ಆಪರೇಷನ್ ಸಿಂದೂರ್‌ನಲ್ಲಿ ಪಾಕಿಸ್ತಾನ ಉಗ್ರರ ಮೇಲೆ ಭಾರತ ಬಳಸಿರುವ ಸ್ಕ್ಯಾಲ್ಪ್‌- ಹ್ಯಾಮರ್‌ ಕ್ಷಿಪಣಿಗಳ ವಿಶೇಷತೆ ಏನು?
ಕನ್ನಡ ಸುದ್ದಿ  /  ಕರ್ನಾಟಕ  /  ಆಪರೇಷನ್ ಸಿಂದೂರ್‌ನಲ್ಲಿ ಪಾಕಿಸ್ತಾನ ಉಗ್ರರ ಮೇಲೆ ಭಾರತ ಬಳಸಿರುವ ಸ್ಕ್ಯಾಲ್ಪ್‌- ಹ್ಯಾಮರ್‌ ಕ್ಷಿಪಣಿಗಳ ವಿಶೇಷತೆ ಏನು?

ಆಪರೇಷನ್ ಸಿಂದೂರ್‌ನಲ್ಲಿ ಪಾಕಿಸ್ತಾನ ಉಗ್ರರ ಮೇಲೆ ಭಾರತ ಬಳಸಿರುವ ಸ್ಕ್ಯಾಲ್ಪ್‌- ಹ್ಯಾಮರ್‌ ಕ್ಷಿಪಣಿಗಳ ವಿಶೇಷತೆ ಏನು?

ಭಾರತವು ಪಾಕಿಸ್ತಾನದ ಉಗ್ರರ ವಿರುದ್ದ ಭಾರೀ ಅಸ್ತ್ರಗಳನ್ನೇ ಪ್ರಯೋಗಿಸಿದೆ. ಇದರಿಂದ ಉಗ್ರರ ನೆಲೆಗಳೇ ಧ್ವಂಸವಾಗಿವೆ. ಏನವು ಕ್ಷಿಪಣಿಗಳು, ಅವುಗಳ ವಿಶೇಷ ಏನು ಇಲ್ಲಿದೆ ಮಾಹಿತಿ.(ಬರಹ: ಪರಿಣಿತಾ ಬೆಂಗಳೂರು)

ಭಾರತ ಬಳಸಿದ ಹ್ಯಾಮರ್‌ ಹಾಗೂ ಸ್ಕ್ಯಾ‌ಲ್ಪ್‌ ಕ್ಷಿಪಣಿಗಳು
ಭಾರತ ಬಳಸಿದ ಹ್ಯಾಮರ್‌ ಹಾಗೂ ಸ್ಕ್ಯಾ‌ಲ್ಪ್‌ ಕ್ಷಿಪಣಿಗಳು

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವಿಗೀಡಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. 'ಆಪರೇಷನ್ ಸಿಂದೂರ್' ಅಡಿಯಲ್ಲಿ ಉಗ್ರ ನೆಲೆಗಳ ಮೇಲೆ ಸೇನೆ ದಾಳಿ ನಡೆಸಿದೆ ಎಂದು ಭಾರತೀಯ ಸೇನೆ ಬುಧವಾರ ಬೆಳಗಿನ ಜಾವ 1.44 ಕ್ಕೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿದ್ದು, ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿಲ್ಲ ಎಂದು ಹೇಳುವ ಮೂಲಕ ಸೇನೆ, ಗುರಿಗಳ ಆಯ್ಕೆ ಮತ್ತು ಪ್ರತೀಕಾರದ ವಿಧಾನದಲ್ಲಿ ಪಾಲಿಸಿರುವ ಸಂಯಮವನ್ನು ಒತ್ತಿ ಹೇಳಿದೆ. ವರದಿಗಳ ಪ್ರಕಾರ, ಈ ದಾಳಿಗಳಿಗೆ ಸ್ಕ್ಯಾ‌ಲ್ಪ್‌( SCALP) ಕ್ರೂಸ್ ಕ್ಷಿಪಣಿಗಳು ಮತ್ತು ರಫೇಲ್ ವಿಮಾನಗಳಲ್ಲಿ ಅಳವಡಿಸಲಾದ ಪ್ರಿಸಿಸೆಷನ್‌ ಗೈಡೆಡ್‌ ಹ್ಯಾಮರ್‌ ಬಾಂಬ್‌ಗಳನ್ನು ಬಳಸಲಾಗಿದೆ.

ಏನಿದು ಸ್ಕ್ಯಾ‌ಲ್ಪ್‌ ಕ್ರೂಸ್‌ ಕ್ಷಿಪಣಿ?

" ಸ್ಟಾರ್ಮ್ ಶಾಡೋ" ಎಂದೂ ಕರೆಯಲ್ಪಡುವ ಸ್ಕ್ಯಾ‌ಲ್ಪ್‌ ದೀರ್ಘ ವ್ಯಾಪ್ತಿಯ ಆಳ ಗುರಿಗಳನ್ನು ಧ್ವಂಸಮಾಡಬಲ್ಲ ಕ್ರೂಸ್ ಕ್ಷಿಪಣಿಯಾಗಿದ್ದು ರಹಸ್ಯ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ. ಇದು ಯಾವುದೇ ಹವಾಮಾನದಲ್ಲಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಯುರೋಪ್ ನಿರ್ಮಿತ SCALPನ ಪೂರ್ತಿ ಹೆಸರು 'ಸಿಸ್ಟಮ್ ಡಿ ಕ್ರೊಸಿಯೆರ್ ಆಟೋನೊಮ್ ಎ ಲಾಂಗ್ ಪೋರ್ಟೀ' ('Système de Croisière Autonome à Longue Portée'). ಅದರ ತಯಾರಕರಾದ MBDA ನಿರ್ಮಾಣ ಸಂಸ್ಥೆ ನೀಡಿರುವ ವಿವರಣೆಯ ಪ್ರಕಾರ, "ಈ ಕ್ಷಿಪಣಿ ಹೆಚ್ಚಿನ ನಿಖರತೆಯ ಕಾರ್ಯಾಚರಣೆಯನ್ನು ಮಾಡುತ್ತದೆ. STORM SHADOW/SCALP ನ ಅಸಾಧಾರಣ ನಿಖರತೆಯು INS, GPS ಮತ್ತು ಭೂಪ್ರದೇಶ ಉಲ್ಲೇಖವನ್ನು ಸಂಯೋಜಿಸುವ ಅದರ ಸುಧಾರಿತ ನ್ಯಾವಿಗೇಷನ್ ವ್ಯವಸ್ಥೆಯಿಂದಾಗಿ ಉಡಾವಣೆಯ ನಂತರ ಪತ್ತೆಹಚ್ಚುವಿಕೆಯನ್ನು ತಪ್ಪಿಸಲು ಟಾರ್ಗೆಟ್‌ ತಲುಪಿದ ತಕ್ಷಣ ಸ್ಫೋಟವಾಗುತ್ತದೆ. ಗುರಿಯನ್ನು ಸಮೀಪಿಸಿದಾಗ ಅದರ ಆನ್‌ಬೋರ್ಡ್ ಇನ್‌ಫ್ರಾರೆಡ್ ಅನ್ವೇಷಕವು ಸಂಗ್ರಹಿಸಿದ ಚಿತ್ರದೊಂದಿಗೆ ಗುರಿಯ ಚಿತ್ರವನ್ನು ಹೊಂದಿಸಿ ನಿಖರವಾದ ದಾಳಿ ಮತ್ತು ಹಾನಿಯನ್ನು ಖಚಿತಪಡಿಸಿಕೊಳ್ಳುತ್ತದೆ.

2. SCALP ಬಳಸಿದ್ದೇಕೆ?

ಮೇಲೆ ವಿವರಿಸಿದಂತೆ ಸ್ಕ್ಯಾ‌ಲ್ಪ್‌ಅಸಾಧಾರಣ ನಿಖರತೆಯೊಂದಿಗೆ ಬಲವಾದ ಗುಪ್ತ ಸಾಮರ್ಥ್ಯಗಳನ್ನು ಹೊಂದಿದೆ. ಇದರ ಈ ವೈಶಿಷ್ಟ್ಯಗಳು ಕಮಾಂಡ್ ಸೆಂಟರ್‌ಗಳು, ವಾಯುನೆಲೆಗಳು ಮತ್ತು ಮೂಲಸೌಕರ್ಯಗಳಂತಹ ಗುರಿಗಳ ವಿರುದ್ಧ ನಿಖರವಾದ ದಾಳಿಗಳಿಗಳನ್ನು ಮಾಡಲು ಸಹಾಯ ಮಾಡುತ್ತದೆ.ಯಾವುದೇ ಗುರಿಯನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯವಿರುವುದರಿಂದಲೇ ಪಾಕಿಸ್ತಾನದೊಳಗಿನ ಉಗ್ರ ನೆಲೆಗಳ ಮೇಲೆ ದಾಳಿ ಮಾಡಲು ಭಾರತೀಯ ಸೇನೆ ಇದನ್ನು ಬಳಸಿದ್ದು.

3. ಹ್ಯಾಮರ್ ಗೈಡೆಡ್ ಬಾಂಬ್‌ಗಳೆಂದರೇನು?

HAMMER (Highly Agile Modular Munition Extended Range), 70 ಕಿಮೀ ವ್ಯಾಪ್ತಿಯನ್ನು ಹೊಂದಿದ್ದು, ಎಲ್ಲಾ ಹವಾಮಾನದಲ್ಲಿ ಕಾರ್ಯ ನಿರ್ವಹಿಸುತ್ತದೆ. ಹ್ಯಾಮರ್ ಶಕ್ತಿಶಾಲಿ ಪಥ ನಿರ್ದೇಶಿತ ಬಾಂಬ್‌ ಆಗಿದ್ದು, ಇದನ್ನು ಗ್ಲೈಡ್ ಬಾಂಬ್ ಎಂದೂ ಕರೆಯುತ್ತಾರೆ. SAFRAN ಎಂಬ ಫ್ರೆಂಚ್ ಕಂಪನಿ ಇದನ್ನು ನಿರ್ಮಿಸಿದೆ.

ಜಿಪಿಎಸ್ ಹೊಂದಿರುವ ಹ್ಯಾಮರ್ ಕ್ಷಿಪಣಿಯು ನಿಖರವಾಗಿ ದೂರದ ಗುರಿಯನ್ನು ತಲುಪಬಲ್ಲದು. ಈ ಕ್ಷಿಪಣಿಯನ್ನು ಆಕಾಶದಿಂದ ನೆಲದ ಗುರಿಯತ್ತ ಹಾರಿಸಬಹುದಾಗಿದೆ. INS/GPS, ಲೇಸರ್ ಮತ್ತು IR ಸಾಮರ್ಥ್ಯ ಹೊಂದಿದ್ದು ಕ್ಷಿಪಣಿಯು ಎಲೆಕ್ಟ್ರಾನಿಕ್ ಜಾಮರ್ ಅನ್ನು ಸುಲಭವಾಗಿ ತಡೆಯುತ್ತದೆ. ಮಾತ್ರವಲ್ಲದೆ, ಪರ್ವತ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ದಾಳಿ ನಡೆಸಲು ಸೂಕ್ತವಾಗಿದೆ.

4. ಹ್ಯಾಮರ್ ಬಳಸಿದ್ದೇಕೆ?

ನಿಖರ ಗುರಿಯನ್ನು ಧ್ವಂಸಗೊಳಿಸುವ ಹ್ಯಾಮರ್ ಎಲೆಕ್ಟ್ರಾನಿಕ್ ಜಾಮರ್ ಅನ್ನು ಸುಲಭವಾಗಿ ತಡೆದು ಕಡಿಮೆ ಎತ್ತರದಲ್ಲಿ ಮತ್ತು ಪರ್ವತ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ದಾಳಿ ನಡೆಸಬಲ್ಲದು. ಇದು ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಭೇದಿಸಲು ಸರಿಯಾದ ಆಯ್ಕೆಯಾಗಿದೆ. ಈ ಶಸ್ತ್ರಾಸ್ತ್ರ ವ್ಯವಸ್ಥೆಗಳ ಬಳಕೆಯಿಂದಾಗಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಯಬಾ ಪ್ರಧಾನ ಕಚೇರಿಗಳು ಸೇರಿದಂತೆ ಪಾಕಿಸ್ತಾನದಲ್ಲಿನ ಉಗ್ರರ ಮೂಲಸೌಕರ್ಯಗಳನ್ನು ಧ್ವಂಸ ಮಾಡಲು ಭಾರತಕ್ಕೆ ಸಾಧ್ಯವಾಯಿತು.

(ಬರಹ:ಪರಿಣಿತಾ ಬೆಂಗಳೂರು)


Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.