ಅಡಕೆ ಹಾನಿಕಾರಕವಲ್ಲ, ತಾಂಬೂಲ ಜಗಿದರೆ ಏನೂ ಆಗಲ್ಲ ಎಂದಿವೆ 5 ವೈಜ್ಞಾನಿಕ ಅಧ್ಯಯನ ವರದಿ, ಅನುಮಾನಕ್ಕೀಡಾಯಿತು ಐಎಆರ್‌ಸಿ ಅಧ್ಯಯನ ವರದಿ
ಕನ್ನಡ ಸುದ್ದಿ  /  ಕರ್ನಾಟಕ  /  ಅಡಕೆ ಹಾನಿಕಾರಕವಲ್ಲ, ತಾಂಬೂಲ ಜಗಿದರೆ ಏನೂ ಆಗಲ್ಲ ಎಂದಿವೆ 5 ವೈಜ್ಞಾನಿಕ ಅಧ್ಯಯನ ವರದಿ, ಅನುಮಾನಕ್ಕೀಡಾಯಿತು ಐಎಆರ್‌ಸಿ ಅಧ್ಯಯನ ವರದಿ

ಅಡಕೆ ಹಾನಿಕಾರಕವಲ್ಲ, ತಾಂಬೂಲ ಜಗಿದರೆ ಏನೂ ಆಗಲ್ಲ ಎಂದಿವೆ 5 ವೈಜ್ಞಾನಿಕ ಅಧ್ಯಯನ ವರದಿ, ಅನುಮಾನಕ್ಕೀಡಾಯಿತು ಐಎಆರ್‌ಸಿ ಅಧ್ಯಯನ ವರದಿ

Oral Cancer: ಅಡಕೆ ಕ್ಯಾನ್ಸರ್ ಕಾರಕ ಎಂಬ ಐಎಆರ್‌ಸಿ ಅಧ್ಯಯನ ವರದಿ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಹಳೆಯ ವೈಜ್ಞಾನಿಕ ವರದಿಗಳಿಗೆ ವ್ಯತಿರಿಕ್ತವಾದ ವರದಿ ಇದು. ಅಡಕೆ ಹಾನಿಕಾರಕವಲ್ಲ, ತಾಂಬೂಲ ಜಗಿದರೆ ಏನೂ ಆಗಲ್ಲ ಎಂದು 5 ವೈಜ್ಞಾನಿಕ ಅಧ್ಯಯನ ವರದಿಗಳು ಹೇಳಿವೆ. ಅವುಗಳ ವಿವರ ಇಲ್ಲಿದೆ. (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)

ಅಡಕೆ ಹಾನಿಕಾರಕವಲ್ಲ, ತಾಂಬೂಲ ಜಗಿದರೆ ಏನೂ ಆಗಲ್ಲ ಎಂದಿವೆ 5 ವೈಜ್ಞಾನಿಕ ಅಧ್ಯಯನ ವರದಿಗಳು. ಹೀಗಾಗಿ, ಐಎಆರ್‌ಸಿ ಅಧ್ಯಯನ ವರದಿ  ಅನುಮಾನಕ್ಕೀಡಾಗಿದೆ. (ಸಾಂಕೇತಿಕ ಚಿತ್ರ)
ಅಡಕೆ ಹಾನಿಕಾರಕವಲ್ಲ, ತಾಂಬೂಲ ಜಗಿದರೆ ಏನೂ ಆಗಲ್ಲ ಎಂದಿವೆ 5 ವೈಜ್ಞಾನಿಕ ಅಧ್ಯಯನ ವರದಿಗಳು. ಹೀಗಾಗಿ, ಐಎಆರ್‌ಸಿ ಅಧ್ಯಯನ ವರದಿ ಅನುಮಾನಕ್ಕೀಡಾಗಿದೆ. (ಸಾಂಕೇತಿಕ ಚಿತ್ರ)

Oral Cancer: ದಕ್ಷಿಣ ಕನ್ನಡ, ಮಲೆನಾಡು ಅಷ್ಟೇ ಅಲ್ಲ ಭಾರತದ ಕೃಷಿ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಅಡಿಕೆ ಬೆಳೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಅಂಗಸಂಸ್ಥೆ ಇತ್ತೀಚೆಗೆ ನೀಡಿರುವ ವರದಿಯಲ್ಲಿ ಅಡಕೆಯನ್ನು ಕ್ಯಾನ್ಸರ್ ಕಾರಕ ಎಂಬರ್ಥ ಬರುವ ರೀತಿಯಲ್ಲಿ ಉಲ್ಲೇಖಿಸಿರುವುದು ಅಡಕೆ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಆದರೆ, ಈ ಕುರಿತು ಹಿರಿಯ ವಿಜ್ಞಾನಿ ಹಾಗೂ ಕ್ಯಾಂಪ್ಕೊದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಂಯೋಜಕ ಡಾ. ಸರ್ಪಂಗಳ ಕೇಶವ ಭಟ್ ಅವರು ಹಲವು ವೈಜ್ಞಾನಿಕ ಸಂಶೋಧನೆ ಕುರಿತು ಬೆಳಕು ಚೆಲ್ಲಿದ್ದು, ತಾಂಬೂಲ ಜಗಿಯುವುದಷ್ಟೇ ಅಲ್ಲ ಅಡಿಕೆಯೂ ಹಾನಿಕಾರಕವಲ್ಲ ಎಂದು ಹೇಳಿದ್ದಾರೆ.

ಅಡಿಕೆ ಜಗಿಯುವುದು ಮಾನವನ ಆರೋಗ್ಯಕ್ಕೆ ಹಾನಿಕಾರಕ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಬಿಂಬಿಸುವ ಹಲವಾರು ಲೇಖನಗಳನ್ನು ನಾವು ಈಗ ಕೆಲವು ವರ್ಷಗಳಿಂದ ಕಾಣುತ್ತೇವೆ. ಇದಕ್ಕೆ ತದ್ವಿರುದ್ಧವಾಗಿ, ಬರೀ ಅಡಿಕೆ ಅಥವಾ ತಂಬಾಕು ಇಲ್ಲದ ತಾಂಬೂಲ ಜಗಿಯುವುದು ಮಾನವನ ಆರೋಗ್ಯಕ್ಕೆ ಒಳ್ಳೆಯದು ಮತ್ತು ಯಾವುದೇ ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ ಎನ್ನುವ ವೈಜ್ಞಾನಿಕ ಲೇಖನಗಳೂ ಬಹಳಸ್ಟಿವೆ. ಆದರೆ, ಅಂತಹ ಸಂಶೋಧನಾ ಪ್ರಕಟಣೆಗಳು ಇದ್ದರೂ ಅವುಗಳಿಗೆ ಅಷ್ಟೊಂದು ಪ್ರಚಾರ ಸಿಕ್ಕದಿರುವುದು ಖೇದಕರ. ನಮ್ಮೆಲ್ಲರ, ಅದರಲ್ಲೂ ವಿಶೇಷವಾಗಿ ಅಡಿಕೆ ಬೆಳೆಗಾರರ ಮತ್ತು ಸಂಶೋಧಕರ ಅವಲೋಕನಕ್ಕಾಗಿ ಅಂತಹ ಕೆಲವು ಪ್ರಮುಖ ಸಂಶೋಧನಾ ಪ್ರಬಂಧಗಳನ್ನು ಡಾ. ಕೇಶವ ಭಟ್ ಉಲ್ಲೇಖಿಸಿದ್ದಾರೆ.

ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನಗಳು

1) "ಫೇಲ್ಯೂರ್ ಟು ಪ್ರೊಡ್ಯೂಸ್‌ ಟ್ಯೂಮರ್ಸ್ ಇನ್ ದ ಹ್ಯಾಮ್‌ಸ್ಟರ್ ಚೀಕ್ ಪೌಚ್‌ ಬೈ ಎಕ್ಸ್‌ಪೋಷರ್‌ ಟು ಇಂಗ್ರಿಟಿಯೆಂಟ್ಸ್‌ ಆಫ್ ಬೀಟೆಲ್ ಕ್ವಿಡ್‌…." ಎನ್ನುವ ಒಂದು ವೈಜ್ಞಾನಿಕ ಅಧ್ಯಯನದ ಫಲಿತಾಂಶವನ್ನು ಅಮೆರಿಕದ ಮೇರಿಲ್ಯಾಂಡ್ ನಲ್ಲಿರುವ ನೇಷನಲ್ ಕ್ಯಾನ್ಸರ್ ರೀಸರ್ಚ್ ಇನ್ಸ್ಟಿಟ್ಯೂಟ್ ನ ಡಾ. ದುನ್ ಹಮ್ ಮತ್ತು ಹೆರಾಲ್ಡ್ ಎಂಬ ವಿಜ್ಞಾನಿಗಳು " ಜರ್ನಲ್ ಆಫ್ ದ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌" ನ 1962 ನೇ ಆವೃತ್ತಿಯ (Vol 29 No 6) 1047 ರಿಂದ 1067 ವರೆಗಿನ ಪುಟಗಳಲ್ಲಿ ಪ್ರಕಟಿಸಿದ್ದಾರೆ. ಅವರ ಅಧ್ಯಯನದಲ್ಲಿ ಅಡಿಕೆ, ವೀಳ್ಯದೆಲೆ, ಸುಣ್ಣ ಮತ್ತು ಇತರ ಕೆಲವು ವಸ್ತುಗಳನ್ನು ಬೇರೆ ಬೇರೆಯಾಗಿಯೂ ಮತ್ತು ಸಮೂಹವಾಗಿಯೂ ಹಾಮ್ ಸ್ಟರ್ ಎನ್ನುವ ಮೂಷಿಕಗಳ ಬಾಯಿಯ ಒಳ ಚೀಲಗಳಲ್ಲಿ ಅವುಗಳ ಜೀವನ ಪರ್ಯಂತ ಇಟ್ಟು ನೋಡಿದಾಗಲೂ ಯಾವುದೇ ರೀತಿಯ ಬಾಯಿ ಕ್ಯಾನ್ಸರ್ ಕಂಡು ಬರಲಿಲ್ಲ ಎಂಬುದಾಗಿ ಹೇಳಿದ್ದನ್ನು ಡಾ. ಕೇಶವ ಭಟ್ ಉಲ್ಲೇಖಿಸಿದ್ದಾರೆ.

2) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ವಿಕ್ಟೋರಿಯಾ ಹಾಸ್ಪಿಟಲ್ ನ ಡಾ. ಲಲಿತಾ ಕುಮಾರಿ ಮತ್ತು ಅವರ ಬಳಗ ಚಿಕ್ಕಿಲಿಗಳ ಮೇಲೆ ನಡೆಸಿದ ಒಂದು ವೈಜ್ಞಾನಿಕ ಅಧ್ಯಯನದಲ್ಲಿ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಬದಲು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದಾಗಿ ಹೇಳಿದ್ದಾರೆ. ಅವರು ಒಂದು ಗುಂಪಿನ ಚಿಕ್ಕಿಲಿಗಳ ಚರ್ಮಕ್ಕೆ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕ ಬೆನ್‌ಝಿಪಿರೈನ್‌ (benzpyrine (bp)) ನನ್ನು ಮಾತ್ರ ಹಚ್ಚಿದ್ದರು. ಇನ್ನೊಂದು ಗುಂಪಿನ ಚಿಕ್ಕಿಲಿಗಳಿಗೆ ಆ ರಾಸಾಯನಿಕ ಹಚ್ಚಿ ಆನಂತರ ಆ ಜಾಗದ ಮೇಲೆ ಅಡಿಕೆಯ ಸಾರವನ್ನೂ ಹಚ್ಚಿದ್ದರು. ಈ ಪ್ರಯೋಗದಲ್ಲಿ ಬರೀ bp ಹಚ್ಚಿದ ಚಿಕ್ಕಿಲಿಗಳಲ್ಲಿ 31 ನೇ ವಾರಕ್ಕೆ ಕ್ಯಾನ್ಸರ್ ಬೆಳವಣಿಗೆ ಕಂಡು ಬಂದು 39 ನೇ ವಾರದಲ್ಲಿ ಎಲ್ಲಾ ಚಿಕ್ಕಿಲಿಗಳಲ್ಲೂ ಕ್ಯಾನ್ಸರ್ ಗೋಚರಿಸಿದವು. ಆದರೆ, bp ಹಚ್ಚಿದ ನಂತರ ಅದರ ಮೇಲೆ ಅಡಿಕೆಯ ಸಾರ ಹಚ್ಚಿದ ಚಿಕ್ಕಿಲಿಗಳಲ್ಲಿ 40ನೇ ವಾರದವರೆಗೂ ಏನೊಂದೂ ಕ್ಯಾನ್ಸರ್ ಲಕ್ಷಣಗಳು ಗೋಚರಿಸಲಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ತಂಬಾಕು ಬೆರೆಸದ ತಾಂಬೂಲದ ಸಾರ ಉಪಯೋಗಿಸಿದಾಗಲೂ ಇದೇ ರೀತಿಯ ಫಲಿತಾಂಶ ಅವರಿಗೆ ಸಿಕ್ಕಿತ್ತು. ಇನ್ನೂ ಮುಂದುವರೆದು, ರೋಗ ನಿರೋಧಕ ಶಕ್ತಿ ಕುಂದಿದ ಚಿಕ್ಕಿಲಿಗಳಲ್ಲೂ ಅಡಿಕೆಯ ಸಾರ ಕ್ಯಾನ್ಸರನ್ನು ಉಂಟುಮಾಡಲಿಲ್ಲ ಎಂಬುದಾಗಿಯೂ ಅವರು ಕಂಡುಕೊಂಡಿದ್ದಾರೆ. ಈ ಎಲ್ಲಾ ವಿಷಯಗಳನ್ನು ವಿವರವಾಗಿ 1974 ರ 'ಇಂಡಿಯನ್ ಜರ್ನಲ್‌ ಆಫ್ ಪ್ಲಾಂಟೇಷನ್ ಕ್ರಾಪ್ಸ್' (Vol 2, No 1) ಎಂಬ ವೈಜ್ಞಾನಿಕ ನಿಯತಕಾಲಿಕದ 23 ರಿಂದ 29 ನೇ ಪುಟಗಳಲ್ಲಿ "ಇನ್‌ಹಿಬಿಟರಿ ಆಕ್ಟಿವಿಟಿ ಆಫ್ ಅರೇಕಾ ಕ್ಯಾಚೂ ಆನ್‌ ಡೆವಲಪ್‌ಮೆಂಟ್ ಆಫ್ ಮೌನ್ಸ್ ಸ್ಕಿನ್‌ ಟ್ಯೂಮರ್ಸ್‌…." ಎಂಬ ಶಿರೋನಾಮೆಯಲ್ಲಿ ಪ್ರಕಟಿಸಿರುವ ಕುರಿತು ಡಾ. ಕೇಶವ ಭಟ್ ಗಮನ ಸೆಳೆದಿದ್ದಾರೆ.

ಮಾನವನ ಮೇಲೆ ಮಾಡಿದ ಅಧ್ಯಯನಗಳು

3) ಮದ್ರಾಸ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನ ಡಾ. ಶಾಂತ ಮತ್ತು ಡಾ. ಕೃಷ್ಣಮೂರ್ತಿ ಯವರು ಮಾಡಿದಂತಹ ಒಂದು ವೀಕ್ಷಣಾ (case-control) ಅಧ್ಯಯನದಲ್ಲಿ ತಂಬಾಕು ಸೇರಿಸದ ತಾಂಬೂಲ ಜಗಿಯುವುದು ಒಳ ಕೆನ್ನೆಯ ಕ್ಯಾನ್ಸರ್ ಗೆ ಕಾರಣವಲ್ಲ ಎಂಬುದು ಸಾಬೀತಾಗಿದೆ. ಅವರ ಅಧ್ಯಯನದಲ್ಲಿ ಒಟ್ಟಾರೆ 206 ಒಳ ಕೆನ್ನೆಯ ಕ್ಯಾನ್ಸರ್ ರೋಗಿಗಳು ಮತ್ತು 278 ಕ್ಯಾನ್ಸರ್ ಇಲ್ಲದ ಇತರ ರೋಗಿಗಳಿದ್ದರು. ಕ್ಯಾನ್ಸರ್ ರೋಗಿಗಳಲ್ಲಿ ಬರೀ ಶೇ 9 ರಿಂದ 17 ಜನರು ತಂಬಾಕು ಸೇರಿಸದ ತಾಂಬೂಲವನ್ನು ಜಗಿಯುತ್ತಿದ್ದರು. ಆದರೆ, 278 ಕ್ಯಾನ್ಸರ್ ರೋಗಿಗಳಲ್ಲದವರಲ್ಲಿ ಶೇ 52 ಜನರು ಈ ಅಬ್ಯಾಸದವರಿದ್ದರು. ಇದರ ವಿರುದ್ಧವಾಗಿ ಒಳ ಕೆನ್ನೆಯ ಕ್ಯಾನ್ಸರ್ ರೋಗಿಗಳಲ್ಲಿ ಶೇ 80 ರಿಂದ 85 ಜನರು ತಂಬಾಕು ಸೇರಿಸಿದ ತಾಂಬೂಲವನ್ನು ಜಗಿಯುತ್ತಿದ್ದರು. ಆದರೆ, ಕ್ಯಾನ್ಸರ್ ರೋಗಿಗಳಲ್ಲದವರಲ್ಲಿ ಬರೀ ಶೇ 12.5 ಜನರು ಈ ಅಬ್ಯಾಸದವರಿದ್ದರಷ್ಟೇ. ಇದರಿಂದಾಗಿ ಅವರು “ಪ್ಯೂರ್ ಬೀಟೆಲ್‌ ಆಂಡ್ ನಟ್ ಚ್ಯೂಯಿಂಗ್ ಅಪೀಯರ್ಸ್ ಅಟು ಬಿ ನೋ ಸಿಗ್ನಿಫಿಕೆನ್ಸ್‌” ಎಂಬುದಾಗಿ ಹಳಿದ್ದಾರೆ. ಈ ಎಲ್ಲಾ ವಿವರಗಳನ್ನು ಅವರು ‘ ಎ ಸ್ಟಡಿ ಆಫ್ ಎಟಿಯಾಲಾಜಿಕಲ್ ಫ್ಯಾಕ್ಟರ್ಸ್‌ ಇನ್ ಓರಲ್‌ ಸ್ಕ್ವಾಮಸ್‌ ಸೆಲ್ ಕಾರ್ಸಿನೋಮಾ’ ಎನ್ನುವ ಶಿರೋನಾಮೆಯಲ್ಲಿ 1959 ರ 'ಬ್ರಿಟಿಷ್ ಜರ್ನಲ್ ಆಫ್ ಕ್ಯಾನ್ಸರ್‌' (Vol 13, No 3) ಎನ್ನುವ ವೈಜ್ಞಾನಿಕ ನಿಯತಕಾಲಿಕದ 381 ರಿಂದ 388 ನೇ ಪುಟಗಳಲ್ಲಿ ಪ್ರಕಟಿಸಿದ್ದಾರೆ.

4) “ಪಾನ್ ಚ್ಯೂವಿಂಗ್ ವಿತೌಟ್ ಟೊಬಾಕೋ ಡಿಡ್‌ ನಾಟ್ ಇನ್‌ಕ್ರೀಸ್ ದ ರಿಸ್ಕ್ ಆಫ್ ಓರಲ್ ಕ್ಯಾನ್ಸರ್” ಎಂಬುದಾಗಿ ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಓಂಕಾಲಜಿಯ ಡಾ. ನಂದಕುಮಾರ್ ಮತ್ತು ಅವರ ಬಳಗ ನಡೆಸಿದ ಇನ್ನೊಂದು ವೀಕ್ಷಣಾ ಅಧ್ಯಯನದಲ್ಲಿ ಹೇಳಿದ್ದಾರೆ. ಅವರು ಒಟ್ಟಾರೆ 348 ಬಾಯಿ ಕ್ಯಾನ್ಸರ್ ರೋಗಿಗಳನ್ನು ಮತ್ತು ಅಷ್ಟೇ ಸಂಖ್ಯೆಯ ಇತರರನ್ನು ಸೇರಿಸಿ ಅಧ್ಯಯನ ಮಾಡಿದ್ದರು. ತಂಬಾಕು ಇಲ್ಲದ ತಾಂಬೂಲ ಜಗಿಯುವವರಲ್ಲಿ ಬಾಯಿ ಕ್ಯಾನ್ಸರ್ ನ ಪ್ರಮಾಣ ತಾಂಬೂಲ ಜಗಿಯದವರಿಗಿಂತ ವಾಸ್ತವವಾಗಿ ಹೆಚ್ಚಿಲ್ಲ (p = 0.114) ಎಂಬುದಾಗಿ ಅವರು ತಿಳಿಸಿದ್ದಾರೆ. ಈ ವಿಷಯಗಳನ್ನು ಅವರು ವಿವರವಾಗಿ 1990 ರ "ಬ್ರಿಟಿಷ್ ಜರ್ನಲ್ ಆಫ್ ಕ್ಯಾನ್ಸರ್‌' (Vol 62) ಎನ್ನುವ ವೈಜ್ಞಾನಿಕ ನಿಯತಕಾಲಿಕದ 847 ರಿಂದ 851 ನೇ ಪುಟಗಳಲ್ಲಿ "ಎ ಪಾಪ್ಯುಲೇಷನ್ ಬೇಸ್ಡ್ ಕೇಸ್ - ಕಂಟ್ರೋಲ್ ಇನ್‌ವೆಸ್ಟಿಗೇಶನ್ ಆನ್ ಕ್ಯಾನ್ಸರ್ಸ್‌ ಆಫ್‌ ದಿ ಓರಲ್ ಕ್ಯಾವಿಟಿ ------ " ಎನ್ನುವ ಶಿರೋನಾಮೆಯಲ್ಲಿ ಪ್ರಕಟಿಸಿದ್ದನ್ನು ಡಾ. ಭಟ್ ಉಲ್ಲೇಖಿಸಿದ್ದಾರೆ.

5) ಸಿ ಪಿ ಸಿ ಆರ್ ಐ ಕಾಸರಗೋಡು, ಅದರ ಪ್ರಾಂತೀಯ ಕ್ಷೇತ್ರ ವಿಟ್ಲ ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಜಂಟಿಯಾಗಿ ಡಾ. ಜೋಸ್ ಮತ್ತು ಡಾ. ಕೇಶವ ಭಟ್ ಅವರ ನೇತೃತ್ವದಲ್ಲಿ ನಡೆಸಿದ ಒಂದು ವೈಜ್ಞಾನಿಕ ಸಮೀಕ್ಷೆಯಲ್ಲಿ ಸಾಂಪ್ರದಾಯಿಕ ತಾಂಬೂಲ ಜಗಿಯುವುದು ಆರೋಗ್ಯಕ್ಕೆ ಪೂರಕ ಎಂಬುದಾಗಿ ಕಂಡು ಕೊಂಡಿದ್ದಾರೆ. ಈ ಅಧ್ಯಯನದಲ್ಲಿ ಒಟ್ಟು 917 ಜನರನ್ನು ಸಮೀಕ್ಷೆ ಮಾಡಲಾಗಿತ್ತು. ಅದರಲ್ಲಿ 232 ಜನರು ತಾಂಬೂಲ ಅಥವಾ ಬೇರೆ ಯಾವುದೇ ಜಗಿಯುವ ಅಭ್ಯಾಸ ಇಲ್ಲದೇ ಇರುವವರು, 292 ಜನರು ತಂಬಾಕು ಸೇರಿಸದ ಸಾಂಪ್ರದಾಯಿಕ ತಾಂಬೂಲ ಜಗಿಯುವವರು ಮತ್ತು 393 ಜನರು ತಂಬಾಕು ಸೇರಿಸಿದ ಸಾಂಪ್ರದಾಯಿಕ ತಾಂಬೂಲ ಜಗಿಯುವವರು ಇದ್ದರು. ತಾಂಬೂಲ ಜಗಿಯದೇ ಇರುವವರಲ್ಲಿ 31 ಜನರು ಒಂದಲ್ಲದ ಒಂದು ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಆದರೆ ತಂಬಾಕು ಇಲ್ಲದ ಸಾಂಪ್ರದಾಯಿಕ ತಾಂಬೂಲ ಜಗಿಯುವವರಲ್ಲಿ ಬರೀ 14 ಮತ್ತು ತಂಬಾಕು ಸೇರಿಸಿದ ಸಾಂಪ್ರದಾಯಿಕ ತಾಂಬೂಲ ಜಗಿಯುವವರಲ್ಲಿ 18 ಜನರು ಅಂತಹ ಸಮಸ್ಯೆಗಳನ್ನು ಹೇಳಿಕೊಂಡಿದ್ದರಸ್ಟೆ. ಹಾಗೆಯೇ, ತಾಂಬೂಲ ಜಗಿಯದೇ ಇರುವವರಲ್ಲಿ ಇಬ್ಬರು ಕ್ಯಾನ್ಸರ್ ರೋಗಿಗಳಿದ್ದರು. ಆದರೆ ತಂಬಾಕು ಇಲ್ಲದ ಸಾಂಪ್ರದಾಯಿಕ ತಾಂಬೂಲ ಜಗಿಯುವವರಲ್ಲಿ ಅಂತಹ ರೋಗಿಗಳು ಯಾರೂ ಇರಲಿಲ್ಲ, ಮತ್ತು ತಂಬಾಕು ಸೇರಿಸಿದ ಸಾಂಪ್ರದಾಯಿಕ ತಾಂಬೂಲ ಜಗಿಯುವವರಲ್ಲಿ ಒಬ್ಬರು ಮಾತ್ರ ಕ್ಯಾನ್ಸರ್ ತೊಂದರೆಯಿಂದ ಬಳಲುತ್ತಿದ್ದರು. ಈ ಎಲ್ಲಾ ವಿವರಗಳನ್ನು 2020 (Vol 22, No 1) ರ " ಇಂಡಿಯನ್ ಜರ್ನಲ್ ಆಫ್ ಅರೆಕಾನಟ್‌, ಸ್ಪೈಸ್‌ ಆಂಡ್ ಮೆಡಿಸಿನಲ್ ಪ್ಲಾಂಟ್ಸ್‌" ಎನ್ನುವ ವೈಜ್ಞಾನಿಕ ನಿಯತಕಾಲಿಕದ 3 ರಿಂದ 14 ನೇ ಪುಟಗಳಲ್ಲಿ "ಟ್ರಡಿಷಿನಲ್‌ ಚ್ಯೂಯಿಂಗ್ ಆಫ್ ಅರೇಕಾನಟ್‌ / ಬೀಟೆಲ್‌ ಕ್ವಿಡ್ ಆಂಡ್ ಹ್ಯೂಮನ್ ಹೆಲ್ತ್‌ -ಎ ಸರ್ವೇ ರಿಪೋರ್ಟ್‌" ಎನ್ನುವ ಶಿರೋನಾಮೆಯಲ್ಲಿ ಪ್ರಕಟಿಸಿದ್ದಾರೆ.

ಇವೆಲ್ಲಾ ಸಂಶೋಧನೆಗಳ ಫಲಿತಾಂಶಗಳನ್ನು ನೋಡಿದಾಗ "ಅಡಿಕೆ ಕ್ಯಾನ್ಸರ್ ಕಾರಕ" ಎನ್ನುವುದು ಬರೀ ಮಿಥ್ಯಾರೋಪ ಎಂದು ಅನಿಸುವುದಿಲ್ಲವೇ? ಅಡಿಕೆ ನಿಜವಾಗಿಯೂ ಕ್ಯಾನ್ಸರ್ ಕಾರಕವೇ ಆಗಿದ್ದಲ್ಲಿ ಅದು ಯಾಕೆ ಈ ಮೇಲಿನ ಸಂಶೋಧನೆಗಳಲ್ಲಿ ಪ್ರಕಟವಾಗಲಿಲ್ಲ ಎಂಬ ಪ್ರಶ್ನೆಯನ್ನು ಡಾ. ಭಟ್ ಕೇಳಿದ್ದಾರೆ.

(ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)

Whats_app_banner