ಕನ್ನಡ ಸುದ್ದಿ  /  Karnataka  /  Opp Show Of Strength Recalling Hd Kumaraswamy Oathtaking Ceremony On The Eve Of Karnataka Cm Siddaramaiah Oathtaking Uks

Opp Show of Strength: ವಿಪಕ್ಷ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿತ್ತು ಕುಮಾರಸ್ವಾಮಿ ಪ್ರಮಾಣವಚನ; ಕುತೂಹಲ ಕೆರಳಿಸಿದ ಸಿದ್ದರಾಮಯ್ಯ ಪ್ರಮಾಣ

Opp Show of Strength: ಕರ್ನಾಟಕ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ವಿಪಕ್ಷ ಮಹಾಮೈತ್ರಿಗೆ ಈ ಕಾರ್ಯಕ್ರಮ ವೇದಿಕೆಯಾಗುವ ನಿರೀಕ್ಷೆ ಇದೆ. ಐದು ವರ್ಷದ ಹಿಂದೆ ಇಂಥದ್ದೇ ಪ್ರಯತ್ನ ಆಗಿತ್ತು. ಆ ಇತಿಹಾಸದ ಕಡೆಗೊಂಡು ಇಣುಕುನೋಟ.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ 2018ರಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗ ವಿಧಾನಸೌಧದ ಎದುರು ವಿಪಕ್ಷ ಮೈತ್ರಿಯ ನಾಯಕರ ಒಗ್ಗಟ್ಟು ವ್ಯಕ್ತವಾದ ಕ್ಷಣ. (ಕಡತ ಚಿತ್ರ)
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ 2018ರಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗ ವಿಧಾನಸೌಧದ ಎದುರು ವಿಪಕ್ಷ ಮೈತ್ರಿಯ ನಾಯಕರ ಒಗ್ಗಟ್ಟು ವ್ಯಕ್ತವಾದ ಕ್ಷಣ. (ಕಡತ ಚಿತ್ರ) (KPCC )

ಸಿದ್ದರಾಮಯ್ಯ (Siddaramaiah) ಅವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿ (Chief Minister of Karnataka) ಯಾಗಿ ಇಂದು (ಮೇ 20 ಮಧ್ಯಾಹ್ನ 12.30) ಪ್ರಮಾಣ ವಚನ (Oath Taking) ಸ್ವೀಕರಿಸುವವರಿದ್ದಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ಮತ್ತೊಮ್ಮೆ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಟ್ಟುಸೇರಿಸುವ ಪ್ರಯತ್ನದ ವೇದಿಕೆಯಾಗಿ ಈ ಪ್ರಮಾಣ ವಚನ ಕಾರ್ಯಕ್ರಮ ಬಳಕೆಯಾಗುತ್ತಿದೆ. ಈ ಸನ್ನಿವೇಶದಲ್ಲಿ ಐದು ವರ್ಷದ ಹಿಂದೆ ನಡೆದ ಪ್ರಯತ್ನದ ಒಂದು ಕಿರು ಅವಲೋಕನ ಇದು.

ಸಿದ್ದರಾಮಯ್ಯ ಮೊದಲ ಸಲ ಮುಖ್ಯಮಂತ್ರಿಯಾಗಿ ಪೂರ್ಣ ಅವಧಿ ಪೂರ್ಣಗೊಳಿಸಿ (2013-2018) ಚುನಾವಣೆ ಎದುರಿಸಿದ್ದರು. ಅಂದು ಫಲಿತಾಂಶ ಬಂದಾಗ ಬಿಜೆಪಿ ಗರಿಷ್ಠ 104 ಸ್ಥಾನ ಗೆದ್ದುಕೊಂಡು ಸರ್ಕಾರ ರಚನೆಗೆ ಅವಕಾಶ ಕೋರಿತು. ಬಿಎಸ್‌ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆ ಆಯಿತು. ಆದರೆ ಬಹುಮತ ಸಾಬೀತು ಮಾಡುವುದರೊಳಗೆ ಅದು ಸಾಧ್ಯವಾಗದ ಕಾರಣ ರಾಜೀನಾಮೆ ನೀಡಿದರು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಎಚ್‌.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿಯಾದರು. ಡಾ.ಜಿ.ಪರಮೇಶ್ವರ ಉಪಮುಖ್ಯಮಂತ್ರಿಯಾದರು.

ಆ ಸಂದರ್ಭ ಕೂಡ 2019ರ ಲೋಕಸಭೆ ಚುನಾವಣೆಗೆ ವರ್ಷ ಅಂತರದಲ್ಲಿತ್ತು. ಕೇಂದ್ರದಲ್ಲಿ ಬಿಜೆಪಿಗೆ ಸರಿಯಾದ ಎದುರಾಳಿ ಪಕ್ಷ ಇಲ್ಲದ ಕಾರಣ, ಎಲ್ಲ ಪಕ್ಷಗಳು ಮೈತ್ರಿ ಮಾಡಿಕೊಂಡು ಎದುರಿಸುವುದು ಸೂಕ್ತ ಎಂಬ ಅಭಿಪ್ರಾಯ ಆಗಲೂ ಇತ್ತು. ಹೀಗಾಗಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುತುವರ್ಜಿ ತೆಗೆದುಕೊಂಡು ಮಹಾಮೈತ್ರಿ ಮಾಡಿಕೊಳ್ಳಲು ಒಂದು ವೇದಿಕೆಯನ್ನಾಗಿ ಪ್ರಮಾಣವಚನ ಕಾರ್ಯಕ್ರಮವನ್ನು ಬಳಸಿಕೊಂಡರು.

ಕುಮಾರಸ್ವಾಮಿಯವರೇ ಖುದ್ದು ದೆಹಲಿಗೆ ಮತ್ತು ಇತರೆ ರಾಜ್ಯಗಳ ರಾಜಧಾನಿಗೆ ಹೋಗಿ ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮಮತಾ ಬ್ಯಾನರ್ಜಿ ಮುಂತಾದವರಿಗೆಲ್ಲ ಪ್ರಮಾಣ ವಚನ ಕಾರ್ಯಕ್ರಮದ ಆಹ್ವಾನ ಕೊಟ್ಟು ಬಂದರು. 2018ರ ಮೇ 23ರಂದು ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ, ಡಾ.ಜಿ.ಪರಮೇಶ್ವರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ವಿಪಕ್ಷ ಮೈತ್ರಿಯ ನಾಯಕರೆಲ್ಲ ವೇದಿಕೆ ಏರಿ ಕೈ ಕೈ ಹಿಡಿದು ಮೇಲೆತ್ತು ಒಗ್ಗಟ್ಟು ಪ್ರದರ್ಶಿಸಿದ್ದು ಹೈಲೈಟ್‌ ಆಗಿತ್ತು. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಹಾಗೂ ತೃಣಮೂಲ ಕಾಂಗ್ರೆಸ್ ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್ ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಎಡಪಕ್ಷಗಳ ನಾಯಕರು ಕೂಡ ಈ ಮೈತ್ರಿಯ ಭಾಗವಾಗಿದ್ದರು. ಲೋಕಸಭೆ ಚುನಾವಣೆಯ ಮಹಾಮೈತ್ರಿಗೆ ಇದು ಮುನ್ನುಡಿ ಎಂದೇ ವಿಶ್ಲೇಷಣೆ ಮಾಡಲಾಗಿತ್ತು.

ಆದರೆ, ಈ ಮಹಾಮೈತ್ರಿ ವರ್ಕ್‌ಔಟ್‌ ಆಗಲಿಲ್ಲ. ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ ರಹಿತ ಮೈತ್ರಿ ಬಯಸಿದ್ದವು. 2019ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷ ಮೈತ್ರಿ ಕನಸು ನನಸಾಗದೇ ಬಿಜೆಪಿ ಮತ್ತೆ ತನ್ನ ಫಲಿತಾಂಶವನ್ನು ಉತ್ತಮಗೊಳಿಸಿತು. ಮಮತಾ ಬ್ಯಾನರ್ಜಿ ಕಾಂಗ್ರೆಸ್‌ ಪಕ್ಷದಿಂದ ದೂರ ಉಳಿದರು.

ಈ ಸಲ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸಿಕ್ಕ ಸ್ಪಷ್ಟ ಬಹುಮತ ನೋಡಿ ಮಮತಾ ಬ್ಯಾನರ್ಜಿ ಸ್ವಲ್ಪ ವಿಚಲಿತರಾಗಿದ್ದು, ಲೋಕಸಭಾ ಚುನಾವಣೆಗೆ ಮೈತ್ರಿ ಬಯಸಿದ್ದು ಸ್ಪಷ್ಟವಾಗಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ ನಾಯಕರು ಕೂಡ ಭಾರತ್‌ ಜೋಡೋ ಯಾತ್ರೆಯ ಯಶಸ್ಸು, ಕರ್ನಾಟಕ ಚುನಾವಣೆಯ ಯಶಸ್ಸಿನಿಂದ ಉತ್ಸಾಹ ಹೆಚ್ಚಿಸಿಕೊಂಡು 2024 ಲೋಕಸಭೆ ಚುನಾವಣೆ ಎದುರಿಸಲು ಸಜ್ಜಾಗತೊಡಗಿದ್ದಾರೆ.

ಆದ್ದರಿಂದಲೇ ಸಿದ್ದರಾಮಯ್ಯ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ವಿಪಕ್ಷ ಮೈತ್ರಿಯ ನಾಯಕರೆಲ್ಲರನ್ನೂ ಆಹ್ವಾನಿಸಲಾಗಿದೆ. ಬಹುತೇಕರು ಬರಲು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ, ಕರ್ನಾಟಕದ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮ ಮತ್ತೊಮ್ಮೆ ವಿಪಕ್ಷ ಮಹಾಮೈತ್ರಿಗೆ ಬುನಾದಿಯಾಗುವುದೇ ಎಂಬ ಕುತೂಹಲ ಸದ್ಯಕ್ಕಿದೆ.

IPL_Entry_Point