ತಿರುಪತಿ ಲಾಡು ಎನ್ನುವುದು ದೇವರ ಪ್ರಸಾದ, ಪೌಷ್ಟಿಕಾಂಶಕ್ಕಾಗಿ ತಿನ್ನುವ ಅಂಟಿನುಂಡೆ ಅಲ್ಲ: ಮಾಲಿನಿ ಗುರುಪ್ರಸನ್ನ ಬರಹ
ಮಾಲಿನಿ ಗುರುಪ್ರಸನ್ನ ಬರಹ: ತಿರುಪತಿ ದೇವಸ್ಥಾನವೇ ನಂಬಿಕೆ ಮೇಲೆ ನಿಂತಿರುವ ಸ್ಥಳ. ದೇವರಿದ್ದಾನೆ ಎಂದು ನಂಬಿದವರು ಮಾತ್ರ ಅಲ್ಲಿಗೆ ಹೋಗುತ್ತಾರೆ ಹೊರತು ಕಟ್ಟಡದ ವಾಸ್ತುವೈಭವವನ್ನೋ, ಅಲ್ಲಿಯ ಗುಡಿಗೋಪುರಗಳನ್ನೋ ನೋಡಲು ಅಲ್ಲ. ಅಲ್ಲಿನ ಲಾಡು ಎನ್ನುವುದು ದೇವರ ಪ್ರಸಾದ. ಅದು ಪೌಷ್ಟಿಕಾಂಶಕ್ಕಾಗಿ ನಾವು ತಿನ್ನುವ ಅಂಟಿನುಂಡೆ ಅಲ್ಲ.
ತಿರುಪತಿ ದೇವಸ್ಥಾನದ ಲಾಡು ಪ್ರಸಾದ ಸದ್ಯ ಭಾರಿ ಸುದ್ದಿಯಲ್ಲಿದೆ. ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಬಳಕೆ ಮಾಡಲಾಗಿದೆ ಎಂಬ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಹೇಳಿಕೆ ಜಾಗತಿಕ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಜನರ ಭಾವನೆಗಳ ಮೇಲೆ ಆಟವಾಡಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಗಳು ನಡೆಯುತ್ತಿದ್ದು, ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ತಿರುಪತಿ ತಿಮ್ಮಪ್ಪನ ದೇವಸ್ಥಾನ ನಿಂತಿರುವುದು ನಂಬಿಕೆಯ ಮೇಲೆ. ದೇವಸ್ಥಾನದ ಲಡ್ಡು ಪ್ರಸಾದವೆಂದರೆ ಪೌಷ್ಟಿಕಾಂಶಯುತ ಅಂಟಿನುಂಡೆ ಅಲ್ಲ. ಅದು ದೇವರ ಪ್ರಸಾದ ಮಾತ್ರವಲ್ಲದೆ ನಂಬಿಕೆಯ ಪ್ರಸಾದ ಎಂದು ಫೇಸ್‌ಬುಕ್‌ನಲ್ಲಿ ಮಾಲಿನಿ ಗುರುಪ್ರಸನ್ನ ಬರೆದಿದ್ದಾರೆ. ಮುಂದಿರುವುದು ಮಾಲಿನಿ ಅವರ ಬರಹ.
ಹಬ್ಬದ ದಿನ ಬೆಳಗ್ಗೆ ನಮ್ಮ ಮನೆಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಕಿದ ಅಡುಗೆ ಮಾಡೋಲ್ಲ. ಅವತ್ತು ಬೆಳಗ್ಗೆ ಚಿತ್ರಾನ್ನ, ಪುಳಿಯೋಗರೆಯಂಥಾ ಅನ್ನದ (ಅಕ್ಕಿಯ) ತಿಂಡಿ ಕೂಡಾ ನಿಷಿದ್ಧ. ಉಪ್ಪಿಟ್ಟು, ಅವಲಕ್ಕಿ ಮಾಡಿದರೂ ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಉಪಯೋಗಿಸುವುದಿಲ್ಲ. ನಾಗರ ಪಂಚಮಿಯಂದು ನಾವು ಎಣ್ಣೆಯಲ್ಲಿ ಕರಿದ ತಿಂಡಿ ಮಾಡೋಲ್ಲ. ಅಷ್ಟೇ ಏಕೆ, ಚಟ್ನಿ, ಸಾರಿಗೆ ಒಗ್ಗರಣೆ ಕೂಡಾ ಹಾಕೋಲ್ಲ. ಅವತ್ತು ಏನಿದ್ದರೂ ಹಬೆಯಲ್ಲಿ ಬೇಯಿಸಿದ್ದು ಮಾತ್ರ. ಅದರಲ್ಲೂ ಇಡ್ಲಿಯನ್ನು ಇಡ್ಲಿ ಸೆಟ್ಟಲ್ಲಿ ಹಾಕಿ ಗುಂಡನೆಯ ಆಕಾರದಲ್ಲಿ ಬೇಯಿಸುವಂತಿಲ್ಲ. ವ್ರತಗಳ ದಿನ ಟೊಮ್ಯಾಟೊ ಸಾರಿಗೆ ಹಾಕುವುದಿಲ್ಲ. ಈ ಪಟ್ಟಿ ಸಾಕೀಗ. ಅವೆಲ್ಲವೂ ನಾನು ತಿನ್ನದ ವಸ್ತುಗಳೇನೂ ಅಲ್ಲ. ಆದರೂ ನಾನು ಇವುಗಳನ್ನು ಪಾಲಿಸುತ್ತೇನೆ.
ನನ್ನ ಗೆಳತಿಯೊಬ್ಬಳ ಮನೆಯಲ್ಲಿ ವಾರ ಎಂದು ಪ್ರತಿ ಶನಿವಾರ ಆಚರಿಸುತ್ತಿದ್ದರು. ಅಂದು ಅವರ ಮನೆಯಲ್ಲಿ ಗೋಧಿ ಕಡಿ ಪಾಯಸ . ಅಂದು ಅವರಿಗೆ ನಾನ್ ವೆಜ್ ಜೊತೆಗೆ ಆಲೂಗಡ್ಡೆಯಂತಹ ಭೂಮಿಯೊಳಗೆ ಬೆಳೆಯುವ ಗೆಡ್ಡೆಗಳು ನಿಷಿದ್ಧ ಎನ್ನುತ್ತಿದ್ದರು. ಇವೆಲ್ಲಾ ಯಾಕೆ ಎಂದರೆ ನನ್ನಲ್ಲಿ ಉತ್ತರವಿಲ್ಲ. ನನಗೆ ಉತ್ತರ ಬೇಡ. ಅವು ಪರಂಪರೆ, ನಂಬಿಕೆ. ಒಬ್ಬೊಬ್ಬರ ನಂಬಿಕೆಯೂ ವಿಭಿನ್ನ. ಹಬ್ಬಗಳು, ವ್ರತ ಆಚರಣೆ ಎಲ್ಲವೂ ಬೇಕು ಎಂದರೆ ಬೇಕು, ಬೇಡವೆಂದರೆ ಬೇಡ. ಅವರವರ ನಂಬಿಕೆ. ಹಾಗೆ ನಂಬಿ ಆಚರಿಸುತ್ತಿದ್ದಾರೆಂದರೆ ಅವರ ಆಚರಿಸುವ ಕ್ರಮವೂ ನಂಬಿಕೆಯೇ.
ಭಾವನೆಗಳಿಗೆ ಸಂಬಂಧಿಸಿದ್ದು
ತಿಮ್ಮಪ್ಪನ ದೇವಸ್ಥಾನವೇ ನಂಬಿಕೆಯ ಮೇಲೆ ನಿಂತಿರುವ ಸ್ಥಳ. ದೇವರಿದ್ದಾನೆ, ಅವನೇ ನಮ್ಮ ಅಂತಿಮ ತೀರ್ಪುಗಾರ, ಮುಕ್ತಿದಾಯಕ ಎಂದು ನಂಬಿದವರು ಮಾತ್ರ ಅಲ್ಲಿಗೆ ಹೋಗುತ್ತಾರೆ. ಆ ಕಟ್ಟಡದ ವಾಸ್ತುವೈಭವವನ್ನೋ, ಅಲ್ಲಿಯ ಗುಡಿಗೋಪುರಗಳನ್ನೋ ನೋಡಲು ಅಲ್ಲ. ಅಲ್ಲಿನ ಲಾಡು ಎನ್ನುವುದು ದೇವರ ಪ್ರಸಾದ. ಅದು ಪೌಷ್ಟಿಕಾಂಶಕ್ಕಾಗಿ ನಾವು ತಿನ್ನುವ ಅಂಟಿನುಂಡೆ ಅಲ್ಲ. ರುಚಿಗಾಗಿ ತಿನ್ನುವ ಸಿಹಿ ತಿಂಡಿಯೂ ಅಲ್ಲ. ಯಾರಾದರೂ ತೀರ್ಥಕ್ಷೇತ್ರಗಳಿಂದ ಪ್ರಸಾದ ತಂದುಕೊಟ್ಟರೆ ಆ ತೀರ್ಥಕ್ಷೇತ್ರವೇ ಮನೆಗೆ ಬಂದಷ್ಟು ಸಂಭ್ರಮಿಸುವವರಿದ್ದಾರೆ. ಅದು ಭಾವನೆಗಳಿಗೆ ಸಂಬಂಧಿಸಿದ್ದು. ಹಿಂದೆ ಹಂದಿ ಮತ್ತು ದನದ ಕೊಬ್ಬನ್ನು ತೋಟಾಗಳಿಗೆ ಸವರಿದ್ದಾರೆ ಎಂಬ ಮಾತಿಗೆ ಸಿಪಾಯಿ ದಂಗೆಯೇ ಆಯಿತಲ್ಲ. ಅಂತಹ ಭಾವನಾತ್ಮಕ ವಿಷಯ. ಅಂದು ಸೈನ್ಯದಲ್ಲಿ ಕೇವಲ ಸಸ್ಯಾಹಾರಿಗಳು ಮಾತ್ರವೇ ಇದ್ದರೇ? ಅದು ನಮ್ಮ ನಂಬಿಕೆಗಳನ್ನು, ನಮ್ಮ ಭಾವನೆಗಳನ್ನು ಛಿದ್ರಗೊಳಿಸಿದ ನೋವು.
ಜಿಪುಣತನ ತೋರಿಸುವ ಅವಶ್ಯಕತೆ ಏನಿತ್ತು?
ತಿರುಮಲ ಆದಾಯವಿಲ್ಲದ ಬಡ ದೇಗುಲವಲ್ಲ. ಒಂದು ಸರ್ಕಾರವನ್ನೇ ತೂಗಿಸಬಹುದಾದಷ್ಟು ಶ್ರೀಮಂತ ದೇಗುಲ. ಈಗ ಅದಕ್ಕಿಂತ ಶ್ರೀಮಂತ ದೇಗುಲ ಎಂಬ ಖ್ಯಾತಿ ಹಳೆಯ ಸಂಪತ್ತಿನ ಆಧಾರದ ಮೇಲೆ ಬೇರೆ ದೇಗುಲಕ್ಕೆ ಹೋಗಿರಬಹುದು. ಅನುದಿನದ ಆದಾಯದಲ್ಲಿ ಇಂದಿಗೂ ತಿಮ್ಮಪ್ಪನ ವೈಭವಕ್ಕೆ ಸಾಟಿಯೇ ಇಲ್ಲ. ಇಂತಹ ದೇಗುಲದ ಪ್ರಸಾದದ ವಿಷಯವನ್ನು ತುಪ್ಪದ ದರ ಹೆಚ್ಚು ಎಂಬ ಕಾರಣಕ್ಕೆ ಅತ್ಯಂತ ವಿಶ್ವಾಸಾರ್ಹ ಸರ್ಕಾರಿ ಸಂಸ್ಥೆಯನ್ನು ಬಿಟ್ಟು ಬೇರೆ ಕಡೆ ತುಪ್ಪ ತರಿಸುವಷ್ಟು ವ್ಯಾವಹಾರಿಕತೆ ತೋರಿಸಿ, ಅದರ ವಿಶ್ವಾಸಾರ್ಹತೆಯ ಬಗ್ಗೆ ಮನದಟ್ಟು ಮಾಡಿಕೊಳ್ಳದೇ ಹೇಗೆ ನಡೆದುಕೊಳ್ಳುತ್ತದೆ ಒಂದು ಸರ್ಕಾರ? ಅಷ್ಟು ಶ್ರೀಮಂತ ದೇಗುಲಕ್ಕೆ ತುಪ್ಪದ ವಿಷಯದಲ್ಲಿ ಇಷ್ಟು ಜಿಪುಣತನ ತೋರಿಸುವ ಅವಶ್ಯಕತೆ ಏನು? ತಿಮ್ಮಪ್ಪನ ದೇಗುಲವೇ ನಂಬಿಕೆಯ ಮೇಲೆ ನಿಂತಿದೆ ಎಂದಾದ ಮೇಲೆ ಅದರ ಪ್ರಸಾದವೂ ನಂಬಿಕೆಯ ಮೇಲೆಯೇ ನಿಂತಿರುತ್ತದೆ. ಅದನ್ನು ತಪ್ಪು ಎನ್ನಲು ಹೇಗೆ ಸಾಧ್ಯ? ಆ ಪ್ರಸಾದದ ಹಣವನ್ನು ಸರ್ಕಾರವೇನು ಕೈಯಿಂದ ಹಾಕುತ್ತದೆಯೇ? ಕೋಟಿಗಟ್ಟಲೇ ಕಾಣಿಕೆ ಸುರಿಯುವ ಭಕ್ತರ ಹಣದ ಸಿಂಹಪಾಲನ್ನು ಪಡೆದೂ ಮತ್ತೂ ಅದರಲ್ಲೂ ಉಳಿಸುವ ಈ ಚೌಕಾಸಿ ಏಕೆ?
ದೇವಸ್ಥಾನದ ಸಂಪ್ರದಾಯ ಏನಿದೆಯೋ ಅದನ್ನಷ್ಟೇ ಪಾಲಿಸಬೇಕಲ್ಲದೆ, ಅದರಲ್ಲೇನು ತಪ್ಪು, ಆ ಕೊಬ್ಬು ತಿಂದರೇನು ತಪ್ಪು ಎನ್ನುವವರಿಗೆ ಆ ಸಂಪ್ರದಾಯವನ್ನು ನಂಬಿದವರೇ ಅಲ್ಲಿಗೆ ಹೋಗುವುದು, ಆ ಪ್ರಸಾದವನ್ನು ಭಕ್ತಿಯಿಂದ ತಿನ್ನುವುದು ಎಂಬ ಸತ್ಯ ಹೊಳೆಯುವುದಿಲ್ಲವಾ ಅಥವಾ ಉದ್ದೇಶಪೂರ್ವಕವಾಗಿ ಆ ಸತ್ಯವನ್ನು ತಳ್ಳಿಹಾಕುತ್ತಿದ್ದಾರಾ? ಇನ್ನೊಬ್ಬರ ನಂಬಿಕೆ ಹಾಳಾಯಿತೆಂದು ಸಂತೋಷ ಪಡುವುದು ನಮ್ಮ ಮನಸ್ಥಿತಿಯನ್ನಷ್ಟೇ ತೋರಿಸುತ್ತದೆ. ಪ್ರಪಂಚದಲ್ಲಿ ಒಬ್ಬರನ್ನೊಬ್ಬರು ಗೌರವಿಸುವ ಪರಂಪರೆ ಇದೆ ಎಂದು ನಂಬಿದ್ದವಳಿಗೆ
ಫೇಸ್‌ಬುಕ್ ಈ ಪ್ರಪಂಚದ ಸಕಲ ಮುಖಗಳನ್ನೂ ನಿರ್ದಾಕ್ಷಿಣ್ಯವಾಗಿ ಪರಿಚಯಿಸುತ್ತಿದೆ. ನಿಮಗೆ ಅಭ್ಯಂತರವಿಲ್ಲವೆಂದರೆ ನೀವು ಹೇಗಾದರೂ ಇರಿ. ಬೇರೆಯವರ ನಂಬಿಕೆಯ ಮೇಲೆ ನಿಮ್ಮ ನಂಬಿಕೆಯನ್ನು ಹೇರಬೇಡಿ.
ಇದು ನಂಬಿಕೆ ಪ್ರಶ್ನೆ ಅಲ್ವಾ?
ಮಾಲಿನಿ ಬರಹಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಫೇಸ್‌ಬುಕ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು, "ಏನೇನ್ ಬರೀತಿದಾರೆ ಆಡ್ಕೊತಿದಾರೆ ಅಂದ್ರೆ ರಾಮ ರಾಮ ಕಿವಿ ಮುಚ್ಕೊಬೇಕು. ಮಾಂಸಾಹಾರ ಸಸ್ಯಾಹಾರ ಅಂತ ಏನೆನೋ ಅರ್ಥವಿಲ್ಲದ್ದು ಸಂಬಂಧವಿಲ್ಲದ್ದು ಹೇಳ್ತಿದಾರೆ. ಇದು ನಂಬಿಕೆ ಪ್ರಶ್ನೆ ಅಲ್ವಾ?" ಎಂದು ಪ್ರಶ್ನಿಸಿದ್ದಾರೆ.
ಧರ್ಮದ ನಂಬಿಕೆ ಇದೆ
ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿ, "ಕೇವಲ ಸಸ್ಯಾಹಾರಿಗಳ ಮೇಲೆ ಪ್ರಹಾರ. ಹೋಗಲಿ ನಮ್ಮನ್ನು ಧರ್ಮ ಭ್ರಷ್ಟರನ್ನಾಗಿಸುತ್ತೇವೆ ಎಂದು ಮಾಡಿರಬಹುದಾದ ಪ್ರಯತ್ನ ಇದಾಗಿದ್ದರೆ ಹೀಗೆ ಮೋಸದಿಂದ ಧರ್ಮ ಭ್ರಷ್ಟರನ್ನಾಗಿಸಬಹುದಾದಷ್ಟು ಅಡಿಪಾಯವೇ ಇಲ್ಲದ ಧರ್ಮವೇನಲ್ಲ ನಮ್ಮದು. ಇಲ್ಲಿ ಜಾತಿಯಲ್ಲ, ಧರ್ಮದ ನಂಬಿಕೆ ಇದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಗಮನಿಸಿ: ಈ ಬರಹದಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ. ಅವರ ಬರಹವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸಿಬ್ಬಂದಿ ಈ ಬರಹವನ್ನು ಬದಲಿಸಿಲ್ಲ. ಆಸಕ್ತ ಓದುಗರು ತಮ್ಮ ಬರಹ, ಅಭಿಪ್ರಾಯವನ್ನು ht.kannada@htdgital.in ವಿಳಾಸಕ್ಕೆ ಇಮೇಲ್ ಮಾಡಬಹುದು.