ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಹುಬ್ಬಳ್ಳಿ ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ, ಕೊಚ್ಚಿ ಹೋದ ಕಾರುಗಳು

Karnataka Rains: ಹುಬ್ಬಳ್ಳಿ ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ, ಕೊಚ್ಚಿ ಹೋದ ಕಾರುಗಳು

ಬಿಸಿಲ ನಡುವೆಯೂ ಹಲವೆಡೆ ಮಳೆಯಾಗಿದ್ದು. ಶನಿವಾರ ಹುಬ್ಬಳ್ಳಿ ಧಾರವಾಡ ಹಾಗೂ ಬೆಳಗಾವಿ ಭಾಗದಲ್ಲಿ ಭರ್ಜರಿ ಮಳೆ ಸುರಿದಿದೆ.

ಹುಬ್ಬಳ್ಳಿಯಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದವು.
ಹುಬ್ಬಳ್ಳಿಯಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದವು.

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಶನಿವಾರ ಎಡಬಿಡದೇ ಮಳೆ ಸುರಿದಿದೆ. ಅದರಲ್ಲೂ ಹುಬ್ಬಳ್ಳಿ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಆರು ಗಂಟೆಯೂ ಕಾಲ ಮಳೆಯಾಗಿದೆ. ಹುಬ್ಬಳ್ಳಿ ನಗರದಲ್ಲಿ ಭಾರೀ ಮಳೆಗೆ ಪ್ರಮುಖ ರಸ್ತೆಗಳು ಚರಂಡಿಯಂತೆ ಹರಿಯುತ್ತಿದ್ದುದು ಕಂಡು ಬಂದಿತು. ಅದೇ ರೀತಿ ಧಾರವಾಡ ನಗರದಲ್ಲೂ ಭಾರೀ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ಬೆಳಗಾವಿ ನಗರ, ಸಂಕೇಶ್ವರ ಪಟ್ಟಣ ಸೇರಿದಂತೆ ಹಲವು ಭಾಗಗಳಲ್ಲೂ ಶನಿವಾರ ಮಧ್ಯಾಹ್ನದಿಂದಲೇ ಮಳೆಯಾಗಿದೆ. ಸಂಕೇಶ್ವರ ಪಟ್ಟಣ ಸಮೀಪ ಭಾರೀ ಮಳೆಯಿಂದ ಹಳ್ಳವೊಂದು ಉಕ್ಕಿ ಹರಿದಿದೆ. ಈ ವೇಳೆ ಸಮೀಪದಲ್ಲಿಯೇ ನಿಲ್ಲಿಸಿದ್ದ ಎರಡು ಕಾರು, ಒಂದು ಪಿಕ್‌ ಅಪ್‌ ವಾಹನಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ. ಭಾರೀ ಸಿಡಿಲು. ಗುಡುಗಿನ ನಡುವೆ ಮಳೆ ಬಂದಿದ್ದರಿಂದ ಭಾರೀ ಅನಾಹುತವೇ ಆಗಿರುವ ಅಂದಾಜಿದೆ.

ಟ್ರೆಂಡಿಂಗ್​ ಸುದ್ದಿ

ಹುಬ್ಬಳ್ಳಿ ಜಲಾವೃತ

ವಾಣಿಜ್ಯ ನಗರಿ ಹುಬ್ಬಳ್ಳಿ ನಗರದ ದಾಜೀಬಾನ ಪೇಟೆ, ತುಳಜಾಭವಾನಿ ವೃತ್ತದಿಂದ ಕಮರಿಪೇಟೆ, ದಿವಟೆಗಲ್ಲಿ, ಮಹಾವೀರಗಲ್ಲಿ, ಕೋಯಿನ್ ರಸ್ತೆ, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಸ್ಟೇಶನ್ ರಸ್ತೆ, ವಿದ್ಯಾನಗರ, ಉಣಕಲ್ಲ ಕ್ರಾಸ್, ಕಿತ್ತೂರ ಚೆನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣದ ಮುಂಭಾಗ, ಹಳೇಹುಬ್ಬಳ್ಳಿ ಗಣೇಶ ನಗರ, ಆನಂದ ನಗರ ತಗ್ಗು ಪ್ರದೇಶ, ಪಡದಯ್ಯನ ಹಕ್ಕಲು, ನೇಕಾರನಗರ, ಜಂಗ್ಲಿಪೇಟೆ, ಸಿದ್ದಾರೂಢಸ್ವಾಮಿ ಮಠದ ಹಿಂಭಾಗ, ಸಿಮ್ಲಾ ನಗರ ಮುಖ್ಯ ರಸ್ತೆ, ಗದಗ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳಲ್ಲಿ ಅಪಾರ ಪ್ರಮಾಣ ನೀರು ರಸ್ತೆಯಲ್ಲಿಯೇ ಹರಿಯಿತು. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು. ರಸ್ತೆಯಲ್ಲಿಯೇ ನೀರು ಹೊಳೆಯಂತೆ ಹರಿಯುತ್ತಿದ್ದುದು ಕಂಡು ಬಂದಿತು. ಕೆಲವು ವಾಹನಗಳೂ ನೀರಿನ ರಭಸಕ್ಕೆ ಬಿದ್ದಿವ. ನಗರದಲ್ಲಿ ಸುರಿದ ರಭಸದ ಮಳೆಗೆ ಹಲವು ಕಡೆ ಗಿಡ-ಮರಗಳು ನೆಲಕ್ಕುರುಳಿದ್ದು, ರಸ್ತೆಯ ಮೇಲೆಲ್ಲಾ ನೀರು ನಿಲ್ಲುವ ಮೂಲಕ ಸಂಪೂರ್ಣ ಜಲಾವೃತಗೊಂಡಿತ್ತು. ರಾತ್ರಿಯೂ ಹುಬ್ಬಳ್ಳಿಯಲ್ಲಿ ಮಳೆ ಮುಂದುವರಿದಿತ್ತು.

ಹುಬ್ಬಳ್ಳಿಯ ದೇಶಪಾಂಡೆ ನಗರದ ದೊಡ್ಡ ನಾಲೆ ತುಂಬಿ ಸುಮಾರು 2-3 ಅಡಿ ನೀರು ಹೊರ ಬಂದಿರುವುದು ಕಂಡು ಬಂದಿತು. ಇದರಿಂದ ಅಕ್ಕಪಕ್ಕದ ಬಡಾವಣೆಗಳೂ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು.

ಬೆಳಗಾವಿ ಮಳೆ

ಕಳೆದ ನಾಲ್ಕು ತಿಂಗಳಿನಿಂದ ಬಿಸಿಲಿನಿಂದ ಬಸವಳಿದಿದ್ದ ಕುಂದಾ ನಗರಿ ಬೆಳಗಾವಿ ಭಾಗದ ಜನತೆಗೆ ಮಳೆ ತಂಪುಂಟು ಮಾಡಿದ್ದರೂ, ಭಾರಿಯಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬೆಳಗಾವಿ ನಗರದ ಹಲವು ರಸ್ತೆಗಳು ಹೊಳೆಯಂತೆ ,ಅನೇಕ ಕಡೆಗಳಲ್ಲಿ ಸಣ್ಣ ಪುಟ್ಟ ಗಿಡಗಳು ಧರೆಗುರುಳಿವೆ. ಗಾಳಿಯಿಂದ ಕೆಲವು ಕಡೆಗೆ ಮನೆಗಳ ಮೇಲಿನ ಶೀಟುಗಳೂ ಹಾರಿ ಹೋಗಿವೆ. ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲವು ಅಂಗಡಿ-ಮಳಿಗೆಗಳಲ್ಲೂ ಭಾರೀ ಪ್ರಮಾಣದ ನೀರು ನುಗ್ಗಿ ತೊಂದರೆಯಾಗಿದೆ.

ಶನಿವಾರ ಸಂಜೆ 4 ಗಂಟೆ ನಂತರ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಶಗಳಲ್ಲಿ ಆರಂಭವಾದ ಬಿರುಗಾಳಿ ಸಹಿತ ಮಳೆಯಿಂದ ಅಲ್ಲಲ್ಲಿ ಹಾನಿಗಳಾಗಿವೆ. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಮಳೆ ಸುರಿದಿದೆ. ಜೋರಾಗಿ ಬೀಸಿದ ಬಿರುಗಾಳಿಯಿಂದ ಮರಗಳು ಉರುಳಿ ಬಿದಿವೆ. ಕೆಲವು ಕಡೆ ರಂಬೆಗಳು ಮುರಿದು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಸಂಕೇಶ್ವರ ಭಾಗದಲ್ಲಿ ಸಂಜೆ ನಂತರ ಭಾರೀ ಮಳೆಯಾಗಿದೆ. ಈ ವೇಳೆ ಹಳ್ಳ ಉಕ್ಕಿ ಹರಿದು ಕಾರು ಹಾಗೂ ಪಿಕ್‌ ಅಪ್‌ ವಾಹನವೂ ನೀರಿನಲ್ಲಿ ಕೊಚ್ಚಿ ಹೋಗಿವೆ. ನೀರಿನ ರಭಸಕ್ಕೆ ತಡೆಯಲು ಆಗಿಲ್ಲ.

IPL_Entry_Point