Padma Awards 2025: ಕಲಬುರಗಿಯ ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮೀ ದೇಶಮಾನೆ ಅರಸಿ ಬಂದ ಪದ್ಮಶ್ರೀ ಗೌರವ
ಕಲಬುರಗಿಯ ಹಿರಿಯ ವೈದ್ಯೆ, ಕ್ಯಾನ್ಸರ್ ತಜ್ಞರಾದ ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಈ ಬಾರಿಯ ಪದ್ಮಶ್ರೀ ಗೌರವ ಒಲಿದು ಬಂದಿದೆ. 4 ದಶಕಗಳ ಕಾಲ ಕ್ಯಾನ್ಸರ್ ರೋಗಿಗಳ ಉಳಿವಿಗಾಗಿ ಶ್ರಮಿಸಿದ ತಾಯಿಗೆ ಕೇಂದ್ರ ಸರ್ಕಾರದಿಂದ ಉನ್ನತ ಗೌರವ ಸಂದಿದೆ.

2025ರ ಗಣರಾಜ್ಯೋತ್ಸವ ದಿನಕ್ಕೂ ಮುನ್ನ ಕೇಂದ್ರ ಸರ್ಕಾರವು ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ದೇಶ-ವಿದೇಶಗಳಲ್ಲಿರುವ ಹಲವು ಸಾಧಕರಿಗೆ ಉನ್ನತ ಗೌರವ ಸಂದಿವೆ. ಈ ಬಾರಿಯ ಪ್ರಶಸ್ತಿ ಪುರಸ್ಕೃತರಲ್ಲಿ ಕರ್ನಾಟಕದ ಹಿರಿಯ ಖ್ಯಾತ ಕ್ಯಾನ್ಸರ್ ತಜ್ಞೆ (ಆಂಕೊಲಾಜಿಸ್ಟ್ ಸರ್ಜನ್) ವಿಜಯಲಕ್ಷ್ಮೀ ದೇಶಮಾನೆ ಪ್ರಮುಖ ಹೆಸರು. ಕಲಬುರಗಿಯ ಹಿರಿಯ ಆಂಕೊಲಾಜಿಸ್ಟ್ ಸರ್ಜನ್, 4 ದಶಕಗಳಿಗೂ ಹೆಚ್ಚು ಕಾಲ ಕ್ಯಾನ್ಸರ್ ರೋಗಿಗಳ ಚೇತರಿಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಮಾರಕ ರೋಗದ ವಿರುದ್ಧ ಹೋರಾಡಲು ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ.
ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ವೈದ್ಯರಾಗಿರುವ ವಿಜಯಲಕ್ಷ್ಮೀ, ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಲು ತಮ್ಮ ಜೀವನವನ್ನು ಸಮರ್ಪಣೆ ಮಾಡಿದ್ದಾರೆ. ಹಲವು ರೋಗಿಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಧೈರ್ಯ ತುಂಬಿದ್ದಾರೆ. ಈಗ ಇವರಿಗೆ 70 ವರ್ಷ ವಯಸ್ಸು.
ಮಾದಿಗ ಸಮುದಾಯದವರಾದ ವಿಜಯಲಕ್ಷ್ಮೀ ಅವರ ತಂದೆ ಜವಳಿ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬಾಲ್ಯದಲ್ಲಿ ತಮ್ಮ ಶೈಕ್ಷಣಿಕ ಚಟುವಟಿಕೆಗಳ ಜೊತೆಜೊತೆಗೆ ತಾಯಿಗೆ ತರಕಾರಿ ಮಾರಾಟ ಮಾಡಲು ವಿಜಯಲಕ್ಷ್ಮೀ ನೆರವಾಗುತ್ತಿದ್ದರು. ಬಾಲ್ಯದಿಂದಲೇ ಜನರ ಕಷ್ಟಗಳನ್ನು ನೋಡುತ್ತಾ ಬೆಳೆದ ಅವರು, ತಮ್ಮ ವೃತ್ತಿಬದುಕಿನಲ್ಲಿ ಸಾರ್ಥಕತೆ ಸಾಧಿಸಿದ್ದಾರೆ.
ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಕ್ಯಾನ್ಸರ್ ರೋಗಿಗಳ ಆರೈಕೆ, ಸಂಶೋಧನೆ ಮತ್ತು ಸಮುದಾಯ ಜಾಗೃತಿಯಲ್ಲಿ ಪಾಲ್ಗೊಂಡರು. ಸ್ತನ ಕ್ಯಾನ್ಸರ್ ಉನ್ನತ ಸಂಶೋಧನೆ ನಡೆಸಿದ ಅವರು, ಆಂಕೊಲಾಜಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುವ ಪರಿಣಾಮಕಾರಿ ಅಧ್ಯಯನಗಳನ್ನು ನಡೆಸಿದ್ದಾರೆ. ಇವರ ದಶಕಗಳ ಸೇವೆಯನ್ನು ಗುರುತಿಸಿರುವ ಕೇಂದ್ರ ಸರ್ಕಾರ, ಅತ್ಯುನ್ನತ ಗೌರವ ನೀಡಿದೆ.
ಅಪ್ಪ-ಅಮ್ಮನ ಕನಸು ನನಸು
ಮಗಳು ಡಾಕ್ಟರ್ ಆಗಿ ಬಡವರಿಗೆ ಸೇವೆ ಸಲ್ಲಿಸಬೇಕು ಎಂಬುದು ವಿಜಯಲಕ್ಷ್ಮೀ ತಂದೆಯ ಕನಸಾಗಿತ್ತು. ಕೊಳೆಗೇರಿಯಲ್ಲಿ ವಾಸವಿದ್ದರೂ ದೊಡ್ಡ ಕನಸುಗಳನ್ನು ಕಾಣುವುದು ನಿಜಕ್ಕೂ ಆಶ್ಚರ್ಯಕರ ಎಂದು ಸಂದರ್ಶನವೊಂದರಲ್ಲಿ ಖುದ್ದು ವಿಜಯಲಕ್ಷ್ಮೀ ಹೇಳುತ್ತಾರೆ. ತಾಯಿಯ ಸಣ್ಣ ತರಕಾರಿ ಅಂಗಡಿಯಲ್ಲಿ ಸಹೋದರನ ಜೊತೆಗೆ ನೆರವಾಗುತ್ತಿದ್ದರು. 12ನೇ ತರಗತಿ ನಂತರ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಂಕಷ್ಟ ಅಡ್ಡಿಯಾಗಿತ್ತು. ಹುಬ್ಬಳ್ಳಿಯ ಕೆಎಂಸಿಯಲ್ಲಿ ಎಂಬಿಬಿಎಸ್ ಪ್ರವೇಶ ಪರೀಕ್ಷೆ ಹಾಜರಾಗಲು, ವಿಜಯಲಕ್ಷ್ಮೀ ತಾಯಿ ಅವರ ಮಂಗಳ ಸೂತ್ರವನ್ನೇ ಬಿಚ್ಚಿಕೊಟ್ಟರು. "ನನ್ನ ಮತ್ತು ಒಡಹುಟ್ಟಿದವರು ಮಾಡಿದ ತ್ಯಾಗಗಳಿಂದಾಗಿ ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ. ನಾನು ಅವರ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ" ಎಂದು ವಿಜಯಲಕ್ಷ್ಮೀ ಹೇಳುತ್ತಾರೆ.
ಮೊದಲ ರ‍್ಯಾಂಕ್
ಎಂಬಿಬಿಎಸ್ ಕೋರ್ಸ್ ಸೇರಿಕೊಳ್ಳುವುದಕ್ಕೂ ಮೊದಲು ವಿಜಯಲಕ್ಷ್ಮೀ ಕನ್ನಡ ಮಾಧ್ಯಮದಲ್ಲಿ ಓದಿದ್ದರು. ಇಂಗ್ಲಿಷ್ ಪರೀಕ್ಷೆಯ ಪತ್ರಿಕೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಿ ಮೊದಲ ವರ್ಷ ಅನುತ್ತೀರ್ಣರಾದರು. ಆದರೂ ಹಠಬಿಡದೆ ಪ್ರಾಧ್ಯಾಪಕರ ನೆರವಿನಿಂದ ಓದಿದರು. 2ನೇ ವರ್ಷದಲ್ಲಿ ಪರೀಕ್ಷೆ ಪಾಸಾದರು. ಆ ನಂತರ ಹಿಂತಿರುಗಿ ನೋಡಲೇ ಇಲ್ಲ. ವಿಶ್ವವಿದ್ಯಾಲಯದಲ್ಲಿ ಮೊದಲ ರ‍್ಯಾಂಕ್ ಪಡೆದು ವೈದ್ಯಕೀಯ ಕ್ಷೇತ್ರದಲ್ಲಿ ಅವರಿಗಿರುವ ಆಸಕ್ತಿ ತೋರಿಸಿದರು.
ಸಾರ್ಥಕ ಜೀವನ
ಆ ಬಳಿಕ ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪರಿಣತಿ ಪಡೆದ ವಿಜಯಲಕ್ಷ್ಮೀ, ವೃತ್ತಿಜೀವನದುದ್ದಕ್ಕೂ ಕ್ಯಾನ್ಸರ್ ರೋಗಿಗಳ ಚೇತರಿಕೆಗಾಗಿ ಶ್ರಮಿಸಿದರು. ಹಲವು ಉನ್ನತ ಅಧ್ಯಯನ, ಸಂಶೋಧನೆಗಳನ್ನು ನಡೆಸಿದರು. ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಪಡೆದರು. 40 ವರ್ಷಗಳಿಗೂ ಹೆಚ್ಚು ಕಾಲ ರೋಗಿಗಳ ಆರೈಕೆಯಲ್ಲಿ ಖುಷಿಪಟ್ಟರು. ಹೆತ್ತವರ ಕನಸನ್ನು ನನಸಾಗಿಸಿ ಸಾರ್ಥಕ ಜೀವನ ನಡೆಸುತ್ತಿರುವ ಮಹಾತಾಯಿಗೆ ಈಗ ಪದ್ಮಶ್ರೀ ಗೌರವ ಸಂದಿರುವುದು ಹೆಮ್ಮೆಯ ವಿಷಯ.
