Breaking News: ಬೀದರ್, ಮಂಗಳೂರು ಬಳಿಕ ಮೈಸೂರು ಹೊರ ವಲಯದಲ್ಲಿ ಹಾಡ ಹಗಲೇ ದರೋಡೆ, ಕೇರಳ ಉದ್ಯಮಿ ವಾಹನ, ಹಣ ದೋಚಿ ಪರಾರಿ
ಮೈಸೂರು ಹೊರ ವಲಯದ ಜಯಪುರ ಬಳಿ ಕೇರಳ ಉದ್ಯಮಿ ವಾಹನ ಅಡ್ಡಗಟ್ಟಿ ಹಣ ದೋಚಿರುವ ಪ್ರಕರಣ ಹಾಡಹಗಲೇ ನಡೆದಿದ್ದು. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೈಸೂರು: ಬೀದರ್, ಮಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ದರೋಡೆ ಪ್ರಕರಣ ನಡೆದ ಬೆನ್ನಲ್ಲೇ ಮೈಸೂರು ಹೊರ ವಲಯದಲ್ಲೂ ಕೇರಳದ ಉದ್ಯಮಿಯೊಬ್ಬರ ವಾಹನವನ್ನು ತಡೆದ ಗುಂಪು ಬೆದರಿಸಿ ಭಾರೀ ಪ್ರಮಾಣದಲ್ಲಿ ಹಣ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಸೋಮವಾರ ಹಾಡಹಗಲೇ ಕೃತ್ಯ ನಡೆದಿರುವುದು ಆತಂಕ ಹೆಚ್ಚಿಸಿದೆ.ಮೈಸೂರು ತಾಲೂಕು ಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದುಎರಡು ಕಾರಿನಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು ಇನೊವಾ ಕಾರು ಅಡ್ಡಗಟ್ಟಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಹಣದ ಜೊತೆಗೆ ವ್ಯಕ್ತಿಯ ಕಾರನ್ನೂ ತೆಗೆದುಕೊಂಡು ಎಸ್ಕೇಪ್ ಆಗಿರುವ ದರೋಡೆಕೋರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೈಸೂರು ತಾಲ್ಲೂಕಿನ ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈಗಾಗಲೇ ತಂಡಗಳನ್ನೂ ರಚಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬೆಂಗಳೂರು ಇಲ್ಲವೇ ಮೈಸೂರಿನಿಂದ ಹಣ ಸಾಗಣೆ, ವಹಿವಾಟಿಗೆಂದು ಕೇರಳದಿಂದ ಬಂದು ಹೋಗುವವರು ಎರಡು ಮಾರ್ಗ ಬಳಸುತ್ತಾರೆ. ಅದರಲ್ಲಿ ಮಡಿಕೇರಿ ರಸ್ತೆ ಹಾಗೂ ಮಾನಂದವಾಡಿ ರಸ್ತೆ. ಕೇರಳದ ಉದ್ಯಮಿ ಸೂಫಿ ಎಂಬುವವರು ಬೆಂಗಳೂರಿನಲ್ಲಿ ವಹಿವಾಟು ನಡೆಸಿಕೊಂಡು ಹಣದೊಂದಿಗೆ ಕೇರಳ ಕಡೆಗೆ ಹೊರಟಿದ್ದರು. ಈ ವೇಳೆ ಮೈಸೂರು- ಮಾನಂದವಾಡಿ ಹೆದ್ದಾರಿಯ ಜಯಪುರ ಬಳಿ ಅಪರಿಚತರು ಎರಡು ವಾಹನ ನಿಲ್ಲಿಸಿಕೊಂಡು ನಿಂತಿದ್ದರು. ಈ ವೇಳೆ ವಾಹನವನ್ನು ಅಡ್ಡಗಟ್ಟಿದ್ದು, ಸೂಫಿ ಅವರನ್ನು ಕೆಳಕ್ಕೆ ಇಳಿಸಿ ಹಣದೊಂದಿಗೆ ಕಾರನ್ನು ಚಲಾಯಿಸಿಕೊಂಡು ದರೋಡೆಕೋರರು ಪರಾರಿಯಾಗಿದ್ಧಾರೆ.
ಶಸ್ತ್ರ ಸಜ್ಜಿತವಾಗಿದ್ದವರು ಸೂಫಿಯನ್ನು ಬೆದರಿಸಿದ್ದು, ರಸ್ತೆಯಲ್ಲಿ ಹೋಗುತ್ತಿದ್ದವರು ಇದನ್ನು ವಿಡಿಯೋ ಚಿತ್ರಣ ಮಾಡಿಕೊಂಡಿದ್ದಾರೆ. ಅಲ್ಲದೇ ಜಯಪುರ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ, ಅಷ್ಟು ಹೊತ್ತಿಗೆ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ.
ಕಾರಿನಲ್ಲಿ ಹೊರಟಿದ್ದವರನ್ನು ಅಡ್ಡಗಟ್ಟಿ ನಿಲ್ಲಿಸಿದ್ದೂ ಅಲ್ಲದೇ ವ್ಯಕ್ತಿಯನ್ನು ಎಳೆದಾಡಿ ಹಣ ಕಿತ್ತುಕೊಂಡಿರುವುದು ಕ್ಯಾಮರಾಗಳಲ್ಲಿ ದಾಖಲಾಗಿದೆ. ಎದುರಿಗೆ ಇದ್ದವರು ಕೂಗಿಕೊಂಡರೂ ಮೂರ್ನಾಲ್ಕು ಮಂದಿ ಕಿತ್ತುಕೊಳ್ಳಲು ಯತ್ನಿಸುತ್ತಿರುವುದು ಕಂಡು ಬಂದಿದೆ.
ಕೇರಳದಿಂದ ಹಲವು ಬಾರಿ ಹವಾಲ ಹಣ ಸಾಗಣೆ ನಡೆಯುತ್ತಲೇ ಇರುತ್ತದೆ. ಇಂತಹುದೇ ಹಲವು ಪ್ರಕರಣಗಳು ಈ ಭಾಗದಲ್ಲಿ ಹಿಂದೆಯೂ ವರದಿಯಾಗಿವೆ. ಈ ಬಾರಿಯೂ ಈ ರೀತಿ ಹಣ ಸಾಗಣೆ ಮಾಡುತ್ತಿದ್ದುದು ಗೊತ್ತಿದ್ದವರೇ ಕಾಯ್ದು ದಾಳಿ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಅದರಲ್ಲೂ ಮೈಸೂರಿನಿಂದ ಎಚ್‌ಡಿಕೋಟೆಗೆ ಹೋಗುವ ಮಾರ್ಗದಲ್ಲಿ ಅರಣ್ಯದ ವಾತಾವರಣವಿದೆ. ಮೈಸೂರು ಹೊರ ವಲಯದ ಅರಸಿನಕೆರೆ ಬಳಿ ಅರಣ್ಯ ಪ್ರದೇಶ ಇರುವುದರಿಂದ ಇಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡಲು ಯೋಜಿಸಲಾಗುತ್ತಿದೆ. ಈಗಲೂ ಇದೇ ಭಾಗದಲ್ಲಿ ದರೋಡೆ ನಡೆದಿದೆ.
ಮೈಸೂರು ಹೊರವಲಯದ ಜಯಪುರ ಬಳಿ ದರೋಡೆ ಪ್ರಕರಣ ನಡೆದಿದೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ತಂಡಗಳನ್ನು ರಚಿಸಲಾಗಿದ್ದು, ಕಾರು ಸಹಿತ ಪರಾರಿಯಾಗಿರುವ ದರೋಡೆಕೋರರ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಮೈಸೂರು ಎಸ್ಪಿ ಎನ್.ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಮಲ್ಲಿಕ್ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದರು.
ಬೀದರ್‌ನಲ್ಲಿ ಎಟಿಎಂ ರಾಬರಿ ಆಗಿ ವ್ಯಕ್ತಿ ಕೊಂದು ಹಣ ದೋಚಲಾಯಿತು. ಮಂಗಳೂರು ಸಮೀಪದ ಉಲ್ಲಾಳದಲ್ಲಿ ಹಾಡಹಗಲೇ ಬ್ಯಾಂಕ್‌ಗೆ ನುಗ್ಗಿ ನಗ ಹಾಗೂ ನಗದು ದೋಚಲಾಯಿತು. ಇದೀಗ ರಸ್ತೆಯಲ್ಲಿಯೇ ರಾಜಾರೋಷವಾಗಿ ಕೇರಳ ಉದ್ಯಮಿ ಬೆದರಿಸಿ ಹಣದ ಜತೆಗೆ ಕಾರಿನೊಂದಿಗೆ ಪರಾರಿಯಾಗಿದ್ದಾರೆ ದರೋಡೆಕೋರರು. ಕರ್ನಾಟಕದಲ್ಲಿ ನಿರಂತರ ದರೋಡೆ ಪ್ರಕರಣಗಳು ವರದಿಯಾಗುತ್ತಿದ್ದು, ಪೊಲೀಸ್ ವ್ಯವಸ್ಥೆ ಬಗ್ಗೆ ಅನುಮಾನ ಹುಟ್ಟಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
