ವಿದ್ಯಾರ್ಥಿಯ ಮಾತನ್ನು ಅಲ್ಲೇ ನಿಜ ಮಾಡಿಬಿಟ್ರಲ್ಲಾ ವಿದ್ಯಾ ಮಂತ್ರಿಗಳೇ, ನೀವು ಮಾಡಬೇಕಾದ್ದು ಬಹಳಷ್ಟಿದೆ; ಪತ್ರಕರ್ತ ರಾಜೀವ್ ಹೆಗಡೆ ಅಭಿಮತ
ಬೆಂಗಳೂರು ವಿಧಾನಸೌಧದಲ್ಲಿ ನೀಟ್ ಕೋಚಿಂಗ್ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಯೊಬ್ಬ “ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ” ಎಂದು ಕೂಗಿದ್ದು ಗಮನಸೆಳೆದಿತ್ತು. ಇದು ಟೀಕೆಗೆ ಒಳಗಾಗಿದ್ದು, ಪತ್ರಕರ್ತ ರಾಜೀವ್ ಹೆಗಡೆ ಕೂಡ ಶಿಕ್ಷಣ ಸಚಿವರ ಕಾರ್ಯವೈಖರಿಯನ್ನು ಟೀಕಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ವಿವರ ಇಲ್ಲಿದೆ.
ಬೆಂಗಳೂರು: ನೀಟ್ ಕೋಚಿಂಗ್ ಉಚಿತವಾಗಿ ನೀಡುವುದಕ್ಕೆ ಸಂಬಂಧಿಸಿದ ಕಾರ್ಯಕ್ರಮ ವಿಧಾನ ಸೌಧದಲ್ಲಿ ಆಯೋಜನೆಯಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಬೇರೆ ಬೇರೆ ಜಿಲ್ಲೆಗಳಿಂದಲೂ ಶಾಲಾ ಮಕ್ಕಳು, ಶಿಕ್ಷಕರು ಪಾಲ್ಗೊಂಡಿದ್ದರು. ಅಲ್ಲಿ ವಿದ್ಯಾರ್ಥಿಯೊಬ್ಬ “ವಿದ್ಯಾಮಂತ್ರಿಗೆ ಕನ್ನಡ ಬರಲ್ಲ” ಎಂದು ಕೂಗಿ ಹೇಳಿದ್ದು ಗಮನಸೆಳೆದಿತ್ತು. ಕೂಡಲೇ ಅದಕ್ಕೆ ಪ್ರತಿಕ್ರಿಯಿಸಿದ್ದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಏ ಯಾರಪ್ಪ ಅದು, ನಾನೇನು ಉರ್ದುವಿನಲ್ಲಾ ಮಾತನಾಡ್ತಾ ಇರೋದು ಎಂದು ಕೇಳಿದ್ದರಲ್ಲದೇ, ಹಾಗೆ ಕೂಗಿದ ವಿದ್ಯಾರ್ಥಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಇಂಗ್ಲಿಷ್‌ನಲ್ಲೇ ಸೂಚನೆ ಕೊಟ್ಟಿದ್ದರು. ಅವರ ಈ ನಡವಳಿಕೆ, ಕಾರ್ಯವೈಖರಿ ವ್ಯಾಪಕ ಟೀಕೆಗೆ ಒಳಗಾಗಿದೆ. ಪತ್ರಕರ್ತ ರಾಜೀವ ಹೆಗಡೆ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದು ಹೀಗಿದೆ-
ಶಿಕ್ಷಣ ಸಚಿವರೇ ಬಡಪಾಯಿ ವಿದ್ಯಾರ್ಥಿಯನ್ನು ಬಿಟ್ಟು, ನೀವು ಕ್ರಮ ಕೈಗೊಳ್ಳಬೇಕಿರುವುದು ಸಾಕಷ್ಟಿದೆ!
ಶಿಕ್ಷಣ ಸಚಿವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಯಾವುದೋ ಒಬ್ಬ ತರ್ಲೆ ವಿದ್ಯಾರ್ಥಿ ʼವಿದ್ಯಾ ಮಂತ್ರಿಗೆ ಕನ್ನಡ ಬರಲ್ಲʼ ಎನ್ನುವ ಪರಮ ಸತ್ಯವನ್ನು ಬಹಿರಂಗವಾಗಿ ಹೇಳಿದ್ದಾರೆ. ಇಂತಹ ʼಅವ್ಯವಸ್ಥೆʼಯನ್ನು ನೋಡಿ ಕೆಂಡಾಮಂಡಲರಾದ ಮಾನ್ಯ ಶಿಕ್ಷಣ ಸಚಿವರು, ʼಆ ರೀತಿ ಹೇಳಿಕೆಯನ್ನು ರೆಕಾರ್ಡ್ ಮಾಡಿ ವಿದ್ಯಾರ್ಥಿ ವಿರುದ್ಧ ಕ್ರಮ ಕೈಗೊಳ್ಳಿ. ಇದು ಅತ್ಯಂತ ಮೂರ್ಖತನದ ವಿಚಾರ. ಅವನಿಗೆ ನಾಚಿಕೆ ಆಗಬೇಕು. ಬಿಇಒ ಹಾಗೂ ಶಿಕ್ಷಕರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಾನು ಸುಮ್ಮನೇ ಕೂರಲು ಆಗದು. ನಾವು ಕ್ರಮ ತೆಗೆದುಕೊಳ್ಳಲೇಬೇಕು. ಯಾವನೋ ತಲೆಕಟ್ಟವನು ಈ ರೀತಿ ಮಾಡ್ತಾನೆ ಎಂದು ಕಾರ್ಯಕ್ರಮದ ಉದ್ದೇಶ ಹಾಳು ಮಾಡಲಾಗುವುದಿಲ್ಲʼ ಎಂದು ನಿರ್ದೇಶನ ನೀಡಿದ್ದಾರೆ. ಅಂದ್ಹಾಗೆ ಈ ಹೇಳಿಕೆಯನ್ನು ನೀಡುವಾಗಲೂ ಹೆಚ್ಚಿನ ವಾಕ್ಯಗಳು ಇಂಗ್ಲಿಷ್‌ನಲ್ಲಿಯೇ ಇದ್ದವು. ಆ ಮೂಲಕ ʼವಿದ್ಯಾ ಮಂತ್ರಿಗೆ ಕನ್ನಡ ಬರಲ್ಲʼ ಎನ್ನುವುದನ್ನು ಕ್ಷಣಾರ್ಧದಲ್ಲೇ ಖಾತ್ರಿ ಮಾಡಿದ್ದಾರೆ. ಹೀಗಾಗಿ ತಮ್ಮ ಬುದ್ಧಿಮತ್ತೆಯನ್ನು ಅದೇ ವೇದಿಕೆಯಲ್ಲಿ ಪ್ರದರ್ಶಿಸಿದ ಮಾನ್ಯ ಶಿಕ್ಷಣ ಸಚಿವರಿಗೆ ಕನ್ನಡ ಭಾಷಿಕರ ಕಡೆಯಿಂದ ಧನ್ಯವಾದಗಳು.
ಪ್ರತಿಯೊಂದು ತರಗತಿಯಲ್ಲೂ ಇಂತಹ ಒಂದಿಷ್ಟು ತರ್ಲೆ ವಿದ್ಯಾರ್ಥಿಗಳು ಇರುತ್ತಾರೆ. ಆದರೆ ಅದನ್ನು ಉತ್ತಮ ಶಿಕ್ಷಕರಾದವರೂ ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸುತ್ತಾರೆ. ಇದೇ ಶಿಕ್ಷಣ ಸಚಿವರು ಪ್ರತಿನಿಧಿಸುವ ಶಾಸನ ಸಭೆಗಳು ರೂಪಿಸಿದ ಕಾನೂನು ಹಾಗೂ ನಿಯಮಗಳ ಪ್ರಕಾರ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ಕೊಡುವ ರೀತಿ ಯಾವುದೇ ಕ್ರಮ ತೆಗೆದುಕೊಂಡರೂ ಅಪರಾಧವಾಗುತ್ತದೆ. ಆ ಕಾನೂನಿನಲ್ಲೂ ಈ ಶಿಕ್ಷಣ ಸಚಿವರ ವರ್ತನೆಯಷ್ಟೇ ಉತ್ಪ್ರೇಕ್ಷಿತ ಅಂಶಗಳಿರುವುದು ಕೂಡ ನಿಜ. ಆದರೆ ಶಿಕ್ಷಣ ಹಾಗೂ ಕಾನೂನಿನ ಗಂಧ ಗಾಳಿಯಿಲ್ಲದ ಶಿಕ್ಷಣ ಸಚಿವರು ಯಾವ ಆಧಾರದ ಮೇಲೆ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಸೂಚಿಸಿದ್ದಾರೆ ಎನ್ನುವುದೇ ಅರ್ಥವಾಗಿಲ್ಲ. ಅದರಲ್ಲೂ ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ಶಿಕ್ಷಕರು ಹಾಗೂ ಬಿಇಒಗಳಿಗೆ ನಿರ್ದೇಶನ ನೀಡಿದರೆ, ಬುದ್ಧಿಯಿಲ್ಲದ ಶಿಕ್ಷಣ ಸಚಿವರನ್ನು ಖುಷಿ ಪಡಿಸಲು ಆ ವಿದ್ಯಾರ್ಥಿಯ ಶೈಕ್ಷಣಿಕ ಬದುಕನ್ನು ಆಡಳಿತ ವರ್ಗ ಹೇಗೆಲ್ಲ ಹಾಳು ಮಾಡಬಹುದು ಎನ್ನುವ ಸಾಮಾನ್ಯ ಜ್ಞಾನವಾದರೂ ಬೇಕಲ್ಲವೇ? ಇಂತಹ ಸಾಮಾಜಿಕ ಸೂಕ್ಷ್ಮತೆಯಿಲ್ಲದವರೆಲ್ಲ ಶಿಕ್ಷಣ ಸಚಿವರಾದರೆ ಹೀಗೆಯೇ ಆಗುತ್ತದೆ.
ಅಷ್ಟಕ್ಕೂ ಆ ವಿದ್ಯಾರ್ಥಿ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಶಿಕ್ಷಣ ಸಚಿವರಿಗೆ ಸರಿಯಾಗಿ ಕನ್ನಡ ಬರುವುದಿಲ್ಲ ಎನ್ನುವುದು ಸೂರ್ಯಚಂದ್ರರಿರುವಷ್ಟೇ ಸತ್ಯ. ಅದನ್ನು ಒಪ್ಪಿಕೊಂಡು ತಾನು ಸರಿಯಾಗಿ ಕನ್ನಡ ಮಾತನಾಡುತ್ತೇನೆ ಎನ್ನುವ ಸವಾಲನ್ನು ಸ್ವೀಕರಿಸಿದ್ದರೆ ಕಳೆದ ಕೆಲ ವರ್ಷಗಳಿಂದ ಆಗುತ್ತಿರುವ ಎಡವಟ್ಟುಗಳು ನಿಲ್ಲುತ್ತಿದ್ದವು. ʼವಿದ್ಯಾ ಮಂತ್ರಿಗೆ ಕನ್ನಡ ಬರುವುದಿಲ್ಲʼ ಎನ್ನುವುದು ಕೇವಲ ತಮಾಷೆಯ ಹೇಳಿಕೆಯಲ್ಲ. ಸಚಿವರು ಮಾತನಾಡುವ ಭಾಷೆ ಹಾಗೂ ಅವರ ವರ್ತನೆಯು ಈ ನಾಡಿನ ಭವಿಷ್ಯದ ಪ್ರಜೆಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಇಲ್ಲವಾದಲ್ಲಿ ಮನೆಯ ಯಜಮಾನನಂತೆ ತಾವು ಇರುತ್ತೇವೆ ಎನ್ನುವ ಅದೇ ದುರಹಂಕಾರವು ಇಲಾಖೆ ಪೂರ್ತಿ ತುಂಬಿಕೊಳ್ಳುತ್ತದೆ.
ಇಷ್ಟಾಗಿಯೂ ಒಂದು ತರ್ಲೆ ಹೇಳಿಕೆಯನ್ನು ಆಧರಿಸಿ ವಿದ್ಯಾರ್ಥಿ ಮೇಲೆ ಕ್ರಮ ತೆಗೆದುಕೊಳ್ಳಿ ಎನ್ನುವ ಶಿಕ್ಷಣ ಸಚಿವರಿಗೆ ಕಾನೂನಿನ ಕನಿಷ್ಠ ಜ್ಞಾನವೂ ಇಲ್ಲ ಎನಿಸುತ್ತದೆ. ವಿದ್ಯಾರ್ಥಿ ವಿರುದ್ಧ ಕ್ರಮವೆಂದರೆ ಏನು ಮಾಡಲು ಸಾಧ್ಯ? ಆ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕುವ ಧೈರ್ಯ ಅಥವಾ ತಾಕತ್ತನ್ನು ನಿಮ್ಮ ಕಾನೂನು ನೀಡುತ್ತದೆಯೇ? ಆ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡಬೇಕೆ? ಆ ವಿದ್ಯಾರ್ಥಿಗೆ ದಂಡ ಹಾಕಬೇಕೆ? ಯಾವ ಕಾಯಿದೆ ಪ್ರಕಾರ, ಯಾವ ರೀತಿಯ ಶಿಕ್ಷೆಯನ್ನು ನೀಡಲು ನಿರ್ದೇಶಿಸುತ್ತೀರಾ?
ಆದರೆ ಮಾನ್ಯ ಸಚಿವರೇ ನೀವು ಶಿಕ್ಷಣ ಇಲಾಖೆಯಲ್ಲಿ ಕ್ರಮ ತೆಗೆದುಕೊಳ್ಳಬೇಕಿರುವುದು ಇನ್ನು ಸಾಕಷ್ಟು ವಿಚಾರಗಳಿವೆ ಅಥವಾ ಇಲ್ಲಿಯವರೆಗೆ ಕನಿಷ್ಠ ಕ್ರಮವನ್ನೂ ತೆಗೆದುಕೊಳ್ಳದ ಸಾಕಷ್ಟು ಗಂಭೀರ ವಿಷಯಗಳಿವೆ. ನಿಮ್ಮ ಸರ್ಕಾರವೇ ಹೇಳುವಂತೆ ಬಡವರ ಪರವಾದ ಅದೆಷ್ಟೋ ಶೈಕ್ಷಣಿಕ ಕ್ರಮಗಳು ಇಲಾಖೆಯ ಕಡತ ಅಥವಾ ಬಜೆಟ್ ಪುಸ್ತಕದಲ್ಲಿಯೇ ಉಳಿದಿವೆ. ನಿಮ್ಮ ರಾಜಕೀಯದ ಹಾಲಿ ಗುರುವನ್ನು ಟೀಕಿಸಿದ್ದಕ್ಕೆ ಅನುದಾನಕ್ಕೆ ಕತ್ತರಿ ಹಾಕಿದ್ದರು. ನೀವು ಬಡಪಾಯಿ ವಿದ್ಯಾರ್ಥಿ ವಿರುದ್ಧ ಧಿಮಾಕು ತೋರಿಸಲು ಮುಂದಾಗಿದ್ದೀರಿ? ಪ್ರಜಾಪ್ರಭುತ್ವ ರಕ್ಷಣೆಯ ದಿನದಂದು ಊರ್ತುಂಬಾ ನೀವು ಪ್ರಚಾರ ಮಾಡಿ, ಇದೇ ಸಹನೆಯನ್ನು ಬೋಧಿಸಿದ್ದೀರಾ? ಒಬ್ಬ ವಿದ್ಯಾರ್ಥಿಯು ʼಗುಂಪಿನಲ್ಲಿ ಗೋವಿಂದʼ ಎಂದು ನೀಡಿದ ಹೇಳಿಕೆಯನ್ನು ಸಹಿಸಿಕೊಳ್ಳಲಾಗದಿದ್ದರೆ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.
ಇವೆಲ್ಲದರ ಮಧ್ಯೆ ಶಿಕ್ಷಣ ಸಚಿವರೇ, ನೀವು ಕ್ರಮ ತೆಗೆದುಕೊಳ್ಳಬೇಕಿರುವ ವಿಷಯಗಳ ಪಟ್ಟಿ ಇಲ್ಲಿದೆ. ಬಡಪಾಯಿ ವಿದ್ಯಾರ್ಥಿ ಮೇಲೆ ಕ್ರಮ ಜರುಗಿಸಿ, ನೀವು ದೊಡ್ಡ ಶಿಕ್ಷಣ ಸಚಿವ ಎಂದು ಸಾಬೀತು ಮಾಡುವ ಬದಲಿಗೆ ಇಲಾಖೆಯಲ್ಲಿನ ಈ ವಿಚಾರಗಳ ಬಗ್ಗೆ ಗಮನ ನೀಡಿ. ಇಲ್ಲವಾದಲ್ಲಿ ನಿಮಗೆ ಸರಿಯಾಗಿ ಕನ್ನಡ ಬರುವುದಿಲ್ಲ ಎನ್ನುವ ಬಗ್ಗೆ ನಮಗೆ ಯಾವುದೇ ಸಂದೇಹ ಉಳಿದಿಲ್ಲ. ಆದರೆ ʼವಿದ್ಯಾಮಂತ್ರಿಗೆ ಇಲಾಖೆಯನ್ನೂ ನಡೆಸಲು ಬರಲ್ಲʼ ಎನ್ನುವುದು ಪದೇಪದೆ ಸಾಬೀತಾಗುತ್ತಲೇ ಇರುತ್ತದೆ.
*ಪ್ರಾಥಮಿಕ ಶಾಲೆಗಳ ಜತೆಗೆ ಪೂರ್ವ ಪ್ರಾಥಮಿಕ(ಎಲ್‌ಕೆಜಿ, ಯುಕೆಜಿ) ಆರಂಭಿಸಲಾಗಿದೆ. ಈ ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಅಗತ್ಯವಿರುವ ಆಹಾರ, ಸಾಮಗ್ರಿಗಳನ್ನು ಎಲ್ಲ ಶಾಲೆಗಳಿಗೆ ಸಮರ್ಪಕವಾಗಿ ಪೂರೈಕೆ ಮಾಡಲು ಕ್ರಮಕೈಗೊಳ್ಳಿ. ಈ ಚಿಣ್ಣರ ಪಾಠಕ್ಕೆ ನೇಮಿಸಿಕೊಂಡಿರುವ ಅತಿಥಿ ಶಿಕ್ಷಕರಿಗೆ ಪ್ರತಿ ತಿಂಗಳು ಸಂಬಳ ಹೋಗುವಂತೆ ಕ್ರಮವಹಿಸಿ. ಪೂರ್ವ ಪ್ರಾಥಮಿಕ ಶಾಲೆಗೆ ಏನು ಪಾಠ ಮಾಡಬೇಕು ಎನ್ನುವ ಪಠ್ಯವನ್ನು ಅರ್ಧವರ್ಷವಾದರೂ ನೀಡಿಲ್ಲ, ಆ ಮಕ್ಕಳ ಜ್ಞಾನಾರ್ಜನೆಗೆ ಕ್ರಮ ಕೈಗೊಳ್ಳಿ.
*ವಿದ್ಯಾರ್ಥಿಗಳ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಪಠ್ಯವನ್ನೇ ಎರಡು ಭಾಗವನ್ನಾಗಿ ಕತ್ತರಿಸಲಾಗಿದೆ. ಆದರೆ ದಸರಾ ರಜೆ ಮುಗಿಸಿ ಶಾಲೆಗೆ ಬಂದು ಒಂದೂವರೆ ತಿಂಗಳಾದರೂ ಸಾಕಷ್ಟು ವಿದ್ಯಾರ್ಥಿಗಳಿಗೆ ಪುಸ್ತಕ ಪೂರೈಕೆ ಮಾಡಲಾಗಿಲ್ಲ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಕಟ ನಿವಾರಣೆಗೆ ಕಠಿಣ ಕ್ರಮಕೈಗೊಳ್ಳಿ.
*ವರ್ಷದಲ್ಲಿ ಯಾವಾಗ ಪರೀಕ್ಷೆ ಮಾಡಬೇಕು, ಯಾವಾಗ ಬೋರ್ಡ್ ಪರೀಕ್ಷೆ ಮಾಡಬೇಕು ಎನ್ನುವುದನ್ನು ಪೂರ್ವ ಯೋಜಿತವಾಗಿ, ಕಾನೂನು ಪ್ರಕಾರ ಆದೇಶಗಳನ್ನು ಹೊರಡಿಸುವ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ಮಾಡಿ ಅತ್ಯಂತ ಕಠಿಣ ಕ್ರಮಕೈಗೊಳ್ಳಿ.
*ನಿಮ್ಮ ಅವೈಜ್ಞಾನಿಕ ಸೂಚನೆಯಿಂದ ವರ್ಷದಲ್ಲಿ ಐದು ತಿಂಗಳುಗಳ ಕಾಲ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿವೆ. ಇದರಿಂದ ಶೈಕ್ಷಣಿಕ ಗುಣಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಈ ಬಗ್ಗೆ ಕೂಡಲೇ ಅಗತ್ಯ, ಶಿಕ್ಷಣ ಸ್ನೇಹಿ ಕ್ರಮವನ್ನು ಕೈಗೊಳ್ಳಿ.
*ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆ ವ್ಯವಸ್ಥೆಯನ್ನು ಹದಗೆಡಿಸಿರುವುದರಿಂದ ಒಟ್ಟಾರೆ ಶೈಕ್ಷಣಿಕ ಗುಣಮಟ್ಟವೇ ಕುಸಿದಿದೆ. ಪದವಿ ಕಾಲೇಜುಗಳ ಉಪನ್ಯಾಸಕರು ಪ್ರತಿದಿನ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಭವಿಷ್ಯಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳಿ.
*ಇಡೀ ಶಿಕ್ಷಣ ಇಲಾಖೆಯನ್ನು ವಾಟ್ಸ್‌ಆ್ಯಪ್ ಮೂಲಕ ಆದೇಶಗಳ ಮೂಲಕ ನಡೆಸಲಾಗುತ್ತಿದೆ. ಸಾಮಾಜಿಕ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಶಿಕ್ಷಕರ ಕ್ರಿಯೆ-ಪ್ರತಿಕ್ರಿಯೆ ಆಧರಿಸಿ ಇಲಾಖೆ ಅಧಿಕಾರಿಗಳು ಮುಂದಿನ ಕೆಲಸ ಮಾಡುತ್ತಿದ್ದಾರೆ. ಇದೇ ಗ್ರೂಪ್‌ನಲ್ಲಿ ಮಣಿವಣ್ಣನ್ ಹೊರಡಿಸಿದ್ದ ಸೂಚನೆಯ ಎಡವಟ್ಟನ್ನು ನಾವೆಲ್ಲ ನೋಡಿದ್ದೇವೆ. ಇಂತಹ ದುರಾಡಳಿತದ ವಿರುದ್ಧ ಕ್ರಮಕೈಗೊಳ್ಳಿ.
*ಪಾಠ ಮಾಡುವ ಶಿಕ್ಷಕರಿಗೆ ಮೊಟ್ಟೆ ವಿತರಣೆಯ ಟಾರ್ಗೆಟ್ ನೀಡಲಾಗಿದೆ. ವಿದ್ಯಾರ್ಥಿಗಳನ್ನು ತಿದ್ದಬೇಕಿರುವ ಮೇಷ್ಟ್ರಿಗೆ ಬಿಸಿಯೂಟದ ಲೆಕ್ಕಾಚಾರ ಮಾಡುವ ಕೆಲಸ ನೀಡಲಾಗಿದೆ. ಶಿಕ್ಷಣದ ಕೆಲಸ ಬಿಟ್ಟು ಉಳಿದೆಲ್ಲ ಕೆಲಸವನ್ನು ಹಂಚಿರುವ ಬುದ್ಧಿವಂತ ಅಧಿಕಾರದ ವಿರುದ್ಧ ಕ್ರಮಕೈಗೊಳ್ಳುವ ಧೈರ್ಯವನ್ನು ತೋರಿಸಿ.
*ಇತ್ತೀಚಿನ ಶಿಕ್ಷಕರ ನೇಮಕಾತಿಯಿಂದ ಶಾಲೆಗಳಲ್ಲಿ ದೊಡ್ಡ ಪ್ರಮಾಣದ ಅಸಮಾನತೆ ಹಾಗೂ ಗೊಂದಲ ನಿರ್ಮಾಣವಾಗಿದೆ. ಈ ಸಂಬಂಧದ ಕಾನೂನು ಹೋರಾಟಕ್ಕೆ ವೇಗ ಕೊಟ್ಟು, ಅದನ್ನು ಸರಿಪಡಿಸುವ ಕೆಲಸ ಮಾಡಿ.
*ರಾಜ್ಯದ ವಿವಿಧ ಶಾಲೆಗಳು ಖಾಸಗಿ ಅಥವಾ ಶಿಕ್ಷಣ ಇಲಾಖೆಯೇತರ ಭೂಮಿಗಳಲ್ಲಿವೆ. ಅದು ದೊಡ್ಡ ಕಾನೂನು ಸಮರಕ್ಕೆ ಎಡೆ ಮಾಡಿಕೊಡಬಹುದು. ಈ ವಿವಾದದ ಬಗ್ಗೆ ಕಾನೂನು ಮೂಲಕ ಉತ್ತರ ನೀಡುವ ಕ್ರಮ ಕೈಗೊಳ್ಳಿ.
*ಶಾಲೆಗಳ ನಿರ್ವಹಣೆ ಹಾಗೂ ಕಾರ್ಯಕ್ರಮಕ್ಕೆ ಬೇಕಿರುವ ಅನುದಾನವನ್ನು ನೀಡದೇ ಶಿಕ್ಷಕರು ಸ್ಥಳೀಯವಾಗಿ ಹಣಕ್ಕೆ ಬೇಡುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಪರಿಹಾರ ಕ್ರಮಕೈಗೊಳ್ಳಿ.
*ವಿದ್ಯಾರ್ಥಿಗಳಿಗೆ ಬೇಕಿರುವ ಸಮವಸ್ತ್ರ, ಪುಸ್ತಕ, ಶೂಗಳನ್ನು ಶಾಲೆಯ ಆರಂಭದ ಮೊದಲ ದಿನವೇ ದೊರೆಯುವಂತೆ ಗಂಭೀರವಾದ ಕ್ರಮ ಕೈಗೊಳ್ಳಿ.
*ರಾಜ್ಯದಲ್ಲಿ ಪ್ರತಿ ತಾಲೂಕು ಹಂತಕ್ಕೂ ಅನಧಿಕೃತವಾಗಿ ಜಾತಿವಾರು ಶಿಕ್ಷಕರ ಸಂಘಟನೆಗಳು ಹುಟ್ಟಿಕೊಂಡಿವೆ. ಶಿಕ್ಷಕರ ಮುಖ್ಯ ಸಂಘಟನೆಯೇ ಕಾನೂನು ಹಾಗೂ ಶೈಕ್ಷಣಿಕ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎನ್ನುವ ಆರೋಪವಿದೆ. ಹೀಗಿರುವಾಗ ಜಾತಿಗೊಂದು ಸಂಘಟನೆ ಹುಟ್ಟಿಕೊಳ್ಳಲು ಅವಕಾಶ ನೀಡಿ, ಶಿಕ್ಷಣವನ್ನು ಬಲಿ ಹಾಕಲಾಗುತ್ತಿದೆ. ಈ ಸಂಘಟನೆಯ ಕೆಲಸವೇ ಹಲವು ಶಿಕ್ಷಕರಿಗೆ ಪ್ರಾಥಮಿಕ ಆದ್ಯತೆಯಾಗಿದೆ. ಇಂತಹ ದುರಭ್ಯಾಸಗಳ ವಿರುದ್ಧ ನೀವು ಕ್ರಮ ಕೈಗೊಳ್ಳುವ ಧಿಮಾಕು, ಧೈರ್ಯವನ್ನು ಹೊಂದಿದ್ದೀರಾ?
ಈಗ ಉಲ್ಲೇಖಿಸುವ ಮೂರು ಅಂಶಗಳು ಅತಿ ಮುಖ್ಯವಾದದ್ದು....
1) ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಲಾಗಿದೆ. ಆದರೆ ಇದು ನೆಪ ಮಾತ್ರಕ್ಕಾಗಿ ಹಲವು ಶಾಲೆಗಳಲ್ಲಿ ನಿಮ್ಮ ರೀತಿಯೇ ಕನ್ನಡವನ್ನು ಪ್ರತಿದಿನ ಕೊಲೆ ಮಾಡಲಾಗುತ್ತಿದೆ. ವಿದ್ಯಾರ್ಥಿ ಮೇಲೆ ತೋರಿದ ಪೌರುಷವನ್ನು ಈ ಖಾಸಗಿ ಶಾಲೆಗಳ ವಿರುದ್ಧ ತೋರಿಸಿದರೆ. ಕನ್ನಡ ವಿರೋಧಿ ʼಅಸಹ್ಯʼವನ್ನು ಸಹಿಸದ ಸಚಿವ ಎಂದು ಸಾಬೀತು ಮಾಡಬಹುದು.
2) ರಾಜ್ಯದಲ್ಲಿನ ಖಾಸಗಿ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳ ಶುಲ್ಕವು ಎಲಾನ್ ಮಸ್ಕ್ ಅವರ ಬಾಹ್ಯಾಕಾಶಯಾನದಷ್ಟೇ ದುಬಾರಿಯಾಗಿದೆ. ಸುಪ್ರೀಂ ಕೋರ್ಟ್, ಶಿಕ್ಷಣ ಹಕ್ಕು ಕಾಯ್ದೆ ಹಾಗೂ ನಿಮ್ಮದೇ ಸರ್ಕಾರದ ಕಾನೂನಿಗೆ ವಿರುದ್ಧವಾಗಿ ಹಗಲು ದರೋಡೆ ಮಾಡಲಾಗುತ್ತಿದೆ. ಯಾವುದೇ ಲಂಗು-ಲಗಾಮಿಲ್ಲದೇ ನಡೆಯುತ್ತಿರುವ ವಸೂಲಿ ವಿರುದ್ಧ ಕ್ರಮ ತೆಗೆದುಕೊಂಡು ಲೂಟಿ ಮಾಡುವ ʼತಲೆಕೆಟ್ಟʼ ಕೆಲಸವನ್ನು ನಿಲ್ಲಿಸಿ.
3) ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಕನಸನ್ನು ಹೊಂದಿದ್ದಾರೆ. ಗ್ರಾಮಕ್ಕೊಂದು ಮಾದರಿ ಶಾಲೆಯನ್ನು ನಿರ್ಮಿಸಬೇಕು. ಉಳಿದೆಲ್ಲ ಶಾಲೆಗಳನ್ನು ಮುಚ್ಚಿ, ಈ ಮಾದರಿ ಶಾಲೆಗೆ ಎಲ್ಲ ಸವಲತ್ತು ನೀಡಿ ಖಾಸಗಿ ವಲಯಕ್ಕೆ ಸೆಡ್ಡು ಹೊಡೆಯುವುದು ಅವರ ಸದುದ್ದೇಶವಾಗಿದೆ. ಇಂತಹದೊಂದು ಕ್ರಾಂತಿಕಾರಕ ಅಂಶವನ್ನು ಅವರು ಬಜೆಟ್‌ನಲ್ಲಿ ಉಲ್ಲೇಖಿಸಿ ಬರೋಬ್ಬರಿ ಏಳು ವರ್ಷಗಳು ಸಂದಿವೆ. ಆದರೆ ನೀವು ಶಿಕ್ಷಣ ಸಚಿವರಾದ ಮೇಲೆ ಅದ್ಭುತ ಯೋಜನೆಗೆ ಖಾಸಗಿ ವಲಯಕ್ಕೆ ನುಗ್ಗುವ ಅವಕಾಶ ಮಾಡಿಕೊಡುವ ಚಿತಾವಣೆಯನ್ನು ತಯಾರಿಸಿದ್ದೀರಿ. ಬಡವರು ಹಾಗೂ ಕನ್ನಡಿಗರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಬಿಟ್ಟು, ಸಿದ್ದರಾಮಯ್ಯರ ಕನಸಿಗೆ ಪೂರಕವಾಗಿ ಕೆಲಸ ಮಾಡಲು ಕ್ರಮಕೈಗೊಂಡರೆ ನಿಮ್ಮೆಲ್ಲ ಕೆಟ್ಟ ಕನ್ನಡ, ದುರ್ವರ್ತನೆ, ಧಿಮಾಕಿನ ಭಾಷಣ, ದುರಹಂಕಾರವನ್ನು ಹೊಟ್ಟೆಗೆ ಹಾಕಿಕೊಂಡು ಉತ್ಸವ ಮಾಡಿ ಹಾಡಿ ಹೊಗಳುತ್ತೇವೆ.
ಹೀಗಾಗಿ ನೀವು ಮಾಡಬೇಕಿರುವ ಕೆಲಸ ಮಾಡದೇ ಪುಕ್ಕಟೇ ಭಾಷಣ ಮಾಡಿಕೊಂಡು ಈ ಕರ್ನಾಟಕದ ಶಿಕ್ಷಣ ವಲಯದೊಂದಿಗೆ ಣಿವು ತರ್ಲೆ ಮಾಡಿಕೊಂಡು ಬಂದಿರುವುದರಿಂದಲೇ, ವಿದ್ಯಾರ್ಥಿಗಳು ಕೂಡ ತರ್ಲೆ ಹೇಳಿಕೆಯನ್ನು ನಿಮ್ಮ ಕಡೆಗೆ ತೂರುತ್ತಿದ್ದಾರೆ. ನೀವೇನೋ ಕಾನೂನಿನಲ್ಲಿರದ ಕ್ರಮಕ್ಕೆ ಸೂಚಿಸಿದ್ದೀರಿ, ನಿಮ್ಮ ಬೇಜವಬ್ದಾರಿಗೆ ನಾವು ಕನ್ನಡಿಗರು ಏನು ಮಾಡೋಣ ಹೇಳಿ.
ಕೊನೆಯದಾಗಿ: ಮಾನ್ಯ ಶಿಕ್ಷಣ ಸಚಿವರೇ, ʼಕನ್ನಡ ಬಾರದವವರುʼ ಎಂದಿದ್ದಕ್ಕೆ ವಿದ್ಯಾರ್ಥಿಯನ್ನು ಏಕವಚನದಲ್ಲಿ ಪುಂಖಾನುಪುಂಖವಾಗಿ ʼತಲೆಕೆಟ್ಟವನು, ಮೂರ್ಖ, ಅಸಹ್ಯ ಮಾಡುವವನುʼ ಎಂದೆಲ್ಲ ಕಿಡಿಕಾರಿದ್ದೀರಿ. ಆದರೆ ಮೇಲೆ ಉಲ್ಲೇಖಿಸಿದ ನಿಜವಾದ ಸಮಸ್ಯೆಗಳನ್ನು ಬಗೆಹರಿಸಿದ ಶಿಕ್ಷಣ ಸಚಿವರನ್ನು ನಾವು ಕನ್ನಡಿಗರು ಯಾವ ಭಾಷೆಯಲ್ಲಿ, ಯಾವೆಲ್ಲ ಶಬ್ದ ಪ್ರಯೋಗಿಸಿ ಉಗಿಯಬೇಕು ಎಂದು ನಮಗೂ ಮಾರ್ಗದರ್ಶನ ಮಾಡಿಬಿಡಿ.
✍🏻 ರಾಜೀವ ಹೆಗಡೆ, ಪತ್ರಕರ್ತ