ಕನ್ನಡ ಸುದ್ದಿ  /  Karnataka  /  Our Govt Did What It Said Siddaramaiah At Praja Dwani Samavesha

Siddaramaiah: 'ಬಸವಾದಿ ಶರಣರ ನಾಡಿನಲ್ಲಿ ನಿಂತು ಹೆಮ್ಮೆಯಿಂದ ಹೇಳುತ್ತೇನೆ ನಮ್ಮದು ನುಡಿದಂತೆ ನಡೆದ ಸರ್ಕಾರ'

013ರಲ್ಲಿ ನಾಡಿನ ಜನರು ನಮಗೆ ಆಶೀರ್ವಾದ ಮಾಡಿದ್ದರು. ನಾನು 5 ವರ್ಷ ಮುಖ್ಯಮಂತ್ರಿಯಾಗುವ ಅವಕಾಶ ನೀಡಿದ್ದರು. ಬಸವಾದಿ ಶರಣರ ನಾಡಿನಲ್ಲಿ ನಿಂತು ಹೆಮ್ಮೆಯಿಂದ ಹೇಳುತ್ತೇನೆ ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕಲಬುರಗಿ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ
ಕಲಬುರಗಿ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ

ಕಲಬುರಗಿ: 2013ರಲ್ಲಿ ನಾಡಿನ ಜನರು ನಮಗೆ ಆಶೀರ್ವಾದ ಮಾಡಿದ್ದರು. ನಾನು 5 ವರ್ಷ ಮುಖ್ಯಮಂತ್ರಿಯಾಗುವ ಅವಕಾಶ ನೀಡಿದ್ದರು. ಬಸವಾದಿ ಶರಣರ ನಾಡಿನಲ್ಲಿ ನಿಂತು ಹೆಮ್ಮೆಯಿಂದ ಹೇಳುತ್ತೇನೆ ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕಲಬುರಗಿ ಗ್ರಾಮೀಣ ಭಾಗದ ಕಮಲಾಪುರದಲ್ಲಿ ಸೋಮವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, 2013ರಲ್ಲಿ ನಾವು ನಮ್ಮ ಪ್ರಣಾಳಿಕೆ ಮೂಲಕ ಜನರಿಗೆ 165 ಭರವಸೆಗಳನ್ನು ನೀಡಿ ಅದರಲ್ಲಿ 158 ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೆ. ಇದರ ಜೊತೆಗೆ ಹೆಚ್ಚುವರಿಯಾಗಿ 30 ಹೊಸ ಕಾರ್ಯಕ್ರಮಗಳನ್ನು ಕೂಡ ಜಾರಿ ಮಾಡಿದ್ದೆ. ಬಸವ ಜಯಂತಿಯ ದಿನ ಮೇ 13, 2013ರಂದು ಪ್ರಮಾಣ ವಚನ ಸ್ವೀಕಾರ ಮಾಡಿ, ನೇರವಾಗಿ ಕ್ಯಾಬಿನೆಟ್‌ ಹಾಲ್‌ ಗೆ ಹೋಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಸಾಲಮನ್ನಾ, ಕೃಷಿಭಾಗ್ಯ ಯೋಜನೆಗಳನ್ನು ಜಾರಿ ಮಾಡಿದ್ದೆ ಎಂದರು.

2018ರಲ್ಲಿ ಬಿಜೆಪಿ ಪಕ್ಷ ಜನರಿಗೆ 600 ಭರವಸೆಗಳನ್ನು ನೀಡಿ, 50 ರಿಂದ 60 ಭರವಸೆಗಳನ್ನು ಈಡೇರಿಸಿದ್ದಾರೆ. ಕೊಟ್ಟ ಮಾತಿಗೆ ತಪ್ಪಿ ನಡೆದವರನ್ನು ವಚನ ಭ್ರಷ್ಟರು ಎಂದು ಕರೆಯಬೇಕೋ ಇಲ್ವೊ? ಬಿಜೆಪಿ ಒಂದು ಸುಳ್ಳಿನ ಕಾರ್ಖಾನೆ. ಬೊಮ್ಮಾಯಿ ಅವರಿಗೆ ಧಮ್‌, ತಾಕತ್‌ ಇದ್ದರೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಪ್ರಣಾಳಿಕೆ ಮತ್ತು ಅವುಗಳ ಈಡೇರಿಕೆಯ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ, ಬನ್ನಿ ಎಂದು ಕರೆದಿದ್ದೆ. ಈ ವರೆಗೆ ಇದಕ್ಕೆ ಉತ್ತರ ನೀಡಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಭಾಷಣದ ಸಾರಾಂಶ

ನಮ್ಮ ಈ ಪ್ರಜಾಧ್ವನಿ ಯಾತ್ರೆಯನ್ನು ಎರಡು ಹಂತದಲ್ಲಿ ಹಮ್ಮಿಕೊಂಡಿದ್ದೆವು, ಮೊದಲ ಹಂತದ ಯಾತ್ರೆ ಮುಗಿದಿದೆ, ಎರಡನೇ ಹಂತದ ಯಾತ್ರೆಗೆ ಎರಡು ತಂಡಗಳನ್ನು ಮಾಡಿಕೊಂಡು ನನ್ನ ಮತ್ತು ಡಿ.ಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಪ್ರವಾಸ ಮಾಡುತ್ತಿದ್ದೇವೆ. ನಾನು ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದೇನೆ, 15ರ ವರೆಗೆ ಎರಡೂ ಭಾಗಗಳಲ್ಲಿನ ಎಲ್ಲಾ ವಿಧಾನಸಭಾ ಕ್ಷೇತ್ರದ ಜನರನ್ನು ಭೇಟಿ ಮಾಡಿ, ಜನರಿಗೆ ಬಿಜೆಪಿ ಸರ್ಕಾರದ ಕರ್ಮಕಾಂಡಗಳು, ನಿಷ್ಕ್ರಿಯತೆ, ಜನವಿರೋಧಿ ನೀತಿಯನ್ನು ತಿಳಿಸುವ ಕೆಲಸ ಮಾಡುತ್ತೇನೆ. ಅಂತಿಮವಾಗಿ ತೀರ್ಪು ನೀಡುವವರು ಜನರು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ರಾಜಕೀಯ ಪಕ್ಷ ಮಾಡಬೇಕಾಗುತ್ತದೆ. ಪ್ರಜಾಧ್ವನಿ ಎಂದರೆ ಜನರ ಧ್ವನಿ. ನಾಡಿನ 7 ಕೋಟಿ ಜನರ ಧ್ವನಿ. ಇಲ್ಲಿ ಜನರು ನೀಡುವ ಅಭಿಪ್ರಾಯ, ಅನಿಸಿಕೆ, ಸಲಹೆಗಳನ್ನು ನಾವು ಪಡೆದುಕೊಂಡು ನಮ್ಮ ಪ್ರಣಾಳಿಕೆಯ ಮೂಲಕ ಪರಿಹಾರ ನೀಡುವ ಪ್ರಯತ್ನ ಮಾಡುತ್ತೇವೆ.

ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ 3000 ಕೋಟಿ ಹಣ ಖರ್ಚು ಮಾಡುವುದಾಗಿ ಹೇಳಿದ್ದರು, ಈ ಹಣದಲ್ಲಿ 7% ಹಣ ಮಾತ್ರ ಖರ್ಚಾಗಿದೆ. ಇನ್ನು 1 ತಿಂಗಳ ಅವಧಿ ಉಳಿದಿದೆ, ಇಷ್ಟರೊಳಗೆ ಉಳಿದ ಹಣ ಖರ್ಚು ಮಾಡಲು ಸಾಧ್ಯವೇ? ಖರ್ಗೆ, ಧರಂ ಸಿಂಗ್‌ ಮತ್ತು ಈ ಭಾಗದ ಜನರ ಹೋರಾಟದಿಂದ ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿರುವಾಗ ಸಂವಿಧಾನಕ್ಕೆ ತಿದ್ದುಪಡಿ ತಂದು 371(ಜೆ) ಮಾಡಿದ್ದು, ಇದನ್ನು ಜಾರಿಗೆ ಕೊಟ್ಟದ್ದು ನಮ್ಮ ಸರ್ಕಾರ. ಹೆಚ್.ಕೆ ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಮಾಡಿದ್ದೆ, ಉದ್ಯೋಗದಲ್ಲಿ ಮೀಸಲಾತಿ ನೀಡಿದೆವು, ಪ್ರತೀ ವರ್ಷ 1500 ಕೋಟಿ ಹಣವನ್ನು ಅಭಿವೃದ್ಧಿಗೆ ಖರ್ಚು ಮಾಡಿದೆವು. ಇದರಿಂದಾಗಿ ಈ ಭಾಗದ ಅನೇಕ ಯುವಜನರು ಇಂಜಿನಿಯರ್, ಡಾಕ್ಟರ್‌, ಶಿಕ್ಷಕರು, ಐಐಟಿ ಪದವೀಧರರು, ಪ್ರೊಫೆಸರ್‌ ಆಗಿದ್ದಾರೆ.

ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಅವರು ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದಾಗ ನಾವು ಕಲ್ಯಾಣ ಕರ್ನಾಟಕಕ್ಕೆ ಏನೆಲ್ಲ ಮಾಡುತ್ತೇವೆ ಎಂದು 10 ಅಂಶಗಳ ಭರವಸೆಯನ್ನು ನೀಡಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ಪ್ರತೀ ವರ್ಷ ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ರೂ. ಹಣವನ್ನು ಖರ್ಚು ಮಾಡುತ್ತೇವೆ, ಪ್ರತಿ ವರ್ಷ ಪಂಚಾಯತಿಗೆ 1 ಕೋಟಿ ರೂ. ವಿಶೇಷ ಅನುದಾನ ನೀಡುತ್ತೇವೆ. ನಾವು ಅಧಿಕಾರದಲ್ಲಿದ್ದಾಗ ಹೈದ್ರಾಬಾದ್‌ ಕರ್ನಾಟಕದಲ್ಲಿ 30,000 ಹುದ್ದೆಗಳನ್ನು ಭರ್ತಿ ಮಾಡಿದ್ದೆವು, ಈಗ 36,000 ಹುದ್ದೆಗಳ ಖಾಲಿ ಇವೆ. ಬಸವರಾಜ ಬೊಮ್ಮಾಯಿ ಒಬ್ಬರಿಗಾದ್ರೂ ಕೆಲಸ ಕೊಟ್ಟಿದ್ದೀರೆನಪ್ಪಾ? ನಾವು ಮತ್ತೆ ಅಧಿಕಾರಕ್ಕೆ ಬಂದರೆ ಖಾಲಿ ಇರುವ ಎಲ್ಲಾ 36,000 ಹುದ್ದೆಗಳನ್ನು ಒಂದೇ ವರ್ಷದಲ್ಲಿ ಭರ್ತಿ ಮಾಡಿ ಇಲ್ಲಿನ ಯುವಜನರಿಗೆ ಉದ್ಯೋಗ ನೀಡುತ್ತೇವೆ. ಇವೆಲ್ಲವೂ ಇಲ್ಲಿನ ಜನರಿಗೆ ಬೇಕಿದ್ದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುವ ಕೆಲಸವನ್ನು ಜನ ಮಾಡಬೇಕು.

ತಾಂಡಗಳು, ಹಟ್ಟಿಗಳು, ಮಜರೆಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕಾನೂನು ತಂದವರು ನಾವು. ಮೋದಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಇಲ್ಲಿಗೆ ಬಂದು ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ವಾಸಿಸುವವನೆ ಮನೆಯೊಡೆಯ ಮಾಡಿದ್ದು ನಾವು. ಸೇವಾಲಾಲ್‌ ಜಯಂತಿ ಮಾಡಿದ್ದು, ಸೇವಾಲಾಲ್‌ ಅವರ ಜನ್ಮಸ್ಥಳ ಸೂರೆಗೊಂಡನಕೊಪ್ಪಕ್ಕೆ 100 ಕೋಟಿ ಕೊಟ್ಟು ಅಭಿವೃದ್ಧಿ ಮಾಡಿಸಿದ್ದು ನಾವು. ಬೊಮ್ಮಾಯಿ ಸರ್ಕಾರ ಒಂದು ಪೈಸೆ ಅನುದಾನ ಕೊಟ್ಟಿದೆಯಾ? ಲಂಬಾಣಿ ಅಭಿವೃದ್ಧಿ ನಿಗಮಕ್ಕೆ 400 ಕೋಟಿ ಹಣ ನೀಡಿದ್ದೆ, ಬಿಜೆಪಿ ಬಂದ ಮೇಲೆ 75 ಕೋಟಿಗೆ ಇಳಿಕೆ ಮಾಡಿದ್ದಾರೆ. ಬಜೆಟ್‌ ಗಾತ್ರ ಜಾಸ್ತಿಯಾದರೂ ಈ ಹಣ ಯಾಕೆ ಕಡಿಮೆಯಾಗಿದೆ?

ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾನೂನು ಮಾಡಿದ್ದು ನಾವು. ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ ಅನುದಾನ ಮೀಸಲಿಡಬೇಕೆಂದು ಈ ಕಾನೂನು ಮಾಡಿದ್ದು ನಮ್ಮ ಸರ್ಕಾರ. 2008ರಿಂದ 2013ರ ವರೆಗೆ ಈ ಸಮುದಾಯಗಳ ಅಭಿವೃದ್ಧಿಗೆ ಖರ್ಚು ಮಾಡಿದ್ದ ಹಣ ಕೇವಲ 22,000 ಕೋಟಿ. ನಾವು ಕಾಯ್ದೆ ಮಾಡಿದ ಮೇಲೆ 5 ವರ್ಷದಲ್ಲಿ ನಮ್ಮ ಸರ್ಕಾರ ಖರ್ಚು ಮಾಡಿದ ಹಣ 88,000 ಕೋಟಿ. ನಮಗೆ ನಿಜವಾಗಿ ಈ ಸಮಾಜದ ಮೇಲೆ ಕಾಳಜಿ ಇರುವುದು. ನಮ್ಮ ಕೊನೆ ಬಜೆಟ್‌ ನಲ್ಲಿ ಈ ಯೋಜನೆಗೆ ನೀಡಿದ್ದ ಹಣ 30,000 ಕೋಟಿ, 2022-23ರಲ್ಲಿ ಈ ಯೋಜನೆಗೆ ನೀಡಿರುವ ಹಣ 28,000 ಕೋಟಿ. ಬಜೆಟ್‌ ಗಾತ್ರ ಹೆಚ್ಚಾದಂತೆ ಈ ಯೋಜನೆಗೆ ನೀಡುವ ಹಣವೂ ಜಾಸ್ತಿಯಾಗಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದರು.

IPL_Entry_Point

ವಿಭಾಗ