ಕರ್ನಾಟಕದ ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ ತಣಿಯಿತು ಮಳೆರಾಯನ ಆರ್ಭಟ; ಇಂದು ಹಗುರ, ಸಾಧಾರಣ ಮಳೆಯ ಮುನ್ಸೂಚನೆ-north karnataka weather today july 29 rain alert in hubli belgaum kalaburagi bellary rain news in kannada uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ ತಣಿಯಿತು ಮಳೆರಾಯನ ಆರ್ಭಟ; ಇಂದು ಹಗುರ, ಸಾಧಾರಣ ಮಳೆಯ ಮುನ್ಸೂಚನೆ

ಕರ್ನಾಟಕದ ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ ತಣಿಯಿತು ಮಳೆರಾಯನ ಆರ್ಭಟ; ಇಂದು ಹಗುರ, ಸಾಧಾರಣ ಮಳೆಯ ಮುನ್ಸೂಚನೆ

ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆಯ ಆರ್ಭಟ ಕಡಿಮೆ ಆಗಿದ್ದು, ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ದಾಖಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಆಗಿದೆ. ಇದರ ವಿವರ ಇಲ್ಲಿದೆ.

 ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆಯ ತೀವ್ರತೆ ಕಡಿಮೆ ಆಗಲಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆಯ ತೀವ್ರತೆ ಕಡಿಮೆ ಆಗಲಿದೆ. (ಸಾಂಕೇತಿಕ ಚಿತ್ರ) (Photo by Vijay Bate/HT Photo)

ಬೆಂಗಳೂರು: ಕರ್ನಾಟಕದ ಉತ್ತರ ಒಳನಾಡಿನ ಎಲ್ಲ 11 ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ನಿನ್ನೆ (ಜು.27)ಯಿಂದ ಕಡಿಮೆಯಾಗತೊಡಗಿದೆ. ಇಂದು ಈ ಎಲ್ಲ ಜಿಲ್ಲೆಗಳಲ್ಲಿ ಹಗುರ, ಸಾಧಾರಣ ಮಳೆಯ ಮುನ್ಸೂಚನೆಯನ್ನು ಭಾರತದ ಹವಾಮಾನ ಇಲಾಖೆ ನೀಡಿದೆ.

ಆದಾಗ್ಯೂ, ಕೆಲವು ಕಡೆ ಭಾರಿ ಮಳೆಯ ಮುನ್ಸೂಚನೆ ಇದೆ. ಬಿರುಗಾಳಿಯ ಆರ್ಭಟ ಕಡಿಮೆ ಆಗುತ್ತಿದೆಯಾದರೂ, ಬಿರುಗಾಳಿ ಬೀಸುವುದು ನಿಂತಿಲ್ಲ. ಜುಲೈ 30ರ ತನಕ ಬಿರುಗಾಳಿಯ ವೇಗ ಗಂಟೆಗೆ 30ರಿಂದ 40 ಕಿ.ಮೀ. ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವಿವರ ನೀಡಿದೆ.

ಬಾಗಲ ಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಮಳೆ ಪರಿಸ್ಥಿತಿ ಸಹಜಸ್ಥಿತಿಗೆ ಮರಳತೊಡಗಿದೆ. ಜನಜೀವನ ಮತ್ತೆ ಸಹಜವಾಗತೊಡಗಿದ್ದು, ನಾಶನಷ್ಟಗಳ ಅಂದಾಜಿಗೆ ಜಿಲ್ಲಾಡಳಿತ ಮುಂದಾಗಿದೆ.

ಗದಗ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 21 ಮತ್ತು ಗರಿಷ್ಠ 26 ಇರಲಿದ್ದು, ಮೋಡ ಕವಿದ ವಾತಾವರಣದೊಂದಿಗೆ ಸಣ್ಣ ಪ್ರಮಾಣದ ಮಳೆಯನ್ನೂ ನಿರೀಕ್ಷಿಸಬಹುದು.

ಕಲಬುರಗಿ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 23 ಮತ್ತು ಗರಿಷ್ಠ 29 ಇರಲಿದ್ದು, ಮೋಡ ಕವಿದ ವಾತಾವರಣದ ಜೊತೆಗೆ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಉತ್ತರ ಒಳನಾಡು ಭಾಗದಲ್ಲಿ ಬುಧವಾರ (ಜು.26) ದಿಂದ ಗುರುವಾರದ ತನಕ ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿ.ಮೀ ಇದ್ದರೆ, 28ರಿಂದ 30ರ ತನಕ ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿ,ಮೀ. ಇರಲಿದೆ ಎಂದು ಇಲಾಖೆ ಹೇಳಿದೆ.

ಮುಂಗಾರು ಹಂಗಾಮಿನ ಮಳೆ ವಿವರ ಹೀಗಿದೆ..

ಜೂನ್‌ ಒಂದರಿಂದೀಚೆಗೆ ಜುಲೈ 27ರ ತನಕದ ಅಂಕಿ ಅಂಶದ ಪ್ರಕಾರ, ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಉತ್ತರ ಒಳನಾಡು ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿ ಧಾರವಾಡ, ಹಾವೇರಿ, ಕಲಬುರಗಿ, ವಿಜಯನಗರ, ದಾವಣಗೆರೆಗಳಲ್ಲಿ ಭಾರಿ ಮಳೆಯಾಗಿದೆ. ಇನ್ನುಳಿದಂತೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಮಂಡ್ಯ, ಚಿಕ್ಕಮಗಳೂರು, ಮೈಸೂರು, ತುಮಕೂರು, ಶಿವಮೊಗ್ಗಗಳಲ್ಲಿ ಸಾಧಾರಣ ಮಳೆಯಾಗಿದೆ.

ಕೊಡಗು ಮತ್ತು ರಾಮನಗರಗಳಲ್ಲಿ ಮಳೆ ಕೊರತೆ ಕಾಣಿಸಿಕೊಂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮಳೆ ಮುನ್ಸೂಚನೆ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಹಾಗೂ ಅಲ್ಲಲ್ಲಿ ಭಾರಿ ಮಳೆ. ಮಲೆನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದ ವ್ಯಾಪಕವಾಗಿ ಸಾಧಾರಣ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.