ದೃಷ್ಟಿಕೋನ: ಬ್ಯಾಂಕ್‌ಗಳ ಕರ್ತವ್ಯಲೋಪ, ನಕಲಿ ಮೈಕ್ರೋ ಫೈನಾನ್ಸ್‌ ಆಟಾಟೋಪ, ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ಸಾಮಾನ್ಯ ಜನ
ಕನ್ನಡ ಸುದ್ದಿ  /  ಕರ್ನಾಟಕ  /  ದೃಷ್ಟಿಕೋನ: ಬ್ಯಾಂಕ್‌ಗಳ ಕರ್ತವ್ಯಲೋಪ, ನಕಲಿ ಮೈಕ್ರೋ ಫೈನಾನ್ಸ್‌ ಆಟಾಟೋಪ, ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ಸಾಮಾನ್ಯ ಜನ

ದೃಷ್ಟಿಕೋನ: ಬ್ಯಾಂಕ್‌ಗಳ ಕರ್ತವ್ಯಲೋಪ, ನಕಲಿ ಮೈಕ್ರೋ ಫೈನಾನ್ಸ್‌ ಆಟಾಟೋಪ, ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ಸಾಮಾನ್ಯ ಜನ

ಸಾಲ ವಸೂಲಿ ನೆಪದಲ್ಲಿ ಜನರ ರಕ್ತ ಹೀರುತ್ತಿರುವ ಪುಂಡರ ಬಗ್ಗೆ ಇದೀಗ ಕೆಲವರು ನಿದ್ದೆಯಿಂದ ಎಚ್ಚೆತ್ತಂತೆ ಕನವರಿಸುತ್ತಿದ್ದಾರೆ. ಆದರೆ ಸಾಲ ಕೊಡುವವರ ಜವಾಬ್ದಾರಿಗಳನ್ನು ಬಿಗಿಗೊಳಿಸುವ ಬಗ್ಗೆ ಈವರೆಗೆ ಕರ್ನಾಟಕ ಸರ್ಕಾರದ ಯಾವೊಬ್ಬ ಸಚಿವರೂ ಗಂಭೀರವಾಗಿ ಮಾತನಾಡಿಯೇ ಇಲ್ಲ.

ಕರ್ನಾಟಕದಲ್ಲಿ ಕಿರು ಸಾಲ ವ್ಯವಹಾರದ ಕಥೆ-ವ್ಯಥೆ. ಫೈನಾನ್ಸ್‌ ಕಂಪನಿಗಳಿಗೆ ಬೇಕಿದೆ ನಿಯಂತ್ರಣ.
ಕರ್ನಾಟಕದಲ್ಲಿ ಕಿರು ಸಾಲ ವ್ಯವಹಾರದ ಕಥೆ-ವ್ಯಥೆ. ಫೈನಾನ್ಸ್‌ ಕಂಪನಿಗಳಿಗೆ ಬೇಕಿದೆ ನಿಯಂತ್ರಣ.

ಕರ್ನಾಟಕದಲ್ಲಿ ಇತ್ತೀಚೆಗೆ ಮೈಕ್ರೋಫೈನಾನ್ಸ್‌ ಬಗ್ಗೆ ಓತಪ್ರೋತವಾಗಿ ಸುದ್ದಿ ಹರಿದು ಬರುತ್ತಲೇ ಇದೆ. ಮೈಕ್ರೋಫೈನಾನ್ಸ್‌ಗಳೆಂದರೆ ಹಳ್ಳಿಗಳಿಗೆ ಅಂಟಿದ ಶಾಪ ಎನ್ನುವ ಮಟ್ಟಿಗೆ ಜನರಲ್ಲಿ ಭಾವನೆ ಮಡುಗಟ್ಟಿದೆ. ಆದರೆ ಅದಷ್ಟೇ ಸತ್ಯವೇ? ಮೈಕ್ರೋಫೈನಾನ್ಸ್‌ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ಅಪಸವ್ಯಗಳನ್ನು ಯಾರೂ ಸಮರ್ಥಿಸಲಾರರು. ಇದೀಗ ಮೈಕ್ರೋಫೈನಾನ್ಸ್‌ ಒಕ್ಕೂಟ ಬಿಡುಗಡೆ ಮಾಡಿರುವ ಜಾಹೀರಾತು ಇಂಥ ಗೊಂದಲಗಳನ್ನು ನಿವಾರಿಸುವ ಪ್ರಯತ್ನ ಮಾಡಿದೆ. ಆಗುತ್ತಿರುವ ಅನಾಹುತಗಳನ್ನು ನಿಲ್ಲಿಸಲು ಆದರೆ ಇಂಥ ಜಾಹೀರಾತುಗಳಿಂದ ಎಷ್ಟರಮಟ್ಟಿಗೆ ಸಾಧ್ಯ ಎನ್ನುವುದು ಮತ್ತೊಂದು ಪ್ರಶ್ನೆ.

ಮೈಕ್ರೋಫೈನಾನ್ಸ್ ಒಕ್ಕೂಟ ನೀಡಿರುವ ಜಾಹೀರಾತಿನ ಪ್ರಕಾರ ಕರ್ನಾಟಕದಲ್ಲಿ ಸುಮಾರು 65 ಲಕ್ಷ ಖಾತಾದಾರರು 37,365 ಕೋಟಿ (ಕಿರು) ಸಾಲ ಪಡೆದಿದ್ದಾರೆ. ಸರ್ಕಾರಿ, ಖಾಸಗಿ ಬ್ಯಾಂಕ್‌ಗಳು 'ವ್ಯವಹಾರ ಪ್ರತಿನಿಧಿ'ಗಳ ಮೂಲಕ ನೀಡಿರುವ ಕಿರು ಸಾಲ. ರಾಜ್ಯ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಒದಗಿಸಿರುವ ಕಿರು ಸಾಲವನ್ನೂ ಪರಿಗಣಿಸಿದರೆ ಈ ಮೊತ್ತವು 60,000 ರೂಪಾಯಿ ಮುಟ್ಟುತ್ತದೆ. ಫಲಾನುಭವಿಗಳ ಒಟ್ಟು ಸಂಖ್ಯೆಯೂ 1 ಕೋಟಿ ಆಸುಪಾಸಿಗೆ ತಲುಪುತ್ತದೆ. 1 ಕೋಟಿ ಖಾತೆದಾರರು ಮತ್ತು 60,000 ಕೋಟಿ ಸಾಲದ ಮೌಲ್ಯ ಎಂದರೆ ಈ ವ್ಯವಹಾರದ ಗಾತ್ರ ಅದೆಷ್ಟು ದೊಡ್ಡದು ಎಂದು ಎಂಥವರಿಗೂ ಅಂದಾಜು ಆಗಬಹುದು.

ಕಿರು ಸಾಲದ ವಿಷ ವರ್ತುಲ

ಟಿವಿ ಖರೀದಿ, ಮೋಟರ್ ರಿಪೇರಿ, ಚಿಕಿತ್ಸೆಗೆ, ಬೆಳೆಗೆ ಔಷಧಿ ಹೊಡೆಯಲು, ಬಿತ್ತನೆ ಬೀಜದ ಖರೀದಿ, ಮಗಳ ನಿಶ್ಚಿತಾರ್ಥ, ಮನೆಗೆ ಬಣ್ಣ ಹೊಡೆಸಲು, ಕಚ್ಚಾಮಾಲು ಖರೀದಿ... ಹೀಗೆ ಜನಸಾಮಾನ್ಯರ ಸಾಲದ ಅಗತ್ಯಗಳು ಹಲವು. ಎಷ್ಟೋ ಸಲ ಅವು 10 ಸಾವಿರ ರೂಪಾಯಿಗಿಂತಲೂ ಹೆಚ್ಚಾಗುವುದಿಲ್ಲ. ಬ್ಯಾಂಕ್‌ಗಳಿಗೆ ಎಡತಾಕಿ, ಅವರು ಕೇಳುವ ದಾಖಲೆಗಳನ್ನು ಒದಗಿಸಿಕೊಟ್ಟು ಸಾಲ ಪಡೆಯುವಷ್ಟು ಬುದ್ಧಿವಂತಿಕೆ, ತಾಳ್ಮೆ ಮತ್ತು ವ್ಯವಧಾನ ಈ ವರ್ಗಕ್ಕೆ ಇರುವುದೂ ಇಲ್ಲ. ಹೀಗಾಗಿಯೇ ಬಡ್ಡಿ ಹೆಚ್ಚಾದರೂ ಪರವಾಗಿಲ್ಲ, ಕಾಡಿಸದೇ ಸಾಲ ಕೊಡಬೇಕು ಎನ್ನುವ ಧೋರಣೆಯಲ್ಲಿ ಸಿಕ್ಕಸಿಕ್ಕವರ ಹತ್ತಿರ ಸಾಲ ಪಡೆಯಲು ಮುಂದಾಗುತ್ತಾರೆ.

ಹೀಗೆ ಸಾಲ ಪಡೆಯುವಾಗ ಹಲವು ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳುವುದು ಸಾಮಾನ್ಯ. ಎಷ್ಟೋ ಜನರಿಗೆ ಅವು ಯಾವ ದಾಖಲೆಗಳು? ತಾವು ಯಾವುದಕ್ಕೆಲ್ಲ ಸಹಿ ಹಾಕಿದ್ದೇವೆ ಎನ್ನುವ ವಿವರವನ್ನೂ ಯಾರೂ ಕೊಟ್ಟಿರುವುದಿಲ್ಲ. 'ಸೈನ್ ಹಾಕು ದುಡ್ಡು ತಗೊ' ಎನ್ನುವ ಮಾತು ನಂಬಿ ಸಹಿ ಹಾಕಿರುತ್ತಾರೆ. ಮುಂದೆ ಬಿಕ್ಕಟ್ಟಿಗೆ ಸಿಲುಕಿದಾಗ 'ಅಷ್ಟಕ್ಕೆಲ್ಲಾ ನನ್ನಿಂದ ಸಹಿ ಹಾಕಿಸಿಕೊಂಡು ಅನ್ಯಾಯ ಮಾಡಿದರು' ಎಂದು ಹಳಹಳಿಸುತ್ತಾರೆ.

ಒಂದು ಸಾಲ ತೀರಿಸಲು ಮತ್ತೊಂದು ಸಾಲ, ಆ ಸಾಲ ತೀರಿಸಲು ಮಗದೊಂದು ಸಾಲ ಹೀಗೆ ಒಂದಕ್ಕೊಂದು ಸಾಲದ ವರ್ತುಲ ಬೆಳೆಯುತ್ತಾ ಹೋಗಿ ಕೊನೆಗೆ ಉಸಿರಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಾಲಗಾರರ ಕಾಟ ಹೆಚ್ಚಾದಾಗ ಮರ್ಯಾದೆ ಉಳಿಸಿಕೊಳ್ಳಲು ಊರು ಬಿಡುವುದು, ದುಡಿಮೆಗೆ ಹೋಗದಿರುವುದು, ತಲೆತಪ್ಪಿಸಿಕೊಳ್ಳುವುದು ಶುರುವಾಗುತ್ತದೆ. ಏಕಕಾಲಕ್ಕೆ ಹಣದ ನಷ್ಟ, ಊರಿನಲ್ಲಿ ತಲೆ ಎತ್ತಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಸಾಲ ಪಡೆಯುವ ಮೊದಲು

ಸಾಲ ಕೇಳುವ ಹಲವರು ತಮ್ಮನ್ನು ತಾವು ಕೀಳು ಎಂದೇ ಭಾವಿಸಿಕೊಂಡಿರುತ್ತಾರೆ. ಮೈಯೆಲ್ಲಾ ಹಿಡಿಯಾಗಿಸಿಕೊಂಡು ಸಾಲ ಕೇಳುತ್ತಾರೆ. ಅಗತ್ಯಕ್ಕೆ, ಕಷ್ಟಕಾಲಕ್ಕೆ ಹಣ ಸಿಕ್ಕರೆ ಸಾಕು. ಉಳಿದದ್ದು ಆಮೇಲೆ ನೋಡಿಕೊಂಡರಾಯಿತು ಎನ್ನುವ ಮನೋಭಾವ ಇರುತ್ತದೆ. ಸಾಲ ಕೊಡುವವರು ಇದನ್ನೇ ಬಂಡವಾಳವಾಗಿಸಿಕೊಂಡು ಸಾಧ್ಯವಾದಷ್ಟೂ ಹೆಚ್ಚಿನ ಬಡ್ಡಿ ಪಡೆಯಲು, ಇಕ್ಕಟ್ಟಿನ ಷರತ್ತುಗಳಿಗೆ ಸಿಲುಕಿಸಲು ಪ್ರಯತ್ನಿಸುತ್ತಾರೆ.

ಸಾಲ ಪಡೆಯುವವರ ಆಲೋಚನೆ ಬದಲಾಗದೆ ಇಂಥ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ತಮಗೆ ಸಾಲ ಕೊಡುತ್ತಿರುವವರು ಯಾರು ಎನ್ನುವ ಸ್ಪಷ್ಟ ಚಿತ್ರಣ ಸಾಲ ಪಡೆಯುವವರಿಗೆ ಇರಬೇಕು. ಸಾಲ ಸಿಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಅಗತ್ಯಕ್ಕಿಂತ ಹೆಚ್ಚು ಹಣ ಪಡೆಯಬಾರದು. ಸಾಲ ಪಡೆಯುವಾಗಲೇ ತೀರಿಸುವ ಬಗ್ಗೆಯೂ ಯೋಚಿಸಿರಬೇಕು. ತೀರಿಸಲು ಸಾಧ್ಯವಿಲ್ಲದಷ್ಟು ಮೊತ್ತವನ್ನು ಸಾಲವಾಗಿ ಪಡೆದರೆ ಅದಕ್ಕೆ ಗ್ಯಾರೆಂಟಿಯಾಗಿ ಇಟ್ಟು ನಮ್ಮ ಮೂಲ ಆಸ್ತಿ ಆಪತ್ತಿನಲ್ಲಿದೆ ಎಂದೇ ಅರ್ಥ.

ಸರ್ಕಾರ ಏನು ಮಾಡುತ್ತಿದೆ? ಏನು ಮಾಡಲು ಸಾಧ್ಯ?

ಪೊಲೀಸರು, ತನಿಖಾ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳ ಹೆಸರು ಹೇಳಿಕೊಂಡು ನಡೆಯುತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಈವರೆಗೂ ನಮ್ಮ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದೀಗ ಮೈಕ್ರೋಫೈನಾನ್ಸ್‌ ಬಗ್ಗೆ ಕ್ರಮ ವಹಿಸಲು, ಸಾಲ ಕೊಡುವುದಕ್ಕೆ ಸರಿಯಾದ ನಿಯಮ ರೂಪಿಸಲು ಮೈಕೊಡವಿ ಮೇಲೆದ್ದಿದೆ. ತಡವಾದರೂ ಸರ್ಕಾರಕ್ಕೆ ಎಚ್ಚರವಾಗಿರುವುದು ಶ್ಲಾಘನೀಯ ಸಂಗತಿಯೇ ಸರಿ. ಆದರೆ ಭ್ರಷ್ಟ ನೌಕರರೇ ತುಂಬಿರುವ ಜಡ್ಡುಕಟ್ಟಿರುವ ವ್ಯವಸ್ಥೆಯಿಂದ ಏನೆಲ್ಲಾ ಸಾಧ್ಯ ಎನ್ನುವುದನ್ನೂ ಪರಿಶೀಲಿಸಬೇಕಾಗಿದೆ.

ಹಳ್ಳಿಗಳಲ್ಲಿ ಜನರು ಬ್ಯಾಂಕ್‌ಗಳಿಂದ ದೂರವಾಗಲು ಸರ್ಕಾರಗಳೇ ಕಾರಣ. ಸಾಲ ಮನ್ನಾ ಆಗಬಹುದು, ಬಡ್ಡಿ ಮನ್ನಾ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಹಲವರು ಬೆಳೆಸಾಲಗಳ ಅಸಲು-ಬಡ್ಡಿ ತುಂಬಲಿಲ್ಲ. ಈಗ ಎಷ್ಟೋ ರೈತರ ಜಮೀನುಗಳೇ ಹರಾಜಾಗುವ ಪರಿಸ್ಥಿತಿಗೆ ಬಂದಿದೆ. ಸರ್ಕಾರದಿಂದ ಬರುತ್ತಿರುವ ಹಲವು ಸಹಾಯ ಧನಗಳು ರೈತರ ಖಾತೆಗೆ ಜಮಾ ಆದ ತಕ್ಷಣ ಇಂಥ ಹಳೇ ಸಾಲಗಳಿಗೆ ಭರ್ತಿಯಾಗುತ್ತಿದೆ. ಹೀಗಾಗಿ ಹಳೇ ಸಾಲ ತೀರದೆ, ಹೊಸ ಅಗತ್ಯಗಳಿಗೆ ಹಣ ಹುಟ್ಟದೆ ರೈತರು, ಗ್ರಾಮೀಣ ಜನರು ಕಂಗಾಲಾದರು. ಹಳ್ಳಿಗಳ ಕಥೆ ಇದಾದರೆ ನಗರಗಳಲ್ಲಿ ಪರಿತಪಿಸುವ ಬಡವರು ಮತ್ತು ಕೆಳಮಧ್ಯಮ ವರ್ಗಗಳ ಕಥೆ ಮತ್ತೊಂದು. 'ಜನಧನ' ಇದ್ದರೂ ಇಂಥವರಿಗೆ ಬ್ಯಾಂಕ್‌ಗಳ ಸೇವೆ ಎನ್ನುವುದು ಐಷಾರಾಮಿ ಸಂಗತಿಯೇ ಸರಿ.

ಇದನ್ನು ಅರ್ಥ ಮಾಡಿಕೊಂಡು ಬಂಡವಾಳವಾಗಿಸಿಕೊಂಡ "ಸಾಹುಕಾರರು" ಮೈಕ್ರೋಫೈನಾನ್ಸ್‌ ಮುಖವಾಡದಲ್ಲಿ ಗಾಳ ಹಾಕಿದರು. ಬಡವರೆಂಬ ಮೀನುಗಳನ್ನು ಹಿಡಿದು ಮುಗಿಸಿ ಕೊಬ್ಬಿದರು. ಇವರ ಕಾಟಕ್ಕೆ ರೋಸಿ ಹೋಗಿ ಇನ್ನು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾದಾಗ ಜನ ಬೀದಿಗಿಳಿದಿದ್ದಾರೆ. ಸರ್ಕಾರವೂ ನಿದ್ದೆಯಿಂದ ಎಚ್ಚೆತ್ತಂತೆ ಅದೂ ಇದೂ ಕನವರಿಸುತ್ತಿದೆ. ಆದರೆ ಜಾಗೃತಿ ಮೂಡಿಸುವ ಬಗ್ಗೆ, ಜವಾಬ್ದಾರಿಯುತವಾಗಿ ಸಾಲ ಕೊಡುವ ಬಗ್ಗೆ ಈವರೆಗೆ ಕರ್ನಾಟಕ ಸರ್ಕಾರದ ಯಾವೊಬ್ಬ ಸಚಿವರೂ ಗಂಭೀರವಾಗಿ ಮಾತನಾಡಿಯೇ ಇಲ್ಲ.

ಸರ್ಕಾರದ ಈಗಿನ ನಡೆಯಿಂದ ಹಾಲುಕ್ಕಿದಾಗ ನೀರು ಚಿಮುಕಿಸಿದಷ್ಟೇ ಲಾಭ. ದೀರ್ಘಾವಧಿಗೆ ಸದೃಢ ಕಿರುಸಾಲ ವ್ಯವಸ್ಥೆ ರೂಪಿಸದಿದ್ದರೆ, ಮೈಕ್ರೋಫೈನಾನ್ಸ್‌ ಹೆಸರಿನಲ್ಲಿ ಜನರ ರಕ್ತ ಹೀರುತ್ತಿರುವ "ಸಾಹುಕಾರ"ರಿಗೆ ಕಡಿವಾಣ ಹಾಕದಿದ್ದರೆ, ಸಹಕಾರ ಸಂಘಗಳಿಗೆ ಬಲ ತುಂಬದಿದ್ದರೆ, ಜನರಲ್ಲಿ ಜಾಗೃತಿ ಮೂಡಿಸದಿದ್ದರೆ ಸಾಲದ ಶೂಲಕ್ಕೆ ಬಲಿಯಾಗುವ ಜೀವಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತವೆ. ಇದನ್ನು ಸಾಧಿಸಲು ಗಟ್ಟಿ ಮನಸ್ಸು ಬೇಕು. ರಾಜಕೀಯ ಇಚ್ಛಾಶಕ್ತಿ ಬೇಕು.

Whats_app_banner