Opinion: ಪ್ರಶ್ನಿಸುವುದನ್ನು ಮರೆತು ಹೆದರಿ ಕೂತರೆ ಕೋಲು ಕೂಡ ಹಾವಾಗಿ ಬಂದು ಕಚ್ಚುತ್ತದೆ: ರಾಜೀವ ಹೆಗಡೆ ಅಭಿಮತ
Opinion: ಸರ್ಕಾರಿ ವ್ಯವಸ್ಥೆಗಳೇ ಹಾಗೆ. ಬಹಳ ಜಡಹಿಡಿದಿರುವಂಥ ವ್ಯವಸ್ಥೆ. ಬಡಿದೆಬ್ಬಿಸಬೇಕಾದರೆ ಒಂದಿಷ್ಟು ಧೈರ್ಯ ಮೈಗೂಡಿಸಿ ಕೊಳ್ಳಬೇಕು. ಪ್ರಶ್ನಿಸುವುದನ್ನು ಮರೆತು ಹೆದರಿ ಕೂತರೆ ಕೋಲು ಕೂಡ ಹಾವಾಗಿ ಬಂದು ಕಚ್ಚುತ್ತದೆ ಎಂಬುದನ್ನು ಮರೆಯಬಾರದು ಎನ್ನುತ್ತಾರೆ ಪತ್ರಕರ್ತ ರಾಜೀವ ಹೆಗಡೆ.

Opinion: ಸರಿಯಾಗಿ ಒಂದು ತಿಂಗಳಿನ ಹಿಂದೆ ನಾನು ಆಫೀಸ್‌ಗೆ ನಡೆದುಕೊಂಡು ಹೋಗುವ ರಸ್ತೆಯನ್ನು ಬೆಂಗಳೂರು ಜಲಮಂಡಳಿ ಅಗೆದು ಹಾಕಿದೆ. ಆ ರಸ್ತೆಯಲ್ಲಿ ಓಡಾಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಂಡಗಳ ಮಧ್ಯೆ ವಾಹನ ಸವಾರರು ಹೈರಾಣಾಗುತ್ತಿದ್ದರೆ, ನಾವು ಪಾದಚಾರಿಗಳು ಧೂಳಿನ ಅಭಿಷೇಕದಲ್ಲಿ ಮಿಂದೇಳುತ್ತಿದ್ದೇವೆ. ನಿಯಮ ಪ್ರಕಾರವಾಗಿ ರಸ್ತೆಯನ್ನು ಸರಿ ಮಾಡಬೇಕಲ್ಲವೇ ಎಂದು ಸ್ಥಳೀಯ ಜಲಮಂಡಳಿ ಎಂಜಿನಿಯರ್‌ಗೆ ಕರೆ ಮಾಡಿ ವಿಚಾರಿಸಿದಾಗ, ಒಂದಿಷ್ಟು ಅಧಿಕ ಪ್ರಸಂಗದ ಮಾತನಾಡಿದ. ʼನಿಮ್ಮ ಹೆಂಡತಿ, ಮಕ್ಕಳು ಓಡಾಡುವ ರಸ್ತೆಯಾಗಿದ್ದರೆ ನಿಮ್ಮ ನಿಯತ್ತು ಹೀಗೆ ಇರುತ್ತಿತ್ತಾ? ಪಾದಚಾರಿ ಮಾರ್ಗವನ್ನೇ ಮಾಯ ಮಾಡಿರುವಾಗ ನಿಮ್ಮ ಮನೆಯವರು ರಸ್ತೆಗಳ ಮಧ್ಯೆ ಓಡಾಡುವ ಅಪಾಯಕಾರಿ ಸ್ಥಿತಿ ಬಂದಿದ್ದರೆ ಸುಮ್ಮನಿರುತ್ತಿದ್ದಿರಾ?ʼ ಎಂದು ಕಟುವಾಗಿಯೇ ಪ್ರಶ್ನಿಸಿದೆ.
ಇದರಿಂದ ಕೋಪಗೊಂಡ ಎಂಜಿನಿಯರ್, ʼನನ್ನ ಹೆಂಡತಿ, ಮಕ್ಕಳ ವಿಷಯಕ್ಕೆ ಏಕೆ ಬರುತ್ತೀರಾ? ನಾನು ನಿಮ್ಮ ಮನೆಯವರ ವಿಷಯವನ್ನು ಮಾತಾಡಿದ್ನಾ?ʼ ಎಂದು ಕೂಗಲು ಆರಂಭಿಸಿದ. ʼಅಲ್ಲಾ ಸ್ವಾಮಿ ಹೆಂಡತಿ ಮಕ್ಕಳನ್ನು ಒಮ್ಮೆ ಆ ಸ್ಥಿತಿಯಲ್ಲಿ ನೆನಪಿಸಿಕೊಳ್ಳಿ ಎಂದಿದ್ದಕ್ಕೆ ಇಷ್ಟೊಂದು ಕೋಪ ಬರುತ್ತಿದೆ. ಆದರೆ ನಮ್ಮ ಲಕ್ಷಾಂತರ ಜನರು ಪ್ರತಿದಿನ ಕಷ್ಟ ಪಡುತ್ತಿರುವುದು ಕಣ್ಣಿಗೆ ಬೀಳುವುದಿಲ್ಲವೇ?ʼ ಎಂದು ಕೇಳಿದಾಗ ಪೋನನ್ನು ಕಟ್ ಮಾಡಿದ.
ದೊಡ್ಡ ಕುಳಗಳು ವಾಸಿಸುವ ಸದಾಶಿವನಗರ, ಡಾಲರ್ಸ್ ಕಾಲನಿಯಲ್ಲಿ ಕಾಣುವ ಕಾಳಜಿ ಸಾಮಾನ್ಯರ ಕಾಲನಿಯಲ್ಲೇಕಿಲ್ಲ
ಅದಾದ ಕೆಲ ದಿನಗಳ ಬಳಿಕ ನಾನು ರಾಂಚಿಗೆ ಹೋಗುವ ನಿಮಿತ್ತ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಅಲ್ಲಿಯೂ ಬೆಂಗಳೂರಿನಾದ್ಯಂತ ನಡೆಯುತ್ತಿರುವ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಆದರೆ ರಸ್ತೆಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಲಾಗಿದೆ. ಕಂಡಕಂಡಲ್ಲಿ ಹೊಂಡಗಳಿಲ್ಲ, ಬ್ಯಾರಿಕೇಡ್ ಹಾಗೂ ಕಾಮಗಾರಿಯ ಸಾಮಗ್ರಿಗಳನ್ನು ಮನಸ್ಸಿಗೆ ಬಂದಂತೆ ಎಸೆದಿಲ್ಲ. ರಸ್ತೆಯು ಧೂಳುಮಯವಾಗಿಲ್ಲ. ಒಟ್ಟಿನಲ್ಲಿ ಅಲ್ಲ ಓಡಾಡುವರಿಗೆ ಉಸಿರುಗಟ್ಟುವ ವಾತಾವರಣವಿಲ್ಲ. ಇಷ್ಟೊಂದು ನಾಜೂಕುತನ ಕೇವಲ ವಿಮಾನ ನಿಲ್ದಾಣ ರಸ್ತೆಗೆ ಸೀಮಿತವಾಗಿಲ್ಲ. ನಮ್ಮ ವಿಧಾನಸೌಧದಲ್ಲಿನ ಬಹುತೇಕ ದೊಡ್ಡ ಕುಳಗಳು ವಾಸಿಸುವ ಸದಾಶಿವನಗರ, ಡಾಲರ್ಸ್ ಕಾಲನಿಯಲ್ಲೂ ಇದೇ ಕಾಳಜಿಯನ್ನು ನಾವು ನೋಡಬಹುದು. ಅಲ್ಲಿಯ ಮನೆಗಳಿಗೆ ನೀರು, ವಿದ್ಯುತ್ ಪೂರೈಕಯಲ್ಲಿ ಸಮಸ್ಯೆ ಆಗುವುದಿಲ್ಲ. ಆಕಾಶ-ಭೂಮಿ ಒಂದಾದರೂ ಅಲ್ಲಿಗೆ ಕಸದ ವಾಹನ ಹೋಗುವುದು ತಪ್ಪುವುದಿಲ್ಲ. ಅಲ್ಲಿ ಜಲಮಂಡಳಿ ಅಥವಾ ಟೆಲಿಕಾಂ ಕಂಪೆನಿಗಳು ರಸ್ತೆ ಅಗೆದು ತಿಂಗಳುಗಟ್ಟಲೇ ದುರಸ್ತಿ ಮಾಡದೇ ಬಿಡುವುದಿಲ್ಲ. ಏಕೆಂದರೆ ಅಲ್ಲಿ ಈ ರಾಜ್ಯದ ಪ್ರಭಾವಿಗಳ ಹೆಂಡತಿ, ಮಕ್ಕಳು ಹಾಗೂ ಅವರು ಖುದ್ದಾಗಿ ಓಡಾಡುತ್ತಾರೆ. ಅಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂದಾದರೆ, ಅಧಿಕಾರಿಗಳಿಗೆ ಬೈಗುಳದ ಡಿಕ್ಷನರಿಯಲ್ಲಿನ ಎಲ್ಲ ಶಬ್ದಗಳ ಪರಿಚಯ ಮಾಡಿಕೊಡಲಾಗುತ್ತದೆ.
ಪ್ರಶ್ನಿಸುವುದನ್ನು ಮರೆತು ಹೆದರಿ ಕೂತರೆ, ಕೋಲು ಕೂಡ ಹಾವಾಗಿ ಬಂದು ಕಚ್ಚುತ್ತದೆ
ಈಗ ನಿಮಗೆ ಇನ್ನೆರಡು ಪ್ರಸಂಗಗಳನ್ನು ಹೇಳುತ್ತೇನೆ. ನಾನು ವಾಸವಿರುವ ಲೇ ಔಟ್‌ನಲ್ಲಿ ವಾರಕ್ಕೆ ಎರಡು ದಿನ ಮಾತ್ರ ಒಣ ಕಸ ಸಂಗ್ರಹಕ್ಕೆ ವಾಹನ ಬರುತ್ತಿತ್ತು. ದಿನ ಕಳೆದಂತೆ ಅವರು ಮನಸ್ಸಿಗೆ ತೋಚಿದಂತೆ ಬರಲು ಆರಂಭಿಸಿದರು. ಈ ಸಂಬಂಧ ದೂರು ಕೊಟ್ಟು ನನಗೂ ಸುಸ್ತಾಗಿತ್ತು. ನಮ್ಮ ಮನೆಯಲ್ಲಿ ಇಬ್ಬರೂ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಒಮ್ಮೆಯಂತೂ ಮನೆಯಲ್ಲಿ ಒಂದು ತಿಂಗಳಿನ ಒಣ ಕಸವನ್ನು ತುಂಬಿಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಸ್ಥಳೀಯ ಬಿಬಿಎಂಪಿ ಅಧಿಕಾರಿಗೆ ಕರೆ ಮಾಡಿ ಸರಿಯಾಗಿ ಅವಾಜ್ ಹಾಕಿದೆ. ʼಸಚಿವರು, ಶಾಸಕರು, ಕಾರ್ಪೊರೇಟರ್‌ಗಳಿರುವ ಜಾಗಕ್ಕೆ ಎಲ್ಲವನ್ನೂ ಸರಿಯಾಗಿ ಕೊಡಲು ನಿಮಗೆ ಸೌಕರ್ಯಗಳಿರುತ್ತವೆ. ಆದರೆ, ಜನಸಾಮಾನ್ಯರ ಸಣ್ಣ ಬೇಡಿಕೆಯನ್ನೂ ಈಡೇರಿಸುವುದಿಲ್ಲ. ಕಸದ ವಾಹನವನ್ನು ವಾರದಲ್ಲಿ ಎರಡು ದಿನ ಕಳಹಿಸುತ್ತಿರುವುದರಲ್ಲಿ, ಒಂದು ದಿನ ಶನಿವಾರ ಅಥವಾ ಭಾನುವಾರ ಆಗಿರುವಂತೆ ನೋಡಿಕೊಳ್ಳಿ. ಈ ವಾರವೂ ಅದೇ ರೀತಿ ಬೇಜವಾಬ್ದಾರಿ ಮುಂದುವರಿಸಿದರೆ ನಿಮ್ಮ ಮನೆ, ವಾರ್ಡ್ ಕಚೇರಿ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಕಸ ಹಾಕಿ ಹೋಗುತ್ತೇನೆ. ಅದೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ, ಆಮೇಲೆ ನೋಡಿಕೊಳ್ತೀನಿʼ ಎಂದು ಗದರಿದೆ. ಇದಾದ ಮರುದಿನವೇ ನಮ್ಮ ಏರಿಯಾಕ್ಕೆ ಬಂದು ಅಲ್ಲಿರುವ ಕೆಲ ಹಿರಿಯರ ಬಳಿ ಗುತ್ತಿಗೆದಾರರ ಮೂಲಕ ಅಧಿಕಾರಿಯು ಗಲಾಟೆ ಮಾಡಿಸಿದ್ದಾನೆ. ಆಮೇಲೆ ಇದು ಮೇಲಾಧಿಕಾರಿಗಳ ಗಮನಕ್ಕೂ ಹೋಗಿ ಸಮಸ್ಯೆ ಬಗೆಹರಿಯಿತು. ಈಗ ಶನಿವಾರ ಅಥವಾ ಭಾನುವಾರದಲ್ಲಿ ಒಂದು ದಿನವಾದರೂ ಕಸ ತೆಗೆದುಕೊಂಡು ಹೋಗಲು ಬರುತ್ತಿದ್ದಾರೆ.
ಇದೇ ರೀತಿ ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಕಂಡಕಂಡಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ಸಂಬಂಧ ನಾನು ಇಲ್ಲಿಯವರೆಗೆ 100ಕ್ಕೆ ಕರೆ ಮಾಡಿ ಪೊಲೀಸರಿಗೆ 50ಕ್ಕೂ ಅಧಿಕ ದೂರು ನೀಡಿದ್ದೇನೆ. ಹತ್ತಕ್ಕೂ ಅಧಿಕ ಸ್ಥಳಗಳಲ್ಲಿ ಧೂಮಪಾನವು ಒಂದು ಹಂತಕ್ಕೆ ನಿಯಂತ್ರಣಕ್ಕೆ ಬರುವಂತಾಗಿದೆ. ನನ್ನ ಕಚೇರಿ ಬಳಿಯ ಒಬ್ಬ ಪೊಲೀಸರಿಗಂತೂ 20ಕ್ಕೂ ಅಧಿಕ ಕರೆ ಮಾಡಿ ತಲೆ ತಿಂದಿದ್ದೇನೆ. ಈಗ ಒಂದು ಹಂತಕ್ಕೆ ನಾನು ಆರಾಮಾಗಿ ಉಸಿರಾಡಿಕೊಂಡು ನಡೆಯುವ ಸಣ್ಣ ಅವಕಾಶ ಸೃಷ್ಟಿಯಾಗಿದೆ. ಅದೇ ರೀತಿ ಸಂಚಾರ ಪೊಲೀಸರ ಅಕ್ರಮ ಸೇರಿ ಇಂತಹ ಹತ್ತಾರು ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದಾಗ ಉನ್ನತ ಹುದ್ದೆಯಲ್ಲಿದ್ದವರಿಂದ ಸ್ಪಂದನೆಯೂ ದೊರೆತಿದೆ.
ಈ ಘಟನೆಗಳನ್ನು ನಾನು ಉಲ್ಲೇಖಿಸಲು ಸ್ಪಷ್ಟ ಕಾರಣವಿದೆ. ಸಂವಿಧಾನದ ಹಕ್ಕು, ಕರ್ತವ್ಯದ ಬಗ್ಗೆ ಸಾಕಷ್ಟು ಚರ್ಚೆಗಳನ್ನು ಮಾಡುತ್ತೇವೆ. ಈ ದೇಶದಲ್ಲಿ ಬಹುತೇಕ ಸಾಮಾನ್ಯ ಜನರು ನೆಲದ ಕಾನೂನನ್ನು ಗೌರವಿಸಿಕೊಂಡು ಪ್ರಾಮಾಣಿಕವಾಗಿ ಬದುಕುತ್ತಿರುತ್ತಾರೆ. ಆದರೆ ನಾವು ಸಾಕಷ್ಟು ಬಾರಿ ನಮ್ಮೆದುರಿನ ಅವ್ಯವಸ್ಥೆ, ಅಕ್ರಮಗಳ ಬಗ್ಗೆ ಮೌನಿಯಾಗುತ್ತೇವೆ. ಇಂದಿನ ಡಿಜಿಟಲ್ ಯುಗದಲ್ಲೂ ಪ್ರತಿಕ್ರಿಯಿಸುವ ಅಥವಾ ವಿಷಯವನ್ನು ಮುನ್ನೆಲೆಗೆ ತರುವ ಸಣ್ಣ ಪ್ರಯತ್ನವನ್ನೂ ಮಾಡುವುದಿಲ್ಲ. ನಾವು ಹೀಗೆ ಮೌನಕ್ಕೆ ಶರಣಾಗುತ್ತಿರುವುದರಿಂದ ಒಂದಿಷ್ಟು ಲೂಟಿಕೋರರು, ಸಮಾಜ ಘಾತುಕ ಶಕ್ತಿಗಳು ಈ ನೆಲದಲ್ಲಿ ಇಲ್ಲದ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ. ಇದರ ದುಷ್ಪರಿಣಾಮವನ್ನು ನಾವು ಹಾಗೂ ನಮ್ಮ ಕುಟುಂಬ ಅನುಭವಿಸುತ್ತಿದೆ.
ದಪ್ಪ ಚರ್ಮವಷ್ಟೇ, ದುಷ್ಟರಲ್ಲ!
ಪೊಲೀಸ್ ಸೇರಿ ಎಲ್ಲ ಆಡಳಿತ ವ್ಯವಸ್ಥೆ ಬಗ್ಗೆ ಜನಸಾಮಾನ್ಯರಿಗೆ ಒಂದು ಭಯವಿರುತ್ತದೆ. ಇವರಿಗೆ ದೂರು ನೀಡಿ ವಕ್ರದೃಷ್ಟಿಗೆ ಏಕೆ ಬೀಳಬೇಕು ಎಂದು ಸುಮ್ಮನಾಗುತ್ತೇವೆ. ಈ ರಾಜ್ಯದ ಮುಖ್ಯಮಂತ್ರಿ, ಉಪಮಖ್ಯಮಂತ್ರಿ ಸೇರಿ ಬಿಬಿಎಂಪಿ ಕಚೇರಿಯಲ್ಲಿ ಗುಮಾಸ್ತನವರೆಗೂ ಯಾರೂ ಪ್ರಶ್ನಾತೀತರಲ್ಲ. ಅವರಿಗೆ ನಾವು ಪ್ರಶ್ನೆಯನ್ನು ಕೇಳುವುದನ್ನು ಬಿಟ್ಟಿದ್ದರಿಂದಲೇ ಅವರು ದುರಹಂಕಾರದ ಅತಿರೇಕದಲ್ಲಿ ಜೀವಿಸುತ್ತಿದ್ದಾರೆ. ಅದೇ ರೀತಿ ಆಡಳಿತ ವರ್ಗದಲ್ಲಿಯೂ ಒಂದು ರೀತಿಯ ದಪ್ಪ ಚರ್ಮ ಬೆಳೆದುಹೋಗಿದೆ. ಆದರೆ ನನ್ನ ಅನುಭವದಲ್ಲಿ ಜನ ಸಾಮಾನ್ಯರ ಒತ್ತಡ ಹೆಚ್ಚಿದಾಗ ಯಾವುದೇ ಆಡಳಿತ ವ್ಯವಸ್ಥೆ ಸುದೀರ್ಘವಾಗಿ ಕಣ್ಮುಚ್ಚಿ ಕೂರಲು ಸಾಧ್ಯವಿಲ್ಲ.
ಸಚಿವರು, ಜನಪ್ರತಿನಿಧಿಗಳ, ಪೊಲೀಸರಿಂದ ಆದಿಯಾಗಿ ಪ್ರತಿಯೊಬ್ಬರಿಗೂ ನಾವು ಪ್ರಶ್ನೆಯನ್ನು ಕೇಳಲು ಆರಂಭಿಸಿದಾಗ, ಅವರು ಕೂಡ ಉತ್ತರ ಹುಡುಕುವ ಅನಿವಾರ್ಯತೆಗೆ ಬೀಳುತ್ತಾರೆ. ನಾವು ಪ್ರಶ್ನೆಯನ್ನು ಕೇಳುವುದನ್ನೇ ಮರೆತಿದ್ದೇವೆ ಎಂದಾದಾಗ ಅವರು ನಮ್ಮ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳುತ್ತಾರೆ. ವಿಮಾನ ನಿಲ್ದಾಣ, ಸದಾಶಿವನಗರ, ಡಾಲರ್ಸ್ ಕಾಲನಿಯಲ್ಲಿ ಓಡಾಡುವರಿಗೆ ಇರುವ ಹಕ್ಕು ಹಾಗೂ ಪ್ರಶ್ನಿಸುವ ಸ್ವಾತಂತ್ರ್ಯವೇ ನಮಗೆ ಕೂಡ ಇದೆ. ಪ್ರಶ್ನಿಸುವವರ ಸಂಖ್ಯೆ ಹೆಚ್ಚಾದಾಗ ಆಡಳಿತ ವ್ಯವಸ್ಥೆಗೂ ಚುರುಕು ಮುಟ್ಟುತ್ತದೆ.
ನನ್ನದೊಂದು ಸ್ಪಷ್ಟನೆ!
ಇಂತಹ ಅವ್ಯವಸ್ಥೆಗಳ ಬರೆದಾಗ ನನ್ನ ಕುಟುಂಬ ಸದಸ್ಯರಿಂದ, ಆಪ್ತರಿಂದ ಎಚ್ಚರಿಕೆಯ ಸಂದೇಶಗಳು ಬರುತ್ತವೆ. ʼಊರಿಗಿಲ್ಲದ ಉಸಾಬರಿ ನಿನಗೇಕೆ?ʼ ಎಂದು ಉಗಿಸಿಕೊಂಡಿದ್ದೇನೆ. ಇನ್ನೊಂದಿಷ್ಟು ಜನರು, "ನೀನು ಪತ್ರಕರ್ತ ಅದಕ್ಕೆ ಹೀಗೆಲ್ಲ ಬರೆದು ಜೀರ್ಣಿಸಿಕೊಳ್ತೀಯಾʼ ಎಂದು ಹೇಳಿದವರಿದ್ದಾರೆ. ಹೀಗಾಗಿ ಒಂದು ಸ್ಪಷ್ಟನೆಯನ್ನು ಕೊಡಲು ಇಷ್ಟಪಡುತ್ತೇನೆ. ನಾನು ಯಾವುದೇ ವ್ಯಕ್ತಿ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡಿ ಬರೆಯುವುದಿಲ್ಲ. ಆದರೆ, ಅವ್ಯವಸ್ಥೆ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡುತ್ತೇನೆ. ಇದನ್ನು ಸ್ಪಷ್ಟವಾಗಿ ಪಾಲಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ನೊಂದು ವಿಚಾರವೆಂದರೆ ನಾನು ಇದ್ಯಾವುದೇ ಪ್ರಶ್ನೆಗಳನ್ನು ಎತ್ತುವಾಗ ದೂರವಾಣಿ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ನಾನು ಪತ್ರಕರ್ತನೆಂದು ಹೇಳಿಕೊಳ್ಳುವುದಿಲ್ಲ. ಒಬ್ಬ ಸಾಮಾನ್ಯ ಪ್ರಜೆಯಂತೆ ಪ್ರಶ್ನಿಸುತ್ತೇನೆ. ನನ್ನ ಪರಿಚಯ ಕೂಡ ʼರಾಜೀವ ಹೆಗಡೆʼ ಎನ್ನುವುದಕ್ಕೆ ನಿಲ್ಲುತ್ತದೆ. ನಾನು ಮಾಧ್ಯಮದಲ್ಲಿದ್ದಾಗಲೂ ಇದನ್ನೇ ಹೆಚ್ಚಿನ ಸಂದರ್ಭದಲ್ಲಿ ಪಾಲಿಸುತ್ತಿದ್ದೆ. ಹೀಗಾಗಿ ನೀವು ಎತ್ತುವ ವಿಷಯ ಪ್ರಾಮಾಣಿಕವಾಗಿದ್ದರೆ ಮುಖ್ಯಮಂತ್ರಿಯನ್ನು ಪ್ರಶ್ನಿಸಲು ಕೂಡ ಹೆದರುವ ಅಗತ್ಯವಿಲ್ಲ. ನಮ್ಮ ಪ್ರಶ್ನೆಯಲ್ಲಿ ನ್ಯಾಯವಿದ್ದರೆ, ಅದನ್ನು ಆ ಕ್ಷಣಕ್ಕೆ ನಿರ್ಲಕ್ಷಿಸಬಹುದು. ಆದರೆ ಅದಕ್ಕಿಂತ ಹೆಚ್ಚೇನು ಮಾಡಲಾಗದು. ಹಾಗೆಯೇ ಇನ್ನು ಕೆಲವರು ಮಾಧ್ಯಮಗಳು ಕಣ್ಮುಚ್ಚಿ ಕುಳಿತಿವೆಯೇ ಎಂದು ಕಾಮೆಂಟ್ ಮಾಡಿ ಅಥವಾ ಸ್ವಗತದಲ್ಲಿ ಪ್ರಶ್ನೆ ಮಾಡಿ ಸುಮ್ಮನಾಗುತ್ತಾರೆ. ಮಾಧ್ಯಮಗಳನ್ನು ಒಂದು ಕ್ಷಣಕ್ಕೆ ಮರೆತು, ನಾವೇ ವಿಷಯಗಳನ್ನು ಎತ್ತಿಕೊಳ್ಳುತ್ತಾ ಸಾಗಿದರೆ ಅದನ್ನು ಮಾಧ್ಯಮಗಳು ಹಿಂಬಾಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಹಾಗೂ ಆ ಮೂಲಕ ಸರ್ಕಾರಕ್ಕೂ ಕಾರ್ಯಪ್ರವೃತ್ತರಾಗುವುದು ಅನಿವಾರ್ಯ ಎನ್ನುವುದನ್ನು ಮರೆಯಬೇಡಿ. ನಾವು ಜಾಗೃತವಾಗಿದ್ದರೆ, ನಮ್ಮ ಸುತ್ತಲಿನ ಪ್ರತಿ ವ್ಯವಸ್ಥೆ ಕೂಡ ಜಾಗೃತವಾಗುವತ್ತ ಹೆಜ್ಜೆ ಇಡಲು ಆರಂಭಿಸುತ್ತದೆ.
ಒಮ್ಮೆ ಆಲೋಚಿಸಿ
ಬೆಂಗಳೂರು ವಿಮಾನ ನಿಲ್ದಾಣ, ಸದಾಶಿವನಗರ, ಡಾಲರ್ಸ್ ಕಾಲನಿಯಲ್ಲಿನ ಯಾವುದೇ ಯೋಜನೆಗಳಿಗೆ ಹೆಚ್ಚುವರಿ ಅನುದಾನ ಸಿಗುವುದಿಲ್ಲ. ಅಲ್ಲಿಗೆ ಯಾವುದೇ ವಿಶೇಷ ಸ್ಥಾನಮಾನ ಕೂಡ ಇಲ್ಲ. ಆದರೆ ಅಧಿಕಾರಿಗಳಿಗೆ ಭಯದ ಕಾರಣದಿಂದ ಎಲ್ಲವೂ ಅಚ್ಚುಕಟ್ಟಾಗಿದೆ. ಅದರೆ ನಮ್ಮ-ನಿಮ್ಮ ಮನೆಯಲ್ಲಿ ಯಾರಿಗೂ ಯಾರ ಭಯವೂ ಇಲ್ಲ. ಅದಕ್ಕಾಗಿಯೇ ಎಲ್ಲವೂ ಚಿಲ್ಲಾಪಿಲ್ಲಿಯಾಗಿದೆ. ನಮ್ಮ ಹೆಂಡತಿ, ಮಕ್ಕಳ ಜೀವಕ್ಕೂ ಬೆಲೆಯಿದೆ ಎಂದು ಇವರಿಗೆ ದೇವರಾಣೆ ಗೊತ್ತಾಗುವುದಿಲ್ಲ. ನಾವೇ ಅದನ್ನು ಗೊತ್ತು ಮಾಡಿಸಬೇಕು.
ಕೊನೆಯದಾಗಿ: ಎಲ್ಲರಲ್ಲೂ ನನ್ನದೊಂದು ಮನವಿಯಿದೆ. ಇಂದು ಎಕ್ಸ್ ಅಥವಾ ಇತರ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ಸಂಸ್ಥೆ ಅಥವಾ ವ್ಯಕ್ತಿಗಳು ಇದ್ದಾರೆ. ನೀವು ಕಂಡ ಅಥವಾ ಅನುಭವಿಸಿದ ಯಾವುದೇ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡಿ. ಅವರನ್ನು ಟ್ಯಾಗ್ ಮಾಡಿ ಗಮನಕ್ಕೆ ತರುವ ಕೆಲಸ ಮಾಡಿ. ಅದರಿಂದ ಒಂದಿಷ್ಟು ಜಾಗೃತಿ ಮಾಡಿದಂತಾಗುತ್ತದೆ. ನಾವು, ನೀವು ಸೇರಿ ಮಾಡುವ ಇಂತಹದೊಂದು ಕೆಲಸದಿಂದ ಯಾವುದೋ ಒಂದು ಮನೆಯ ಒಂದು ಜೀವವನ್ನು ಉಳಿಸಬಹುದು. ಇಲ್ಲವಾದಲ್ಲಿ ನಾವು ಮಾಡುವ ಆ ಪುಣ್ಯದ ಕೆಲಸದಿದ ನಮ್ಮ ಮನೆಯ ಜೀವವೇ ಉಳಿಯಬಹುದು. ಅವಘಡವಾಗುವ ಮುನ್ನ ಜಾಗೃತಿ ಮಾಡೋಣ. ಇಲ್ಲವಾದಲ್ಲಿ ಸರ್ಕಾರಿ ಕಚೇರಿಯಲ್ಲಿನ ಕೆಳ ಹಂತದ ನೌಕರರು ಕೂಡ ನಿಮ್ಮನ್ನು ಹೆದರಿಸಿಕೊಂಡು ಬದುಕುತ್ತಾರೆ. ಕೋಲು ಕೂಡ ಹಾವಾಗಿ ಕಚ್ಚುತ್ತದೆ, ನೆನಪಿರಲಿ....
ನಾನಂತೂ ಈ ಕೆಲಸವನ್ನು ಮಾಡುತ್ತೇನೆ, ನೀವು.....?
- ರಾಜೀವ್ ಹೆಗಡೆ, ಪತ್ರಕರ್ತ