ಕನ್ನಡ ಸಾಹಿತ್ಯ ಸಮ್ಮೇಳನದ ಸ್ಟಾಲ್‌ಗಳಲ್ಲಿ ಮಾಂಸಯುಕ್ತ ಖಾದ್ಯ ಮಾರಲು ಅನುವು ಮಾಡಿಕೊಡಬಹುದು, ಆದರೆ...! ಮಧು ವೈಎನ್ ಬರಹ
ಮಧು ವೈಎನ್ ಲೇಖನ: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸನಿಹದಲ್ಲಿರುವಾಗ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧದ ಕುರಿತು ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿ ಲೇಖಕರಾದ ಮಧು ವೈ ಎನ್ ಫೇಸ್‌ಬುಕ್‌ನಲ್ಲಿ ಬರೆದ ಲೇಖನವೊಂದು ಗಮನ ಸೆಳೆಯುತ್ತದೆ. "ಖಾದ್ಯಗಳ ತಯಾರಿಕೆ, ಸೇವನೆ, ಮತ್ತು ವಿಲೇವಾರಿ ವಿಚಾರಗಳಲ್ಲಿ ನಾವು ಸಾಂಸ್ಕೃತಿಕವಾಗಿ ಬದಲಾಗಬೇಕಿದೆ" ಎಂದು ಅವರು ಹೇಳಿದ್ದಾರೆ.
ಮಧು ವೈಎನ್ ಲೇಖನ: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸನಿಹದಲ್ಲಿರುವಾಗ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧದ ಕುರಿತು ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿ ಲೇಖಕರಾದ ಮಧು ವೈ ಎನ್ ಫೇಸ್‌ಬುಕ್‌ನಲ್ಲಿ ಬರೆದ ಲೇಖನವೊಂದು ಗಮನ ಸೆಳೆಯುತ್ತದೆ. "ಖಾದ್ಯಗಳ ತಯಾರಿಕೆ, ಸೇವನೆ, ಮತ್ತು ವಿಲೇವಾರಿ ವಿಚಾರಗಳಲ್ಲಿ ನಾವು ಸಾಂಸ್ಕೃತಿಕವಾಗಿ ಬದಲಾಗಬೇಕಿದೆ" ಎಂದು ಈ ಲೇಖನದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ. ಅವರ ಲೇಖನದ ಪೂರ್ಣ ಪಠ್ಯ ಇಲ್ಲಿದೆ.
- “ತಂಬಾಕು, ಮದ್ಯ, ಮಾಂಸ ನಿಷೇಧಿಸಲಾಗಿದೆ” ಎಂದು ಹೇಳುವುದು ತಪ್ಪು. ಮಾಂಸ ಒಂದು ಬಗೆಯ ಆಹಾರ. ಅದು ತಂಬಾಕು ಮತ್ತು ಮದ್ಯಗಳಿಗೆ ಸಮವಲ್ಲ. ರೂಢಿಯಿಂದ ಬಂದಿದ್ದರೂ ಇನ್ನು ಮುಂದೆ ತಿದ್ದಿಕೊಳ್ಳುವುದು ಪ್ರಗತಿಯ ಲಕ್ಷಣ.
- ಬಹುಶಃ ಮೇಲಿನ ಸಾಲು ಅಥವಾ ಈ ರೂಢಿಗತ ನಿಷೇಧ ಬಂದಿರುವುದು ನಿರ್ವಹಣೆಯ ಸಲುವಾಗಿ ಅನ್ನಿಸುತ್ತೆ. ನಾವು ಪ್ರತಿ ಸಮ್ಮೇಳನದಲ್ಲಿಯೂ ಊಟಕ್ಕೆ ನೂಕುನುಗ್ಗಲು ಎಂಬ ವರದಿಗಳನ್ನು ಓದಿದ್ದೇವೆ. ಹೋಗಿಬಂದವರು ಅನುಭವಿಸಿದ್ದಾರೆ. ಕೇವಲ ಅನ್ನ ಸಾರಿಗೇ ನೂಕು ನುಗ್ಗಲಾದರೆ ಇನ್ನು ಮಾಂಸಾಹಾರ ಕೊಟ್ಟರೆ ಇನ್ನೆಷ್ಟು ಆಗಬೇಡ? ನಿಸ್ಸಂಶಯವಾಗಿ ಸಮ್ಮೇಳನಕ್ಕೆ ಬರುವವರಲ್ಲಿ ಅಧಿಕ ಮಂದಿ ಮಾಂಸಹಾರಿಗಳೇ ಆಗಿರುತ್ತಾರೆ.
- ಹಾಗಾಗಿ ಸಮ್ಮೇಳನ ಏರ್ಪಡಿಸುವ ಭೋಜನದಲ್ಲಿ ಅಲ್ಲದಿದ್ದರೂ ʼಸ್ಟಾಲ್ʼಗಳಲ್ಲಿ ಮಾಂಸಯುಕ್ತ ಖಾದ್ಯಗಳನ್ನು ಮಾರಲು ಅನುವು ಮಾಡಿಕೊಡಬಹುದು. ಆಸಕ್ತರಿಗೆ ಅದೊಂದು ಆಯ್ಕೆ ಇರಬೇಕು. ಕೊಂಡು ತಿನ್ನುವಾಗ ಅಷ್ಟೊಂದು ನೂಕು ನುಗ್ಗಲು ಇರಲ್ಲ ಎಂದು ಭಾವಿಸುವೆ.
- ಯಾರಿಗೆ ಅನುವು ಮಾಡಿಕೊಟ್ಟರೂ ಸರಿಯೇ... ಮಾಂಸದ ವಿಷಯದಲ್ಲಿ ನಮ್ಮ ದೇಶದಲ್ಲಿನ ʼಖಾದ್ಯಗಳ ತಯಾರಿಕೆ, ಸೇವನೆ, ಮತ್ತು ವಿಲೇವಾರಿʼ ಈ ವಿಚಾರಗಳಲ್ಲಿ ನಾವು ಸಾಂಸ್ಕೃತಿಕವಾಗಿ ಬದಲಾಗಬೇಕಿದೆ. ಹೇಗೆ? ತಯಾರಿಕೆ ಹಂತದಲ್ಲಿ ಹಸಿ ಮಾಂಸಗಳ ತುಣುಕು, ಉಳಿಕೆಗಳನ್ನು ಇಲ್ಲವಾಗಿಸುವುದು, ಅಥವಾ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು. ಸೇವಿಸುವ ಹಂತದಲ್ಲಿ- ಹೊರಗೆ ನಿಂತು ಕುಂತು ತಿನ್ನಲು ಸುಲಭವಾಗಿರುವ ಖಾದ್ಯಗಳನ್ನು ತಯಾರಿಸುವುದು, ಚೆಲ್ಲುವ ಇಟ್ಟಾಡುವ ಅವಕಾಶ ಇರಬಾರದು, ಕಡೆಯಲ್ಲಿ ಅರ್ಧಂಬರ್ಧ ಮಾಂಸ, ಮೂಳೆ ಉಳಿಯುವಂತಿರಬಾರದು. ಸ್ವಲ್ಪ ಉಳಿದೇ ಉಳಿಯುತ್ತದೆ. ಅದನ್ನು ಸರಿಯಾಗಿ ಒಂದು ಬುಟ್ಟಿಯಲ್ಲಿ ಎಸೆಯುವಂತಿರಬೇಕು. ಬುಟ್ಟಿಯನ್ನು ಕಟ್ಟುವಂತಿರಬೇಕು. ಯಾರಾದರೂ ಸೊಸೊಲ್ಪ ಹೊತ್ತಿಗೆ ಅದನ್ನು ಎತ್ತಿಕೊಂಡು ಹೋಗುವಂತಿರಬೇಕು.
ಕೊನೆಗೆ.. ಉಂಡ ಎಲೆಗಳನ್ನು ಎಸೆಯಲು ಒಂದು ಅಚ್ಚುಕಟ್ಟಾದ ವ್ಯವಸ್ಥೆ ಇದ್ದಿರಬೇಕು. ತತ್ ತಕ್ಷಣ ಅದು ವಿಲೇವಾರಿಯಾಗಬೇಕು. ಮುಖ್ಯವಾಗಿ ತಿಂದವರೆಲ್ಲರೂ ಸೀದಾ ಹೋಗಿ ಬುಟ್ಟಿಗೇ ಎಸೆಯಬೇಕು. ಎಲ್ಲೆಂದರಲ್ಲೆ ಎಸೆದು, ಎಲ್ಲೆಂದರಲ್ಲೆ ಕೈತೊಳೆದು ಹೋಗಬಾರದು.
ಇಷ್ಟೆಲ್ಲ ವ್ಯವಸ್ಥೆ ಇರದಿದ್ದಲ್ಲಿ ಬರೆದುಕೊಡ್ತೀನಿ ಮೊದಲೇ ಬಯಲಲ್ಲಿ ಏರ್ಪಡಿಸಿದ್ದೀರಾ.. ಅಕ್ಷರಶಃ ಬೀದಿನಾಯಿಗಳ, ಕಾಗೆ, ಹದ್ದುಗಳ ರಣಾರಂಗ ಸೃಷ್ಟಿಯಾಗುತ್ತದೆ. ಹೆಂಗಸರು ಮಕ್ಕಳು ಅಡ್ಡಾಡಲೂ ಭಯ ಪಡುವಂತಾಗುತ್ತದೆ. ಸಾಹಿತ್ಯ ಸಮ್ಮೇಳನ ಹೋಗಿ ಅದಿನ್ನೇನೋ ಆಗಿಬಿಡುತ್ತದೆ.
ಪ್ರತಿಭಟನೆ ಕೇವಲ ಒಂದು ನಿಯಮದ ಬೋರ್ಡಿನ ವಿಷಯವಾಗಿದ್ದಲ್ಲಿ ಅದು ಅಷ್ಟಕ್ಕೇ ಸೀಮಿತವಾಗಿದ್ದರೆ ಒಳ್ಳೆಯದು ಅನಿಸುತ್ತದೆ. ಮೇಲೆ ತಿಳಿಸಿದ ಯಾವುದೇ ಪೂರ್ವತಯಾರಿಯಿಲ್ಲದೆ ಏನೇನೋ ಮಾಡಲು ಹೋದರೆ ಬಂದವರೆಲ್ಲಾ ನಿಮ್ಮನ್ನೇ ಬೈಕೊಳ್ಳುವಂತಾಗುತ್ತದೆ.
ಬಹುಶಃ ನಮ್ಮ ದೇಶ ಇನ್ನೂ ಅಷ್ಟೆಲ್ಲಾ ಮುಂದುವರೆದಿಲ್ಲಾ ಎಂದು ಅರಿತು ಹಿರಿಯರಾದ ಜಗದೀಶ್ ಕೊಪ್ಪ ಮತ್ತು ಎಸ್ ಜಿ ಸಿದ್ಧರಾಮಯ್ಯನವರು ತಮ್ಮ ಅನುಭವಗಳ ದೃಷ್ಟಿಯಿಂದ ಆಕ್ಷೇಪಿಸಿರುತ್ತಾರೆ.
ಈ ಲೇಖನಕ್ಕೆ ನಂದನ್ ಖಂಡೇನಹಳ್ಳಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. "ಎಸ್.ಜಿ.ಎಸ್. ಏನು ಬರೆದಿದ್ದಾರೆ ನಾನು ಓದಿಲ್ಲ ಅದರೆ ಜಗದೀಶ್ ಕೊಪ್ಪ ಅಭಿಪ್ರಾಯ ಒಪ್ಪತಕ್ಕದಲ್ಲ. ನಿಮ್ಮ ಕಾಳಜಿಯನ್ನು ಗಮನಿಸಿ ಕೇಳುತ್ತೇನೆ. ಪುಳಿಯೊಗರೆ ಜೊತೆಗೆ ಕನಿಷ್ಟ ಒಂದು 4 ಪೀಸ್ ಕಬಾಬ್ ನೀಡಲು ವಿರೋದಿಸುವವರು ಒಪ್ಪುವರೆ?" ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಲೇಖಕರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಾಲ್ಕೈದು ಲಕ್ಷ ಜನರಿಗೆ ಒದಗಿಸುವುದು ಅವ್ಯವಸ್ಥೆಗೆ ಈಡಾಗಬಹುದು. ತಿಂದ ನಂತರ ಮೂಳೆಗಳು ಇಟ್ಟಾಡಬಹುದು. ಬೀದಿನಾಯಿಗಳು ಮುತ್ತಿಕೊಳ್ಳಬಹುದು. ಮೂಳೆಗಳಿಲ್ಲದ ಮುದ್ದೆ ಕೈಮಾ ಥರದ್ದೇನಾದರೂ ವ್ಯವಸ್ಥೆ ಮಾಡಬಹುದೇನೋ. ಪ್ರಶ್ನೆ ಅಲ್ಲಿಗೇ ಬರುತ್ತದೆ.. ನೂಕುನುಗ್ಗಲಾದರೆ ಏನು ಮಾಡುತ್ತೀರ ಎಂದು. ಯಾರಾದರೂ ಇವೆಂಟ್ ಮ್ಯಾನೇಜ್ಮೆಂಟಿನವರಿಗೆ ಗುತ್ತಿಗೆ ಕೊಟ್ಟರೆ ಸರಿಯಾಗಿ ನಿಭಾಯಿಸುತ್ತಾರೆ" ಎಂದು ಮಧು ವೈಎನ್ ಮಾರುತ್ತರ ನೀಡಿದ್ದಾರೆ.
"ಖಂಡಿತ ಈಗ ಗುತ್ತಿಗೆ ಪಡೆದವರಿಂದ ನಿರ್ವಹಣೆ ಮಾಡಲು ಸಾದ್ಯವಿಲ್ಲ ಎಂದರೆ ಬೇರೆಯವರಿಗೆ ವಾಹಿಸಬಹುದು ಆಥಾವ ಕೈಮ ಮುದ್ದೆಯನ್ನು ಮಾಡಬಹುದು ಅದರೆ ಇದಕ್ಕೆ ಮಾನ್ಯ ಜಗದೀಶ್ ಕೊಪ್ಪ ಒಪ್ಪುವರೆ? ಜೋಷಿ ಒಪ್ಪುವರೆ? ಇದನ್ನು ಒಪ್ಪಿ ಎಂಬುದಷ್ಟೆ ನಮ್ಮ ಅಗ್ರಹ..." ಎಂದು ನಂದನ್ ಹೇಳಿದ್ದಾರೆ. "ಯಾರನ್ನಾದರೂ ಒಪ್ಪಿಸುವ ಹಠ ಹಿಡಿಯುವುದು ನಮ್ಮ ಈಗೋ ತಣಿಸುತ್ತದಷ್ಟೆ. ಏನಾದರೂ ಬದಲಾವಣೆ ಬೇಕಂದರೆ ಮೊದಲು ಅದು ನಮ್ಮ ಬದುಕಿಗೆ ಅತ್ಯಗತ್ಯವಾಗಿರಬೇಕು. ಮತ್ತು ನಮ್ಮ ಶ್ರಮ, ಬೇಡಿಕೆ ಅದನ್ನು ಒದಗಿಸಿಕೊಳ್ಳುವ ದಿಕ್ಕಿನಲ್ಲಿರಬೇಕು. ಸಮ್ಮೇಳನದಲ್ಲಿ ಮಾಂಸಹಾರ ಲಭ್ಯವಾಗುವಂತೆ ಮಾಡುವುದು ತಿನ್ನುವ ಆಸಕ್ತರ ಆಯ್ಕೆಗಾಗಿ ಇರಬೇಕೇ ಹೊರತು ಯಾರ ವಿರುದ್ಧವೋ ಗೆದ್ದೆವೆಂದು ಬೀಗುವುದಕ್ಕಾಗಿ ಅಲ್ಲ. ಸಾಮಾಜಿಕ ಬದಲಾವಣೆಗಳೆಂದರೆ ಅರ್ಥ ಮಾಡಿಸುವ ಒಪ್ಪಿಸುವ ದೊರಕಿಸಿಕೊಳ್ಳುವ ಕ್ರಿಯೆಗಳು" ಎಂದು ಮಧು ವೈಎನ್ ಹೇಳಿದ್ದಾರೆ.