ಸಿಗುವುದಿಲ್ಲವೆಂದು ಭಾವಿಸಿದ್ದ ವಾಚ್ ಕೇಳದೆಯೇ ಕೈವಶವಾಗಿತ್ತು; ರೈಲಿನಲ್ಲಿ ದೊಡ್ಡ ವ್ಯಕ್ತಿಯ ದರ್ಶನ, ವೀರಕಪುತ್ರ ಎಂ ಶ್ರೀನಿವಾಸ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಸಿಗುವುದಿಲ್ಲವೆಂದು ಭಾವಿಸಿದ್ದ ವಾಚ್ ಕೇಳದೆಯೇ ಕೈವಶವಾಗಿತ್ತು; ರೈಲಿನಲ್ಲಿ ದೊಡ್ಡ ವ್ಯಕ್ತಿಯ ದರ್ಶನ, ವೀರಕಪುತ್ರ ಎಂ ಶ್ರೀನಿವಾಸ ಬರಹ

ಸಿಗುವುದಿಲ್ಲವೆಂದು ಭಾವಿಸಿದ್ದ ವಾಚ್ ಕೇಳದೆಯೇ ಕೈವಶವಾಗಿತ್ತು; ರೈಲಿನಲ್ಲಿ ದೊಡ್ಡ ವ್ಯಕ್ತಿಯ ದರ್ಶನ, ವೀರಕಪುತ್ರ ಎಂ ಶ್ರೀನಿವಾಸ ಬರಹ

ನಾವು ದಿನವೂ ಸಮಾಜ ಕೆಟ್ಟೋಯ್ತು ಅಂತ ಬೈಕೊಂಡು ಓಡಾಡ್ತಾ, ಅಂತಹ ಸಮಾಜದ ಭಾಗವಾಗಲು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಯತ್ನಿಸುತ್ತಿರುವಾಗ ಈತ ಮಾತ್ರ ಸಮಾಜ ಕೆಡದಂತಿರಲು ತನ್ನ ಪಾಲನ್ನು ತಾನು ಕೊಡ್ತಾ ಮುಂದುರಿಯುತ್ತಿದ್ದಾನೆ. ಸಮಾಜವನ್ನು ಸಹನೀಯಗೊಳಿಸಿರುವ ಇಂತಹ ದೊಡ್ಡ ಪಡೆಯೇ ಇದೆ ಎಂದು ಬರಹಗಾರ ವೀರಕಪುತ್ರ ಎಂ ಶ್ರೀನಿವಾಸ ಹೇಳುತ್ತಾರೆ.

ವೀರಕಪುತ್ರ ಎಂ ಶ್ರೀನಿವಾಸ (ಎಡ) ಮತ್ತು ಆನಂದಪ್ಪ ಛಲವಾದಿ (ಬಲ)
ವೀರಕಪುತ್ರ ಎಂ ಶ್ರೀನಿವಾಸ (ಎಡ) ಮತ್ತು ಆನಂದಪ್ಪ ಛಲವಾದಿ (ಬಲ)

ಸಮಾಜ ಕಟ್ಟುಹೋಗಿದೆ. ಒಳ್ಳೆಯ ಜನರಿಗಾಗಿ ಹುಡುಕಾಡುವ ಸ್ಥಿತಿ ಬಂದಿದೆ ಎಂದು ಅದೆಷ್ಟೋ ಬಾರಿ ಹೇಳುವುದಿದೆ. ಆದರೆ ಪ್ರಪಂಚ ನಾವಂದುಕೊಂಡಷ್ಟು ಕೆಟ್ಟುಹೋಗಿಲ್ಲ ಎನ್ನುವುದು ಕೂಡಾ ವಾಸ್ತವ. ಆಗಾಗ ಸಜ್ಜನ ವ್ಯಕ್ತಿಗಳ ದರ್ಶನ ಆಗುತ್ತಿರುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲೂ ಇಂಥಾ ಉದಾಹರಣೆಗಳು ಸಿಗುತ್ತವೆ. ಇತ್ತೀಚೆಗೆ ಇಂತಹದೇ ಒಬ್ಬ ದೊಡ್ಡ ವ್ಯಕ್ತಿಯನ್ನು ಭೇಟಿಯಾದ ಬಗ್ಗೆ ಫೇಸ್‌ಬುಕ್‌ನಲ್ಲಿ ವೀರಕಪುತ್ರ ಎಂ ಶ್ರೀನಿವಾಸ ಎಂಬವರು ಹಂಚಿಕೊಂಡಿದ್ದಾರೆ. ರೈಲಿನಲ್ಲಿ ಕಳೆದುಕೊಂಡಿದ್ದ ವಾಚ್‌ ಅನ್ನು ಅದೇ ರೈಲಿನ ಸಿಬ್ಬಂದಿಯೊಬ್ಬರು ಅಚ್ಚರಿಯ ರೀತಿಯಲ್ಲಿ ಮರಳಿಸಿರುವ ಕತೆ ಇದು. ಮುಂದಿರುವುದೇ ವೀರಕಪುತ್ರ ಎಂ ಶ್ರೀನಿವಾಸ ಅವರ ಬರಹ.

ಎಂತೆಂಥಾ ಜನರಿರ್ತಾರೆ

ಕಳೆದ ಶುಕ್ರವಾರ ಬಾಗಲಕೋಟೆಗೆ ಗೋಲ್‌ಗುಂಬಜ್ ರೈಲಿನ ಮೂಲಕ ಹೋಗುವುದೆಂದು ನಿರ್ಧಾರ ಮಾಡಿದ್ದೆ. ನಾನು ನನ್ನ ಕ್ಯಾಬಿನ್‌ಗೆ ಹೋದಾಗ, ನನ್ನ ಆಸನದ ಎದುರಿನ ಆಸನದಲ್ಲಿ ಬಾಗಲಕೋಟೆಯ ವಿಧಾನಪರಿಷತ್ತಿನ ಸದಸ್ಯರು ಕೂತಾಗಿತ್ತು. ನಿಧಾನಕ್ಕೆ ಅವರ ಜೊತೆ ಪರಿಚಯ ಬೆಳೆದು, ಅದೂ ಇದೂ ಅಂತ ಮಾತಾಡಿ ಮಲಗಿದಾಗ ರಾತ್ರಿ ಹನ್ನೊಂದು ಗಂಟೆ. ಇನ್ನೂ ಕಣ್ಣು ಎಳೆಯುತ್ತಿರುವಾಗಲೇ ಬಾಗಲಕೋಟೆ ಬಂದುಬಿಟ್ಟಿತು. ಆಗ ಬೆಳಗ್ಗೆ ಐದೂವರೆ ಸಮಯ. ಮೈಮೇಲೆ ಪ್ರಜ್ಞೆ ಇಲ್ಲದಷ್ಟು ನಿದ್ದೆ ಮಾಡಿದ್ದೆ. ಅಷ್ಟು ಚಂದದ ನಿದ್ದೆ. ಎಂಎಲ್‌ಸಿ ಅವರ ಸಹಾಯಕ ಬಂದು ಗಡಿಬಿಡಿ ಮಾಡಿದ್ದರಿಂದ ನಾನೂ ಸಹ ಆತುರಾತುರವಾಗಿ ಲಗೇಜು ಹಿಡಿದು ಕೆಳಗಿಳಿಯಲು ಹೊರಟೆ. ಅಷ್ಟರಲ್ಲಿ ಆ ಎಂಎಲ್‌ಸಿ ಮತ್ತು ನಾನು ರಾತ್ರಿ ನಿಲ್ಲಿಸಿದ್ದ ವಿಷಯವನ್ನು ಮತ್ತೆ ಮಾತನಾಡಲಾರಂಭಿಸಿದೆವು. ಅವರಿಗೆ ಉತ್ತರಿಸುವ ಉತ್ಸಾಹದಲ್ಲಿ ನನ್ನ ವಾಚ್ ಅನ್ನು ದಿಂಬಿನ ಪಕ್ಕದಲ್ಲೇ ಬಿಟ್ಟು ಇಳಿದುಬಿಟ್ಟೆ. ಆದ್ರೆ ಅದನ್ನು ಮರೆತ ವಿಷಯ ನನಗೆ ನೆನಪಾಗಿದ್ದು ಒಂದೆರಡು ಗಂಟೆಗಳು ಆದ ಮೇಲೆ.

ಅಷ್ಟೊತ್ತಿಗೆ ರೈಲು ಅದೆಷ್ಟು ದೂರ ಹೋಗಿರುತ್ತೋ ಏನೋ? ವಿಮಾನ ನಿಲ್ದಾಣದಲ್ಲಾದರೆ ಲಾಸ್ಟ್ ಅಂಡ್ ಫೌಂಡ್ ಎಂಬ ವಿಭಾಗವಿರುತ್ತದೆ. ಅಲ್ಲಿ ಎಲ್ಲವೂ ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ನಡೆಯುತ್ತದೆ. ಆದ್ದರಿಂದ ಅಲ್ಲಿ ಏನೇ ಕಳೆದುಕೊಂಡರೂ ಮತ್ತೆ ಸಿಗುವ ಸಾಧ್ಯತೆಗಳಿರುತ್ತವೆ. ಆದ್ರೆ ಸಾವಿರಾರು ಜನರು ದಿನವೂ ಹತ್ತಿ ಇಳಿಯುವ ರೈಲಿನಂತಹ ಜಾಗದಲ್ಲಿ ಕಳೆದುಕೊಂಡಿದ್ದನ್ನು ಮತ್ತೆ ಪಡೆದುಕೊಳ್ಳುವುದೆಂದರೆ ಹೇಗೆ ಸಾಧ್ಯ? ಸಾಧ್ಯತೆಗಳನ್ನೆಲ್ಲಾ ನೆನೆದು ಆ ವಾಚಿನ ಆಸೆ ಬಿಟ್ಟುಬಿಟ್ಟೆ.

ನಿನ್ನೆ ಬಾಗಲಕೋಟೆಯಲ್ಲಿ ಎಲ್ಲಾ ಕೆಲಸ ಮುಗಿಸಿ, ಮತ್ತದೇ ಗೋಲ್‌ಗುಂಬಜ್ ರೈಲಿನ ಮೂಲಕ ಬೆಂಗಳೂರಿಗೆ ಬರುವುದು ನನ್ನ ಟೂರ್ ಪ್ಲಾನ್ ಆಗಿತ್ತು. ನನಗೆ ವಾಚಿನ ಯಾವುದೇ ಆಸೆ ಇರಲಿಲ್ಲವಾದ್ದರಿಂದ, ಅದರ ಬಗ್ಗೆ ವಿಚಾರಿಸುವ ಗೊಡವೆಗೆ ಹೋಗದೆ, ನನ್ನ ಪಾಡಿಗೆ ನಾನು ಸೀಟು ಹಿಡಿದು ಕೂತುಬಿಟ್ಟೆ. ರಾತ್ರಿ ಒಂಬತ್ತೂವರೆ ಸುಮಾರಿಗೆ ಹೊಟ್ಟೆ ಹಸಿವು ಶುರುವಾಯ್ತು. ರೈಲಿನಲ್ಲಿ ಊಟದ ವ್ಯವಸ್ಥೆ ಇದೆಯೋ ಅಥವಾ ಮುಂದೆ ಎಲ್ಲಾದರೂ ನಿಲ್ಲಿಸುವರೋ ಎಂದು ವಿಚಾರಿಸಲು ನನ್ನ ಆಸನದಿಂದೆದ್ದು ರೈಲ್ವೇ ಸಿಬ್ಬಂದಿಯನ್ನು ಹುಡುಕಿ ಹೊರಟೆ. ನನ್ನ ಬೋಗಿಯ ಕೊನೆಯಲ್ಲಿ ಸಿಬ್ಬಂದಿಗಾಗಿಯೇ ಮಾಡಿದ್ದ ವಿಶೇಷ ಜಾಗದಲ್ಲಿ ಇಬ್ಬರು ಹುಡುಗರು ಮೊಬೈಲಿನಲ್ಲಿ ರೀಲ್ಸ್ ನೋಡ್ತಾ ಇದ್ದರು. ಅವರೆಷ್ಟು ಮಗ್ನರಾಗಿದ್ದರೆಂದರೆ, ನಾನು ಹೋಗಿದ್ದೂ ಅವರ ಗಮನಕ್ಕೆ ಬರಲಿಲ್ಲ.

ಹಣ ಸ್ವೀಕರಿಸದೆ ದೊಡ್ಡವನಾದ ವ್ಯಕ್ತಿ

ವಿಧಿಯಿಲ್ಲದೆ ಭುಜಮುಟ್ಟಿ ಕರೆದಾಗ, ಆ ಇಬ್ಬರಲ್ಲಿ ಒಬ್ಬ ಹುಡುಗ ನನ್ನನ್ನು ಅನುಮಾನದಿಂದ ನೋಡಿದ. ಒಂದೈದಾರು ಸೆಕೆಂಡಿನ ನಂತರ "ಸರ, ನಿನ್ನೆ ನೀವು ಇದೇ ಟ್ರೈನಿನಲ್ಲಿ ಬಂದ್ರಲ್ವಾ" ಅಂತ ಪ್ರಶ್ನೆ ಮಾಡ್ದ. “ಹೌದಪ್ಪಾ ಇದೇ ಟ್ರೈನಿನಲ್ಲಿ ಬಂದಿದ್ದು, ಇಲ್ಲೇ ನನ್ನ ವಾಚ್ ಕಳ್ಕೊಂಡಿದ್ದು ಅಂತ ತಮಾಷೆಯಾಗಿ ಹೇಳ್ದೆ”. ಆ ಹುಡುಗ ದಿಢೀರನೇ ಎದ್ದು, ಲಾಕರ್ ತೆಗೆದು ನನ್ನ ವಾಚ್ ನನ್ನ ಕೈಗಿಟ್ಟ! ಇನ್ನು ಸಿಗುವುದೇ ಇಲ್ಲವೆಂದು ಭಾವಿಸಿದ್ದ ವಾಚ್, ಕೇಳದೆಯೇ ಕೈವಶವಾಗಿತ್ತು. ಆ ಹುಡುಗನ ಹೆಸರು ಆನಂದಪ್ಪ ಛಲವಾದಿ. ಆತನ ಬಗ್ಗೆ ಇನ್ನಿಲ್ಲದಷ್ಟು ಗೌರವ ಭಾವ ಬಂತು. ಹಾಗೆ, ತಬ್ಬಿ ಥ್ಯಾಂಕ್ಸ್ ಹೇಳಿ, ಎಲ್ಲರೂ ಮಾಡುವಂತೆ ಚೂರು ಹಣ ಕೊಡಲು ಮುಂದಾದೆ. ಆತ ನಯವಾಗಿ ನಿರಾಕರಿಸಿ, ಇದು ನನ್ನ ಕೆಲಸ ಸರ್ ಅಂದುಬಿಟ್ಟ! ಅವನು ಮತ್ತಷ್ಟು ದೊಡ್ಡವನಾದ.

ಇಲ್ಲಿದೆ ಮೂಲ ಪೋಸ್ಟ್

ನಾವು ದಿನವೂ ಸಮಾಜ ಕೆಟ್ಟೋಯ್ತು ಅಂತ ಬೈಕೊಂಡು ಓಡಾಡ್ತಾ, ಅಂತಹ ಸಮಾಜದ ಭಾಗವಾಗಲು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಯತ್ನಿಸುತ್ತಿರುವಾಗ ಈತ ಮಾತ್ರ ಸಮಾಜ ಕೆಡದಂತಿರಲು ತನ್ನ ಪಾಲನ್ನು ತಾನು ಕೊಡ್ತಾ ಮುಂದುರಿಯುತ್ತಿದ್ದಾನೆ. ಸಮಾಜವನ್ನು ಸಹನೀಯಗೊಳಿಸಿರುವ ಇಂತಹ ದೊಡ್ಡ ಪಡೆಯೇ ಇದೆ. ಕೆಡುಕಿಗೆ ಸಿಕ್ಕಷ್ಟೇ ಪ್ರಚಾರ ಒಳ್ಳೆಯದಕ್ಕೆ ಸಿಕ್ಕಾಗ ಸಮಾಜ ಎಷ್ಟು ಚೆನ್ನಾಗಿದೆ ಅನ್ನಿಸೋಕೆ ಶುರುವಾಗುತ್ತೆ. ಆ ದೊಡ್ಡ ವ್ಯಕ್ತಿಯ ಪಟ ಕ್ಲಿಕ್ಕಿಸಿ, ಫೋನ್ ನಂಬರ್ ತೆಗೆದುಕೊಂಡು ಬಂದೆ. ನೋಡೋಣ ಮುಂದೆ.

Whats_app_banner