ಜನರನ್ನು ದೋಚುತ್ತಿವೆ ಕೇಂದ್ರ-ರಾಜ್ಯ ಸರ್ಕಾರಗಳು; ಮೆಟ್ರೋ ನಂಬಿ ಮನೆ ಬದಲಿಸಿದ ಪ್ರಯಾಣಿಕರಿಂದ ರಾಜಕಾರಣಿಗಳಿಗೆ ಹಿಡಿ ಶಾಪ
ಕನ್ನಡ ಸುದ್ದಿ  /  ಕರ್ನಾಟಕ  /  ಜನರನ್ನು ದೋಚುತ್ತಿವೆ ಕೇಂದ್ರ-ರಾಜ್ಯ ಸರ್ಕಾರಗಳು; ಮೆಟ್ರೋ ನಂಬಿ ಮನೆ ಬದಲಿಸಿದ ಪ್ರಯಾಣಿಕರಿಂದ ರಾಜಕಾರಣಿಗಳಿಗೆ ಹಿಡಿ ಶಾಪ

ಜನರನ್ನು ದೋಚುತ್ತಿವೆ ಕೇಂದ್ರ-ರಾಜ್ಯ ಸರ್ಕಾರಗಳು; ಮೆಟ್ರೋ ನಂಬಿ ಮನೆ ಬದಲಿಸಿದ ಪ್ರಯಾಣಿಕರಿಂದ ರಾಜಕಾರಣಿಗಳಿಗೆ ಹಿಡಿ ಶಾಪ

ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆ ಮಾಡಿದ ಹೊಣೆ ಹೊರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನುಣುಚಿಕೊಳ್ಳುತ್ತಿವೆ. ಇದು ಬೆಂಗಳೂರಿನ ಜನರು ಮತ್ತಷ್ಟು ಆಕ್ರೋಶಗೊಳ್ಳುವಂತೆ ಮಾಡಿದೆ. ಜನಸಾಮಾನ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ.

ಮೆಟ್ರೋ ನಂಬಿ ಮನೆ ಬದಲಿಸಿದ ಪ್ರಯಾಣಿಕರಿಂದ ರಾಜಕಾರಿಣಿಗಳಿಗೆ ಹಿಡಿಹಿಡಿ ಶಾಪ
ಮೆಟ್ರೋ ನಂಬಿ ಮನೆ ಬದಲಿಸಿದ ಪ್ರಯಾಣಿಕರಿಂದ ರಾಜಕಾರಿಣಿಗಳಿಗೆ ಹಿಡಿಹಿಡಿ ಶಾಪ (FB/Santhoshkumar Lm)

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ ಬೆನ್ನಲ್ಲೇ ಜನಸಾಮಾನ್ಯರಿಂದ ತೀವ್ರ ಆಕ್ರೋಶ ಎದುರಿಸುತ್ತಿದೆ. ಫೆ 9ರ ಭಾನುವಾರದಿಂದಲೇ ಹೊಸ ದರಗಳು ಜಾರಿಗೆ ಬಂದಿದ್ದು, ದುಬಾರಿ ಬೆಲೆ ತೆತ್ತು ಮೆಟ್ರೋದಲ್ಲಿ ಪ್ರಯಾಣಿಸಬೇಕಾದ ಸನ್ನಿವೇಶ ಬಂದಿರುವುದಕ್ಕೆ ಪ್ರಯಾಣಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಹೊಸ ದರದ ಅನ್ವಯ ಪ್ರತಿ ಬಾರಿ ಪ್ರಯಾಣಿಸುವಾಗಲೂ ಸರಾಸರಿ 10 ರಿಂದ 90 ರೂಪಾಯಿಯವರೆಗೆ ಟಿಕೆಟ್ ದರ ತೆರಬೇಕಾಗುತ್ತದೆ. ಇದು ನಿತ್ಯ ಮೆಟ್ರೋದಲ್ಲಿ ಪ್ರಯಾಣಿಸುವ ಜನರ ಕೋಪಕ್ಕೆ ಕಾರಣವಾಗಿದೆ. ಟಿಕೆಟ್‌ ದರ ಏರಿಸಿದ ಬೆನ್ನಲ್ಲೇ ನಾಗರಿಕರು ಪ್ರತಿಕ್ರಿಯೆ ನೀಡುತ್ತಿದ್ದು, ಸೋಷಿಯಲ್‌ ಮೀಡಿಯಾದಲ್ಲೂ ಅಸಮಾಧಾನ ಹೊರಹಾಕುತ್ತಿದ್ದಾರೆ.

ದರ ಏರಿಕೆ ಮಾಡಿದ ಹೊಣೆ ಹೊರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನುಣುಚಿಕೊಳ್ಳುತ್ತಿವೆ. ಇದು ಜನರು ಮತ್ತಷ್ಟು ಆಕ್ರೋಶಗೊಳ್ಳುವಂತೆ ಮಾಡಿದೆ. ಜನಸಾಮಾನ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಜನರು ಮಾಡಿರುವ ಪೋಸ್ಟ್‌ಗಳು ಇಲ್ಲಿವೆ.

"ಮೆಟ್ರೊ ರೈಲಿನ ದರ ಹೆಚ್ಚಳ ಮಾಡಿದ್ದು, ಜನ ಸಾಮಾನ್ಯರ ಬದುಕು ಮತ್ತಷ್ಟು ಕಷ್ಟದತ್ತ !" ಎಂದು ನಾಗೇಶ್ ಶ್ರೀನಿವಾಸ್‌ ಎಂಬ ಫೇಸ್‌ಬುಕ್‌ ಬಳಕೆದಾರ ಪೋಸ್ಟ್‌ ಮಾಡಿದ್ದಾರೆ. "ಅಷ್ಟೊಂದು ಮೆಟ್ರೊ ದರ ಏರಿಸುವ ಬದಲು, ಒಂದಷ್ಟು ಪಿಕ್ ಪಾಕೆಟ್ ಪರಿಣತರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರೆ ಒಳ್ಳೆಯದಿತ್ತು. ಸಂಬಳಕ್ಕಾಗಿ ನಂಗರ್ಧಾ... ನಿಂಗರ್ಧಾ ಪದ್ಧತಿ" ಎಂದು ರಾಮಚಂದ್ರ ಮಡಂತ್ಯಾರ್‌ ಪೋಸ್ಟ್‌ ಮಾಡಿದ್ದಾರೆ.

"ಅದೇನೋ ಗಾದೆ ಇದೆ. ಅದರಲ್ಲಿ ಬಂದಿದ್ದು ಇದರಲ್ಲಿ ಹೋಯ್ತು ಅಂತಾ. ಬೆಂಗಳೂರಿಗರಿಗೆ ಇನ್‌ಕಮ್ ಟ್ಯಾಕ್ಸ್‌ನಲ್ಲಿ ಉಳಿದಿದ್ದು ಮೆಟ್ರೊ ಟಿಕೆಟ್‌ನಲ್ಲಿ ಹೋಗುತ್ತೆ ಅಷ್ಟೇ" ಎಂದು ಬಾಲಕೃಷ್ಣ ಹಾಸನ್‌ ಪ್ರತಿಕ್ರಿಯಿಸಿದ್ದಾರೆ.

ದೊಡ್ಡ ಪ್ರತಿಭಟನೆಗೆ ಕಾರಣವಾಗಬೇಕಿತ್ತು

"ಮೆಟ್ರೊ ದರ ವಿಪರೀತ ಏರಿಕೆ ಮಾಡಲಾಗಿದೆ. ಜನತೆಯಿಂದ ವಿರೋಧದ ಕ್ಷೀಣ ಧ್ವನಿಯೂ ಇಲ್ಲ. ರಾಜಕೀಯ ಪಕ್ಷಗಳೂ ಮಾತಾಡುತ್ತಿಲ್ಲ. ನಿಜಕ್ಕೂ ಇದು ದೊಡ್ಡ ಪ್ರತಿಭಟನೆಗೆ ಕಾರಣವಾಗಬೇಕಿತ್ತು" ಎಂದು ಅಬ್ದುಲ್‌ ಮುನೀರ್‌ ಪೋಸ್ಟ್‌ ಮಾಡಿದ್ದಾರೆ.

ಒಬ್ಬರ ಮೇಲೊಬ್ಬರು ಆರೋಪ

"ಕೇಂದ್ರ ಸರ್ಕಾರದ ಆದೇಶದಂತೆ ಮೆಟ್ರೋ ನೇಮಿಸಿದ್ದ ಸಮಿತಿಯ ಶಿಫಾರಸ್ಸಿನಂತೆ, ಮೆಟ್ರೋ ದರವನ್ನು ಏರಿಸಲಾಗಿದೆ. ಮೊನ್ನೆ ಮೋದಿಯವರು ಮೆಟ್ರೊ ಪ್ರಯಾಣ ದರ ಏರಿಕೆಯ‌ನ್ನು ಮೋದಿಯವರು ತಡೆಹಿಡಿದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಯವರು, ಇಂದು ಬೆಲೆ ಏರಿಸಿದ್ದಕ್ಕಾಗಿ ರಾಜ್ಯ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಈ ಎರಡು ಪಕ್ಷದವರು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಾ ಕಾಲಹರಣ ಮಾಡ್ತಿದ್ದಾರೆ. ದೆಹಲಿ, ಮುಂಬೈ ಮೆಟ್ರೋ ಸೇರಿದಂತೆ ಇಡೀ ದೇಶದಲ್ಲಿ ಗರಿಷ್ಠ ಟಿಕೆಟ್ ದರ 60 ರೂಪಾಯಿ ಇದೆ. ಬೆಂಗಳೂರಿನವರು ಮಾತ್ರ 90 ಪಾವತಿಸಬೇಕು" ಎಂದು ಧನುಷ್‌ ಮೂರ್ತಿ ಪೋಸ್ಟ್‌ ಮಾಡಿದ್ದಾರೆ.‌

 

ಒಂದು ದಿನಕ್ಕೆ 180 ರೂ. ಎತ್ತಿಡಬೇಕು

"ಮೆಟ್ರೋದಲ್ಲಿ ನೆಮ್ಮದಿಯಾಗಿ ಓಡಾಡ್ಕೊಂಡಿದ್ವಿ. ಈಗ ಅದರ ಮೇಲೂ ಕಣ್ಣು ಬಿದ್ದಾಯ್ತು. ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ ಬರೀ 57 ರೂ ಕೊಟ್ಟು ಓಡಾಡುತ್ತಿದ್ದೆವು. ಈಗ ಏಕಾಏಕಿ 50 ಶೇ. ಹೆಚ್ಚಳ ಮಾಡಿದ್ದಾರೆ. ಇನ್ನು ಮುಂದೆ ಅದಕ್ಕೆ 90 ರೂ ಕೊಡಬೇಕಂತೆ. ಹಾಗಾಗಿ ಇನ್ನು ಮುಂದೆ ಹೋಗಿ ಬರಲು 180 ರೂ. ಎತ್ತಿಡಬೇಕು. ಉಪಮುಖ್ಯಮಂತ್ರಿ ಡಿಕೆಶಿಯವರು ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಅನ್ನುತ್ತಿದ್ದಾರೆ. ಇದು ಮೆಟ್ರೋ ನಿಗಮದ ದರಗಳನ್ನು ಪರಿಷ್ಕರಿಸುವ ಸಮಿತಿಯ ನಿರ್ಧಾರವಂತೆ. ಅದ್ಯಾರು ಮಾಡಿದ್ದು ಹಾಗಿದ್ರೆ" ಎಂದು ಸಂತೋಷ್‌ಕುಮಾರ್‌ ಎಂಬ ಬಳಕೆದಾರ ಪೋಸ್ಟ್‌ ಮಾಡಿದ್ದಾರೆ.

ಮೆಟ್ರೋದಲ್ಲಿ ಓಡಾಡುತ್ತಿರುವವರು ಬರೀ ಸಾಫ್ಟ್‌ವೇರ್‌ನವರಾ? ಮೆಟ್ರೋ ಬಂದದ್ದರಿಂದ ಅನೇಕರು ವೈಟ್‌ಫೀಲ್ಡ್‌ನಂಥಾ ಹೆಚ್ಚು ಬಾಡಿಗೆಯಿರುವ ಏರಿಯಾಗಳನ್ನು ಬಿಟ್ಟು ಮೆಟ್ರೋ ವ್ಯವಸ್ಥೆಯಿರುವ ಏರಿಯಾಗಳಲ್ಲಿ ಮನೆ ಮಾಡಿಕೊಂಡರು. ಈಗ ಈ ರೀತಿ ದರ ಜಾಸ್ತಿ ಮಾಡಿದರೆ ಆ ದುಡ್ಡಿನಲ್ಲೇ ಅಲ್ಲೇ ಮನೆ ಮಾಡಿಕೊಳ್ಳೋಣ ಅಂತ ಮನಸ್ಸು ಬದಲಾಯಿಸುತ್ತಾರೆ. ಆಗ ಈ ದರ ಹೆಚ್ಚು ಮಾಡಿದ ಕಮಿಟಿಯವರೇ ಅವರ ಹೆಂಡತಿ-ಮಕ್ಕಳನ್ನು ಕರ್ಕೊಂಡು ಮೆಟ್ರೋದೊಳಗೆ ಸಂಸಾರ ಮಾಡಲಿ ಎಂದು ಆಕ್ರೋಶ ಹೊರಹಾಕಿದ್ದಾರೆ .

Whats_app_banner