Nyaya bele angadi: ಅಗತ್ಯ ಇರುವ ಕಡೆಗೆ ನ್ಯಾಯಬೆಲೆ ಅಂಗಡಿ; ಆಹಾರ ಇಲಾಖೆ ಉಪನಿರ್ದೇಶಕರಿಗೆ ಅಧಿಕಾರ
Nyaya bele angadi: ಪ್ರಸ್ತುತ 500 ಪಡಿತರದಾರರು ಇರುವಂತಹ ಪ್ರದೇಶಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವ ಪದ್ದತಿ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆದು ಪಡಿತರ ಧಾನ್ಯಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಾಧುಸ್ವಾಮಿ ವಿವರಿಸಿದರು.
ಬೆಂಗಳೂರು: ಅಗತ್ಯಕ್ಕೆ ತಕ್ಕಂತೆ ನ್ಯಾಯಬೆಲೆ ಅಂಗಡಿ ತೆರೆಯಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ವಿಧಾನಸಭೆಗೆ ಇಂದು ತಿಳಿಸಿದರು.
ಮಧುಗಿರಿ ಶಾಸಕ ವೀರಭದ್ರಯ್ಯ ಎಂ.ವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಪಡಿತರ ಚೀಟಿದಾರರಿಗೆ ಈಗಾಗಲೇ ಹತ್ತಿರದಲ್ಲಿರುವ ನ್ಯಾಯಬೆಲೆ ಅಂಗಡಿಗಳ ಮುಖಾಂತರ ಸಮರ್ಪಕವಾಗಿ ಪಡಿತರ ಧಾನ್ಯಗಳನ್ನು ವಿತರಿಸಲು ಸರಕಾರ ಕ್ರಮಕೈಗೊಂಡಿದೆ. ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ ನಿಯಂತ್ರಣ ಆದೇಶದ ಅನ್ವಯ ಅಗತ್ಯವಿರುವ ಕಡೆ ನ್ಯಾಯಬೆಲೆ ಅಂಗಡಿ ತೆರೆಯುವುದಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ/ಉಪನಿರ್ದೇಶಕರಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.
ಪ್ರಸ್ತುತ 500 ಪಡಿತರದಾರರು ಇರುವಂತಹ ಪ್ರದೇಶಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವ ಪದ್ದತಿ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆದು ಪಡಿತರ ಧಾನ್ಯಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಈಗಿನ ನಿಯಮ ಪ್ರಕಾರ, 500 ಪಡಿತರ ಕಾರ್ಡುಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಪಡಿತರ ಅಂಗಡಿ ತೆರೆಯಲು ಅವಕಾಶವಿದೆ. ಕೇವಲ 100 ಜನ ಪಡಿತರ ಪಡೆಯುವ ಕಡೆ ನ್ಯಾಯಬೆಲೆ ಅಂಗಡಿ ತೆರೆದಲ್ಲಿ ಸರ್ಕಾರಕ್ಕೆ ಹೊರೆಯಾಗುತ್ತದೆ. ಪಡಿತರ ವಿತರಕರಿಗೆ ಪರವಾನಗಿ ನೀಡಬೇಕು. ಸಾಗಾಣಿಕೆ ವೆಚ್ಚ ಎಲ್ಲವೂ ದುಬಾರಿ ಆಗುವ ಕಾರಣ ಅದು ಸರ್ಕಾರಕ್ಕೆ ಹೊರೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಸಚಿವರು ಸದನದಲ್ಲಿ ಸ್ಪಷ್ಪಪಡಿಸಿದರು.
ಆದ್ಯತಾ ಪಡಿತರ ಚೀಟಿಯನ್ನು ಕೋರಿ ಈಗಾಗಲೇ ಅರ್ಜಿಯನ್ನು ಸಲ್ಲಿಸಿರುವ ಅರ್ಹ ಕುಟುಂಬಗಳ ವಾಸಸ್ಥಳ ಪರಿಶೀಲನೆ ಕೈಗೊಂಡು ಹೊಸ ಆದ್ಯತಾ ಪಡಿತರ ಚೀಟಿ ವಿತರಿಸುವ ಕಾರ್ಯ ಜಾರಿಯಲ್ಲಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಗಮನಿಸಬಹುದಾದ ಇತರೆ ಸಣ್ಣ ಸುದ್ದಿಗಳು
ಪಶ್ಚಿಮವಾಹಿನಿ ಯೋಜನೆ ಅನುಷ್ಠಾನ
ಕರಾವಳಿ ಜಿಲ್ಲೆಗಳಲ್ಲಿ ಪಶ್ವಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಪಶ್ಚಿಮವಾಹಿನಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ವಿಧಾನಸಭೆಗೆ ತಿಳಿಸಿದರು.
ಸದಸ್ಯ ಲಾಲಾಜಿ ಆರ್ ಮೆಂಡನ್ ಇವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು. ಸದರಿ ಯೋಜನೆಯಿಂದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವುದಲ್ಲದೇ ಪರೋಕ್ಷವಾಗಿ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗಿರುತ್ತದೆ, ಇದರಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಬಹುತೇಕ ನಿವಾರಿಸಬಹುದಾಗಿದೆ ಎಂದು ಸಚಿವರು ಹೇಳಿದರು.
ಗ್ರೂಪ್ ‘ಸಿ’ ವೃಂದದ ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಪ್ರಕಟ
ಕರ್ನಾಟಕ ಲೋಕ ಸೇವಾ ಆಯೋಗವು ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್ ‘ಸಿ’ ವೃಂದದ ಕಿರಿಯ ಇಂಜಿನಿಯರ್ (ಸಿವಿಲ್) 325+05 ಹೈ.ಕ. ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಮತ್ತು ಕಟ್-ಆಫ್ ಅಂಕಗಳನ್ನು ಫೆ. 10ರಂದು ಆಯೋಗದ ವೆಬ್‍ಸೈಟ್ http://kpsc.kar.nic.in/Lists ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.