್ಕ ಸಂಖ್ಯೆ, ನಮೂನೆ 60ರ ಅರ್ಜಿ ಭರ್ತಿ ಮಾಡಿ ಕೊಡಬೇಕು.
ಈಗಾಗಲೆ ಸರ್ಕಾರ ಆಸ್ತಿ ನೋಂದಣಿಗೆ ಅಗತ್ಯ ದಾಖಲೆಗಳ ವಿವರಗಳನ್ನು ಘೋಷಿಸಿದ್ದರೂ, ಈಗ ಮತ್ತೊಮ್ಮೆ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಅಕ್ರಮ ತಡೆಯಲು ಮುಂದಾಗಿದೆ. ಹೀಗಾಗಿ ಮತ್ತೆ ಸುತ್ತೋಲೆ ಹೊರಡಿಸಿದೆ. ಆಸ್ತಿ ಖರೀದಿ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವುದು ಬಹಳ ಹಿಂದಿನಿಂದಲೇ ಜಾರಿಯಲ್ಲಿದೆ. ಆದಾಗ್ಯೂ, ನೋಂದಣಿ ಇಲಾಖೆಯ ಅಧಿಕಾರಿಗಳು ಈ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುತ್ತಿರಲಿಲ್ಲ. ಈ ಸಂಬಂಧ ಆದಾಯ ತೆರಿಗೆ ಇಲಾಖೆಯಿಂದ ಆಕ್ಷೇಪಣೆ ಹಲವು ಬಾರಿ ವ್ಯಕ್ತವಾಗಿತ್ತು. ಹೀಗಾಗಿ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಆದಾಯ ತೆರಿಗೆ ವಂಚನೆ ಪ್ರಕರಣ ಗಳಿಗೂ ಇದರಿಂದ ತಡೆ ಬೀಳಲಿದೆ ಎಂದು ರಾಜ್ಯ ನೋಂದಣಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪ್ರಜಾವಾಣಿ ವರದಿ ಮಾಡಿದೆ.