CM Bommai on Congress:'ನನಗೆ ಅವಿರೋಧ ಆಯ್ಕೆ ಬೇಡ; ಕುಸ್ತಿನೇ ಬೇಕು': ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಬಹಿರಂಗ ಸವಾಲು
ಕನ್ನಡ ಸುದ್ದಿ  /  ಕರ್ನಾಟಕ  /  Cm Bommai On Congress:'ನನಗೆ ಅವಿರೋಧ ಆಯ್ಕೆ ಬೇಡ; ಕುಸ್ತಿನೇ ಬೇಕು': ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಬಹಿರಂಗ ಸವಾಲು

CM Bommai on Congress:'ನನಗೆ ಅವಿರೋಧ ಆಯ್ಕೆ ಬೇಡ; ಕುಸ್ತಿನೇ ಬೇಕು': ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಬಹಿರಂಗ ಸವಾಲು

ಶಿಗ್ಗಾಂವಿ ಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಆಹ್ವಾನ ಇದ್ದರೂ ನನಗೆ ಪ್ರೀತಿ ವಿಶ್ವಾಸ ಇರುವ ಶಿಗ್ಗಾಂವಿಯಲ್ಲಿ ಪರೀಕ್ಷೆಗೆ ಇಳಿಯುವುದಾಗಿ ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಹಾವೇರಿಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು.
ಹಾವೇರಿಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು.

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವತ್ತು ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದ್ದು, ನನಗೆ ಅವಿರೋಧ ಆಯ್ಕೆ ಬೇಡ, ಕುಸ್ತಿನೇ ಬೇಕು. ಆಗಲೇ ಯಾರ ಶಕ್ತಿ ಏನು ಎಂದು ತಿಳಿಯುತ್ತದೆ ಎಂದು ಕೈ ನಾಯಕರಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಹಾವೇರಿಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ, ಕಣಕ್ಕೆ ಯಾರೂ ಬೇಕಾದರೂ ಬರಬಹುದು, ಸೆಡ್ಡು ಹೊಡೆದೇ ಬಿಡೋದು, ಬೇರೆ ಪ್ರಶ್ನೆಯೇ ಇಲ್ಲ ಎಂದು ಅಬ್ಬರಿಸಿದ್ದಾರೆ. ಕುಸ್ತಿ ಪಟು ಅಭ್ಯಾಸ ಮಾಡಿಕೊಂಡು ಬರಬೇಕು. ಏಕೆಂದರೆ ಹೊಸ ಕುಸ್ತಿ ಹೊಸ ಪಟು ಇರಲಿದೆ ಎಂದಿದ್ದಾರೆ.

ಇನ್ನೂ ತಲೆ ಮೇಲಿನ ಕೈ ತೆಗೆದಿಲ್ಲ

ಮೀಸಲಾತಿ ನಿರ್ಣಯ ಮಾಡಿದಾಗ ತಲೆ ಮೇಲೆ ಕೈ ಇಟ್ಟುಕೊಂಡ ವಿರೋಧ ಪಕ್ಷಗಳು ಇನ್ನೂ ತಲೆ ಮೇಲಿನ ಕೈ ತೆಗೆದಿಲ್ಲ. ದೇಶದಲ್ಲಿಯೇ ಯಾರೂ ಮಾಡಿರದ ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಿದ ಸಾಹಸವನ್ನು ತಾವು ಮಾಡಿರುವುದಾಗಿ ಹೇಳಿದ್ದಾರೆ.

ದೆಹಲಿಯಿಂದ ಬಂದ ವಿರೋಧ ಪಕ್ಷದ ನಾಯಕ ಇದನ್ನ ಸಂವಿಧಾನ ವಿರೋಧಿ ಎಂದರು. ಕಾಂಗ್ರೆಸ್ ನದ್ದು ದ್ವಿಮುಖ ನೀತಿ. ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡುವುದಾಗಿ ಒಂದೆಡೆ, ಮಾಡುವುದಿಲ್ಲ ಎಂದು ಮತ್ತೊಂದೆಡೆ ಹೇಳುತ್ತಾರೆ. ಇದು ದ್ವಿಮುಖ ನೀತಿ ಅಲ್ಲವಾ? ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿ ಆಡಳಿತ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಗ್ಗಾಂವಿ ಕ್ಷೇತ್ರದಲ್ಲೇ ಸ್ಪರ್ಧೆ

ಶಿಗ್ಗಾಂವಿ ನನ್ನ ಆತ್ಮವಿಶ್ವಾಸ. ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಬರುವ 5 ವರ್ಷಗಳಲ್ಲಿ 15 ವರ್ಷಗಳಲ್ಲಿ ಮಾಡಿದಷ್ಟು ಕೆಲಸ ಮಾಡಿ ತೋರಿಸುತ್ತೇವೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಆಹ್ವಾನ ಇದ್ದರೂ ನನಗೆ ಪ್ರೀತಿ ವಿಶ್ವಾಸ ಇರುವ ಶಿಗ್ಗಾಂವಿಯಲ್ಲಿ ಪರೀಕ್ಷೆಗೆ ಇಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಬಿಜೆಪಿ ಸಂಸ್ಥಾಪಕ ದಿನಾಚರಣೆಆಚರಿಸಲಾಗಿದ್ದು, ಮೊದಲ ದಿನ ಶಿಗ್ಗಾಂವಿ ತಾಲೂಕಿನಲ್ಲಿ ಬಿಜೆಪಿ ಶಕ್ತಿ ಇಮ್ಮಡಿ ಆಗಿದೆ. ಈ ಕಾರ್ಯಕ್ರಮ ಬಿಜೆಪಿ ಮತ್ತೆ ರಾಜ್ಯದಲ್ಲಿ ಸಂಪೂರ್ಣವಾಗಿ ಅಧಿಕಾರಕ್ಕೆ ಬರುವ ದಿಕ್ಸೂಚಿಯಾಗಿದೆ. ಇಂದು ಪಕ್ಷ ಸೇರಿದವರು ಯಾರೂ ಹೊರಗಿನವರಲ್ಲ. ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ನನ್ನ ಜೊತೆ ಕೆಲಸ ಮಾಡಿದವರು. ಈಗ ನಾವೆಲ್ಲ ಒಂದುಗೂಡಿದ್ದೇವೆ ಎಂದಿದ್ದಾರೆ.

ಪ್ರೀತಿಯಿಂದ ಜಗತ್ತು ಗೆಲ್ಲಬಹುದು

ಅರವತ್ತು ತಿಂಗಳಲ್ಲಿ 59 ತಿಂಗಳು ಅಭಿವೃದ್ಧಿ ಮಾಡೋಣ. ಆದರೆ ಒಂದು ತಿಂಗಳು ಮಾತ್ರ ರಾಜಕೀಯ ಮಾಡೋಣ ಎಂದ ಅವರು, ಮೈದಾನ್ ಹೈ, ಘೋಡಾ ಹೈ. ಯಾವುದೇ ರೀತಿಯ ಒತ್ತಡ, ಒತ್ತಾಯ ಇಲ್ಲ. ಇಲ್ಲಿ ಬಂದವರು ಒತ್ತಾಯಕ್ಕೆ ಮಣಿದು ಬಂದಿಲ್ಲ ಪ್ರೀತಿ ವಿಶ್ವಾಸದಿಂದ ಬಂದಿದ್ದಾರೆ. ಪ್ರೀತಿಯಿಂದ ಜಗತ್ತು ಗೆಲ್ಲಬಹುದು ಎಂಬ ಮಾತು ಶಿಗ್ಗಾವಿ ತಾಲೂಕಿನಲ್ಲಿ ಸತ್ಯ ಆಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

‘ನನ್ನ ವಿರುದ್ದ ಬಹಳ ದೊಡ್ಡ ಅಪಪ್ರಚಾರ ನಡೆದಿತ್ತು’

ಶಿಗ್ಗಾವಿ ಬಂಧುಗಳು ಒಳ್ಳೆದನ್ನ ಗುರುತಿಸಿ, ಬೆಂಬಲಿಸುತ್ತಾರೆ. ಎಂಥ ಅಪಪ್ರಚಾರ ಆದರೂ ಆತ್ಮ ಸಾಕ್ಷಿಯಿಂದ ಬೆಂಬಲಿಸುತ್ತಾರೆ. ನನ್ನ ವಿರುದ್ದ ಬಹಳ ದೊಡ್ಡ ಅಪಪ್ರಚಾರ ನಡೆದು ಅಂದು ಪ್ರಮುಖ ಪತ್ರಿಕೆಯಲ್ಲಿ ಬೊಮ್ಮಾಯಿ ಗೆಲ್ಲೋದು ಸಾಧ್ಯವಿಲ್ಲ ಎಂದು ಬರೆದಿದ್ದರು.

ಫಲಿತಾಂಶ ಬಂದ ದಿನ ವಿಜಯೋತ್ಸವ ಆಚರಣೆ ನೋಡುವಂತೆ ನಾನು ಆ ಪತ್ರಕರ್ತನಿಗೆ ಹೇಳಿದ್ದೆ ಎಂದು ಸಿಎಂ ಬೊಮ್ಮಾಯಿ ಸ್ಮರಿಸಿದ್ದಾರೆ. ಈಗಲೂ ಅಪಪ್ರಚಾರ ಮಾಡುತ್ತಾರೆ. ಬೆಂಗಳೂರು , ದೆಹಲಿಯಲ್ಲಿ ಕುಳಿತು ಬೊಮ್ಮಾಯಿ ಹೇಗೆ ಸೋಲಿಸಬೇಕು ಎಂದು ಯೋಜನೆ ಹಾಕುತ್ತಾರೆ. ಈ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಇಲ್ಲಿನ ತಾಯಂದಿರು, ಜನತೆ ಹಾಗೂ ಯುವಕ ಮಿತ್ರರ ಮೇಲೆ ವಿಶ್ವಾಸವಿದೆ ಅಂತ ಹೇಳಿದ್ದಾರೆ.

ಬಿಜೆಪಿ ಒಂದು ಸಮುದ್ರ ಇದ್ದ ಹಾಗೆ. ಹಳ್ಳ ಕೊಳ್ಳ ಇವೆಯಾದರೂ ಹಳ್ಳದ ನೀರೂ ಸಮುದ್ರ ಸೇರಲೇಬೇಕು. ಸಮುದ್ರ ಮಂಥನ ಆಗಲಿದೆ. ಏನೇ ವಿಷ ಬಂದರೂ ಸ್ವೀಕಾರ ಮಾಡಿ ಜನರಿಗೆ ಅಮೃತ ಕೊಡುತ್ತೇವೆ. ಏನೇ ಅಪಪ್ರಚಾರ ಮಾಡಿದರೂ ಆತ್ಮ ಸಾಕ್ಷಿಯಿಂದ ನಿರ್ಣಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Whats_app_banner