HD Kumaraswamy: "ಧರ್ಮ, ಜಾತಿ ಅಲ್ಲ.. 'ಅಭಿವೃದ್ಧಿ' ಅಜೆಂಡಾ ಇಟ್ಟುಕೊಂಡು ಜೆಡಿಎಸ್ ಪ್ರಚಾರ"
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಂಚರತ್ನ ಯೋಜನೆಗಳನ್ನು ಇಟ್ಟುಕೊಂಡು ಅಭಿವೃದ್ಧಿಯ ಅಜೆಂಡಾದೊಂದಿಗೆ ಜನರ ಮುಂದೆ ಹೋಗುತ್ತೇನೆಯೇ ಹೊರತು, ಜಾತಿ ಮತ್ತು ಧರ್ಮ ಇಟ್ಟುಕೊಂಡು ಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮುದ್ದೇಬಿಹಾಳ (ವಿಜಯಪುರ): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಂಚರತ್ನ ಯೋಜನೆಗಳನ್ನು ಇಟ್ಟುಕೊಂಡು ಅಭಿವೃದ್ಧಿಯ ಅಜೆಂಡಾದೊಂದಿಗೆ ಜನರ ಮುಂದೆ ಹೋಗುತ್ತೇನೆಯೇ ಹೊರತು, ಜಾತಿ ಮತ್ತು ಧರ್ಮ ಇಟ್ಟುಕೊಂಡು ಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಟ್ರೆಂಡಿಂಗ್ ಸುದ್ದಿ
ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ಬಳವಾಟ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ ನಿಮಿತ್ತ ಗ್ರಾಮ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿ, ಸಾವಿರಾರು ಜನರನ್ನು ಅನಾಥರನ್ನಾಗಿ ಮಾಡಿದ್ದೇ ಬಿಜೆಪಿ. ಕರ್ನಾಟಕ ರಾಜ್ಯ ಅತ್ಯಂತ ಶಾಂತಿಯುತವಾಗಿ ಇದ್ದ ರಾಜ್ಯ. ಜನ ನೆಮ್ಮದಿಯಿಂದ ಇದ್ದರು. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬಿಜೆಪಿ ಬೆಂಕಿ ಹಚ್ತಿದೆ. ರಾಜ್ಯದಲ್ಲಿ ಶಾಂತಿ ನೆಲೆಸಬೇಕು. ಅದಕ್ಕೆ ಜೆಡಿಎಸ್ ಬರಲೇಬೇಕು. ಜೆಡಿಎಸ್ ಸರಕಾರ ಬರುವ ಅನಿವಾರ್ಯತೆ ಹಿಂದೆಂದಿಗಿಂತ ಈಗ ಹೆಚ್ಚಿದೆ ಎಂದು ತಿಳಿಸಿದರು.
ಮುಂದಿನ ಚುನಾವಣೆಗೆ ನಾನು ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡ್ತಿಲ್ಲ. ಪಂಚರತ್ನ ಯೋಜನೆಯನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡ್ತಿದ್ದೇನೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಜನರ ಜೀವನ ಉತ್ತಮಗೊಳಿಸುವೆ. ಕೋವಿಡ್‌ನಿಂದ ಸಾವನ್ನಪ್ಪಿದವರಿಗೆ 1 ಲಕ್ಷ ರೂ. ಪರಿಹಾರ ಕೊಡುತ್ತೇವೆ ಎಂದಿದ್ದರು. ಆದರೆ ಇದುವರೆಗೂ ಯಾರಿಗೂ ಒಂದು ರೂಪಾಯಿ ಸಿಕ್ಕಿಲ್ಲ.ಜೆಡಿಎಸ್ ಅಧಿಕಾರಕ್ಕೆ ಬಂದರೆ ಆರೋಗ್ಯ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಸುಧಾರಿಸುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಜೆಡಿಎಸ್ ಪಕ್ಷದ ಬಗ್ಗೆ ಹಾಗೂ ಪಂಚರತ್ನ ರಥಯಾತ್ರೆ ಕುರಿತು ಹಾಸನದಲ್ಲಿ ಟೀಕೆ ಮಾಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಹೆಚ್.ಡಿ.ಕುಮಾರಸ್ವಾಮಿ, ನನ್ನ ನೇತೃತ್ವದ ಮೈತ್ರಿ ಸರಕಾರವನ್ನು ಕೆಡವಲು ಧರ್ಮಸ್ಥಳದ ಸಿದ್ದವನದಲ್ಲಿ ನಡೆಸಿದ ಷಡ್ಯಂತ್ರವನ್ನು ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಆಸೆಗಾಗಿ ಪಕ್ಷ ಬಿಟ್ಟು ಹೋಗಿದ್ದು ನೆನಪು ಇದೆಯಾ ನಿಮಗೆ? ನಿಮ್ಮಿಂದ ನಾನು ಪಾಠವನ್ನು ಹೇಳಿಸಿಕೊಳ್ಳುವ ಅಗತ್ಯ ನನಗೆ ಇಲ್ಲ. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಕಟ್ಟಿದ ಪಕ್ಷವ ಉಳಿಸಿಕೊಂಡು ಹೊರಟಿದ್ದೇವೆ ನಾವು. ಅಂಥ ಪಕ್ಷವನ್ನು, ಅವರ ಸಿದ್ದಾಂತವನ್ನು ಗಾಳಿಗೆ ಬಿಟ್ಟು ಸಿಎಂ ಕುರ್ಚಿ ಹಿಂದೆ ಓಡಿ ಹೋದವರು ಯಾರು? ನಿಮ್ಮ ಯೋಗ್ಯತೆ ಏನು ಅಂತಾ ಗೊತ್ತಿದೆ ಎಂದು ಹೆಚ್ಡಿಕೆ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಲು ನೀವ್ ಏನು ಮಾಡಿದಿರಿ ಎನ್ನುವುದು ಗೊತ್ತಿದೆ. ಎಲ್ಲಿ ಕೂತು, ಯಾರ ಜತೆ ಕೂಡಿ ಕುತಂತ್ರ ಮಾಡಿದಿರಿ ಎನ್ನುವುದು ನನಗೆ ತಿಳಿದಿದೆ. ಬಿಜೆಪಿಗೆ ಅಧಿಕಾರ ಹೋಗಬಾರದು ಎಂದು ನಿಮ್ಮ ಪಕ್ಷದ ವರಿಷ್ಠರು ನಮ್ಮ ಬಾಗಿಲಿಗೆ ಬಂದಿದ್ದರು. ಖರ್ಗೆ, ಪರಮೇಶ್ವರ್, ಡಿಕೆ ಶಿವಕುಮಾರ್ ಇದ್ದಾರೆ. ಅವರಿಗೆ ಇದೆಲ್ಲಾ ಗೊತ್ತಿಲ್ಲವೆ? ಆಗ ನೀವು ಎಲ್ಲಿದ್ದೀರಿ? ಎಂದು ಕಿಡಿಕಾರಿದರು.
ನನ್ನ ಸರಕಾರ ಹೇಗೆ ಹೋಯಿತು? ಅದನ್ನು ತೆಗೆಯಲು ನಿಮ್ಮ ಕಾಣಿಕೆ ಏನು? ಬಿಜೆಪಿಯವರ ಜತೆ ಹೇಗೆಲ್ಲಾ ಕುಮ್ಮಕ್ಕಾಗಿದ್ದಿರಿ? ಯಾರನ್ನೆಲ್ಲ ಎಲ್ಲೆಲ್ಲಿಗೆ ಕಳಿಸಿದಿರಿ ಎನ್ನುವುದು ನನಗೆ ಮಾಹಿತಿ ಇದೆ. ಆದರೆ, ಜಾತ್ಯತೀತ ತತ್ವ ಆಸ್ತಿ ಎನ್ನುವ ರೀತಿ ವರ್ತಿಸುತ್ತಿದ್ದಿರಿ. ಜಯಪ್ರಕಾಶ್ ನಾರಾಯಣ್ ಅವರ ಸಿದ್ದಾಂತಕ್ಕೆ ನೀವು ಬದ್ಧರಾಗಿ ಇದ್ದಿದರೆ ನೀವು ಅಧಿಕಾರಕ್ಕಾಗಿ ಮಾತೃಪಕ್ಷವನ್ನು ಕಾಲಿನಲ್ಲಿ ಒದ್ದು ಹೋಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ಬಿಜೆಪಿ ಪಕ್ಷದವರಿಗಿಂತ ಭ್ರಷ್ಟಾಚಾರದಲ್ಲಿ ನೀವೇನೂ ಕಮ್ಮಿ ಇಲ್ಲ. ನೀವು ಬೇಕಾದಷ್ಟು ಅಕ್ರಮಗಳನ್ನು ನಡೆಸಿದ್ದೀರಿ. ನಾನು ಎತ್ತಿದ ಪ್ರಶ್ನೆಗಳಿಗೆ ಈವರೆಗೆ ಉತ್ತರ ಕೊಡಲು ನಿಮ್ಮಿಂದ ಉತ್ತರ ಕೊಡಲು ಆಗಿಲ್ಲ. ಮತ್ತೆ ನಮ್ಮ ಪಕ್ಷದ ಬಗ್ಗೆ ನಾಲಿಗೆ ಜಾರಿ ಬಿಡುತ್ತಿರಾ? ನಾಚಿಕೆ ಇಲ್ಲವೇ? ಎಂದು ಕೇಳಿದರು.
ನಿಮ್ಮದು ಪ್ರಜಾಧ್ವನಿ ಅಲ್ಲ, ಅಧಿಕಾರಕ್ಕಾಗಿ ನಡೆಸುತ್ತಿರುವ ಧ್ವನಿ. ಪಂಚರತ್ನ ರಥಯಾತ್ರೆ 50 ದಿನ ದಾಟಿ ಮುನ್ನಡೆಯುತ್ತಿದೆ. ಅದು ಇವರೆಲ್ಲರ ನಿದ್ದೆಗೆಡಿಸಿದೆ. ಹೋದ ಕಡೆ ಎಲ್ಲಾ ನಮಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಹಿಸಿಕೊಳ್ಳಲು ನಿಮಗೆ ಆಗುತ್ತಿಲ್ಲ ಎಂದರು.