ಇನ್ನೊಬ್ಬರ ನಂಬಿಕೆಗಳಿಗೆ ಘಾಸಿ ಮಾಡುವುದು ದ್ರೋಹ, ವಂಚನೆ, ಅಕ್ಷಮ್ಯ: ಚರ್ಚೆಗೆ ಗ್ರಾಸವಾದ ತಿರುಪತಿ ಲಡ್ಡು ವಿವಾದ
ಅಂತೂ ಇಂತೂ ಮಾಂಸ ತಿನ್ನದವರೂ ಸಹ ಲಾಡು ಪ್ರಸಾದದ ಮೂಲಕ ಮಾಂಸದ ಅಂಶವನ್ನು ತಿನ್ನುವಂತಾಯಿತು ಎಂದು ವಿಕೃತಿ ಮೆರೆಯುತ್ತಿರುವುದು ಕಂಡು ಬರುತ್ತಿದೆ. ಹೀಗೆ ಹೇಳುವ ಮೂಲಕ ತಿರುಪತಿ ಪಾವಿತ್ರ್ಯತೆಯ ಜತೆಗೆ ಆಹಾರದ ವಿಷಯ ಸೇರಿ ಎಲ್ಲದರಲ್ಲೂ ಇನ್ನೊಬ್ಬರ ನಂಬಿಕೆಗಳಿಗೆ ಘಾಸಿ ಮಾಡುವುದು ತಪ್ಪು. ಈ ಕುರಿತು ಕುಸುಮಾ ಆಯರಹಳ್ಳಿ ಫೇಸ್ಬುಕ್ ಪೋಸ್ಟ್ ಹಂಚಿಕೊಂಡಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನದ ಲಾಡು ಪ್ರಸಾದ ವಿವಾದ ಗಗನಕ್ಕೇರಿದೆ. ಲಡ್ಡುವಿನಲ್ಲಿ ಗೋವು, ಹಂದಿಯ ಕೊಬ್ಬು, ಮೀನಿನ ಎಣ್ಣೆ ಬಳಕೆ ಮಾಡಲಾಗಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೀಡಿದ್ದ ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಗುಜರಾತ್ನ ಪ್ರಯೋಗಾಲಯದ ವರದಿಯು ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಇದರ ಚರ್ಚೆಗಳು ಇನ್ನೂ ನಿಂತಿಲ್ಲ. ಆದರೆ, ಪ್ರಸಾದಕ್ಕೆ ಪ್ರಾಣಿಗಳ ಚರ್ಬಿ ಬಳಸಿ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಕೆಲವರು ಹೇಳುತ್ತಿವುದರ ನಡುವೆ ಮಾಂಸಹಾರಿ-ಸಸ್ಯಹಾರಿ ಎಂಬ ಹೊಸ ಚರ್ಚೆ ಪಡೆದಿದೆ. ಇದಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು, ತಿರುಪತಿ ಪ್ರಸಾದ ಪ್ರಮಾದ ಕೇವಲ ಸಸ್ಯಹಾರಿಗಳಿಗೆ ಮಾತ್ರವಲ್ಲ, ಮಾಂಸಹಾರಿಯಾದ ತಿಮ್ಮಪ್ಪನ ಭಕ್ತರೂ ಸಹ ಪ್ರಸಾದದಲ್ಲಿ ಮಾಂಸದ ಅಂಶ ಇರುವುದು ಬಯಸಲ್ಲ ಎನ್ನುತ್ತಿದ್ದಾರೆ.
ಆದರೆ ಇವರೆಲ್ಲರ ನಡುವೆಯೂ ಕೆಲವರು ಅಂತೂ ಇಂತೂ ಮಾಂಸ ತಿನ್ನದವರೂ ಸಹ ಲಾಡು ಪ್ರಸಾದದ ಮೂಲಕ ಮಾಂಸದ ಅಂಶವನ್ನು ತಿನ್ನುವಂತಾಯಿತು ಎಂದು ವಿಕೃತಿ ಮೆರೆಯುತ್ತಿದ್ದಾರೆ. ಹೀಗೆ ಹೇಳುವ ಮೂಲಕ ತಿರುಪತಿ ಪಾವಿತ್ರ್ಯತೆಯ ಜತೆಗೆ ಆಹಾರದ ವಿಷಯ ಸೇರಿ ಎಲ್ಲದರಲ್ಲೂ ಇನ್ನೊಬ್ಬರ ನಂಬಿಕೆಗಳಿಗೆ ಘಾಸಿ ಮಾಡುವುದು ತಪ್ಪು. ಈ ಬಗ್ಗೆ ಮೈಸೂರಿನ ಕುಸುಮಾ ಆಯರಹಳ್ಳಿ (Kusuma Ayarahalli) ಎಂಬುವವರು ಒಬ್ಬರು. ಅವರು ಉದಾಹರಣೆ ಸಮೇತ ವಿವರಿಸಿದ್ದಾರೆ. ಆದರೆ ಕೆಲವರು ಇವರ ಬರಹಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿ, ನೀವು ಲಡ್ಡು ಕಲಬೆರಕೆ ಆಗಿರುವುದನ್ನು ಖಂಡಿಸುತ್ತಾ ಬ್ರಾಹ್ಮಣರು ಲಿಂಗಾಯಿತರೂ ಮಾಂಸ ತಿಂತಾರೆ ಅಂತ ಹೇಳಿ ನಮ್ಮನ್ನು ಅವಮಾನಿಸ್ತಾ ಇದೀರ ಎಂದೂ ಗರಂ ಆಗಿದ್ದಾರೆ. ಈ ಮುಂದಿರುವುದು ಅವರ ಫೇಸ್ಬುಕ್ ಫೋಸ್ಟ್..
ನೋಡಿ ಜನರೇ,
ಈಗಷ್ಟೇ ನಮ್ಮ ರತ್ನಿ ಬಂದಿದ್ದಳು. ಬಹಳ ಹೊತ್ತು ಊರ ಉಸಾಬರಿ ಮಾತಾಡ್ತಿದ್ದಳು. ಸ್ವಲ್ಪ ದಿನ ಬೆಂಗಳುರಲ್ಲಿ ಮನೆಕೆಲಸ ಮಾಡಿ ಬಂದ ಕತೆ ಹೇಳ್ತಾ 'ಬ್ರಾಹ್ಮಣರ ಮನೆಲೇ ಕೆಲ್ಸ ಮಾಡ್ತಿದ್ದೆ. ಮಾಂಸ ಮನೆಲೇ ಮಾಡ್ತಿದ್ರು. ನೀನೂ ತಿನ್ನಮ್ಮ ಅಂತಿದ್ರು. ನಾ ತಿಂತಿರಲಿಲ್ಲ ಅಂದ್ಲು. ಅವಳು ಮಾಂಸಾಹಾರದ ಮನೆಯಲ್ಲಿ ಹುಟ್ಟಿದ್ದರೂ ಯಾವಾಗಲೂ ತಿಂದಿಲ್ಲ ಅನ್ನೋ ವಿಷಯ ಕೇಳಿ ಆಶ್ಚರ್ಯವಾಯ್ತು. ಕೆಲ್ಸಕ್ ಹೋಗೋ ಜಾಗ್ದಲ್ಲಿ ಹೊಲಗಳಲ್ಲಿ ಲಿಂಗಾಯತ್ರು ಮಾಂಸ ಬೇಯಿಸ್ತಾರೆ. ನಾನಂತೂ ತಿನ್ನಲ್ಲ ಅಂದಳು.
ಮಾರಿ ಹಬ್ಬ ಇತ್ಯಾದಿ ಆದಾಗ ಮಾಂಸದೂಟಕ್ಕೆ ಈಗೀಗ ಈ ಬೀದಿಯವರು ಆ ಬೀದಿಗಳಿಗೆ ಹೋಗ್ತಿದಾರೆ. ಯಾರು ಯಾವ ಮನೆಯಲ್ಲಿ ಹುಟ್ಟಿದ್ದರೂ ತಿನ್ನದವರನ್ನು ತಿನ್ನಿ ಎಂದು, ತಿನ್ನುವವರನ್ನು ತಿನ್ನಬೇಡಿ ಎಂದು ನಿಯಮ ಹೇರಬಾರದು. ಅದು ಅವರವರ ವೈಯಕ್ತಿಕ ಹಕ್ಕು. ನಮ್ಮ ಸಂವಿಧಾನವೇ ಕೊಟ್ಟ ಹಕ್ಕು. ಇಲ್ಲಿ ಜಾತಿಮೇಲು ಕೀಳು ಪ್ರಶ್ನೆ ಇಲ್ಲ.
So ಜನರೇ,
1. ಯಾವ ಆಹಾರವೂ ಮೇಲಲ್ಲ. ಕೀಳಲ್ಲ. ಜಾತಿಗೂ ಆಹಾರದ ಆಯ್ಕೆಗೂ ಸಂಬಂಧವಿಲ್ಲ.
2. ಮಾಂಸಾಹಾರ ಹೇಗೆ ಹಕ್ಕೋ, ಸಸ್ಯಾಹಾರವೂ ಹಾಗೆಯೇ ಹಕ್ಕು. ಸಂವಿಧಾನಬದ್ಧ ಹಕ್ಕು. ಪ್ರತಿಯೊಬ್ಬರ ವೈಯುಕ್ತಿಕ ಆಯ್ಕೆಯನ್ನು ಗೌರವಿಸುವುದು ಮಾನವೀಯತೆ.
3. 'ಲಡ್ಡು ತಿನ್ನಿಸಿ ಕೆಡಿಸಿಬಿಟ್ಟೆವು. ಎಂಗೆ ನಾವು?' ಅಂತ ಸಂತೋಷಪಡುವುದು ವಿಕೃತಿ. ಮಾನಸಿಕ ವಿಕೃತಿ. ಅಸಲಿಗೆ ಇನ್ನೊಬ್ಬರ ಭಾವನೆಗಳನ್ನು ಘಾಸಿ ಮಾಡಿದವರಿಗೆ ಪಶ್ಚಾತ್ತಾಪ ಇರಬೇಕು. ವಿಕೃತ ಸಂತೋಷವಲ್ಲ.
4. ಆಹಾರದ ವಿಷಯ ಮಾತ್ರವಲ್ಲ, ಎಲ್ಲದರಲ್ಲೂ ಇನ್ನೊಬ್ಬರ ನಂಬಿಕೆಗಳಿಗೆ ಘಾಸಿ ಮಾಡುವುದು ದ್ರೋಹ. ವಂಚನೆ. ಅಕ್ಷಮ್ಯ. ಲಡ್ಡು ಪ್ರಸಾದ ತಿಂದವರಲ್ಲಿ ಎಷ್ಟೋ ಜನ ಮಾಂಸಾಹಾರಿಗಳು ಇರಬಹುದು. ಅವರಿಗೂ ಲಾಡಿನ ಪ್ರಸಾದದಲ್ಲಿ ಅದು ಬೇಡವಾಗಿರಬಹುದು. ಅಲ್ವಾ? ಇಲ್ಲಿ ದ್ರೋಹ ಆಗಿರೋದು ಸಸ್ಯಾಹಾರಿಗಳಿಗೆ ಅಲ್ಲ.
ತಿನ್ನುವ ಜಾತಿಯಲ್ಲಿ ಹುಟ್ಟಿ ತಿನ್ನಲ್ಲ ಅಂತಾಳೆ ಇವಳಿಗೆ ಪಾಠ ಕಲಿಸಬೇಕು ಅಂತ ನಮ್ಮ ರತ್ನಿಗೆ ಯಾರಾದರೂ ಮೋಸದಿಂದ, ಬಲವಂತದಿಂದ ಮಾಂಸ ತಿನ್ನಿಸಿ, ಆಮೇಲೆ ಹೇಳಿದಾಗ ಅವಳೇನೂ ಸತ್ತುಹೋಗಲ್ಲ. ಆದರೆ ನೋಯುತ್ತಾಳೆ. ನೋಯಿಸೋದು ಯಾವ ಘನಂದಾರಿ ಕೆಲಸಾ ಜನರೇ?
(ನೀವು ನಮ್ಮೂರಿಗೆ ಬಂದು ರತ್ನಿಯನ್ನು ಮಾತಾಡಿಸಬಹುದು. ಇದು ಕತೆ ಅನ್ನಬಹುದಾದ ಜಾಣರಿಗೆ ಹೇಳ್ತಿರುವೆ)
ನೋಯಿಸಬೇಡಿ ಯಾರನ್ನೂ. ಮನುಷ್ಯರಾಗಿ.
ಅವಮಾನ ಮಾಡ್ತಾ ಇದೀರಾ?
ಕುಸುಮಾ ಅವರ ಫೇಸ್ಬುಕ್ ಪೋಸ್ಟ್ಗೆ ವೀಣಾ ರಾವ್ ಎನ್ನುವವರು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿ ‘ನೀವು ಲಡ್ಡು ಕಲಬೆರಕೆ ಆಗಿರುವುದನ್ನು ಖಂಡಿಸುತ್ತಾ ಬ್ರಾಹ್ಮಣರು ಲಿಂಗಾಯಿತರೂ ಮಾಂಸ ತಿಂತಾರೆ ಅಂತ ಹೇಳಿ ನಮ್ಮನ್ನು ಅವಮಾನಿಸ್ತಾ ಇದೀರ. ಇಂತಹುದೆಲ್ಲ ಬೇಕಾ ನಿಮಗೆ? ದೇವರ ಪ್ರಸಾದ ಅಂದ್ರೆ ಅದಕ್ಕೊಂದು ಪಾವಿತ್ರ್ಯತೆ ಇದೆ. ಈಗ ಅದಕ್ಕೆ ಧಕ್ಕೆಯಾಗಿದೆ ಬರೀ ಅಷ್ಟೇ ಮಾತಾಡಿ. ನೀವು ಸಂಬಂಧವಿಲ್ಲದ ಏನೇನೋ ಮಾತಾಡ್ತಾ ಇದೀರಾ. ಲಡ್ಡು ಕಲಬೆರಕೆ ಆಗಿದೆ ಪ್ರಾಣಿಜನ್ಯ ಕೊಬ್ಬು ಹಾಕಿ ಅದರ ಪವಿತ್ರತೆಗೆ ಧಕ್ಕೆ ತಂದಿದ್ದಾರೆ. ಇದರಿಂದ ಭಕ್ತರಿಗೆ ಅವಮಾನ ಆಘಾತ ಆಗಿದೆ ಅಷ್ಡೇ ವಿಷಯ. ಏನೇನೋ ತಿರುಚಿ ಮಾತಾಡಬೇಡಿ ಎಂದು ಖಾರವಾಗಿ ಹೇಳಿದ್ದಾರೆ.
ಹಂದಿ, ದನ ತಿನ್ನುವವರಿಗೂ ಅಚ್ಚರಿಯಾಗಿದೆ!
ರಜನಿ ರಾವ್ ಎಂಬವರು ಪ್ರತಿಕ್ರಿಯಿಸಿ, ತಿರುಪತಿ ಪ್ರಸಾದ ಪ್ರಮಾದ ಕೇವಲ ಸಸ್ಯಹಾರಿಗಳಿಗೆ ಮಾತ್ರ ನಂಬಿಕೆ ದ್ರೋಹ ಅಲ್ಲ. ಮಾಂಸಹಾರಿಯಾದ ತಿಮ್ಮಪ್ಪನ ಭಕ್ತರೂ ಸಹ ಪ್ರಸಾದದಲ್ಲಿ ಮಾಂಸದ ಅಂಶ ಇರುವುದು ಬಯಸಲ್ಲ. ಹಂದಿ, ದನ ತಿನ್ನುವವರಿಗೂ ಸಹ ತಿಮ್ಮಪ್ಪನ ಪ್ರಸಾದ ಕಲಬೆರಕೆ ಆಗಿರುವುದು ಶಾಕ್ ನೀಡಿದೆ. ಇದು ಭಕ್ತರಿಗೆ ಮಾಡಿದ ವಿಶ್ವಾಸ ದ್ರೋಹ. ಸಸ್ಯಹಾರಿ, ಮಾಂಸಹಾರಿ ಪ್ರಶ್ನೆಯೇ ಬೇಡ ಎಂದಿದ್ದಾರೆ.
ಆದರೆ ಕೆಲವರು ಕುಸುಮಾ ಅವರು ಹೇಳಿದ್ದನ್ನು ಬೆಂಬಲಿಸಿದ್ದಾರೆ. ಭಾರತದಲ್ಲಿ ಚರ್ಚೆ ಅಂದಮೇಲೆ ಅದರಲ್ಲಿ ಬ್ರಾಹ್ಮಣ ಬರಬೇಕು; ಬರಲೇಬೇಕು. ಒಮ್ಮೊಮ್ಮೆ ಆಹಾರದ ಮಡಿವಂತಿಕೆ ಇರುವವನಾಗಿ, ಇನ್ನೊಮ್ಮೆ ಮಾಂಸ ತಿನ್ನುವವನಾಗಿ - ಹೀಗೆ ತರ್ಕ ಇರಲೇಬೇಕಂತಿಲ್ಲ, ಒಬ್ಬ ಬ್ರಾಹ್ಮಣನ ಪಾತ್ರ ಬೇಕಷ್ಟೆ. ಚೆನ್ನಾಗಿದೆ ಆಯರಹಳ್ಳಿಯವರೆ ಎಂದು ನವೀನ್ ಗಂಗೋತ್ರಿ ಎಂಬವರು ಕಾಮೆಂಟ್ ಹಾಕಿದ್ದಾರೆ. ಕುಸುಮಾ ಅವರ ಫೇಸ್ಬುಕ್ ಪೋಸ್ಟ್ಗೆ ಸಾಕಷ್ಟು ಮಂದಿ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅವರ ಪೋಸ್ಟ್ ಇಲ್ಲಿದೆ. ನೀವು ಒಮ್ಮೆ ಓದಿ.