ಹಿಜಾಬ್ ವಿವಾದ; ಉಪ್ಪಿನಂಗಡಿ ಸರ್ಕಾರಿ ಕಾಲೇಜಿನಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಅಮಾನತು
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬಂದ ಮತ್ತೋರ್ವ ವಿದ್ಯಾರ್ಥಿನಿಯನ್ನು ಅಮಾನತು ಮಾಡಲಾಗಿದೆ. ಇಲ್ಲಿಗೆ ಒಟ್ಟು ಏಳು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದಂತಾಗಿದೆ.
ಉಪ್ಪಿನಂಗಡಿ (ದಕ್ಷಿಣ ಕನ್ನಡ) : ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಹಿಜಾಬ್ ಧರಿಸಿಕೊಂಡು ಬಂದ ಮತ್ತೋರ್ವ ವಿದ್ಯಾರ್ಥಿನಿಯನ್ನು ಪ್ರಾಂಶುಪಾಲರು ಅಮಾನತು ಮಾಡಿದ್ದಾರೆ. ಎರಡು ದಿನಗಳ ಹಿಂದೆ ಒಂದೇ ದಿನ ಆರು ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಲಾಗಿತ್ತು. ಈಗ ಅಮಾನತು ಮಾಡಲಾದ ವಿದ್ಯಾರ್ಥಿನಿಯರ ಸಂಖ್ಯೆ ಏಳಕ್ಕೆ ಏರಿದೆ.
ಸಮವಸ್ತ್ರದ ಹೊರತಾಗಿ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶವಿಲ್ಲ ಎಂಬುದಾಗಿ ಈ ಹಿಂದೆಯೇ ತಿಳಿಸಿಲಾಗಿತ್ತು. ಆದರೂ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದರಿಂದ ಕಾಲೇಜಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮುಂದೆ ಕಾಲೇಜಿನ ಶಾಂತಿಯುತ ವಾತಾವರಣಕ್ಕೆ ಧಕ್ಕೆಯಾಗಬಾರದೆಂದು, ಪ್ರತಿನಿತ್ಯ ಹಿಜಾಬ್ ಧರಿಸಿ ತರಗತಿಗೆ ಬರುತ್ತಿದ್ದ 6 ವಿದ್ಯಾರ್ಥಿನಿಯರನ್ನು ಕಳೆದ ಬುಧವಾರ ಅಮಾನತು ಮಾಡಲಾಗಿತ್ತು. ಇದೇ ವಿಚಾರವಾಗಿ ವರದಿ ಮಾಡಲು ಕಾಲೇಜಿಗೆ ಬಂದಿದ್ದ ಪತ್ರಕರ್ತರ ಮೇಲೆ ದಾಳಿ ನಡೆಸಿ, ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದ್ದರು. ಈ ನಡುವೆ ಹಿಜಾಬ್ ಧರಿಸಿ ಬರುತ್ತಿರುವ ವಿದ್ಯಾರ್ಥಿನಿಯರ ನಡೆಯನ್ನು ವಿರೋಧಿಸಿ, ಹಿಜಾಬ್‌ಗೆ ವಿರೋಧವಿರುವ ವಿದ್ಯಾರ್ಥಿಗಳ ಗುಂಪು ಪ್ರತಿಭಟನೆಯನ್ನೂ ನಡೆಸಿದ್ದರು. ಈ ವಿಚಾರವಾಗಿ ಕಾಲೇಜು ಎಲ್ಲೆಡೆ ಸುದ್ದಿಯಾಗಿತ್ತು.
ಕೆಲ ವರ್ಷಗಳ ಹಿಂದೆ ಕಾಲೇಜಿಲ್ಲಿ ಹಲವಾರು ಅಹಿತಕರ ಘಟನೆ ನಡೆದು, ರಾಜ್ಯ ಹಾಗೂ ರಾಷ್ಟ್ರಾದ್ಯಂತ ಈ ಕಾಲೇಜು ಸುದ್ದಿಯಾಗಿತ್ತು. ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಕಪ್ಪು ಚುಕ್ಕಿ ಬಳಿಯುವ ಪ್ರಯತ್ನ ಮಾಡುತ್ತಿದ್ದರು. ಆ ಬಳಿಕ ಕಾಲೇಜು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ, ಈ ಬಗ್ಗೆ ಶಿಸ್ತು ಕ್ರಮ ಕೈಗೊಂಡ ಬಳಿಕ ಕಾಲೇಜಿನಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗಿತ್ತು.
ಕಳೆದ ಕೆಲವು ದಿನಗಳಿಂದ ಮತ್ತೆ ಈ ಕಾಲೇಜಿನಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕರ ಅಧ್ಯಕ್ಷತೆಯಲ್ಲಿ ಸಿಡಿಸಿ ಸಭೆ ನಡೆದಿದೆ. ಅದರಲ್ಲಿ ನ್ಯಾಯಾಲಯದ ತೀರ್ಪಿನ ಅನುಸಾರವಾಗಿ ಕಾಲೇಜಿನಲ್ಲಿ ಹಿಜಾಬ್ ಧರಿಸದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲು ತಿಳಿಸಲಾಗಿದೆ. ಇನ್ನೊಂದೆಡೆ ನ್ಯಾಯಾಲಯದ ಆದೇಶ ತರಗತಿಯೊಳಗೆ ಮಾತ್ರ ಅನ್ವಯಿಸುತ್ತಿದ್ದು, ಕಾಲೇಜು ಕಾರಿಡಾರ್ನಲ್ಲಿ ಹಿಜಾಬ್ ಧರಿಸುತ್ತಿರುವುದರಿಂದ ಸಮಸ್ಯೆಗಳು ಉಂಟಾಗುತ್ತಿವೆ. ಹೀಗಾಗಿ ಕಾಲೇಜು ಆವರಣದಲ್ಲೂ ಕಾಲೇಜು ಸಮವಸ್ತ್ರಕ್ಕೆ ಹೊರತಾದ ಇತರ ಬಟ್ಟೆಗಳನ್ನು ತೊಡುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸಿ ಬರುವ ವಿದ್ಯಾರ್ಥಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು.
ಒಂದು ವೇಳೆ ಅಮಾನತುಗೊಂಡ ವಿದ್ಯಾರ್ಥಿನಿಯರು ಮತ್ತೆ ಕಾಲೇಜಿನ ನಿಯಮಗಳನ್ನು ಒಪ್ಪಿಕೊಂಡು ವಾಪಸ್ ಬರಲು ಇಚ್ಛಿಸಿದಲ್ಲಿ, ಅಂತಹವರ ಕೈಯಲ್ಲಿ ಮುಚ್ಚಳಿಕೆ ಬರೆಸಿಕೊಂಡು ಕಲಿಕೆಗೆ ಅವಕಾಶ ಕಲ್ಪಿಸಬೇಕು. ಮುಚ್ಚಳಿಕೆ ಹೊರತಾಗಿಯೂ ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕಾಲೇಜಿನಿಂದ ಡಿಬಾರ್ ಮಾಡಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಗಿದೆ.
ಹೀಗಾಗಿ, ಕಾಲೇಜಿನಲ್ಲಿ ಸಮವಸ್ತ್ರ ವಿಚಾರವಾಗಿ ಸ್ಪಷ್ಟ ನಿಲುವಿದ್ದು, ಹಿಜಾಬ್ ಧರಿಸಿಕೊಂಡು ಕಾಲೇಜು ಆವರಣದಲ್ಲಿ ಓಡಾಡುವಂತಿಲ್ಲ ಎಂದು ತಿಳಿಸಲಾಗಿದೆ.