Obituary: 'ದಟ್ಸ್ ಕನ್ನಡ'ದ ಎಸ್‌ಕೆ ಶಾಮಸುಂದರ್ ಹೃದಯಾಘಾತದಿಂದ ನಿಧನ; ಆನ್‌ಲೈನ್‌ನಿಂದ ಶಾಶ್ವತ ಆಫ್‌ಲೈನ್‌ಗೆ ಸರಿದ ಹಿರಿಯ ಪತ್ರಕರ್ತ
SK Shyam Sundar Passed Away: ಕರ್ನಾಟಕದ ಹಿರಿಯ ಪತ್ರಕರ್ತ ಎಸ್‌ಕೆ ಶಾಮಸುಂದರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕನ್ನಡ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಎಲ್ಲರ ಪ್ರೀತಿಯ ಶಾಮಿಯ ಕುರಿತು ಶ್ರೀನಿವಾಸ ಮಠ ಇಲ್ಲಿ ನೆನಪಿಸಿಕೊಂಡಿದ್ದಾರೆ.

SK Shyam Sundar Passed Away:ಡಿಜಿಟಲ್ ಜರ್ನಲಿಸಂ ಇವತ್ತಿಗೆ ಯಾರಿಗಾದರೂ ಅರ್ಥ ಮಾಡಿಸಬೇಕು ಅಂದರೆ ಬಲು ಸಲೀಸು. ಆದರೆ ಅದನ್ನು ಅದ್ಯಾವುದೋ ಹೊಸ ತರಕಾರಿಯೋ ಹಣ್ಣೋ ಮನೆ ಗುಡಿಸುವ ಪೊರಕೆನೋ ಎಂಬಂತೆ ನೋಡುತ್ತಿದ್ದ ಕಾಲದಲ್ಲಿಯೇ ಅದರ ಪಾಕವನ್ನು ಕನ್ನಡದಲ್ಲಿ ಸಿದ್ಧಪಡಿಸಿ ಜನರಿಗೆ ರುಚಿ ಹತ್ತಿಸಿದವರು ಎಸ್.ಕೆ.ಶ್ಯಾಮ್ ಸುಂದರ್. ಇದಕ್ಕಿಂತ ‘ಶಾಮಿ’ ಅಂದರೆ ಹೆಚ್ಚು ಜನರಿಗೆ, ಅದರಲ್ಲೂ ಪತ್ರಕರ್ತರಿಗೆ ಬೇಗ ಗೊತ್ತಾಗುತ್ತದೆ. ಅಂಥ ಶಾಮಿ ‘ಸೈನ್ ಆಫ್’ ಮಾಡಿದ್ದಾರೆ. ಶಾಮ ಸುಂದರ್ ಅವರು ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಇದ್ದರು. ಶಂಕರ್ ನಾಗ್ ಸರ್ಕಲ್ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಅವಿವಾಹಿತರಾಗಿದ್ದ ಶ್ಯಾಮ್ ಏಪ್ರಿಲ್ 14ನೇ ತಾರೀಕು ಸೋಮವಾರ ನಿಧನರಾಗಿದ್ದಾರೆ. ಅವರು ಮೂಲತಃ ಚಿತ್ರದುರ್ಗದವರು. 72 ವರ್ಷದ ಶಾಮಣ್ಣನಿಗೆ ಪತ್ರಿಕೋದ್ಯಮದಲ್ಲಿಯೇ 39 ವರ್ಷಗಳಿಗೂ ಅಧಿಕ ಅನುಭವವಿತ್ತು.
ದಟ್ಸ್ ಕನ್ನಡ ಎಂಬ ವೆಬ್ ಸೈಟ್ ಇವತ್ತಿಗೆ ಒನ್ ಇಂಡಿಯಾ ಕನ್ನಡ ಅಂತಾಗಿದೆ. ಇವತ್ತಿನ ಡಿಜಿಟಲ್ ವೆಬ್ ಸೈಟ್ ಗಳು ಏನೆಲ್ಲ ನೋಡುತ್ತಾ ಇದ್ದೀವೋ, ಅಂದರೆ ಕನ್ನಡದ ವೆಬ್ ಸೈಟ್ ಗಳು ನೋಡುತ್ತಾ ಬಂದದ್ದು ಇದೇ ‘ದಟ್ಸ್ ಕನ್ನಡ’ವನ್ನು. ಆ ಶುದ್ಧ ಕನ್ನಡದ ವೆಬ್ ಸೈಟ್ ಅನ್ನು ತುಂಬ ಸೊಗಸಾಗಿ ರೂಪಿಸಿದವರು ಎಸ್.ಕೆ. ಶಾಮಸುಂದರ್. ಅವರೊಬ್ಬ ವಾಚಾಳಿ ಪತ್ರಕರ್ತ. ವೆಬ್ ಸೈಟ್ ಆರಂಭವಾದ ದಿನಗಳಲ್ಲಿ, ಅದರಲ್ಲೂ ಆಗ ಇಂಟರ್ ನೆಟ್ ಡೇಟಾ ಅಂದರೆ ಚಿನ್ನದಷ್ಟು ದುಬಾರಿಯಾಗಿದ್ದ ಕಾಲದಲ್ಲಿ ಎದುರಿಗೆ ಸಿಕ್ಕವರಿಗೆಲ್ಲ ತಾವು ಜೀವ ಕೊಟ್ಟ, ರೂಪು ನೀಡಿ, ತಿದ್ದಿ- ತೀಡಿದ ಶುದ್ಧ ಕನ್ನಡ ಮಣ್ಣಿನ ದಟ್ಸ್ ಕನ್ನಡ ಎಂಬ ವೆಬ್ ಸೈಟ್ ಬಗ್ಗೆ ಹೇಳುತ್ತಿದ್ದರು, ಓದುವಂತೆ ಮಾಡುತ್ತಿದ್ದರು. ಇವೆರಡರ ಜೊತೆಗೆ ನೂರಾರು ಜನರಿಂದ ಬರೆಸಿದರು, ಹೇಳಿ ಹೇಳಿ ಬರೆಸಿದರು.
ಶಾಮಸುಂದರ್ ಅವರಂತೂ ಟ್ವೆಂಟಿ ಫೋರ್ ಬಾರ್ ಸೆವೆನ್ ಪತ್ರಕರ್ತ ಆಗಿದ್ದರು. ಅವರ ಜೊತೆಗೆ ಸಾಹಿತ್ಯದಿಂದ ಸಂವಿಧಾನದ ತನಕ, ಪಾಕವಿದ್ಯೆಯಿಂದ ರತಿವಿಜ್ಞಾನದ ತನಕ ಎಲ್ಲದರ ಬಗ್ಗೆಯೂ ಮುಕ್ತವಾಗಿ ಮಾತನಾಡಬಹುದಿತ್ತು. ಅದರಲ್ಲಿನ ವಿಚಾರಗಳು ಅವರಿಗೆ ಆನ್‌ಲೈನ್‌ಗೆ ಆಗುವಂಥ ಸಬ್ಜೆಕ್ಟ್ ಗಳಾಗಿರುತ್ತಿದ್ದವು. ಹೆಡ್ಡಿಂಗ್ ಕೊಡುವುದರಲ್ಲಿ ಶಾಮಣ್ಣ ತುಂಬಾ ತುಂಬಾ ಕಟ್ಟುನಿಟ್ಟು. ಅದಕ್ಕಾಗಿಯೇ ಕೆಲವು ಸಲ ಆನ್‌ಲೈನ್ ಲೇಖನಗಳು ಸಹ ಗಂಟೆಗಟ್ಟಲೆ ಶಾಮಣ್ಣನವರಿಗಾಗಿ ಕಾಯುತ್ತಿದ್ದವು. ಟ್ವಿಟ್ಟರ್ ಅಂದರೆ ಅವರಿಗೆ ಬಲು ಇಷ್ಟವಾಗಿತ್ತು. ಅವರಿಗೆ ಇಷ್ಟವಾಗುತ್ತಿದ್ದ ಲೇಖನ, ಸುದ್ದಿಯ ಲಿಂಕ್ ಅನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುತ್ತಿದ್ದರು. ಅದಕ್ಕೂ ಮುಂಚೆ ಸಂಬಂಧಪಟ್ಟ ಲೇಖಕರನ್ನು ಕರೆದು, ತಾವು ಪೋಸ್ಟ್ ಮಾಡುವ ಮುಂಚೆ ಅದನ್ನು ತೋರಿಸಿ, ಒಂದೊಳ್ಳೆ ಮಾತು, ಸಲಹೆ ಹಾಗೂ ಕೆಲವೊಮ್ಮೆ ಸ್ವಲ್ಪ ಉಪದೇಶ ನೀಡುತ್ತಿದ್ದರು. ಅದು ಕೂಡ ಒಂದು ಸುದ್ದಿಯನ್ನು ಹೇಗೆ ಹೆಚ್ಚು ಜನರನ್ನು ತಲುಪಿಸಬೇಕು ಎಂಬ ಬಗ್ಗೆಯೇ ಮಾತುಗಳು ಇರುತ್ತಿದ್ದವು.
ಶಾಮಿ ಕೆಲವು ವರ್ಷಗಳ ಕಾಲ ಒನ್ ಇಂಡಿಯಾ ಕನ್ನಡದ ಜೊತೆಯಲ್ಲಿಯೇ ಪಬ್ಲಿಕ್ ಟಿವಿಯಲ್ಲಿ ಬರುತ್ತಿದ್ದರು. ರಂಗಣ್ಣ ಅವರ ಜೊತೆಗೆ ಚರ್ಚೆ, ವಿಶ್ಲೇಷಣೆ, ಚುನಾವಣೆ ಅವಲೋಕನ ಇವೆಲ್ಲ ಮಾಡುತ್ತಿದ್ದರು. ಶ್ಯಾಮ್ ಅವರ ಮುಖ ಟೀವಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಆರಂಭವಾದ ನಂತರದಲ್ಲಿನ ಚರಿಷ್ಮಾ ಬೇರೆಯೇ ಇತ್ತು. ಅವರಿಗೆ ವಿಡಿಯೋ, ಟಿವಿ ಕಿಕ್ ಕೊಡಲು ಆರಂಭಿಸಿತು. ಒನ್ ಇಂಡಿಯಾ ಕನ್ನಡಕ್ಕಾಗಿ ಸಮ್ ಥಿಂಗ್ ವಿಥ್ ಶ್ಯಾಮ್ ಎಂಬ ವಿಡಿಯೋ ಕಾರ್ಯಕ್ರಮ ಮಾಡುತ್ತಿದ್ದರು. ಅದೊಂಥರಾ ಮಜವಾದ ಕಾರ್ಯಕ್ರಮ. ಏಕೆಂದರೆ, ಶ್ಯಾಮ್ ಶುದ್ಧಾನುಶುದ್ಧ ಪತ್ರಕರ್ತ. ಅವರಿಗೆ ಮಾಹಿತಿ ಜೊತೆಗೆ ಪ್ರಸೆಂಟೇಷನ್ ರೂಢಿ. ಆದರೆ ಅಷ್ಟರಲ್ಲಾಗಲೇ ಎಂಗೇಜಿಂಗ್ ಕಂಟೆಂಟ್ ಅನ್ನೋ “ನ್ಯೂಸ್ ಗ್ಲಾಮರ್” ಹೆಚ್ಚು ಪ್ರಚಾರಕ್ಕೆ ಬರುತ್ತಾ ಇತ್ತು. ಆಕರ್ಷಕವಾದ ಹೆಡ್ಡಿಂಗ್ ಕೊಡಲೇಬೇಕು ಎಂದು ಆನ್‌ಲೈನ್ ಲೇಖನಗಳನ್ನೇ ಗಂಟೆಗಟ್ಟಲೆ ಕಾಯುತ್ತಿದ್ದ ಶ್ಯಾಮಣ್ಣನ ಶ್ರೇಷ್ಠತೆಯ ವ್ಯಸನವು ಸ್ವತಃ ಅವರಿಗೇ ಹಿಂಸೆ ಕೊಡುತ್ತಿದ್ದದ್ದು ಉಂಟು.
ಕರ್ನಾಟಕದಲ್ಲಿ ಏನೇನು ಆಗ್ತಿದೆ ಅದನ್ನ ನೋಡ್ರೀ ಮೊದಲು ಅನ್ನೋದು ಒನ್ ಇಂಡಿಯಾ ಕನ್ನಡದಲ್ಲಿ ಶ್ಯಾಮ್ ಅವರ ಧ್ವನಿ ಆಗಿರುತ್ತಿತ್ತು. ಬೆಳಗ್ಗೆ ಏಳು ಗಂಟೆಗೆ ಪಬ್ಲಿಷ್ ಆಗುವ ಮೊದಲ ಸುದ್ದಿ ನಮ್ಮೂರಿನದು ಆಗಿರಬೇಕು. ಸಾಧ್ಯವಾದಷ್ಟೂ ಹಿಂದಿನ ರಾತ್ರಿ ತುಂಬ ಮುಖ್ಯವಾಗಿ ನಡೆದುಹೋದಂಥ ಕರ್ನಾಟಕಕ್ಕೆ ಸಂಬಂಧಪಟ್ಟ ಸುದ್ದಿಗೇ ಆದ್ಯತೆ ಕೊಡಬೇಕು ಎಂಬುದು ಶ್ಯಾಮ್ ತುಂಬ ಗಟ್ಟಿಯಾಗಿ ಒತ್ತಾಯಿಸುತ್ತಿದ್ದ ಸಂಗತಿ. ಅವರಿಗೆ ಎಸ್ ಇಒ (ಸರ್ಚ್ ಎಂಜಿನ್ ಆಪ್ಟಮೈಸೇಷನ್) ಅನ್ನೋದಿಕ್ಕೆ ತಕ್ಕಂತೆ ಸುದ್ದಿ ಬರೆಯೋದು, ಹೆಡ್ಡಿಂಗ್ ಕೊಡೋದು ಇಂಥದ್ದೆಲ್ಲ ಇಷ್ಟವಾಗುತ್ತಾ ಇರಲಿಲ್ಲ. ತುಂಬ ಒಳ್ಳೆ ಸುದ್ದಿ, ಲೇಖನಗಳಿಗೆ ಪೇಜ್ ವ್ಯೂಸ್ ಬರುತ್ತೆ ಅಂತ ನಂಬಿದ್ದ ಮನುಷ್ಯ ಅವರು. ಆದ್ದರಿಂದ ಗೂಗಲ್‌ಗೋಸ್ಕರ ಬರೆಯಬೇಕು ಎಂಬ ತರಲೆ ತಾಪತ್ರಯಗಳು ಇರಲಿಲ್ಲ. ಆದರೆ ಇಂಗ್ಲಿಷ್ ನಲ್ಲಿ ಕೊಡಲೇಬೇಕಾದ ಟೈಟಲ್, ಡಿಸ್ಕ್ರಿಪ್ಷನ್ ಇಂಥವುಗಳನ್ನು ಹಿಡಿದುಕೊಂಡು ಶ್ಯಾಮಣ್ಣ ಸಬ್ ಎಡಿಟರ್‌ಗಳನ್ನೆಲ್ಲ ಜಗ್ಗಾಡಿಬಿಡುತ್ತಿದ್ದರು. ಆದರೆ ಶಾಮಣ್ಣನಿಗೆ ಕರ್ನಾಟಕದ ಸಣ್ಣ ಸಣ್ಣ ಊರಿನ ಸುದ್ದಿ, ಅಲ್ಲಿನ ಸಂಭ್ರಮ- ಜಾತ್ರೆ, ಸಡಗರ- ಸಂಕಟಗಳು ಮುಖ್ಯವಾಗುತ್ತಿದ್ದವು.
ಕನಿಷ್ಠ ಮಟ್ಟದ ಇಂಗ್ಲಿಷ್ ವ್ಯಾಕರಣ ಬಾರದಿರುವವರು ನೀವೆಲ್ಲ ಮನುಷ್ಯರಾ ದನಗಳಾ ಅಂತ ಕೇಳುವ ಹಾಗಿರುತ್ತಿತ್ತು ಶಾಮಿಯ ಧ್ವನಿ. ಒನ್ ಇಂಡಿಯಾ ಕನ್ನಡದಂಥ ಮತ್ತೊಂದು ವೆಬ್‌ಸೈಟ್, ಅದರಲ್ಲೂ ಎಸ್.ಕೆ. ಶ್ಯಾಮ್ ಸುಂದರ್ ಅವರು ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಬರುತ್ತಿದ್ದಂತೆ ಈಗ ಊಹಿಸಿಕೊಳ್ಳುವುದು ಕೂಡ ಅಸಾಧ್ಯ. ಶಾಮಣ್ಣಂಗೆ ಅವರ ಉತ್ಸಾಹ, ಆಸಕ್ತಿ ಹಾಗೂ ಶ್ರದ್ಧೆಯ ಕಾರಣಕ್ಕೆ ವಯಸ್ಸಾಗಲೇ ಇಲ್ಲ. ಕನ್ನಡ ಪ್ರಭದಂಥ ಪತ್ರಿಕೆಯಲ್ಲಿ ಇದ್ದು ಬಂದು, ದಟ್ಸ್ ಕನ್ನಡದಂಥ ಅದ್ಭುತ ವೆಬ್ ಜರ್ನಲಿಸಂ ಮಾದರಿ ಹಾಕಿಕೊಟ್ಟು, ಪಬ್ಲಿಕ್ ಟಿವಿಯಲ್ಲಿ ವರ್ಷಗಟ್ಟಲೆ ಕಾಣಿಸಿಕೊಂಡು, ಎದ್ದೇಳು ಮಂಜುನಾಥ ಸಿನಿಮಾದಲ್ಲಿ ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ನಟಿಸಿದ್ದರು. 2018ರಿಂದ 2022ರ ವರೆಗೆ ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ವಿಭಾಗದ ಸಂಪಾದಕರಾಗಿದ್ದರು.
ಇಂಥ ಎಸ್.ಕೆ. ಶಾಮಸುಂದರ್, ಶಾಮಿ, ಶ್ಯಾಮ್, ಶಾಮಣ್ಣ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಪರಿಚಿತರು, ಸ್ನೇಹಿತರು, ಗುರುಗಳು ಇನ್ನೂ ಏನೇನೋ. ಆ ವ್ಯಕ್ತಿ ಒಂಟಿಯಾಗಿ ನಿಂತು ಸಿಗರೇಟ್ ಸೇದುತ್ತಾ ಮತ್ತೇನೋ ಹೆಡ್ಡಿಂಗ್ ಆಲೋಚಿಸುತ್ತಿರುವ ಚಿತ್ರವೊಂದು ಕಣ್ಣಮುಂದೆ ನಿಲ್ಲುತ್ತದೆ. ಕನ್ನಡ ಡಿಜಿಟಲ್ ಜರ್ನಲಿಸಂನ ಒಂದೊಳ್ಳೆ ಮಾದರಿಯಾಗಿ ಸದಾ ನೆನಪಿನಲ್ಲಿ ಇರುತ್ತಾರೆ.
ಎಸ್‌ಕೆ ಶಾಮಸುಂದರ್ ಅವರ ಪಾರ್ಥೀವ ದರ್ಶನಕ್ಕೆ ಬೆಂಗಳೂರಿನ ವಿದ್ಯಾ ಪೀಠ ಸರ್ಕಲ್ ಬೆಳಿ ಇರುವ ಸ್ಕೈಲೈನ್ ಸುರುಭಿ ಅಪಾರ್ಟ್‌ಮೆಂಟ್‌ನಲ್ಲಿ ಬೆಳಗ್ಗೆ 9ರಿಂದ 11 ಗಂಟೆವರೆಗೆ ಅವಕಾಶ ಮಾಡಿಕೊಡಲಾಗಿದೆ.
- ಬರಹ: ಶ್ರೀನಿವಾಸ ಮಠ
