ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುಗತಿ; ಸರ್ಕಾರಿ-ಖಾಸಗಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಹೇಗಿದೆ?
ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಪ್ರತ್ಯೇಕಿಸಿದ ವಾರ್ಡ್, ಆಕ್ಸಿಜನ್ ಸೇರಿದಂತೆ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಏನೆಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ? ಖಾಸಗಿ ಆಸ್ಪತ್ರೆಗಳು ಹೇಗೆ ಸಜ್ಜುಗೊಂಡಿವೆ? ಇಲ್ಲಿದೆ ಮಾಹಿತಿ. (ವರದಿ-ಎಚ್.ಮಾರುತಿ)

ಬೆಂಗಳೂರು: ಕೋವಿಡ್ನ ಹೊಸತಳಿ ಜೆಎನ್ 1 ಮಹಾರಾಷ್ಟ್ರ ಮತ್ತು ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯದಲ್ಲೂ ಅದರ ಸೋಂಕು ಹೆಚ್ಚಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ 150 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಯಾವುದೇ ರೀತಿಯ ಆತಂಕಪಡಬೇಕಿಲ್ಲ. 2020 ಮತ್ತು 2022ರ ನಡುವೆ ವ್ಯಾಪಕವಾಗಿ ಹರಡುವ ಲಕ್ಷಣಗಳಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.ಆದರೂ ನಗರದ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಆಸ್ಪತ್ರೆಗಳನ್ನು ಕೋವಿಡ್ ರೋಗಿಗಳಿಗಾಗಿ ಸಜ್ಜುಗೊಳಿಸಲಾಗುತ್ತಿದೆ.
ಕೆಆರ್ ಮಾರುಕಟ್ಟೆ ಹತ್ತಿರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತ್ಯೇಕ 40 ಬೆಡ್, 10 ಐಸಿಯು ಹಾಸಿಗೆಗಳು, N95 ಮಾಸ್ಕ್ಗಳು ಮತ್ತು ಪಿಪಿಇ ಕಿಟ್ಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಆಕ್ಸಿಜನ್ ಕಾನ್ಸಿಂಟ್ರೇಟರ್ ಮತ್ತು ಜನರೇಟರ್ಗಳ ಸೌಲಭ್ಯ ಕೂಡ ಇದೆ ಎಂದು ಅಲ್ಲಿನ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ದೀಪಕ್ ಹೇಳಿದ್ದಾರೆ. ಒಂದು ವೇಳೆ ಕೋವಿಡ್ ಹರಡುವಿಕೆ ಹೆಚ್ಚಾದರೆ ನೂರು ಬೆಡ್ಗಳವರೆಗೆ ಮೀಸಲಿಡಲಾಗುತ್ತಿದೆ ಎಂದೂ ತಿಳಿಸಿದ್ದಾರೆ. ಕಳೆದ 3 ಕೋವಿಡ್ ಪರಿಸ್ಥಿತಿಯಲ್ಲಿ 16,000 ರೋಗಿಗಳನ್ನು ಪರೀಕ್ಷಿಸಲಾಗಿದೆ. ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ 30 ಐಸಿಯು ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ.
ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಟಿ ಕೆಂಪರಾಜು ಅವರು ಒಂದು ವೇಳೆ ಕೋವಿಡ್ ಉಲ್ಬಣಗೊಂಡರೆ ಆಸ್ಪತ್ರೆಯ 2 ಮಹಡಿಗಳನ್ನು ಸಿದ್ದಪಡಿಸಲಾಗುತ್ತದೆ. ಎಲ್ಲ ಬೆಡ್ ಗಳಿಗೂ ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ. ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಘಟಕವೂ ಇದೆ ಎನ್ನುತ್ತಾರೆ. ಬನ್ನೇರುಘಟ್ಟದ ಆಸ್ಪತ್ರೆಯ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕಿ ಡಾ ಶೀಲಾ ಚಕ್ರವರ್ತಿ ಅವರು ಪ್ರತಿಕ್ರಿಯಿಸಿ ನಮ್ಮ ಆಸ್ಪತ್ರೆಯಲ್ಲಿ ಯಾವುದೇ ಪಾಸಿಟೀವ್ ಪ್ರಕರಣ ಪತ್ತೆಯಾಗಿಲ್ಲ. ಆದರೂ ಉಸಿರಾಟದ ತೊಂದರೆ ಇರುವ ಮತ್ತು ಆಕ್ಸಿಜ್ನ ಲೆವಲ್ ಕಡಿಮೆ ಇರುವ ರೋಗಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಮುನೆಚ್ಚರಿಕೆ ಕ್ರಮವಾಗಿ ಆರು ಬೆಡ್ ಗಳನ್ನು ಕಾಯ್ದಿರಿಸಲಾಗಿದೆ ಎನ್ನುತ್ತಾರೆ.
ರಾಮಯ್ಯ ಆಸ್ಪತ್ರೆ ಮುಖ್ಯಸ್ಥರು ಹೇಳಿದ್ದೇನು?
ಮತ್ತಿಕೆರೆಯ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿದ ಒಂದು ಭಾಗವನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಆಕ್ಸಿಜನ್ ಕೊರತೆ ಇಲ್ಲ. 500 ಬೆಡ್ ಗಳಿಗಾಗುವಷ್ಟು ಲಭ್ಯತೆ ಇದೆ ಎಂದು ಅಲ್ಲಿನ ಮುಖ್ಯಸ್ಥರು ತಿಳಿಸಿದ್ದಾರೆ. ಬೊಮ್ಮಸಂದ್ರದ ನಾರಾಯಣ ಹೆಲ್ಸ್ ಸಿಟಿಯ ಡಾ.ನಿಧಿ ಮೋಹನ್ ಕೋವಿಡ್ ವ್ಯಾಪಕವಾಗಿ ಹರಡುವ ಲಕ್ಷಣಗಳಿಲ್ಲ. ನಮ್ಮಲ್ಲಿ 15 ಪ್ರತ್ಯೇಕಿಸಿದ ಬೆಡ್ ಗಳಿವೆ. ಒಂದು ವೇಳೆ ರೋಗ ಉಲ್ಬಣಿಸಿದರೆ 200 ಬೆಡ್ ಗಳವರೆಗೆ ಸೌಲಭ್ಯ ಒದಗಿಸಲು ಆಸ್ಪತ್ರೆ ಸಿದ್ದ ಎನ್ನುತ್ತಾರೆ.
ಅನೇಕ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳಿಗಾಗಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಾವು ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ನರ್ಸ್ಗಳನ್ನು ನೇಮಕ ಮಾಡಿಕೊಂಡಿವೆ. ಆಕ್ಸಿಜನ್ ಜನರೇಟರ್ಗಳ ವ್ಯವಸ್ಥೆಯನ್ನೂ ಮಾಡಿಕೊಂಡಿವೆ. ಶೇಷಾದ್ರಿಪುರಂ ಆಸ್ಪತ್ರೆಯ ಅಪೊಲೋ ಆಸ್ಪತ್ರೆಯಲ್ಲೂ ಉಸಿರಾಟದ ತೊಂದರೆ ಇರುವ ಎಲ್ಲರಿಗೂ ಪರೀಕ್ಷೆ ಮಾಡಲಾಗುತ್ತಿದೆ. ಪ್ರತ್ಯೇಕಿಸಿದ ವಾರ್ಡ್ಗಳನ್ನೂ ಸಿದ್ಧಪಡಿಸಲಾಗಿದೆ. ಜ್ವರದ ರೋಗಿಗಳಿಗಾಗಿ ಪ್ರತ್ಯೇಕ ಕ್ಲಿನಿಕ್ ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.