ಆನ್‌ಲೈನ್ ಮೋಸದ ಹೊಸ ರೂಪಗಳು: ಡಿಎಸ್ ಚೌಗಲೆ, ಪುರುಷೋತ್ತಮ ಬಿಳಿಮಲೆ ಹಂಚಿಕೊಂಡ ಅನುಭವ ನಿಮಗೂ ಎಚ್ಚರಿಕೆಯ ಪಾಠ
ಆನ್‌ಲೈನ್ ವಂಚನೆಯು ವಿವಿಧ ರೀತಿಯಲ್ಲಿ ನಡೆಯುತ್ತಿದೆ. ಆನ್‌ಲೈನ್ ಬೆದರಿಕೆ, ಹ್ಯಾಕಿಂಗ್ ಮಾತ್ರವಲ್ಲದೆ ಪರಿಚಿತರ ಸೋಗಿನಲ್ಲಿ ಅಪರಿಚಿತರು ನಮ್ಮ ಖಾತೆಯಿಂದ ಹಣ ಕದಿಯಲು ಪ್ರಯತ್ನಿಸುತ್ತಾರೆ. ಡಿಎಸ್ ಚೌಗಲೆ, ಪುರುಷೋತ್ತಮ ಬಿಳಿಮಲೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಆನ್‌ಲೈನ್ ಮೋಸದ ವಿವರಗಳನ್ನು ಪರಿಶೀಲಿಸಿ.
![ಆನ್‌ಲೈನ್ ಮೋಸದ ಹೊಸ ರೂಪಗಳು: ಡಿಎಸ್ ಚೌಗಲೆ, ಪುರುಷೋತ್ತಮ ಬಿಳಿಮಲೆ ಹಂಚಿಕೊಂಡ ಅನುಭವ ಆನ್‌ಲೈನ್ ಮೋಸದ ಹೊಸ ರೂಪಗಳು: ಡಿಎಸ್ ಚೌಗಲೆ, ಪುರುಷೋತ್ತಮ ಬಿಳಿಮಲೆ ಹಂಚಿಕೊಂಡ ಅನುಭವ](https://images.hindustantimes.com/kannada/img/2025/01/03/550x309/Online_scam_awarenes_1735907951306_1735907956449.png)
ಆನ್‌ಲೈನ್ ವಂಚನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರ ಹಣಕ್ಕೆ ಕನ್ನ ಹಾಕಲು ವಂಚಕರು ಹೊಸ ಬಗೆಯ ತಂತ್ರಗಳನ್ನು ಹೂಡುತ್ತಿರುತ್ತಾರೆ. ಕೆಲವರು ಭಾವನಾತ್ಮಕವಾಗಿ, ಇನ್ನು ಕೆಲವರು ಬೆದರಿಕೆ ಮೂಲಕ, ಇನ್ನು ಕೆಲವರು ನಮ್ಮ ಬ್ಯಾಂಕ್ ಖಾತೆಯನ್ನೇ ಹಿಡಿತಕ್ಕೆ ತೆಗೆದುಕೊಂಡು ಹಣ ಖಾಲಿ ಮಾಡಿಬಿಡುತ್ತಾರೆ. ಇತ್ತೀಚೆಗೆ ಸಿಬಿಐ, ಆರ್‌ಬಿಐ, ಪೊಲೀಸ್ ಅಧಿಕಾರಿಗಳೆಂದು ಅಮಾಯಕರಿಗೆ ಕರೆ ಮಾಡಿ ಡಿಜಿಟಲ್ ಬಂಧನದಲ್ಲಿಟ್ಟು ಹಣ ಪಡೆಯುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ಎಪಿಕೆ ಫೈಲ್‌ಗಳನ್ನು ಕಳುಹಿಸಿ ನಮ್ಮ ಸ್ಮಾರ್ಟ್‌ಫೋನ್‌ಗೆ ಮಾಲ್‌ವೇರ್ ಕಳುಹಿಸಿ ಖಾಸಗಿ ಮಾಹಿತಿ ಮತ್ತು ಬ್ಯಾಂಕ್ ಖಾತೆಗೆ ಕನ್ನ ಹಾಕುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರಲ್ಲಿ ಒಂದಿಷ್ಟು ಜಾಗೃತಿ ಮೂಡುತ್ತಿದೆ. ಇದೇ ಸಮಯದಲ್ಲಿ ಆನ್‌ಲೈನ್ ವಂಚಕರು ಬೇರೆಬೇರೆ ರೀತಿಯಲ್ಲಿ ವಂಚನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಂಗಕರ್ಮಿ ಡಿಎಸ್ ಚೌಗಲೆ ಮತ್ತು ಜಾನಪದ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಹಂಚಿಕೊಂಡಿರುವ ಎರಡು ಅನುಭವಗಳು ಕೂಡ ಆನ್‌ಲೈನ್ ವಂಚಕರ ಮೋಸದ ಹೊಸ ರೂಪಗಳನ್ನು ಸೂಚಿಸುತ್ತದೆ.
ಡಿಎಸ್ ಚೌಗಲೆಗೆ ಸೈಬರ್ ಅಪರಾಧಿಯಿಂದ ಸಂದೇಶ
ಡಿಎಸ್ ಚೌಗಲೆ ಫೇಸ್‌ಬುಕ್‌ನಲ್ಲಿ ಆನ್‌ಲೈನ್ ಮೋಸದ ಹೊಸ ರೂಪಗಳು ಎಂಬ ಶೀರ್ಷಿಕೆಯಲ್ಲಿ ತನ್ನ ಅನುಭವವನ್ನು ಈ ಮುಂದಿನಂತೆ ಬರೆದಿದ್ದಾರೆ. "ಈಚೆಗೆ ನನಗೆ ಒಂದು ಫೋನ್ ಕಾಲ್ ಬಂದಿತ್ತು. ಹಿಂದಿಯಲ್ಲಿ ಮಾತನಾಡಿದ ಕಳ್ಳ, "ಹೇಗಿದ್ದೀರಿ? ನಾನು ಪಾಂಡೆ. ನಿಮ್ಮ ಮನೆಗೆ ಬಂದಿದ್ದೆ, ನೆನಪಾಯಿತಾ?"ಅಂದ. ಹೊಟ್ಟೆ ಹಸಿದಿತ್ತು. ಊಟ ಮಾಡುತ್ತಿದ್ದೆ.
"ಮೈಸೂರು ಆಸ್ಪತ್ರೆಯಲ್ಲಿ ನನ್ನ ಗೆಳೆಯ ಆಪರೇಷನ್ ಟೇಬಲ್ ಮೇಲೆ ಇದ್ದಾನೆ. ಎಮರ್ಜೆನ್ಸಿ. ಅಲ್ಲಿ ಹಣ ಕಳಿಸಲು ಸಮಸ್ಯೆ ಆಗುತ್ತಿದೆ. ನಿಮಗೆ ಫೋನ್ ಪೇ ಮಾಡಿರುವೆ. ಮರಳಿ ಈ ನಂಬರಿಗೆ ಕಳಿಸಿರಿ" ಅಂದ. ಒಂದು ನಂಬರ್ ಕೊಟ್ಟ.
ನಾನು "ಬಳಿಕ ಫೋನ್ ಮಾಡಿರಿ. ಮನೆಗೆ ಗೆಸ್ಟ್ ಬಂದಿದ್ದಾರೆ" ಎಂದು ಕಟ್ ಮಾಡಿ ಊಟ ಮಾಡ ಹತ್ತಿದೆ.
ಮಡದಿಯ ನೆರವಿನಿಂದ ವಾಟ್ಸಾಪ್ ನೋಡಿದೆ. ಆಪರೇಷನ್ ಮಾಡುವ ಫೋಟೋ ಮತ್ತು ಫೋನ್ ಪೇನಲ್ಲಿ 55 ಸಾವಿರ ಜಮಾ ತೋರಿಸುವ ಚಿತ್ರಗಳಿದ್ದವು.
ಫೋನ್ ಪೇ ಒಪನ್ ಮಾಡಿ ನೋಡಿದೆ. ಹಣ ಜಮಾ ಆಗಿರಲಿಲ್ಲ. ಮೆಸೇಜ್ ನೋಡಿದೆ. ಜಮಾ ಆದದ್ದು ತೋರಿಸುತ್ತಿತ್ತು.
ಆದರೆ ದಿನಾಂಕ ಎರಡು ದಿನದ್ದು ಹಿಂದಿನದ್ದಿತ್ತು. ಡೌಟ್ ಮೊದಲೇ ಬಂದಿತ್ತು. ಮತ್ತೆ ಕಾಲ್ ಬಂತು.
"ಹಣ ಬಂದಿಲ್ಲ" ಅಂದೆ.
"ಅದ್ಹೇಗೆ ಬಂದಿಲ್ಲ.? ಸುಳ್ಳು ಹೇಳಿ ಹಣ ನುಂಗಬೇಕಂತೀರಿ..." ಅಂತ ಅಂದು ಮತ್ತೆ ಒತ್ತಾಯ ಮಾಡತೊಡಗಿದ.
"ಬಂದಿಲ್ಲಪ್ಪ" ಎಂದು ಜೋರಾಗಿ ಅರಚಿದೆ.
ಆ ಆಗುಂತುಕ ಒಮ್ಮೆಲೆ ವರಸೆ ಬದಲಿಸಿ ಬಯ್ಯತೊಡಗಿದ. ಉಣ್ಣಲು ಸಹ ಬಿಡದ ಆತನ ಮೇಲೆ ವಿಪರೀತ ಕೋಪ ಬಂದಿತ್ತು.
"ಸಾಲೇ ಭೋಸಡಿಕೆ, ತೇರೆ ನಂಬರ್ ಸೈಬರ್ ಪೋಲಿಸ್ ಕೊ ದೇತಾ ಹುಂ, ರುಕೋ"...ಕ್ರುದ್ಧನಾಗಿ ಹಿಂದಿ ಭಾಷೆಯಿಂದ ಕನ್ನಡದಲ್ಲಿ ಬೈಯ ತೊಡಗಿದೆ. ಆತ ಕಟ್ ಮಾಡಿದ. ಅಷ್ಟರಲ್ಲಿ ವಾಟ್ಸಾಪ್ ನೋಡಿದರೆ. ಆ ಫೋಟೂಗಳು ಮಾಯವಾಗಿದ್ದವು. ತಲೆ ಬಿಸಿಯಾಗಿತ್ತು. ಆತನ ನಂಬರ್ ತಕ್ಷಣ ಬ್ಲಾಕ್ ಮಾಡಿದೆ.
ಪುರುಷೋತ್ತಮ ಬಿಳಿಮಲೆಗೂ ಬಂದಿತ್ತು ಸಂದೇಶ
"ಒಬ್ಬ ಫೋನ್ ಮಾಡಿದ. ನಿಮ್ಮ ಗೆಳೆಯ ಡಿಎಸ್ ಚೌಗಲೆಯವರು ನಿಮಗೆ ಒಂದಷ್ಟು ಮನೆ ಸಾಮಾನು ಕಳಿಸಿದ್ದಾರೆ. ಅದರ ಒಟ್ಡು ಬೆಲೆ 25000. ಸಾಗಾಣಿಕೆ 20 ಸಾವಿರ ನೀವು ಕೊಡಬೇಕು ಅಂದ. ಆಯಿತು ಅಂದೆ. ವಿಳಾಸ ಕೊಡಿ ಅಂದ. ಆರ್ ಟಿ ನಗರ ಪೋಲೀಸ್ ಸ್ಟೇಶನ್ ವಿಳಾಸ ಕೊಟ್ಟೆ. ಓಡಿ ಹೋದ. ಸೈಬರ್ ವಂಚನೆ ಬಗ್ಗೆ ಜಾಗರೂಕರಾಗಿರಿ. ಮೋಸ ಹೋಗುವವರು ಇರುವುದರಿಂದಲೇ ವಂಚಕರ ಸಂಖ್ಯೆಯೂ ಹೆಚ್ಚಿದೆ" ಎಂದು ಫೇಸ್‌ಬುಕ್‌ನಲ್ಲಿ ಪುರುಷೋತ್ತಮ ಬಿಳಿಮಲೆ ಪೋಸ್ಟ್ ಮಾಡಿದ್ದಾರೆ.
ಇವರಿಬ್ಬರ ಪೋಸ್ಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಸಾಕಷ್ಟು ಜನರು ಇಂತಹ ಸಂದೇಶ ಬಂದಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಆನ್‌ಲೈನ್ ವಂಚಕರ ಕುರಿತು ಎಚ್ಚರವಹಿಸಿ
- ಆನ್‌ಲೈನ್‌ನಲ್ಲಿ ಪರಿಚಿತರ ಖಾತೆಯಿಂದಲೇ ಹಣದ ವಿನಂತಿ ಬಂದರೂ ಪರಾಂಬರಿಸಿ ನೋಡಿ. ಈಗ ನಮ್ಮ ಆತ್ಮೀಯರ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳಂತೆ ಕಾಣುವ ಫೇಕ್ ಪ್ರೊಫೈಲ್‌ಗಳನ್ನು ರಚಿಸಿ ಅವುಗಳ ಮೂಲಕ ಎಲ್ಲರಿಗೂ ಹಣ ಸಾಲ ಕೊಡಿ ಎಂದು ಕೇಳುವ ವಂಚನೆ ನಡೆಯುತ್ತಿದೆ. ತಕ್ಷಣ ಯಾರೇ ಕೇಳಿದರೂ ಹಣ ಹಾಕಬೇಡಿ.
- ಡಿಎಸ್ ಚೌಗಲೆಯವರಿಗೆ ಬಂದಂತಹ ಸಂದೇಶಗಳು ನಿಮಗೂ ಬರಬಹುದು. ಆನ್‌ಲೈನ್ ವಂಚಕರು ಕಳುಹಿಸಿದ ಸ್ಕ್ರೀನ್‌ಶಾಟ್ ನೋಡಿ ತಕ್ಷಣ ನಂಬಿಬಿಡಬೇಡಿ.
- ಯಾವುದೇ ರೀತಿಯ ಆನ್‌ಲೈನ್ ವಂಚನೆಯ ಅನುಭವವಾದರೆ 1930 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿ.
ಆನ್‌ಲೈನ್ ವಂಚನೆಗಳ ವಿರಾಟ್ ರೂಪ ತಿಳಿಯಲು ಮುಂದಿನ ಲೇಖನಗಳನ್ನು ಓದಿ
- ವಾಟ್ಸಪ್ನಲ್ಲಿ ಮದುವೆ ಆಮಂತ್ರಣ ತೆರೆಯುವ ಮುನ್ನ ಜಾಗ್ರತೆ! ಹೊಸ ಬಗೆಯ ಆನ್‌ಲೈನ್ ವಂಚನೆ ಕುರಿತು ಎಚ್ಚರಿಸಿದ ಬೆಂಗಳೂರು ಪೊಲೀಸ್
- Pig butchering scam: ಶುರುವಾಗಿದೆ ಹಂದಿ ಕಟುಕ ವಂಚನೆ; ನಿರುದ್ಯೋಗಿ ಯುವ ಜನತೆ, ಗೃಹಿಣಿಯರು, ವಿದ್ಯಾರ್ಥಿಗಳೇ ಇವರ ಟಾರ್ಗೆಟ್
- Online Sextortion: ವಾಟ್ಸಪ್ ಸೆಕ್ಸ್ಟಾರ್ಶನ್ ಬಗ್ಗೆ ನಿಮಗೆಷ್ಟು ಗೊತ್ತು? ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಮಾರ್ಗದರ್ಶಿ
![Whats_app_banner Whats_app_banner](https://kannada.hindustantimes.com/static-content/1y/wBanner.png)