Opinion: ಈ ಮಾತು ಗಂಡ-ಹೆಂಡತಿ ಬಿಟ್ಟು ಬೇರೆ ಯಾರು ಹೇಳಿದರೂ ತಪ್ಪೇ? ಬೇಡದ ಉಸಾಬರಿಗೆ ಏಕೆ ಹೋಗ್ತೀರಿ ಸ್ವಾಮಿ
ಯಾವ ಜಾತಿಯವರನ್ನು ಮದುವೆ ಮಾಡಿಕೊಳ್ಳಬೇಕು ಎಂಬುದು ಎರಡು ಮನಸ್ಸುಗಳ ತೀರ್ಮಾನ. ಎಷ್ಟು ಮಕ್ಕಳು ಮಾಡಿಕೊಳ್ಳಬೇಕು ಅಂತ ಗಂಡ- ಹೆಂಡತಿ ನಿರ್ಧಾರ ಮಾಡ್ತಾರೆ. ಅದನ್ನು ಒಂದು ಜಾತಿಯೋ- ಧರ್ಮವೋ- ಧರ್ಮಗುರುಗಳೋ ಯಾಕೆ ಹೇಳಬೇಕು? ಕಾಮನ್ ಸೆನ್ಸ್ ಅನ್ನೋ ದೃಷ್ಟಿಯಿಂದಲೂ ಇದು ತಪ್ಪು. (ಬರಹ: ನೀಲಮಾಧವ)
ಸನ್ಯಾಸ ಸ್ವೀಕರಿಸಿ, ಒಂದು ಮಠದ ಜವಾಬ್ದಾರಿ ವಹಿಸಿಕೊಂಡಂಥವರು ಇತ್ತೀಚೆಗೆ ಅಥವಾ ಕೆಲವು ದಶಕಗಳಿಂದ ನಡೆದುಕೊಳ್ಳುವ ರೀತಿ, ಅವರಾಡುವ ಮಾತುಗಳು “ಇವರ್ಯಾಕೆ ಹೀಗೆ?” ಎಂಬ ಪ್ರಶ್ನೆಯನ್ನು ಕೇಳುವಂತೆ ಮಾಡುತ್ತದೆ. ಈ ರೀತಿಯ ಸನ್ಯಾಸಿಗಳಿಗೆ ಯತಿಧರ್ಮ ಎಂಬುದೊಂದು ಇದೆ. ಇದು ಬ್ರಾಹ್ಮಣರಲ್ಲಿ, ಆಯಾ ಉಪ ಪಂಗಡಗಳಲ್ಲಿ ಸಂವಿಧಾನದಂತೆಯೇ ಇದೆ. ಉದಾಹರಣೆಗೆ, ಮಧ್ವಾಚಾರ್ಯರದು “ಯತಿ ಪ್ರಣವಕಲ್ಪ” ಎಂಬುದಿದೆ. ಅದರಲ್ಲಿ ಒಬ್ಬ ಯತಿಯಾದವರು ಹೇಗಿರಬೇಕು, ಅವರ ಜವಾಬ್ದಾರಿ, ಜೀವನಶೈಲಿ ಇತ್ಯಾದಿಗಳ ವಿವರಣೆ ಇದೆ. ಅವರಿಗೆ ಪೂರ್ವಾಶ್ರಮದ ಬಗ್ಗೆಯಾಗಲೀ ಲೌಕಿಕ ವಿಚಾರಗಳ ಬಗ್ಗೆಯಾಗಲೀ ಮೋಹ ಇರಬಾರದು. ಒಂದು ವೇಳೆ ಈ ಮಾತನ್ನು ಹೇಳಿದರೆ, “ಅಜ್ಜಿಗೆ ಕೆಮ್ಮುವುದನ್ನು ಹೇಳಿಕೊಡ್ತಾರೆ ನೋಡ್ರೀ..” ಅಂತಾರೆ. ಆದರೆ ಇದನ್ನು ಹೇಳಲೇಬೇಕಾಗಿದೆ. ಏಕೆಂದರೆ, ನಿಮಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಿ, ಅವರ ನಿರ್ವಹಣೆ ಕಷ್ಟ ಅಂತಾದಲ್ಲಿ ನಮ್ಮ ಮಠದಲ್ಲಿ ತಂದುಬಿಡಿ ಎಂಬಂಥ ಮಾತನ್ನು ಅದು ಯಾವ ಆಧಾರದಲ್ಲಿ ಹೇಳುತ್ತಾರೋ ಗೊತ್ತಿಲ್ಲ.
ಮಠಗಳು ಅಂತ ಆಗಿದ್ದು ಯಾವ ಉದ್ದೇಶಕ್ಕೆ? ಅದರ ಮುಂದಾಳತ್ವ ವಹಿಸಿದಂಥ ಯತಿಗಳ ಕರ್ತವ್ಯ ಏನು? ಅವರಿಗೆ ಇರುವ ಕಟ್ಟುಪಾಡುಗಳೇನು? ಇತ್ಯಾದಿ ವಿಚಾರಗಳನ್ನು ಮೀರಿ ಮಾತುಗಳು ಯಾಕೆ ಬರುತ್ತವೆ ಎಂಬುದೇ ಅತಿದೊಡ್ಡ ಪ್ರಶ್ನೆ. ಬ್ರಾಹ್ಮಣ ಸಮುದಾಯದ, ಅದರಲ್ಲಿಯೂ ಪಾರಂಪರಿಕ ಪೀಠವನ್ನು ಪ್ರತಿನಿಧಿಸುವ ಯತಿಗಳಿಗೆ ಚೌಕಟ್ಟಿದೆ, ಕಟ್ಟುಪಾಡುಗಳಿವೆ, ಹೀಗೆ ಮಾತ್ರ ಜೀವನ ಸಾಗಿಸಬೇಕು ಎಂಬ ನಿಯಮಾವಳಿಗಳಿವೆ. ಆಯಾ ಕಾಲಕ್ಕೆ ಇದು ಬದಲಾಗುತ್ತದೆ, ಅದಕ್ಕೆ ತಕ್ಕಂತೆ ಅವರು ಸಹ ತಮ್ಮ ಜೀವನಕ್ರಮ ಹಾಗೂ ಮಾತು- ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಂಡರೆ ತಪ್ಪೇನು ಎಂಬ ಪ್ರಶ್ನೆ ಕೇಳುವವರಿದ್ದರೆ, ಹಾಗಿದ್ದರೆ ಆಯಾ ಮತ ಆಚಾರ್ಯರು ಬರೆದಿಟ್ಟಂಥ ಸನ್ಯಾಸ ಧರ್ಮದ ನಿಯಮಾವಳಿಗಳನ್ನು ಬದಲಾವಣೆ ಮಾಡಿದ ಪುಸ್ತಕವೊಂದನ್ನು ಸಹ ಅಪ್‌ಡೇಟ್ ಮಾಡುತ್ತಾ ಹೋಗಬೇಕು. ಹಾಗೂ ಇದೇ ವಿಚಾರವನ್ನು ಆ ಮಠದ ಅನುಯಾಯಿಗಳಿಗೂ ಅನ್ವಯಿಸಬೇಕು. ಯಾಕಂದರೆ ಕಾಲ ಬದಲಾವಣೆ ಎಂಬುದು ಸನ್ಯಾಸಿಗಳಿಗೆ ಮಾತ್ರ ಸೀಮಿತವಲ್ಲ.
ಪೇಜಾವರ ಮಠಾಧೀಶರಾಗಿದ್ದ ವಿಶ್ವೇಶ ತೀರ್ಥರು ದಲಿತರು ಕೇರಿಗಳಿಗೆ ಹೋಗುತ್ತಿದ್ದರು. ಈ ಬಗ್ಗೆ ಮಾಧ್ವರಲ್ಲಿಯೇ ಹಲವರದು ಆಕ್ಷೇಪಗಳಿದ್ದವು. ಬ್ರಾಹ್ಮಣರ ಉಪ ಪಂಗಡವಾದ ಮಾಧ್ವರ- ಪೇಜಾವರ ಮಠದ ಸ್ವಾಮಿಗಳಿಗೆ ಇಲ್ಲದ ಉಸಾಬರಿ ಯಾಕೆ ಎಂಬ ಮಾತುಗಳನ್ನು ಆಡುತ್ತಿದ್ದರು. ಅದೇ ಸಹಪಂಕ್ತಿ ಭೋಜನದ ವಿಚಾರ ಬಂದಾಗ, ಯತಿಗಳಾದವರಿಗೆ ಕೆಲವು ನಿಯಮಾವಳಿಗಳು ಇರುತ್ತವೆ. ನಾವು ಬ್ರಾಹ್ಮಣೇತರರು ಮಾತ್ರವಲ್ಲ, ಬ್ರಾಹ್ಮಣರ ಜೊತೆಗೂ ಭೋಜನವನ್ನು ಮಾಡುವುದನ್ನು ಬಿಟ್ಟಿದ್ದೇವೆ ಎಂಬ ಉತ್ತರವನ್ನು ವಿಶ್ವೇಶತೀರ್ಥರು ನೀಡುತ್ತಿದ್ದರು. ಪುತ್ತಿಗೆ ಮಠದ ಸ್ವಾಮಿಗಳಾದ ಸುಗುಣೇಂದ್ರ ತೀರ್ಥರು ವಿದೇಶಕ್ಕೆ ಹೋಗಿಬಂದರು, ಸಮುದ್ರೋಲ್ಲಂಘನ ಮಾಡಿದ್ದಕ್ಕಾಗಿ ಅವರಿಗೆ ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯ ವೇಳೆ ಪೂಜೆಗೆ ಅವಕಾಶ ಇಲ್ಲ ಎನ್ನಲಾಯಿತು, ಅವರನ್ನು ಈಗಲೂ ಸನ್ಯಾಸ ಧರ್ಮ ಉಲ್ಲಂಘನೆ ಮಾಡಿದವರು ಅಂತಲೇ ನೋಡಲಾಗುತ್ತದೆ. ಮೂಲಪ್ರಶ್ನೆ ಏನೆಂದರೆ, ಯಾವುದು ಯತಿಧರ್ಮ, ಅವರು ಮಾಡಬಹುದಾದ್ದು ಏನು, ಮಾಡಬಾರದ್ದು ಏನು- ಮಾತನಾಡಬಹುದಾದ್ದು ಏನು, ಮಾತನಾಡಬಾರದ್ದು ಏನು ಎಂಬ ಬಗ್ಗೆ ಸ್ಪಷ್ಟತೆ ಬೇಕಾಗಿದೆ.
ಇನ್ನು ಬ್ರಾಹ್ಮಣರ ವಿರುದ್ಧ ಯಾರ ಬೇಕಾದರೂ ಮಾತನಾಡಬಹುದು, ಯಾವುದಕ್ಕೂ ಪ್ರತಿಕ್ರಿಯಿಸಲ್ಲ, ಹಿಂಸಾ ಪ್ರವೃತ್ತಿಯವರಲ್ಲ ಎಂಬ ಮಾತುಗಳಿಗೆ ಇತಿಹಾಸದ ಕೆಲವು ಉದಾಹರಣೆ ನೀಡಬೇಕಾಗುತ್ತದೆ. ಯಾವ ಬ್ರಾಹ್ಮಣರು ಹಿಂಸಾ ಪ್ರವೃತ್ತಿಯವರಲ್ಲ ಎಂಬುದು ದೊಡ್ಡ ಪ್ರಶ್ನೆ. ಯಾಕೆಂದರೆ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಮಾಡಿದ ವ್ಯಕ್ತಿ ಚಿತ್ಪಾವನ ಬ್ರಾಹ್ಮಣನಾದ ನಾಥೂರಾಂ ಗೋಡ್ಸೆ. ಇನ್ನು ಮರಾಠ ಪೇಶ್ವೆಗಳು ದೇಶಸ್ಥ ಬ್ರಾಹ್ಮಣರು. ಅವರಿಂದ ಹಿಂಸೆ- ಯುದ್ಧಗಳು, ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಏನು ಬೇಕು ಅದೆಲ್ಲವೂ ಆಗಿಲ್ಲವಾ? ವೀರ್ ಸಾವರ್ಕರ್ ಚಿತ್ಪಾವನ ಬ್ರಾಹ್ಮಣರಲ್ಲವಾ? ಅವರ ಸ್ವಭಾವದಲ್ಲಿ ಎಲ್ಲವನ್ನೂ ಸಹಿಸಿಕೊಳ್ಳುವ ಗುಣವಿತ್ತಾ? ಇನ್ನು ರಾಜಗುರು- ಅಂದರೆ ಸುಖ್ ದೇವ್ ಹಾಗೂ ಭಗತ್ ಸಿಂಗ್ ಜೊತೆಗೆ ನೇಣಿಗೆ ಏರಿದರಲ್ಲಾ, ಅವರು ಸಹ ಬ್ರಾಹ್ಮಣರು. ಒಳ್ಳೆಯದ್ದಕ್ಕೋ ಕೆಟ್ಟದ್ದಕ್ಕೋ ಹಿಂಸಾಚಾರದಲ್ಲಿ ತೊಡಗಿದ್ದಂಥ- ಕ್ರೌರ್ಯ ತೋರಿದಂಥ ಬ್ರಾಹ್ಮಣರು ಇದ್ದಾರೆ. ಶೈವ- ವೈಷ್ಣವರ ಹೊಡೆದಾಟ ಬಡಿದಾಟ, ಆನೆಗೊಂದಿಯಲ್ಲಿ ವೃಂದಾವನ ಪೂಜೆ- ಆರಾಧನೆ ವಿಚಾರವಾಗಿ ಉತ್ತರಾದಿ ಮಠ ಹಾಗೂ ರಾಘವೇಂದ್ರ ಸ್ವಾಮಿ ಮಠದವರು ದೊಣ್ಣೆಗಳಲ್ಲಿ ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದು ಸಹ ಎಲ್ಲರಿಗೂ ತಿಳಿದ ಇತಿಹಾಸ. ಹಾಗಿರುವಾಗ ಬ್ರಾಹ್ಮಣರು ಯಾರಿಗೂ ತೊಂದರೆ ಕೊಡುವುದಿಲ್ಲ ಅನ್ನೋ ಕಾರಣಕ್ಕೆ ಟೀಕೆ ಮಾಡುತ್ತಾರೆ ಎಂಬ ಮಾತು ಯಾಕೆ ಬರುತ್ತದೆ? ಜಾತಿಗಳು- ಧರ್ಮಗಳಾಚೆಗೆ ಮನುಷ್ಯನ ಮೂಲಸ್ವಭಾವ ಹಾಗೇ ಇರುತ್ತದೆ ಎಂಬುದು ನಿಜ ಅಲ್ಲವಾ?
ಇನ್ನು ಒಳ್ಳೆಯದು ಎಲ್ಲಿಂದ ಬಂದರೂ ಯಾರಿಂದ ಬಂದರೂ ಸ್ವೀಕರಿಸಬೇಕು ಎಂದು ಉಪನಿಷತ್ತಿನಲ್ಲೇ ಇದೆ. ಹಾಗಿದ್ದ ಮೇಲೆ ಅದನ್ನು ನಂಬುವವರು- ಮೆಚ್ಚುವವರು- ತಲೆ ಮೇಲೆ ಹೊತ್ತು ನಡೆಯುವವರಿಂದ, “ನಿಮ್ಮ ಕೆಲಸ ನೀವು ನೋಡಿಕೊಳ್ಳಿ, ನಮಗ್ಯಾಕೆ ಹೇಳೋಕೆ ಬರ್ತೀರಿ” ಎಂಬ ಧ್ವನಿ ಯಾಕೆ ಬರುತ್ತದೆ? ಅವರು ಬುದ್ಧಿಜೀವಿಗಳೋ- ಎಡಪಂಥೀಯರೋ, ನಾಸ್ತಿಕರೋ ಯಾರೇ ಆಗಿರಲಿ, ಅವರು ಒಳ್ಳೆಯದು ಏನನ್ನೂ ಹೇಳುವುದೇ ಇಲ್ಲ ಎಂಬ ಏಕಪಕ್ಷೀಯ ತೀರ್ಮಾನ ಯಾಕೆ? ತಸ್ಲೀಮಾ ನಸ್ರೀನ್ ಥರದವರು ಮುಸ್ಲಿಮರಲ್ಲೂ ಇದ್ದಾರೆ. ಅವರು ಆ ಧರ್ಮದಲ್ಲಿನ ಮೂಢನಂಬಿಕೆ, ಇಬ್ಬಂದಿತನ ಹಾಗೂ ಆಷಾಢಭೂತಿತನ ಪ್ರಶ್ನೆ ಮಾಡುತ್ತಲೇ ಇದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳಲ್ಲಿ ಹಂದಿ ಮಾಂಸ ತಿನ್ನುವ ಮುಸ್ಲಿಂ ಪಾತ್ರ ಇದೆ. ಸಾರಾ ಅಬೂಬಕರ್ ಅವರು ಬರೆದಿರುವ ಕೃತಿಗಳನ್ನು ಓದಿದರೆ ಯಾವುದರ ಬಗ್ಗೆ- ಯಾರ ಬಗ್ಗೆ ಬರೆದಿದ್ದಾರೆ ಎಂಬುದು ಗೊತ್ತಾಗುತ್ತದೆ. “ಅವರನ್ನ ಪ್ರಶ್ನೆ ಮಾಡಿ ನೋಡೋಣ” ಎಂಬುದನ್ನು ಹೇಳುವ ಮುಂಚೆ ಆ ಕಾರ್ಯ ಆಗುತ್ತಲೇ ಇದೆ ಎಂಬುದು ಗೊತ್ತಿದ್ದರೆ ಒಳ್ಳೆಯದು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಹೆಣ್ಣುಮಕ್ಕಳಿಗೆ ಉಚಿತ ಸೀರೆ ನೀಡುವ ಯೋಜನೆ ಇತ್ತು. ಅದನ್ನು ಇಟ್ಟುಕೊಳ್ಳೋಕೆ ಬೀರು ಸಹ ಕೊಡ್ತೀವಿ ಎಂಬ ಮಾತನ್ನು ಅವರು ಹೇಳ್ತಾ ಇದ್ದರು. ಒಂದು ಸರ್ಕಾರ ಮಾಡಬೇಕಾದ ಕೆಲಸ ಇದಾ? ಸೀರೆ ಕೊಡಿಸ್ತೀನಿ, ಬೀರು ಕೊಡಿಸ್ತೀನಿ ಅಂತ. ಈ ರೀತಿ ನಿರ್ಧಾರಗಳನ್ನು ಯಡಿಯೂರಪ್ಪ ಮಾಡಿದರೂ ತಪ್ಪೇ, ಸಿದ್ದರಾಮಯ್ಯ ಮಾಡಿದರೂ ತಪ್ಪೇ. “ಅವರು ಮಾಡಿಲ್ಲವಾ, ಇವರು ಮಾಡಲ್ಲವಾ?” ಎಂಬ ಸಮರ್ಥನೆಯೇ ನಾಚಿಕೆಗೇಡು. ಅದೇ ರೀತಿ ಯಾವ ಜಾತಿಯವರನ್ನು ಮದುವೆ ಮಾಡಿಕೊಳ್ಳಬೇಕು ಎಂಬುದು ಎರಡು ಮನಸ್ಸುಗಳ ತೀರ್ಮಾನ. ಎಷ್ಟು ಮಕ್ಕಳು ಮಾಡಿಕೊಳ್ಳಬೇಕು ಅಂತ ಗಂಡ- ಹೆಂಡತಿ ನಿರ್ಧಾರ ಮಾಡ್ತಾರೆ. ಅದನ್ನು ಒಂದು ಜಾತಿಯೋ- ಧರ್ಮವೋ- ಧರ್ಮಗುರುಗಳೋ ಯಾಕೆ ಹೇಳಬೇಕು? ಕಾಮನ್ ಸೆನ್ಸ್ ಅನ್ನೋ ದೃಷ್ಟಿಯಿಂದಲೂ ಇದು ತಪ್ಪು, ಅವರಿಗೆ ಇರುವ ಧಾರ್ಮಿಕ ಚೌಕಟ್ಟು -ನಿಯಮಾವಳಿಯಿಂದಲೂ ತಪ್ಪು. ಸ್ವಾಮಿಗಳು- ಸನ್ಯಾಸಿಗಳು ಮಾತ್ರವಲ್ಲ, ಗಂಡ- ಹೆಂಡತಿ ಇಬ್ಬರ ನಿರ್ಧಾರವನ್ನು ಬಿಟ್ಟು, ಬೇರೆ ಯಾರು ಹೇಳಿದರೂ ಅದು ತಪ್ಪೇ.
ಬರಹ: ನೀಲಮಾಧವ
(ಗಮನಿಸಿ: ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ. ಈ ಬರಹದ ಕರಡು ತಿದ್ದಿರುವುದು ಬಿಟ್ಟರೆ ಎಚ್‌ಟಿ ಕನ್ನಡದ ಸಿಬ್ಬಂದಿ ಯಾವುದೇ ಅಂಶವನ್ನು ಬದಲಿಸಿಲ್ಲ)