ತುಮಕೂರಿನಲ್ಲಿ ಮೀನು ಪ್ರಿಯರ ನೆಚ್ಚಿನ ಆಯ್ಕೆ ‘ಮತ್ಸ್ಯದರ್ಶಿನಿ’; ಇಲ್ಲಿ ಸಿಗುತ್ತೆ ಶುಚಿ-ರುಚಿಯಾದ ಸಮುದ್ರಾಹಾರ
ಮಂಗಳೂರಿನಿಂದ ಸಮುದ್ರದ ಮೀನು ತುಮಕೂರಿನ ‘ಮತ್ಸ್ಯದರ್ಶಿನಿ’ಗೆ ತರುವುದರಿಂದ ಆ ಮೀನು ಬಹಳ ರುಚಿಯಾಗಿರಲಿವೆ. ಸ್ಥಳೀಯವಾಗಿ ಯಾವುದೇ ಮೀನು ಇಲ್ಲಿ ಬಳಕೆ ಮಾಡಲ್ಲ. ಗುಣಮಟ್ಟ ಹಾಗೂ ಶುಚಿ-ರುಚಿ ನೋಡಿ ಹೆಚ್ಚು ಗ್ರಾಹಕರು ಮತ್ಸ್ಯದರ್ಶಿನಿಗೆ ಬರುತ್ತಾರೆ ಎಂದು ಹೋಟೆಲ್ ವ್ಯವಸ್ಥಾಪಕಿ ಕಾವ್ಯ ತಿಳಿಸಿದ್ದಾರೆ. (ವರದಿ: ಈಶ್ವರ್, ತುಮಕೂರು)

ತುಮಕೂರು: ಮಾಂಸ ಪ್ರಿಯರಿಗೆ ಭರ್ಜರಿ ಊಟ ಸವಿಯಲು ತುಮಕೂರಿನಲ್ಲಿ ಸಾಕಷ್ಟು ಹೋಟೆಲ್‌ಗಳಿವೆ. ಅದೇ ರೀತಿ ಸಮುದ್ರಾಹಾರ ಪ್ರಿಯರಿಗೆ ಮೀನು ತಿನ್ನಲು ಅನೇಕ ಹೋಟೆಲ್‌ಗಳಿವೆ. ಅದರಲ್ಲೂ ತುಮಕೂರಿನ ಎಂ. ಜಿ. ಸ್ಟೇಡಿಯಂ ಬಳಿ ಇರುವ ಮತ್ಸ್ಯದರ್ಶಿನಿ ಹೋಟೆಲ್ ಫಿಶ್ ಪ್ರಿಯರ ಫೇವರಿಟ್ ಎನಿಸಿಕೊಂಡಿದೆ. ಮೀನು ಸವಿದರೆ ಮೆದುಳು ಸ್ಟ್ರಾಂಗ್ ಆಗಲಿದೆ ಎಂಬ ಮಾತಿದೆ. ಬಗೆ ಬಗೆಯ ಮೀನು ಇಂದು ಎಲ್ಲಡೆ ಸಿಗುತ್ತದೆ. ಆದರೆ ಮತ್ಸ್ಯ ದರ್ಶಿನಿ ಹೋಟೆಲ್‌ನಲ್ಲಿ ಉತ್ತಮ ಗುಣಮಟ್ಟದ ಹಾಗೂ ಶುಚಿ, ರುಚಿಯಾದ ಮೀನೂಟ ಸಿಗುವುದರಿಂದ ಗ್ರಾಹಕರು ಇಲ್ಲಿಗೆ ಲಗ್ಗೆ ಇಡುತ್ತಿದ್ದಾರೆ. ಮನೆಯಲ್ಲಿ ಮಾಡುವ ರೀತಿಯೇ ಇಲ್ಲಿನ ಮೀನೂಟ ಸಮುದ್ರಾಹಾರ ಪ್ರಿಯರಿಗೆ ಅಚ್ಚುಮೆಚ್ಚು.
ಬಂಗುಡೆ ಮೀನು ಫ್ರೈ, ಬಂಗುಡೆ ತವಾ ಫ್ರೈ, ಅಂಜಲ್ ಫ್ರೈ, ಅಂಜಲ್ ತವಾ ಫ್ರೈ, ಪ್ರಾನ್ಸ್ ತವಾ ಫ್ರೈ, ಬೋನ್ ಲೆಸ್ ಕಬಾಬ್, ಡಿಸ್ಕೋ ತವಾ ಫ್ರೈ, ಬೂತಾಯಿ ತವಾ ಫ್ರೈ, ಸಿಲ್ವರ್ ಫ್ರೈ ಹೀಗೆ ಬಗೆಬಗೆಯ ಮೀನೂಟದ ಆಯ್ಕೆ ಸಮುದ್ರಾಹಾರ ಪ್ರಿಯರಿಗೆ ಇಲ್ಲಿ ಲಭ್ಯವಿದೆ. ಇದೇ ಅಲ್ಲದೆ ಕರಾವಳಿ ಶೈಲಿಯ ನೀರು ದೋಸೆ ಹಾಗೂ ಬಂಗುಡೆ ಮೀನುಳಿ (ಪುಳಿಮುಂಚಿ) ಕಾಂಬಿನೇಷನ್ ಸವಿಯೋದೆ ಆನಂದ. ಇನ್ನು ಮುದ್ದೆ, ಮೀನು ಸಾಂಬರ್ ರುಚಿ ನಿಜಕ್ಕೂ ಮೀನು ಪ್ರಿಯರ ಬಾಯಲ್ಲಿ ನೀರು ತರಿಸದೆ ಇರಲ್ಲ.
ಇಲ್ಲಿ ಬಳಸುವ ಮೀನುಗಳು ಮಂಗಳೂರಿನಿಂದ ತರಿಸಲಾಗುತ್ತೆ. ಸಮುದ್ರದ ಫ್ರೆಶ್ ಮೀನುಗಳನ್ನೇ ಅಡುಗೆಗೆ ಬಳಸಲಾಗುತ್ತದೆ. ಯಾವುದೇ ಕಾರಣಕ್ಕೂ ಇಲ್ಲಿ ಸ್ಥಳೀಯ ಮೀನುಗಳನ್ನು ಬಳಸುವುದಿಲ್ಲ. ಸಮುದ್ರ ಹೊರತಾಗಿ ನದಿ, ಕೆರೆ ಮೀನುಗಳ ಬಳಕೆ ಇಲ್ಲ. ಸರ್ಕಾರದ ನಿಯಮದಂತೆ ಇಲ್ಲಿ ಉತ್ತಮ ಆಹಾರ ಮತ್ತು ಗ್ರಾಹಕರಿಗೆ ಹೊರೆಯಾಗದ ದರದಲ್ಲಿ ಮೀನೂಟ ಹಾಗೂ ಮೀನು ಪ್ರೈ ದೊರೆಯುತ್ತವೆ.
ಗುಣಮಟ್ಟದ ಊಟ ನೀಡುವುದು ನಮ್ಮ ಮೊದಲ ಆದ್ಯತೆ
ಸರ್ಕಾರದ ನಿಯಮದಂತೆ ಮತ್ಸ್ಯದರ್ಶಿನಿ ಹೋಟೆಲ್ ನಡೆಸಲಾಗುತ್ತಿದೆ. ಗ್ರಾಹಕರಿಗೆ ಉತ್ತಮ ಮತ್ತು ಗುಣಮಟ್ಟದ ಊಟ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಮಂಗಳೂರಿನಿಂದ ಸಮುದ್ರದ ಮೀನು ಇಲ್ಲಿಗೆ ಬರುವುದರಿಂದ ಆ ಮೀನು ಬಹಳ ರುಚಿಯಾಗಿರಲಿವೆ. ಸ್ಥಳೀಯವಾಗಿ ಯಾವುದೇ ಮೀನು ಇಲ್ಲಿ ಬಳಕೆ ಮಾಡಲ್ಲ. ಗುಣಮಟ್ಟ ಹಾಗೂ ಶುಚಿ-ರುಚಿ ನೋಡಿಯೇ ಹೆಚ್ಚು ಗ್ರಾಹಕರು ಮತ್ಸ್ಯದರ್ಶಿನಿ ಹೋಟೆಲ್‌ಗೆ ಬರುತ್ತಾರೆ ಎಂದು ಹೋಟೆಲ್ ವ್ಯವಸ್ಥಾಪಕಿ ಕಾವ್ಯ ತಿಳಿಸಿದ್ದಾರೆ.
ಗುಣಮಟ್ಟ ಹಾಗೂ ರುಚಿಗೆ ಆದ್ಯತೆ ನೀಡಿರುವುದರಿಂದ ಗ್ರಾಹಕರು ಇಲ್ಲಿಗೆ ಊಟ ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮೀನೂಟ ಸವಿಯಲು ಮಂಗಳೂರಿಗೆ ಹೋಗಬೇಕಿಲ್ಲ. ತುಮಕೂರು ನಗರದಲ್ಲೇ ಉತ್ತಮ ಸ್ಥಳವಿದೆ. ಹಾಗಾದ್ರೆ ಇನ್ಯಾಕೆ ತಡ ನೀವು ಒಮ್ಮೆ ಭೇಟಿ ನೀಡಿ ಬಗೆ ಬಗೆಯ ಮೀನು ಸವಿಯರಿ.
- ವರದಿ: ಈಶ್ವರ್, ತುಮಕೂರು
ಇದನ್ನೂ ಓದಿ | ಅನ್ನದ ಜೊತೆ ತಿನ್ನಲು ಸಖತ್ ರುಚಿ ಒಣ ಸೀಗಡಿ ಚಟ್ನಿ; ಇದನ್ನು ತಯಾರಿಸುವುದು ತುಂಬಾನೇ ಸುಲಭ, ಒಮ್ಮೆ ಮಾಡಿ ನೋಡಿ
